Powered By Blogger

Friday, April 13, 2018

ಕೊಂಚವೂ ಯೋಚಿಸಬೇಡ!

ನೀರವ ಕಾಡಿನ ಹವೆ
ಕೋಕಿಲೆಯ ಗಾನಸೌಂದರ್ಯಕೆ
ಸ್ಥಬ್ಧವಾಗುವಂತೆ,
ಶಾಂತಸ್ವರೂಪ ಕಡಲತಡಿಯನು
ಅಪ್ಪಳಿಸುವ ಪ್ರತೀ ಅಲೆಯೂ
ನವೀಕರಿಸುವಂತೆ
ಒಮ್ಮೆ ನಕ್ಕುಬಿಡು ಹುಡುಗಿ
ಕೊಂಚವೂ ಯೋಚಿಸದೆ!
ಮಿಂಚು ಸಂಚರಿಸುವ
ಆ ಅನುಭವದಿ
ಒಮ್ಮೆ ಮುಳುಗೆದ್ದುಬಿಡುವೆ!


ನೋಡುವಾಸೆಗೆ ಮಣಿದು
ಕಾದು ಕೂರುವ ನನಗೆ,
ಬೇಕಂತಲೇ ಚೂರು ಕಾಯಿಸು,
ನೀನೇ ಕದ್ದ ನನ್ನ ಹೃದಯದ ಬಗ್ಗೆ
ಕೊಂಚ ಕಾಳಜಿಯಿದ್ದರೆ!
ನಿನ್ನ ನೋಡುವ ಕ್ಷಣಕೆ
ಬಡಿವ ಮಿಂಚಿಗೆ ಸಿಲುಕಿ
ಛಿಧ್ರವಾದೀತೆಂಬ ಭಯ ನನಗೆ!
ಕಾಯುವುದರಲ್ಲೊಂದು ಮಜವಿದೆ,
ತಡಮಾಡಿ ನೀ ಯಾಚಿಸುವ ಕ್ಷಮೆಯ
ಆಲಿಸುವಲ್ಲೂ ಒಂದು ಹಿತವಿದೆ!
ಸಮಯವೆಲ್ಲ ನಿನದೇ ಹುಡುಗಿ,
ಸಾಕುಬೇಕಷ್ಟು ಕಾಯಿಸು,
ಕೊಂಚವೂ ಯೋಚಿಸಬೇಡ!

ಹೋಗುವ ತಾಣದ ಪರವೋ,
ಕೊಳ್ಳುವ ಗೊಂಬೆಯ ಪರವೋ,
ನನ್ನೊಂದಿಗಿಷ್ಟು ವಾದಿಸು,
ಬೇಕೇ ಬೇಕೆಂದು ಪೀಡಿಸು!
ಮೊದಲಿಗೆ ಒಪ್ಪಲಾರೆ,
ಕೊನೆಗೇ ಒಪ್ಪಬೇಕೆಂಬ ಹಠ ನನಗೂ!
ನೀನು ಕಾಡಿಸಬೇಕು,
ನಿನ್ನ ಕಣ್ಗಳ ಪ್ರಾರ್ಥನೆಯಲ್ಲೇ
ನಾನು ಕಳೆದು ಕರಗಿಹೋಗಬೇಕು!
ನಿನ್ನ ಹಾವಭಾವಗಳಿಂದಲೇ
ಪೇಟೆಯ ಬೀದಿಗಳೆಲ್ಲ
ಅಲಂಕೃತಗೊಂಡಾವು!

ತರಗತಿಯ ನೆಪದಲ್ಲಿ
ಬಿಟ್ಟು ಕೂರುವ ನನ್ನ
ಅರೆಘಳಿಗೆಗೊಮ್ಮೆ ನೀ
ಕದ್ದುನೋಡಬೇಕು!
ಕಣ್ಣು ಹೃದಯಕೆ ಮಣಿದು,
ನಿನ್ನ ನೋಡಲು ಹೊರಳಿ
ಕಳ್ಳ ನೋಟವ ಬೀರಲು,
ನೀನೂ ಸಿಕ್ಕಿಬೀಳಬೇಕು.
ಇಬ್ಬರ ಕಣ್ಗಳೂ ಸೇರಬೇಕು,
ಇಬ್ಬರೂ ನಾಚಿ ನೀರಾಗಿ,
ತಲೆಮರೆಸಿಕೊಳ್ಳಬೇಕು.
ದೃಷ್ಟಿ ನಿನ್ನದೇ ಹುಡುಗಿ,
ನಿನ್ನ ಬಿಟ್ಟಿನ್ನೆಲ್ಲವೂ ಮಸುಬು,
ಕೊಂಚವೂ ಯೋಚಿಸಬೇಡ!

~ಕನಸು ಕಂಗಳ ಹುಡುಗ





Wednesday, February 14, 2018

ಏನು ಚಂದವೇ ಹುಡುಗಿ!


ಪರಿಮಳ ಹೂವಿನದ್ದೆಂದೆಣಿಸಿ
ದೂರಬನದಿಂದೋಡಿ ಬಂದಿದ್ದ ದುಂಬಿ
ಮೋಸಹೋಗಿರಬೇಕು
ನಿನ್ನ ನಗುವ ನಾದವು ಹರಡಿ
ಹರಿವ ಜುಳುಜುಳು ನೀರೂ ಸುಮ್ಮನಾಗಿರಬೇಕು!
ಏನು ಚಂದವೇ ಹುಡುಗಿ
ನಿನ್ನ ಹಾವಭಾವ
ತುಂಬಿತಲ್ಲವೇ ನನ್ನ ಬದುಕನೀಗ


ನೋಡುತಲಿರಬೇಕು ನಾನು,
ದಯವಿಟ್ಟು ಓಡಬೇಡ.
ನಿನ್ನ ಸೌಂದರಯದಲಿ ನಾ ಕರಗಿಹೋಗಬೇಕು!
ಮರದ ಬುಡದಿ ಕುಳಿತು
ತಲೆಯ ನೇವರಿಸು ಸಾಕು
ಮುಗ್ಧ ಪ್ರೀತಿ ನನದು,
ನಿನ್ನ ಕೈಗಳು ನೆಪವಷ್ಟೇ,
ಭಾವದ ಕಣ್ಣುಗಳ ಮೂಲಕ
ಒಂದಿಷ್ಟು ಮಮತೆಯನ್ನು ಸುರಿದುಬಿಡು
ನಾನು ತೋಯ್ದುಹೋಗುವಂತೆ!
ಆಗ ನನಗಾನಿನ್ನೆರಡು ಕಣ್ಗಳೇ
ಸಮಸ್ತ ಪ್ರಪಂಚ.


ತಪ್ಪು ವಯಸ್ಸಿನದ್ದೇ ಇರಬಹುದು
ಕಣ್ಣು ಒದ್ದೆಯಾದಾಗೊರೆಸಲು
ಹಾಳುಜೀವ
ನಿನ್ನಂತಹ ಕೈಗಳನ್ನೇ ಬಯಸುತ್ತದೆ.
ಪ್ರೇಮಾಂತರಿಕ್ಷದಲ್ಲಿ ಬಹಳ ಬೇಗ
ಭಾವಪರವಶನಾಗುವ ನನಗೆ
ಒಂದು ಮುತ್ತಿಟ್ಟು, ಸರಿಪಡಿಸಿಬಿಡು.
ಏನು ಚಂದವೇ ಹುಡುಗಿ!


ಘಳಿಗೆಗೊಮ್ಮೆಯೆ ನೀನು
ಓರೆನೋಟವ ಬೀರು,
ಕಾಪಿಟ್ಟುಕೊಳ್ಳುವೆ ನಾ,
ಥಳಿಸುವ ಆ ರೋಮಾಂಚನವಾ!
ಗಮನಿಸಿಯೂ ಇಲ್ಲವೆಂಬಂತೆ
ನಿನ್ನ ನಟನೆ, ಮುಸುಮುಸಿ ನಗು
ನನಗೆ ಮುದ ನೀಡುತ್ತೆ,
ಕಣ್ಮುಚ್ಚಿದಾಗ ನೆನೆಸಿಕೊಳ್ಳಲು,
ಅಷ್ಟು ಸಾಕು!
ಮೈಮರೆವ ಪೇಚು ನನಗಿರಲಿ,
ನೀ ನಾಚಿ ಹಾಕುವ ಹೆಜ್ಜೆಗಳ ವೇಗವನು ಮಾತ್ರ
ಕೊಂಚವೂ ತಗ್ಗಿಸಬೇಡ..


ನಿನ್ನ ಇರುವಿಕೆಯಲ್ಲಿ
ನನ್ನೊಳಗೆ ಸೃಷ್ಟಿಯಾಗುವ ಭಾವ,
ನನಗದು ಬಹಳ ಅಮೂಲ್ಯ.
ಕೆಲವೊಮ್ಮೆ ನೀನು ತಡವಿ
ಎಚ್ಚರಿಸಬೇಕಿರುವುದು
ಬಹುಶಃ ಅದಕ್ಕೇ ಇರಬೇಕು!


ಕೊಂಚವೇ ದೂರ ಹೋಗಿ
ಕಾರಣವೇ ಇಲ್ಲದೇ
ಪುನಃ ಹಿಂದಿರುಗಬೇಡ,
ಏನನೋ ಕೇಳುವವಳಂತೆ ನಟಿಸಬೇಡ,
ಬೆರಳ ತುದಿಯ ಕಚ್ಚಿ,
ಪೆಚ್ಚು ಪೆಚ್ಚಾಗಿ ನಕ್ಕು,
ನನ್ನ ಗೆಲ್ಲಲು ಪ್ರಯತ್ನಿಸಬೇಡ.
ಕೊಂಚ ದಯೆತೋರು ಹುಡುಗಿ
ಸೋಲುವ ಶಾಸ್ತ್ರ
ಯಾವತ್ತೋ ಮುಗಿದಿದೆ!


ಏನು ಚಂದವೇ ಹುಡುಗಿ, ನಿನ್ನ ಹಾವಭಾವ
ತುಂಬಿತಲ್ಲವೇ ನನ್ನ ಬದುಕನೀಗ ||

~ಕನಸು ಕಂಗಳ ಹುಡುಗ


Monday, February 6, 2017

'ಯುವಾ"- 218 ಮನೆಗಳನ್ನು ಬೆಳಗಿರುವ 18ರ ಪೋರರಿವರು..!!

 ಸಾಮಾನ್ಯವಾಗಿ ಆ ವಯಸ್ಸು ಇಂಥವುಕ್ಕೆಲ್ಲ ಎಡೆ ಮಾಡಿಕೊಡುವುದಿಲ್ಲ! ಹೌದು, ಅದು ಜಗತ್ತು ಬಣ್ಣ ಬಣ್ಣವಾಗಿ ಕಾಣುವ ವಯಸ್ಸು. ಆದಷ್ಟು ಮನರಂಜನೆಯ ಅರಸುವ, ಗೆಳೆತನದಲ್ಲಿ ಬಂಧಿಯಾಗಿ ಮೋಜನನುಭವಿಸುವ ವಯಸ್ಸು. ಸಿನೆಮಾ ಗಿನೇಮಾ ಡೈಲಾಗ್ ಗಳನ್ನು ಕ್ರೇಜಲ್ಲಿ ಗಟ್ಟುಹೊಡೆದು, ಸ್ಟೈಲಾಗಿ ಆಗಾಗಿ ಹೊಡೆಯುತ್ತಿರುವ ವಯಸ್ಸು. Actually ಇವೆಲ್ಲ ಶುರುವಾದಾಗ, ಅವರಿಗೆ ಇಂಥದ್ದರಲ್ಲೂ ಸ್ಪಷ್ಟತೆ ಮೂಡದ, ಪ್ರೌಢಿಮೆ ಇರದ ವಯಸ್ಸು. ಅವರಾಗ ಮುಗಿಸಿದ್ದಿದ್ದು ಹತ್ತನೆಯ ತರಗತಿಯನ್ನಷ್ಟೇ!
     ಅವರಿಗೆ ಅಂಥದ್ದೇನಾಯಿತು ಅನ್ನುವ ಪ್ರಶ್ನೆಯೇ? ಚಿಕ್ಕದೊಂದು ಸ್ಫುರಣೆಯಾಯಿತು! ಹತ್ತನೇ ಕ್ಲಾಸು ಮುಗಿದಿದ್ದ ರಜೆಯ ಮೋಜಿನ ಸಮಯವದು. ರಜೆಯನ್ನು ಕಳೆಯಲು ಅವರಲ್ಲೊಬ್ಬನ ಮೂಲವಾದ, ದಕ್ಷಿಣ ಕನ್ನಡದ ಪುತ್ತೂರಿನ ಬಳಿಯ ಒಂದು ಕುಗ್ರಾಮಕ್ಕೆ ಬಂದಿದ್ದರು! ಕರಾವಳಿಯ ಪ್ರಕೃತಿ ಸೊಗಡು. ಹಚ್ಚ ಹಸಿರಿನ, ಗದ್ದೆ-ತೋಟಗಳ, ಕಾನುಕೋಟಲೆಗಳ ಪರಿಸರ. ಹಗಲೆಲ್ಲ ಮನಸಃ ಪೂರ್ವಕವಾಗಿ ಆಡಿ ಕುಣಿದರು. ಊರೆಲ್ಲ ತಿರುಗಿ ಬಸವಳಿದು ಸಂಜೆಯಾಗುವಷ್ಟರಲ್ಲಿ ಹಳ್ಳಿಯ ಅವರು ಉಳಿದಿದ್ದ ಮನೆಗೆ ಬಂದರು. ಇವರೆಲ್ಲ ಒರಗಿ ವಿಶ್ರಾಂತಿ ಪಡೆಯುತ್ತಿದ್ದಂತೆ, ಸೂರ್ಯನೂ ವಿಶ್ರಾಂತಿಗೆಂದು ಬಾನಂಚಿಗೆ ಸಮೀಪಿಸತೊಡಗಿದ. ಕೊನೆಗೊಮ್ಮೆ ಮುಳುಗಿಹೋದ.
      ಇವರೆಲ್ಲ ಮೈಸೂರಿನಂತಹ ಪಟ್ಟಣದಲ್ಲಿ ಬೆಳೆದವರು. ಇಷ್ಟೊತ್ತಿಗೆಲ್ಲ ಅವಶ್ಯಕತೆ ಇದ್ದರೂ ಇಲ್ಲದಿದ್ದರೂ, ಮನೆಯ ತುಂಬೆಲ್ಲ ಟ್ಯೂಬ್ ಲೈಟ್ ಹಾಕಿ ಅಭ್ಯಾಸ. ಇಲ್ಲಿ ಯಾವ ಲೈಟನ್ನೂ ಯಾರೂ ಹಾಕಲಿಲ್ಲ. ಇನ್ನೊಂದು ಸ್ವಲ್ಪ ಹೊತ್ತಲ್ಲಿ ಸಂಪೂರ್ಣ ಕತ್ತಲಾಗತ್ತೆ, ಆಗ ಹಾಕುತ್ತಾರೆ ಅಂತ ಸುಮ್ಮನಾದರು. ಅವರಲ್ಲೊಬ್ಬ ಧರಂ ವೀರ್ ಸಿಂಗ್. ಆತನಿಗೋ, ಕತ್ತಲ ಕಂಡರೆ ಎಲ್ಲಿಲ್ಲದ ಭಯ.
ಹೊತ್ತಾಯಿತು, ಕತ್ತಲಾಯಿತು, ಊಹೂಂ, ಯಾವ ಲೈಟೂ ಬೆಳಗಲಿಲ್ಲ. ಕಾರಣ ವಿಚಾರಿಸಿದಾಗ ಆ ಹಳ್ಳಿಯ ಜನ ಇನ್ನೂ ಕರೆಂಟ್ ನ ಮುಖವನ್ನು ನೋಡೇ ಇಲ್ಲ ಅಂತ ಗೊತ್ತಾಯಿತು!
       ಅದು ಉತ್ಸಾಹೀ ವಯಸ್ಸು. ಅದು ಸಾಹಸಪ್ರಿಯ ವಯಸ್ಸು ನೋಡಿ. ಆದರೆ ದುರಂತ ಏನೆಂದರೆ ನಮ್ಮ ಯುವ ಸಾಹಸ-ಉತ್ಸಾಹಗಳೆಲ್ಲ ಬೇಡದ್ದರಲ್ಲಿ ವಿನಿಯೋಗವಾಗಿ ದಿಕ್ಕು ತಪ್ಪಿಬಿಡುತ್ತವೆ. ಇಲ್ಲಿ ಹಾಗಾಗಲಿಲ್ಲ. ಭಂಡ ಧೈರ್ಯ ಮಾಡಿ, ಈ ಗೆಳೆಯರು ಕೂಡಿ ಇವರಿಗೆಲ್ಲ ಬೆಳಕಾಗಬೇಕು ಅಂತ ತೀರ್ಮಾನಿಸಿಯೇ ಬಿಟ್ಟರು!
        ಅದೇ ಈಗ YUVA(Youth United for a Vision to Achieve) ಅನ್ನೋ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯ ಶೈಶವಾವಸ್ಥೆ! ಅಂದು ನಾಲ್ವರಿದ್ದದ್ದು, ಇವತ್ತು ತೊಂಬತ್ತಾರು ಜನರಿರುವ ತಂಡವಾಗಿ ಬೆಳೆದಿದೆ. ಆವತ್ತು ಆ ಮನೆಯನ್ನು ಬೆಳಗಿದ್ದು, ಇವತ್ತು ಬರೋಬ್ಬರಿ 218 ಮನೆಗಳಿಗೆ ಬೆಳಕು ನೀಡಿರುವ ಸಂಸ್ಥೆಯಾಗಿ ಬೆಳೆದಿದೆ! ಆವತ್ತು ಅಂಬೆಗಾಲಿಟ್ಟಿದ್ದ ತಂಡ, ಇವತ್ತು ಎಂಟು ಪ್ರಾಜೆಕ್ಟ್ ಗಳನ್ನು ಮಾಡಿ ಮುಗಿಸಿದೆ! ಆವತ್ತು ಕತ್ತಲಿಗೆ ಹೆದರಿದ್ದ ಪೋರರು, ಇವತ್ತು ಕತ್ತಲಲ್ಲಿದ್ದವರಿಗೆ ಒಂದು ಹಿಡಿಯಷ್ಟಾದರೂ ಬೆಳಕನ್ನು ಕೊಡುವ ಸಾರ್ಥಕ್ಯ ಮೆರೆದಿದ್ದಾರೆ! ಆವತ್ತು ಹಸಿ ಮನಸ್ಸಿನ ಹುಚ್ಚು ಕನಸು ಅನ್ನಿಸಿಕೊಂಡಿದ್ದು, ಇವತ್ತು ಸಮಾಜಕ್ಕೆ ಬಿಸಿರಕ್ತ ತಂಪೆರೆದ ಆಶಾಕಿರಣದಂತೆ ಭಾಸವಾಗಿದೆ. What A Journey!


      

( ಯುವಾ ಒಂದು ರಿಜಿಸ್ಟರ್ಡ್ ಎನ್ ಜಿ ಒ. ಕಾಗದ ಪತ್ರದ ಚಿತ್ರ ಮೇಲಿದೆ)

ಪೋರರೇ ತುಂಬಿದ್ದ 'ಯುವಾ' ಪ್ರಥಮ ದೊಡ್ಡ ಹೆಜ್ಜೆ ಇಟ್ಟಿದ್ದು ಪುತ್ತೂರಿನಲ್ಲಿ. ಯುವಾದ ಸ್ಥೂಲ ಪ್ಲಾನ್ ಇರುವುದೇ. "ಅತ್ಯುತ್ಕೃಷ್ಟ ಸೋಲಾರ್ ಕಿಟ್ ಗಳನ್ನು ಖರೀದಿಸಿ, ಇನ್ನೂ ಕರೆಂಟ್ ಲೈನ್ ಗಳು ಬಾರದ, ತೀರಾ ಹಿಂದುಳಿದ ಹಳ್ಳಿಗಳನ್ನು ಗುರುತಿಸಿ, ಅಲ್ಲಿಯ ಮನೆಗಳಿಗೆ ಅಳವಡಿಸುವುದು". ಇಂತಹ ಪ್ರತೀ ಸೋಲಾರ್ ಕಿಟ್ ಗೂ 3500 ರೂಪಾಯಿಗಳ ಖರ್ಚಾಗುತ್ತಿತ್ತು. ಒಂದೇ ವಾರದಲ್ಲಿ ಶತಾಯುಗತಾಯು ಪ್ರಯತ್ನಿಸಿ 76,800 ರೂಪಾಯಿಗಳನ್ನು ಮೈಸೂರಿನಲ್ಲಿ ಜನರಿಂದ ಒಟ್ಟು ಮಾಡಿದ ಯುವಾ ತಂಡ, ಪುತ್ತೂರಿನ ಬಳಿಯ ಬೆಳಕು ಕಾಣದಿದ್ದ 'ಸೆನಾ' ಎಂಬ ಹಳ್ಳಿಗೆ ಬಂದಿಳಿದು, ಮೂವತ್ತೈದು ಮನೆಗಳಿಗೆ ತಮ್ಮ ಸೋಲಾರ್ ಕಿಟ್ ಅನ್ನು ಅಳವಡಿಸಿ, ಅಲ್ಲಿಯ ಜನ ಪ್ರಥಮಬಾರಿಗೆ ರಾತ್ರಿಯಲ್ಲೂ ಸ್ಪಷ್ಟವಾಗಿ ಕಾಣುವಂತೆ ಮಾಡಿದರು. ಅಷ್ಟರಲ್ಲೇ, ಹೆಚ್ಡಿ ಕೋಟೆ, ಪುತ್ತೂರು ಮತ್ತು ಹುಣಸೂರಿನ ಮೂವತ್ತು ಮನೆಗಳನ್ನೂ ಸೋಲಾರ್ ದೀಪಗಳಿಂದ ಬೆಳಗಿಸಿ, ಗೆಲುವಿನ ನಗೆ ಬೀರಿದರು. ಅಲ್ಲಿಂದ ಶುರುವಾಯಿತು ನೋಡಿ, ಈ ತರುಣ-ತರುಣಿಯರ ನಾಗಾಲೋಟ!
     "ಒಂದು ಚಾಲೆಂಜ್, ಅದಕ್ಕೆ ನಾವು ಪಟ್ಟ ಕಷ್ಟಗಳು, ಮತ್ತು ಕೊನೆಗೆ ಅದಕ್ಕೆ ಸಿಕ್ಕ ಜಯ" ಇದು ನಮ್ಮ ಕೈಕಾಲುಗಳಲ್ಲಿ ನವ ಹುರುಪೊಂದೊಂದನ್ನು ತುಂಬುತ್ತದೆ.  ಇಷ್ಟು ಮಾಡುವಷ್ಟರಲ್ಲಿ ಗುಂಪಿಗೆ, "ಇನ್ನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಅನ್ನುವ ಭಂಡ ಧೈರ್ಯ, ಛಲ ಜೊತೆಯಾಯಿತು. ತಮ್ಮೊಂದಿಗೆ ಇನ್ನಷ್ಟು ಸಾಹಸಿ, ಆಸಕ್ತ ತರುಣ/ಣಿ ಯರನ್ನು ಸೇರಿಸಿಕೊಳ್ಳತೊದಗಿದರು. ಮೈಸೂರು ಮತ್ತು ಬೆಂಗಳೂರಿನಲ್ಲಿ "ಯುವಾ' ಸಂಸ್ಥೆಯ ಅಧಿಕೃತ ಎರಡು ಬ್ರಾಂಚ್ ಗಳನ್ನು ತೆಗೆದರು. ಇಂಥ ಕೆಲಸಗಳನ್ನು ಮಾಡುವಾಗ ಎದುರಾಗುವ ಅತಿದೊಡ್ಡ ತಲೆನೋವು, Funding. ಹಣ ಹೊಂದಿಸುವಿಕೆ. ಇವರುಗಳೋ ಇನ್ನೂ ಓದುತ್ತಿರುವ ವಿದ್ಯಾರ್ಥಿಗಳು, ದುದಿಯುವವರಲ್ಲ. "ಅಪ್ಪಾ ಸಮಾಜ ಸೇವೆ ಮಾದುತ್ತೇವೆ, ಒಂದಷ್ತು ಲಕ್ಷ ದುಡ್ದು ಕೊಡಿ" ಅಂತ ಮನೆಯಲ್ಲಿ ಕೇಳುವುದು ಬಾಲಿಶ. ಸಮಾಜಕ್ಕೆಲ್ಲ್ಲ ಹಂಚಬಹುದಾದಷ್ಟು ದುಡ್ಡು ಹೊಂದಿದ ಶ್ರೀಮಂತ ಕುತುಂಬ ಇವರದ್ಯಾರದ್ದೂ ಆಗಿರಲಿಲ್ಲ. ಆದ್ದರಿಂದ, ಸಮಾಜದಿಂದಲೇ ವಿವಿಧ ವಿಧಾನಗಳಿಂದ ಹಣ ಸಂಗ್ರಹಿಸಿ, ಅದನ್ನು ಸಮಾಜಕ್ಕೆ ಸಮರ್ಥವಾಗಿ ಹಿಂದಿರುಗಿಸುವ ಶ್ಲಾಘನೀಯ ನಿರ್ಧಾರ ಇವರದ್ದು.

img
    
 Gudville ಅನ್ನುವ ಸಂಸ್ಥೆ, ಇಂತಹ ಎನ್ ಜಿ ಒ ಗಳಿಗೆ, ಆನ್ಲೈನ್ ಮಾಧ್ಯಮದಲ್ಲಿ ಹಣ ಸಂಗ್ರಹಿಸಲು ವೇದಿಕೆ ಒದಗಿಸಿಕೊಡುತ್ತದೆ. ಅದು ನಡೆಸಿದ ಸ್ಪರ್ಧೆಗಳಲ್ಲಿ ಯುವಾ ತಲಾ ಎರಡು ಬಾರಿ ವಿನ್ನರ್ ಹಾಗೂ ರನ್ನರ್ ಅಪ್ ಆಗುವ ಮೂಲಕ 2.5 ಲಕ್ಷ ರೂಪಾಯಿಗಳನ್ನು ಗೆದ್ದಿತು. ಯುವಾಗೆ ಕಸುವು ಬಂದಂತಾಯಿತು.
      ಪ್ರಾರಂಭದಲ್ಲಿ 3500 ರೂಗಳಷ್ಟಾಗುತ್ತಿದ್ದ ಉಪಕರಣ ವ್ಯಚ್ಚ, ಈಗ 2200ಕ್ಕೆ ಇಳಿದಿತ್ತು. ಅದಾಗಲೆ ಯುವಾ ಮತ್ತೆರಡು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡಾಗಿತ್ತು. ಅದು ಕಾರವಾರ ತಾಲೂಕಿನ ಕರ್ತೋಲಿ ಗ್ರಾಮ, ಸಣಕೆ ವಾಸೆ, ಮತ್ತು ಕದ್ರಾ ಬಳಿಯ ಕೆಲವು ಹಳ್ಳಿಗಳು. ಯುವಾ ತಂಡ ಬಂದು ಬೀಡುಬಿಟ್ಟಿತು. ಶುರುವಾಯಿತು ನೋದಿ Light-Up Revolution-1. ತಂಡದ ಬದ್ಧತೆ ಹೇಗಿತ್ತೆಂದರೆ, ಕೇವಲ ಇಪ್ಪತ್ನಾಲ್ಕು ಗಂಟೆಯೊಳಗೆ ಅಲ್ಲಿಯ 63 ಮನೆಗಳು ಸೋಲಾರ್ ಬೆಳಕಿನಿಂದ ಪ್ರಜ್ವಲಿಸತೊಡಗಿದವು. ಅದರಲ್ಲಿಯೂ 'ಸಣಕೆ ವಾಸೆ" ಸಮರ್ಪಕ ರಸ್ತೆ ಸಂಪರ್ಕವೂ ಇರದ, ಅನಾಮತ್ತು ಇಪ್ಪತ್ತು ಕಿಲೋಮೀಟರ್ ಗಳನ್ನು ನಡೆದುಕೊಂಡೇ ತಲುಪಬೇಕಾದ ಗಮ್ಯ! ಇವರೊಂದೇ ನಡೆದು ಹೋಗುವುದಲ್ಲ, ಕಿಟ್ ಸಹಿತ ಎಲ್ಲ ಉಪಕರಣಗಳನ್ನೂ ನಡೆದೇ ಸಾಗಿಸಬೇಕು! ಅಲ್ಲಿಯ ಜನರಲ್ಲಿ ಮಂದಹಾಸ, ಈ ಯುವಶಕ್ತಿಯ ಮೈಗಳಲ್ಲಿ ರೋಮಾಂಚನ. ಅಷ್ಟರಲ್ಲೆ Light-Up Revolution-2 ಕೂಡ ನಡೆದುಹೋಯಿತು. ಅದರ ಅಡಿಯಲ್ಲಿ ಪೆಂಜನಹಳ್ಳಿ ಮತ್ತು ಹೆಚ್ಡಿ ಕೋಟೆಗಳ ಹದಿನಾರು ಮನೆಗಳು ದೀಪ ಕಂಡವು.

img
       ಅದು ಜನವರಿ, 2015. ಸರ್ಕಾರ ಕಣ್ಣಿಗೂ ಈ ಯುವಶಕ್ತಿ ಬಿತ್ತು. ಸ್ವತಃ  ಗವರ್ನ್ಮೆಂಟೇ ಎಪ್ಪತ್ತೈದು ಮನೆಗಳಿಗೆ ಕಿಟ್ ಅಳವಡಿಸಲು ಹಣ ಮಂಜೂರು ಮಾಡಿತು. LightUp Revolution-2 ಅಡಿಯಲ್ಲಿ, ರಂಗಾಯಣ ಕೊಪ್ಲು ಮತ್ತು ಹುಣಸೂರಿನ ಬಳಿಯ 75 ಮನೆಗಳೂ ಬೆಳಕು ಕಂಡವು. ಈಗ ಮಾಧ್ಯಮಗಳಿಗೆ ಗಮನ ಕೊದದೇ ಬೆರೆ ವಿಧಿಯೇ ಇರಲಿಲ್ಲ! ರೇಡಿಯೋ ಚಾನೆಲ್ಗಳು, ಸುದ್ದಿ ವಾಹಿನಿಗಳು ಯುವಾದ ಪ್ರಮುಖರನ್ನು ಸಂದರ್ಶಿಸಿ ಪ್ರಸಾರ ಮಾಡಿದವು.
       ಆವತ್ತು ಹತ್ತನೆ ತರಗತಿಯಲ್ಲಿದ್ದವರು, ಇವತ್ತು ಇಂಜಿನಿಯರಿಂಗ್, ಮೆಡಿಕಲ್ ಮುಗಿಸುವ ಹಂತದಲ್ಲಿದ್ದಾರೆ. ಬೆಂಗಳೂರಿನ ನಾಲ್ಕು ಮತ್ತು ಮೈಸೂರಿನ ಎರಡು ಕಾಲೇಜುಗಳಲ್ಲಿ ಯುವಾದ ಪಡೆಗಳೇ ಇವೆ. "Our Youth are not useless, they are usedless" ಅಂದಿದ್ದರು ವಿವೇಕಾನಂದರು. ಆದರೆ ಇಂತಹ ಯುವ ಜನತೆ, ತಮಗೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜಸೇವೆಗೆ ಟೊಂಕ ಕಟ್ಟಿ ನಿಂತಿದೆ! ಸಮಾಜದ ಕಷ್ಟಕೋಟಲೆಗಳ ವಿರುದ್ಧ 'ನಾವೊಂದು ಕೈ ನೋಡೇ ಬಿಡ್ತೀವಿ ನನ್ಮಗಂದ್, ಯಾಕ್ ಸರಿ ಆಗಲ್ಲ?" ಅಂತ ತೊಡೆ ತಟ್ಟಿ ನಿಂತಿದೆ. ದೇಶದ ತುಂಬಾ ನಾವು ಮಾಡಿಕೊಂಡಿರುವ ಗಲೀಜಿಗೆ, "ಥೂ ಈ ದೇಶದ್ ಹಣೆಬರಹನೇ ಇಷ್ಟು" ಅಂತೆಲ್ಲ ದೇಶವನ್ನೆ ಬಯ್ಯುತ್ತಿರುತ್ತೇವೆ. ಅಂತಹುದರಲ್ಲಿ "ಬದಲಾವಣೆ ಶುರಾಗುವುದಾದರೆ ಅದು ನಮ್ಮಿಂದಾಗಲಿ" ಅಂತ ಎದೆಯುಬ್ಬಿಸುವ ಈ ಯುವಕರಿಗೆ ನಾವು ಸಪೋರ್ಟ್ ಮಾಡಬೇಕು ಅಲ್ಲವೇ?
       "ಯುವಾ" ನಾಡಿದ್ದು ಫೆಬ್ರುವರಿ 14ರಿಂದ ಮೂರುದಿನ ಉತ್ತರಕನ್ನಡದ, ಯಲ್ಲಾಪುರ ಮತ್ತು ಜೊಯಿಡಾ ಬಳಿಯ ಹಳ್ಳಿಗಳಿಗೆ BLUR-2 ಎಂಬ ಪ್ರಾಜೆಕ್ಟ್ ಅಡಿ ಮನೆಗಳನ್ನು ಬೆಳಗಲು ಹೊರಟು ನಿಂತಿದೆ. ಆದರೆ, ಕೊನೆಯ ಸಮಯದಲ್ಲಿ ಕೊಂಚ ಹಣಕಾಸು ಸಮಸ್ಯೆ ಉದ್ಭವಿಸಿದೆ. ನಮಗೆ ಡೈರೆಕ್ಟ್ ಆಗಿ ಹೋಗಿ ಹಿಂದುಳಿದ ಸಮಾಜಕ್ಕೆ ಬೆಳಕು ನೀಡಲು ಸಾಧ್ಯವಿಲ್ಲ. ಇವರಿಗಾದರೂ ಕೊಂಚವಾದರೂ, ಕೈಲಾದಷ್ಟಾದರೂ ನೆರವಾಗಿ, ನಮ್ಮ ಪಾಲಿನ ಪುಣ್ಯ ಪಡೆಯಬಹುದು.

ನೀವು ಈ ವಿದ್ಯಾರ್ಥಿಗಳೇ ಕಟ್ಟಿ ಬೆಳೆಸಿದ ಸಂಸ್ಥೆಯ ಬಗ್ಗೆ ಆಸಕ್ತರಾಗಿದ್ದರೆ ಅವರ ವೆಬ್ಸೈಟ್ iamyuva.org ನೋಡಬಹುದು.

ಇವರಿಗೆ ನಿಮಗೆ ಇಷ್ಟಬಂದಷ್ಟು, ಕೊಂಚವಾದರೂ ಹಣ ಸಹಾಯ ಮಾಡುವ ಇಚ್ಛೆಯಾದರೆ ಕೆಳಗಿನ ಲಿಂಕ್ ಮೂಲಕ ಅವರ ಅಧಿಕೃತ ಖಾತೆಗೆ ವರ್ಗಾಯಿಸಬಹುದು.
http://www.milaap.org/fundraisers/yuvablur2

ಅಥವಾ ಈ QR code ಅನ್ನು ಸ್ಕ್ಯಾನ್ ಮಾಡಿ.


 



      
    




Thursday, January 19, 2017

ಚಾರಿತ್ರ್ಯದ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ (ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ)

     "ಮಾನವನಲ್ಲಿ ಮೊದಲೇ ಇರುವ ಪರಿಪೂರ್ಣತೆಯನ್ನ ಹೊರೆತೆಗೆದು, ಅದಕ್ಕೊಂದು ರೂಪಕೊಡುವ ಪ್ರಕ್ರಿಯೆಯೇ ಶಿಕ್ಷಣ" ಅನ್ನುವುದು ವಿವೇಕಾನಂದರ ಅತ್ಯಂತ ಜನಪ್ರಿಯ ಹೇಳಿಕೆ. ಪ್ರತೀ ಮಗುವೂ ಹುಟ್ಟುವಾಗ ಹತ್ತಿಯ ಮುದ್ದೆಯಂತೆ. ಹತ್ತಿಯ ಮುದ್ದೆಯನ್ನು ನಾವು ಶುದ್ಧ ನೀರಿನಲ್ಲಿ ಹಾಕಿದರೆ, ಅದು ಶುದ್ಧ ನೀರನ್ನು ಹೀರಿಕೊಳ್ಳುತ್ತದೆ. ಕೊಳಕಿನಲ್ಲಿ ಹಾಕಿದರೆ ಕೊಳಕನ್ನು ಅಂಟಿಸಿಕೊಳ್ಳುತ್ತದೆ. ಹಾಗೆಯೇ ಮಗುವಿನಲ್ಲಿ ನಾವು ತುಂಬುವ ವಿಚಾರಗಳು ಹಾಗೂ ಕೊಡುವ ಸಂಸ್ಕೃತಿ ಒಳ್ಳೆಯದೋ ಕೆಟ್ಟದ್ದೋ ಎಂಬುದರ ಮೇಲೆ, ಮಗುವಿನ ವ್ಯಕ್ತಿತ್ವ ರೂಪುತಳೆಯುತ್ತದೆ. ದೇಶಕ್ಕೆ ಜೀವ ಅಂತ ಇರುವುದು ಭಾವನಾತ್ಮಕವಾಗಿ ಮಾತ್ರ, ನಿಜವಾಗಿಯೂ ಜೀವವಿರುವುದು ದೇಶದಲ್ಲಿರುವ ಜನರಿಗೆ. ಆದ್ದರಿಂದ ನಾವು ದೇಶಕ್ಕೆ ಏನು ಟ್ರೀಟ್ ಮೆಂಟ್ ಕೊಡಬೇಕು ಅಂದುಕೊಳ್ಳುತ್ತೇವೋ, ಅದನ್ನು ಕೊಡಬೇಕಿರುವುದು ಅಲ್ಲಿಯ ಜನಕ್ಕೆ. ಬೆಳೆಯುವ ಸಿರಿ ಮೊಳಕೆಯಲ್ಲಾದ್ದರಿಂದ, ನಾವು ಚಾರಿತ್ರ್ಯವನ್ನು ನಿರ್ಮಾಣ ಮಾಡಬೇಕಿರುವುದು ಮಕ್ಕಳದ್ದು. ವಿವೇಕಾನಂದರ ದೃಷ್ಟಿಯಲ್ಲಿ, "ಚಾರಿತ್ರ್ಯದ ನಿರ್ಮಾಣದ ಮೂಲಕ ದೇಶದ ನಿರ್ಮಾಣ" ಹೆಗೆ? ಏನು? ಎತ್ತ? ಅಂತೊಮ್ಮೆ ಕಣ್ಣಾಡಿಸೋಣ.

     "ಚಾರಿತ್ರ್ಯ" ಎಂಬುದು ಒಂದು ಗುಣವಲ್ಲ. ಅದು ಗುಣ ಸಮೂಹ. ವ್ಯಕ್ತಿಯೊಬ್ಬನ ಸುಗುಣ-ದುರ್ಗುಣಗಳೆರಡೂ ಸೇರಿ, ಆತನ ಒಟ್ಟೂ ಗುಣ ಏನು? ಎಂಬ ಪ್ರಶ್ನೆಗೆ ಉತ್ತರವೇ, ಆತನ "ಚಾರಿತ್ರ್ಯ"! ಚಾರಿತ್ರ್ಯ ಎಂಬುದು ಸಾಧಿಸಲ್ಪಡುವುದು ಅಥವಾ ಬಾಧಿಸಲ್ಪಡುವುದು, ಒಂದೆರಡು ಸಂಗತಿಗಳಿಂದಲ್ಲ. ಮಗುವೊಂದು ಬೆಳೆಯುತ್ತಿರುವ ಪರಿಸರ, ಮಾತನಾಡುತ್ತಿರುವ ಭಾಷೆ, ವಾಸವಿರುವ ಸ್ಥಳ ಹಾಗೂ ಭೌಗೋಳಿಕ ಪ್ರದೇಶ, ಅದರ ತಂದೆ ತಾಯಿಯರ ಸಂಸ್ಕೃತಿ, ರೀತಿ ರಿವಾಜು, ಅದು ಹೋಗುವ ಶಾಲೆ, ಅಲ್ಲಿಯ ಮೇಷ್ಟ್ರು, ಸಹಪಾಠಿಗಳು ಹೀಗೇ.... ಇವೆಲ್ಲವೂ ಸೇರಿ ಮಗುವೊಂದರ ಚಾರಿತ್ರ್ಯವನ್ನು ನಿರ್ಮಿಸುತ್ತಿರುತ್ತವೆ. "ಚಾರಿತ್ರ್ಯ ನಿರ್ಮಾಣದ ಮೂಲಕವೇ ರಾಷ್ಟ್ರ ನಿರ್ಮಾಣ ಸಾಧ್ಯ" ಅಂತ ಇಲ್ಲೇ ರುಜುವಾಗುವುದು ಹೇಗೆಂದರೆ, ಮಗುವೊಂದು ಬೆಳೆಯುತ್ತಿರುವ ರಾಷ್ಟ್ರದಲ್ಲಿನ ಪರಿಸರವೇ ಮಗುವಿನೊಳಗಿನ ಚಾರಿತ್ರ್ಯವನ್ನು ಪೋಷಿಸುತ್ತಿರುವುದು! ಹಾಗಾಗಿ "ಅದು ಚೆನ್ನಾಗಿದ್ದರೆ ಅದು ಚೆಂದ ಮತ್ತು ಇದು ಚೆನ್ನಾಗಿದ್ದರೆ ಅದು ಚೆನ್ನ" ಅನ್ನುವಂತ ಅವಿನಾಭಾವ ಸಂಬಂಧ ಇವೆರಡರದ್ದು!

"ಒಂದು ದೇಶ ಉನ್ನತಿ ಹಾಗೂ ಅವನತಿ ಇವೆರಡನ್ನೂ ಸಾಧಿಸುವುದು ಅಲ್ಲಿಯ ತಾಯಂದಿರ ಕೈಯಲ್ಲಿರುತ್ತದೆ. ದೇಶ ಹಿರಿಯಣ್ಣನಾದರೂ ಅವರೇ ಕಾರಣ, ಅಧೋಗತಿಗಿಳಿದರೂ ಅವರೇ ಕಾರಣ" ಅನ್ನುವುದು ಸ್ವಾಮೀ ವಿವೇಕಾನಂದರ ನುಡಿ. ಮಕ್ಕಳ ಚಾರಿತ್ರ್ಯವನ್ನು ನಿರ್ಮಿಸುವುದು ಮುಖ್ಯವಾಗಿ ತಾಯಂದಿರು. ಅವರು ತಮ್ಮ ಮಗುವನ್ನ ಸಚ್ಚಾರಿತ್ರ್ಯವಂತರನ್ನಾಗಿ ಮಾಡುತ್ತಾರೋ ಅಥವಾ ಪೋಕರಿಗಳನ್ನಾಗಿ ಮಾಡುತ್ತಾರೋ ಅನ್ನುವುದರ ಮೇಲೆ ದೇಶ ಅಭಿವೃದ್ಧಿ ಹೊಂದುತ್ತದೆ ಅಥವಾ ಅಧಃಪತನಕ್ಕಿಳಿಯುತ್ತದೆ ಎಂಬುದು ಅದರ ಸಾರಾಂಶ.
ಶಿಕ್ಷಣ ಅನ್ನುವುದು ಮಗುವೊಂದರ ಚಾರಿತ್ರ್ಯವನ್ನು ರೂಪಿಸದಿದ್ದರೆ, ಅದು ಎಷ್ತೇ ಜ್ಞಾನವನ್ನು ಮಗುವಿನೊಳಗೆ ತುಂಬಿದ್ದರೂ, ಪುಡಿಗಾಸಿನ ಪ್ರಯೋಜನವೂ ಇಲ್ಲ. "ಶಿಕ್ಷಣ ವೆಂದರೆ ಒಂದಷ್ತು ಮಾಹಿತಿಗಳನ್ನು ತಲೆ ಒಳಗೆ ಬಿಟ್ಟುಕೊಂಡು, ಆಮೇಲೆ ಅವುಗಳೇ ಒಳಗೆ ಕಿತ್ತಾಡಿಕೊಳ್ಳುವಂತೆ ಮಾಡುವ ಗೊಂದಲಕಾರಿ ಪ್ರಕ್ರಿಯೆ ಅಲ್ಲ. ನೀನು ಐದೇ ಐದು ಸುಗುಣಗಳ್ಳನ್ನು ನಿನ್ನ ಚಾರಿತ್ರ್ಯದಲ್ಲಿ ಅಳವಡಿಸಿಕೊಂಡಿದ್ದರೂ, ಸಚ್ಚಾರಿತ್ರ್ಯವಿಲ್ಲದೇ ಕೇವಲ ಉರು ಹೊಡೆಯುವ, ಸಂಪೂರ್ಣ ಗ್ರಂಥಾಲಯವನ್ನೇ ಗಟ್ಟುಹೊಡೆದು ಕುಳಿತಿರುವ ಮನುಷ್ಯನಿಗಿಂತ ನೀನು ಹೆಚ್ಚು ವಿದ್ಯಾವಂತ" ಅನ್ನುವ ಛಾತಿ ವಿವೇಕಾನಂದರದ್ದು! ಜಗತ್ತನ್ನು ತಲ್ಲಣಗೊಳಿಸಿದ ಉಗ್ರಗಾಮಿಗಳಲ್ಲಿ ಅನೇಕರು ಯೂನಿವರ್ಸಿಟಿ ಟಾಪರ್ಗಳು, ಆದರೆ ಅವರೆಲ್ಲ ಮಡಿದ್ದು ಅನಾಹುತವನ್ನೇ ಹೊರತು, ಉಪಕಾರವ್ನ್ನಲ್ಲ. ಅದ್ದರಿಂದ ನಿರ್ಮಿಸಬೇಕಿರುವುದು ಚಾರಿತ್ರ್ಯವನ್ನೇ ಹೊರತು, ಕೇವಲ ಮಾಹಿತಿಗಳ ಗಟ್ಟು ಹೊಡೆದು ಪಡೆದ ಡಿಗ್ರಿ ಹೋಲ್ಡರ್ಗಳನ್ನಲ್ಲ. "ಉಕ್ಕಿನ ನರಗಳುಳ್ಳ, ಕಬ್ಬಿಣದ ಮಾಂಸಖಂಡಗಳನ್ನುಳ್ಳ, ತೀಕ್ಷ್ಣ ಬುದ್ಧಿಮತ್ತೆಯ ನೂರೇ ನೂರು ಯುವಕರನ್ನು ಕೊಡಿ. ಇಡೀ ಜಗತ್ತಿನಲ್ಲೇ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆ" ಅಂತ ಹೆಳಿದ್ದ ವೀರಸಂನ್ಯಾಸಿ, ವಿವೇಕಾನಂದ. ವಿವೇಕಾನಂದರ ಪ್ರಕಾರ ಮಕ್ಕಳಲ್ಲಿ ಅಂತ ಚಾರಿತ್ರ್ಯವನ್ನು ಬೆಳೆಸಬೇಕು! ಅಳುವ, ನೈಗೊರೆಯುವ, ಬಲಹೀನದ ಚಾರಿತ್ರ್ಯವನ್ನಲ್ಲ! ಚಾರಿತ್ಯವನ್ನು ನಿರ್ಮಿಸುವಾಗ ಸಂವೇದನೆಗಳನ್ನು ಸೂಕ್ಷ್ಮವಾಗಿಯೂ, ಮನಸ್ಥಿತಿಯನ್ನು ಬಂಡೆಯಂಥಹ ಗಟ್ಟಿಯದ್ದಾಗಿಯೂ ಬೆಳೆಸಬೇಕು.

ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಾ ಹೋದಾಗ, ಮನುಷ್ಯ ಒಳ್ಳೆಯದನ್ನೇ ಮಾಡುತ್ತಾ ಹೋಗುತ್ತಾನೆ. ಕೆಟ್ಟದ್ದನ್ನು ಮಾಡಲು ಶುರುಮಾಡಿದರೆ, ಅನಾಹುತಗಳು ಒಂದೊಂದಾಗಿ ಜರುಗುತ್ತವೆ ಅನ್ನುವ ಕಲ್ಪನೆ ಚಾರಿತ್ರ್ಯದಲ್ಲಿ ಪಡಿಯಚ್ಚು ಮೂಡಿಸಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. "ಫೂಟ್ ಬಾಲ್ ಆಡುವುದು ಭಗವದ್ಗೀತೆ ಓದುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಭಗವಂತನ ಬಳಿ ಕರೆದೊಯ್ಯುತ್ತದೆ. ಇವು ಕಠಿಣ ಪದಗಳು. ಆದರೆ ನಾನು ಹೇಳಲೇಬೇಕಾಗಿದೆ. ಏಕೆಂದರೆ ನಾನು ನಿಮ್ಮನ್ನೆಲ್ಲ ಅದಮ್ಯವಾಗಿ ಪ್ರೀತಿಸುತ್ತೇನೆ. ಗಟ್ಟಿ ಎದೆಯ, ಬಲಾಢ್ಯ ದೇಹದ ಯುವಕರಾಗಿ ನೀವು ಭಗವದ್ಗೀತೆಯ ಸಾಲುಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳುವಿರಿ" ಅಂತೊಮ್ಮೆ ಹೇಳಿದ್ದರು ವಿವೇಕರು. ದೇಹ ಮತ್ತು ಮನಸ್ಸು ಒಂದರ ಮೆಲೊಂದು ಪರಿಣಾಮಗಳನ್ನು ಬೀರುತ್ತವೆ. ಗಟ್ಟಿ ಚಾರಿತ್ರ್ಯ ರೂಪುಗೊಳ್ಳುವ ಮೊದಲು ಗಟ್ಟಿ ದೇಹ ರೂಪುಗೊಳ್ಳಬೇಕಾಗುತ್ತೆ. ಆಗ ಮಾತ್ರ ಗಟ್ಟಿ ದೇಶದ ನಿರ್ಮಾಣ ಕೂಡ ಸಾಧ್ಯ!

ಜ್ಞಾನ ಮನುಷ್ಯನಿಗೆ ಭೂಷಣ. ಆದರೆ ವಿನಯ ಜ್ಞಾನಕ್ಕೇ ಭೂಷಣ. ಈ ವಿನಯವನ್ನು ರೊಪಿಸದ, ಚಾರಿತ್ರ್ಯವನ್ನು ರೂಪಿಸದ ವಿದ್ಯಾಭ್ಯಾಸ ನಿಷ್ಪ್ರಯೋಜಕ. ಅದರಿಂದ ಜೊಳ್ಳುಗಳನ್ನು ನಿರ್ಮಿಸಬಹುದೇ ವಿನಃ, ರಾಷ್ಟ್ರ ನಿರ್ಮಿಸುವ ಚೈತನ್ಯಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. ವಿವೇಕಾನಂದರು ಚಾರಿತ್ರ್ಯ ನಿರ್ಮಾಣದ ಒಂದು ಭಾಗವಾಗಿ, ಯುವಕರಿಗೆ "ತಮ್ಮನ್ನು ತಾವೇ ಬಲವಾಗಿ ನಂಬುವುದನ್ನು" ಹೇಳಿಕೊಡುವುದನ್ನು ಬಲವಾಗಿ ಪ್ರತಿಪಾದಿಸಿದ್ದರು. ತನ್ನನ್ನೇ ತಾನು ನಂಬದವ, ರಾಷ್ಟ್ರವನ್ನು ನಿರ್ಮಿಸಿಯಾನೆ? "ನಿಮ್ಮ ಮೇಲೆ ನಿಮಗೊಂದು ಅದಮ್ಯ ನಂಬಿಕೆ ಇರಲಿ. ನರೇಂದ್ರ ಚಿಕ್ಕವನಿರುವಾಗಿನಿಂದಲೂ ತನ್ನ ಮೇಲೆ ಇಟ್ಟುಕೊಂಡಿರುವ ನಂಬಿಕೆ ಇದೆಯಲ್ಲ? ಅದೇ ಇವತ್ತು ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾಡಿರುವುದು. ನೀವೂ ನಿಮ್ಮ ಮೇಲೆ ಅಂಥದ್ದೊಂದು ಬಲವಾದ ನಂಬಿಕೆಯನ್ನು ಇಟ್ಟುಕೊಳ್ಳಿ. ಮಹಾತ್ಮರು ತಾವು ಮಹಾತ್ಮರಾಗಬೇಕಾಗಿರುವವರು ಎಂಬ ಪ್ರಜ್ಞೆ ಹುಟ್ಟಿದಾಗಿನಿಂದ ಬೆಳೆಸಿಕೊಂಡಿರುತ್ತಾರೆ. ಆದ್ದರಿಂದ ಮುಂದೆ ನಿಜವಾಗಿಯೂ ಮಹಾತ್ಮರಾಗುತ್ತಾರೆ" ಅಂತ ಪ್ರತಿಪಾದಿಸಿದ್ದರು ವಿವೇಕಾನಂದರು. ಅಂಥದ್ದೊಂದು ಚಾರಿತ್ರ್ಯ ನಮ್ಮದಾಗಬೇಕು.

ಆವತ್ತು ವಿವೇಕರು ಇದ್ದ ಕಾಲದಲ್ಲಿ ಭಾರತ ದಾಸ್ಯ, ಬಡತನ, ರೋಗ ರುಜಿನಗಳಿಂದ ಬಳಲಿ ನಿತ್ರಾಣವಾಗಿತ್ತು. ಬಹುಪಾಲು ಜನಸಮೂಹ ನಂಬಿಕೆ ಕಳೆದುಕೊಂಡು, ಬೇಸತ್ತುಹೋಗಿದ್ದರು. ಅವರನ್ನೆಲ್ಲ ಬಡಿದೆಬ್ಬಿಸುವ ಕೆಲಸವನ್ನ ವಿವೇಕರು ಮಾಡಿದರು. ಇವತ್ತಿಗೆ ಭಾರತಕ್ಕೆ ಆ ತರಹದ ಸಂಕಟಗಳಿಲ್ಲದಿದ್ದರೂ, ಪರಿಸ್ಥಿತಿ ಭಿನ್ನವಾಗಿ ಏನೂ ಇಲ್ಲ. ಮತ್ತೊಂದಿಷ್ಟು ಸಂಕೋಲೆಗಳು ದೇಶವನ್ನ ಬಂಧಿಸಿಟ್ಟಿವೆ. ವಿವೇಕರ ಚಿಂತನೆಗಳ ನೆಲೆಗಟ್ಟಿನಲ್ಲಿ ಚಾರಿತ್ರ್ಯವನ್ನು ನಿರ್ಮಿಸಿಕೊಂಡು, ಆ ಮೂಲಕ ದೇಶವನ್ನು ಮತ್ತೆ ಹಳೆಯ ವೈಭವಕ್ಕೆ ಕರೆದೊಯ್ಯಬೇಕಿರುವುದು ನಮ್ಮೆಲ್ಲರ ಕರ್ತವ್ಯ! ಬಡತನ, ನಿರುದ್ಯೋಗ ಮುಂತಾದ ಆಂತರಿಕ ಸಮಸ್ಯೆಗಳು ಒಂದೆಡೆಯಾದರೆ, ಯುದ್ಧ, ಭಯೋತ್ಪಾದನೆಯಂಥ ಪ್ರಚೋದಿತ ಸಂಕಟಗಳು. ಭ್ರಷ್ಟಾಚಾರದಂತಹ ಕ್ಯಾನ್ಸರ್ ಇನ್ನೊಂದೆಡೆ. ಇವೆಲ್ಲವನ್ನೂ ಮೆಟ್ಟಿನಿಂತು ಘರ್ಜಿಸುವ ತಾಕತ್ತುಳ್ಳ ಯುವಸಮೂಹವೊಂದು ತಯಾರಾಗಬೇಕು. ತಯಾರಾಗಬೇಕು ಅಂದರೆ, ಅಂಥ ಚಾರಿತ್ರ್ಯವನ್ನು ನಾವು ಹೊಸಪೀಳಿಗೆಯಲ್ಲಿ ಬೆಳೆಸಬೇಕು. "ನಾನು ನನ್ನ ದೇಹವನ್ನು ಒಂದು ಉಪಯೋಗಿಸಿದ ಬಟ್ಟೆಯಂತೆ ತೆಗೆದಿಟ್ಟು ಹೋಗಬಹುದು, ಆದರೆ ಆತ್ಮವಾಗಿ ಜಗತ್ತಿನ ಪ್ರತೀ ಜೀವಿಯೂ ತಾನು ಪರಮಾತ್ಮನಲ್ಲಿ ಒಂದು ಎಂದು ಅರಿಯುವವರಿಗೂ ಕೆಲಸ ಮಾಡುತ್ತಿರುತ್ತೇನೆ" ಅಂತ ಹೇಳಿದ್ದ ವಿವೇಕರು ನಮಗೆಲ್ಲ ಸ್ಫೂರ್ತಿಯಾಗಿ ಬೆನ್ನಿಗೆ ನಿಂತೇ ನಿಂತಿರುತ್ತಾರೆ. ಅದನ್ನರಿತು ಚಾರಿತ್ರ್ಯ ನಿರ್ಮಿಸೊಂಡರೆ, ಶೀಘ್ರದಲ್ಲಿ ವಿವೇಕರ ಕನಸಿನ "ವಿಶ್ವಗುರು ಭಾರತ" ವನ್ನು ನಾವು ಕಾಣಬಹುದು!

ಜೈ ಹಿಂದ್