ಅಮ್ಮನ ಹುಟ್ಟಿದಹಬ್ಬಕ್ಕಾಗಿ ಒಂದು ಕವನ ಬರೆದಿದ್ದೆ. ತಾಯ್ತನವನ್ನು ಒಬ್ಬ ಮಗನಾಗಿ ಎಷ್ಟು ಸಾಧ್ಯವೋ ಅಷ್ಟು ಅರ್ಥಪೂರ್ಣವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇನೆ. Mother's Day ಸಲುವಾಗಿ ನಿಮಗೂ ತೋರಿಸೋಣ ಅನ್ನಿಸಿತು. ಸಣ್ಣ ಕವನ. ಓದಿ, ಅಭಿಪ್ರಾಯ ತಿಳಿಸಿ.
******* ******* ******** ********
ಹುಟ್ಟಿದ ಮಗುವು ಹಾಡು ಕೇಳಿತು
ನೀನೇ ಹಾಡಿದೆ ಅಮ್ಮಾ
ಹಸಿದ ಹಸುಳೆ ಬಿಕ್ಕಿ ಅತ್ತಿತು
ಹಾಲನು ಕೊಟ್ಟೆ ಅಮ್ಮಾ.
ತೊದಲಿದ ಮಗುವು ಬಾಯಿ ಒಡೆಯಿತು
ಮೊದಲ ಪದವೇ "ಅಮ್ಮಾ"
ನಡೆಯುತ ಮಗುವು ಎಡವಿ ಬಿದ್ದಿತು
ನೋವಲಿ ಚೀರಿತು "ಅಮ್ಮಾ.."
ಬೆಳೆದ ಮಗುವಿಗೆ ಶಾಲೆ ಕರೆಯಿತು
ಬಿಟ್ಟು ಬಂದಳು ಅಮ್ಮ
ಗುರುವು ತೋರಿದ ಗುರಿಯೆಡೆ ಸಾಗಲು
ಮಗುವು ಆಸರಿಸಿದ ಮರ ಅಮ್ಮ
ತನ್ನ ಬದುಕಿನ ಗುರಿಯನು ಸರಿಸಿ
ನನ್ನ ಬದುಕನು ಎತ್ತಿಹಿಡಿದಳು ಅಮ್ಮ
ನನ್ನ ಗೆಲುವು ಸೋಲುಗಳು ತನ್ನದೆಂದೇ ಅರಿತಳು
ನನ್ನ ಸುಖದಲಿ ತಾನೂ ಹರ್ಷಿಸಿ, ತನ್ನ ಸುಖವನೇ ಮರೆತಳು.
ವಯಸು ತಂದಿತು ಸಿಟ್ಟು-ರೋಷ ಮಗುವಿನೊಳಗೆ ಹಾಗೆ
ಅಮ್ಮ ಹೇಳಿದನು ಕೇಳಲಾರದು, ಹುಚ್ಚು ಹರೆಯವು ಹಾಗೇ!
ತಿರುಗಿ ಹೇಳಲು ಬಾಯಿ ತುಡಿವುದು, ನನ್ನ ಒಪ್ಪಿಗೆ ಇರದೇ
ಕೋಪ ಆಕೆಯದು ತೀರ ಕ್ಷಣಿಕ, ಪ್ರೀತಿಯು ಮತ್ತೆ ಉಕ್ಕಿ ಬರದೇ?
ತುಂಬು ಜಗದಲಿ ಸೋತು ನಿಂತೆ, ಕಷ್ಟ ಬಂದಿತು ಕಂತೆ ಕಂತೆ,
ದೂರ ಹೋಯಿತೆ ಬಳಗವು?
ಅಮ್ಮ ತಾನು ಚೂರೂ ಕದಲದೆ ಅಪ್ಪಿ ಹಿಡಿದಳು ನನ್ನನು
ಅವಳ ಮನಸಿನ ತುಂಬು ಅಂದಕೆ, ನಾಚಿ ನಿಂತನು ಚಂದ್ರನು!
ಗೆಲುವು ಬಂದಿತು ಬಂದೇ ಬಂದಿತು
ಜೀವನ ಎಲ್ಲವ ಕೊಡುವುದು.
ಎಂದೂ ಮರೆಯದ ತುಂಬು ಸಾರ್ಥಕ ಆಕೆ ಮುಖವನೆ ತುಂಬಿತು,
ಇದೇ ಕ್ಷಣಕೆ ರಾತ್ರಿಹಗಲು ದುಡಿದ ಮನವು ಕುಣಿದು ಜಿಗಿದಾಡಿತು!
ವಿಧಿಯು ತಾನು ಕಠಿಣದೊಂದು ಗುದ್ದು ನೀಡಲು ಬಂದಿತು
ಮನಸು ಕರೆಯಿತು, ಹೃದಯ ಬಡಿಯಿತು, ಏರು ಧ್ವನಿಯಲಿ "ಅಮ್ಮಾ.."
ತೀರ ಕಾಣಲು ದೋಣಿ ಎಡವಲು, ಜೀವ ತಂದಿತು ಸ್ಮರಣೆಗೆ
ಅದೇ ಶಬ್ದ, ಒಂದೇ ಶಬ್ದ, "ಅಮ್ಮ..ಅಮ್ಮ..ಅಮ್ಮಾss.."
~ಸಂಕೇತ್ ಡಿ ಹೆಗಡೆ.