Powered By Blogger

Friday, April 13, 2018

ಕೊಂಚವೂ ಯೋಚಿಸಬೇಡ!

ನೀರವ ಕಾಡಿನ ಹವೆ
ಕೋಕಿಲೆಯ ಗಾನಸೌಂದರ್ಯಕೆ
ಸ್ಥಬ್ಧವಾಗುವಂತೆ,
ಶಾಂತಸ್ವರೂಪ ಕಡಲತಡಿಯನು
ಅಪ್ಪಳಿಸುವ ಪ್ರತೀ ಅಲೆಯೂ
ನವೀಕರಿಸುವಂತೆ
ಒಮ್ಮೆ ನಕ್ಕುಬಿಡು ಹುಡುಗಿ
ಕೊಂಚವೂ ಯೋಚಿಸದೆ!
ಮಿಂಚು ಸಂಚರಿಸುವ
ಆ ಅನುಭವದಿ
ಒಮ್ಮೆ ಮುಳುಗೆದ್ದುಬಿಡುವೆ!


ನೋಡುವಾಸೆಗೆ ಮಣಿದು
ಕಾದು ಕೂರುವ ನನಗೆ,
ಬೇಕಂತಲೇ ಚೂರು ಕಾಯಿಸು,
ನೀನೇ ಕದ್ದ ನನ್ನ ಹೃದಯದ ಬಗ್ಗೆ
ಕೊಂಚ ಕಾಳಜಿಯಿದ್ದರೆ!
ನಿನ್ನ ನೋಡುವ ಕ್ಷಣಕೆ
ಬಡಿವ ಮಿಂಚಿಗೆ ಸಿಲುಕಿ
ಛಿಧ್ರವಾದೀತೆಂಬ ಭಯ ನನಗೆ!
ಕಾಯುವುದರಲ್ಲೊಂದು ಮಜವಿದೆ,
ತಡಮಾಡಿ ನೀ ಯಾಚಿಸುವ ಕ್ಷಮೆಯ
ಆಲಿಸುವಲ್ಲೂ ಒಂದು ಹಿತವಿದೆ!
ಸಮಯವೆಲ್ಲ ನಿನದೇ ಹುಡುಗಿ,
ಸಾಕುಬೇಕಷ್ಟು ಕಾಯಿಸು,
ಕೊಂಚವೂ ಯೋಚಿಸಬೇಡ!

ಹೋಗುವ ತಾಣದ ಪರವೋ,
ಕೊಳ್ಳುವ ಗೊಂಬೆಯ ಪರವೋ,
ನನ್ನೊಂದಿಗಿಷ್ಟು ವಾದಿಸು,
ಬೇಕೇ ಬೇಕೆಂದು ಪೀಡಿಸು!
ಮೊದಲಿಗೆ ಒಪ್ಪಲಾರೆ,
ಕೊನೆಗೇ ಒಪ್ಪಬೇಕೆಂಬ ಹಠ ನನಗೂ!
ನೀನು ಕಾಡಿಸಬೇಕು,
ನಿನ್ನ ಕಣ್ಗಳ ಪ್ರಾರ್ಥನೆಯಲ್ಲೇ
ನಾನು ಕಳೆದು ಕರಗಿಹೋಗಬೇಕು!
ನಿನ್ನ ಹಾವಭಾವಗಳಿಂದಲೇ
ಪೇಟೆಯ ಬೀದಿಗಳೆಲ್ಲ
ಅಲಂಕೃತಗೊಂಡಾವು!

ತರಗತಿಯ ನೆಪದಲ್ಲಿ
ಬಿಟ್ಟು ಕೂರುವ ನನ್ನ
ಅರೆಘಳಿಗೆಗೊಮ್ಮೆ ನೀ
ಕದ್ದುನೋಡಬೇಕು!
ಕಣ್ಣು ಹೃದಯಕೆ ಮಣಿದು,
ನಿನ್ನ ನೋಡಲು ಹೊರಳಿ
ಕಳ್ಳ ನೋಟವ ಬೀರಲು,
ನೀನೂ ಸಿಕ್ಕಿಬೀಳಬೇಕು.
ಇಬ್ಬರ ಕಣ್ಗಳೂ ಸೇರಬೇಕು,
ಇಬ್ಬರೂ ನಾಚಿ ನೀರಾಗಿ,
ತಲೆಮರೆಸಿಕೊಳ್ಳಬೇಕು.
ದೃಷ್ಟಿ ನಿನ್ನದೇ ಹುಡುಗಿ,
ನಿನ್ನ ಬಿಟ್ಟಿನ್ನೆಲ್ಲವೂ ಮಸುಬು,
ಕೊಂಚವೂ ಯೋಚಿಸಬೇಡ!

~ಕನಸು ಕಂಗಳ ಹುಡುಗ