Powered By Blogger

Wednesday, February 14, 2018

ಏನು ಚಂದವೇ ಹುಡುಗಿ!


ಪರಿಮಳ ಹೂವಿನದ್ದೆಂದೆಣಿಸಿ
ದೂರಬನದಿಂದೋಡಿ ಬಂದಿದ್ದ ದುಂಬಿ
ಮೋಸಹೋಗಿರಬೇಕು
ನಿನ್ನ ನಗುವ ನಾದವು ಹರಡಿ
ಹರಿವ ಜುಳುಜುಳು ನೀರೂ ಸುಮ್ಮನಾಗಿರಬೇಕು!
ಏನು ಚಂದವೇ ಹುಡುಗಿ
ನಿನ್ನ ಹಾವಭಾವ
ತುಂಬಿತಲ್ಲವೇ ನನ್ನ ಬದುಕನೀಗ


ನೋಡುತಲಿರಬೇಕು ನಾನು,
ದಯವಿಟ್ಟು ಓಡಬೇಡ.
ನಿನ್ನ ಸೌಂದರಯದಲಿ ನಾ ಕರಗಿಹೋಗಬೇಕು!
ಮರದ ಬುಡದಿ ಕುಳಿತು
ತಲೆಯ ನೇವರಿಸು ಸಾಕು
ಮುಗ್ಧ ಪ್ರೀತಿ ನನದು,
ನಿನ್ನ ಕೈಗಳು ನೆಪವಷ್ಟೇ,
ಭಾವದ ಕಣ್ಣುಗಳ ಮೂಲಕ
ಒಂದಿಷ್ಟು ಮಮತೆಯನ್ನು ಸುರಿದುಬಿಡು
ನಾನು ತೋಯ್ದುಹೋಗುವಂತೆ!
ಆಗ ನನಗಾನಿನ್ನೆರಡು ಕಣ್ಗಳೇ
ಸಮಸ್ತ ಪ್ರಪಂಚ.


ತಪ್ಪು ವಯಸ್ಸಿನದ್ದೇ ಇರಬಹುದು
ಕಣ್ಣು ಒದ್ದೆಯಾದಾಗೊರೆಸಲು
ಹಾಳುಜೀವ
ನಿನ್ನಂತಹ ಕೈಗಳನ್ನೇ ಬಯಸುತ್ತದೆ.
ಪ್ರೇಮಾಂತರಿಕ್ಷದಲ್ಲಿ ಬಹಳ ಬೇಗ
ಭಾವಪರವಶನಾಗುವ ನನಗೆ
ಒಂದು ಮುತ್ತಿಟ್ಟು, ಸರಿಪಡಿಸಿಬಿಡು.
ಏನು ಚಂದವೇ ಹುಡುಗಿ!


ಘಳಿಗೆಗೊಮ್ಮೆಯೆ ನೀನು
ಓರೆನೋಟವ ಬೀರು,
ಕಾಪಿಟ್ಟುಕೊಳ್ಳುವೆ ನಾ,
ಥಳಿಸುವ ಆ ರೋಮಾಂಚನವಾ!
ಗಮನಿಸಿಯೂ ಇಲ್ಲವೆಂಬಂತೆ
ನಿನ್ನ ನಟನೆ, ಮುಸುಮುಸಿ ನಗು
ನನಗೆ ಮುದ ನೀಡುತ್ತೆ,
ಕಣ್ಮುಚ್ಚಿದಾಗ ನೆನೆಸಿಕೊಳ್ಳಲು,
ಅಷ್ಟು ಸಾಕು!
ಮೈಮರೆವ ಪೇಚು ನನಗಿರಲಿ,
ನೀ ನಾಚಿ ಹಾಕುವ ಹೆಜ್ಜೆಗಳ ವೇಗವನು ಮಾತ್ರ
ಕೊಂಚವೂ ತಗ್ಗಿಸಬೇಡ..


ನಿನ್ನ ಇರುವಿಕೆಯಲ್ಲಿ
ನನ್ನೊಳಗೆ ಸೃಷ್ಟಿಯಾಗುವ ಭಾವ,
ನನಗದು ಬಹಳ ಅಮೂಲ್ಯ.
ಕೆಲವೊಮ್ಮೆ ನೀನು ತಡವಿ
ಎಚ್ಚರಿಸಬೇಕಿರುವುದು
ಬಹುಶಃ ಅದಕ್ಕೇ ಇರಬೇಕು!


ಕೊಂಚವೇ ದೂರ ಹೋಗಿ
ಕಾರಣವೇ ಇಲ್ಲದೇ
ಪುನಃ ಹಿಂದಿರುಗಬೇಡ,
ಏನನೋ ಕೇಳುವವಳಂತೆ ನಟಿಸಬೇಡ,
ಬೆರಳ ತುದಿಯ ಕಚ್ಚಿ,
ಪೆಚ್ಚು ಪೆಚ್ಚಾಗಿ ನಕ್ಕು,
ನನ್ನ ಗೆಲ್ಲಲು ಪ್ರಯತ್ನಿಸಬೇಡ.
ಕೊಂಚ ದಯೆತೋರು ಹುಡುಗಿ
ಸೋಲುವ ಶಾಸ್ತ್ರ
ಯಾವತ್ತೋ ಮುಗಿದಿದೆ!


ಏನು ಚಂದವೇ ಹುಡುಗಿ, ನಿನ್ನ ಹಾವಭಾವ
ತುಂಬಿತಲ್ಲವೇ ನನ್ನ ಬದುಕನೀಗ ||

~ಕನಸು ಕಂಗಳ ಹುಡುಗ


No comments:

Post a Comment