Powered By Blogger

Saturday, January 14, 2017

Know your Yuva!

ಯುವಾ ಅಂದರೆ..?

"ಇವತ್ತಿನ ಕಾಲದಲ್ಲಿ, ಯುವ ಜನಾಂಗ ನಿರುಪಯೋಗಿಯಾಗಿದೆ ಎಂದು ಹೇಳುತ್ತಾರೆ.
ಆದರೆ ನಾನು ಹೇಳುತ್ತೇನೆ ಕೇಳಿ, ಇವತ್ತಿನ ಯುವ ಜನಾಂಗ ನಿರುಪಯೋಗಿಸಲ್ಪಟ್ಟಿದೆ, ಅಷ್ಟೇ!"

ತರುಣ-ತರುಣಿಯರ ಅಗಾಧ ಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಲೇ YUVA(Youth United For Vision Achievement) ಎಂಬ ಎನ್ ಜಿ ಓ(ರಿಜಿಸ್ಟರ್ಡ್) ಒಂದನ್ನು ನಾವೆಲ್ಲ ವಿದ್ಯಾರ್ಥಿಗಳೇ ಸೇರಿ ಶುರುಮಾಡಿದ್ದು! ಯುವಶಕ್ತಿಯನ್ನು ಒಗ್ಗೂಡಿಸಿ, ಸಮಾಜ ಮತ್ತು ದೇಶಕ್ಕೆ ಬದ್ಧವಾಗಿರುವಂತೆ ಹರಿಯಬಿಡುವುದೇ ನಮ್ಮ ಸಂಘಟನೆಯ ಮೂಲ ಉದ್ದೇಶ.
ಇದಕ್ಕಾಗಿ ನಾವು ಪ್ರಪ್ರಥಮವಾಗಿ ಆಯ್ದುಕೊಂಡ ಯೋಜನೆ "ಬೆಳಕ ಹರಡುವುದು"! ಹೌದು, ಸಮಾಜಿಕವಾಗಿ ಕತ್ತಲೆಯಲ್ಲಿರುವುದಲ್ಲದೇ, ಸೂರ್ಯ ಮುಳುಗಿದ ಮೇಲೆ ಅಕ್ಷರಷಃ ಕತ್ತಲು ಕವಿಯುವ, ಕರೆಂಟು ಇನ್ನೂ ಸಿಗದಿರುವ ಹಳ್ಳಿಗಳು ನಮ್ಮ ಕಾರ್ಯಸ್ಥಾನ! ಅವರೆಗೆಲ್ಲ ಪರಿಸರಪ್ರೇಮಿಯೂ ಆದ ಸೌರಶಕ್ತಿಯಿಂದ ಬೆಳಕು ನೀಡುವುದು, ನಮ್ಮ ಪ್ರಮುಖ ಧ್ಯೇಯೋದ್ದೇಶ.
ಇದರ ಜೊತೆಯೇ, ಕಡುಬಡವರ ಜೀವನಮಟ್ಟವನ್ನು ಏರಿಸಲು ಪ್ರಯತ್ನಿಸುವುದರ ಮೂಲಕ, ಅಲ್ಲಿಯ ಮಕ್ಕಳೂ ಉತ್ತಮ ವಿದ್ಯಾಭ್ಯಾಸ ಮತ್ತು ಆರೋಗ್ಯವನ್ನು ಹೊಂದಿ, ಸಮಾಜದಲ್ಲಿ ತಲೆಯೆತ್ತಿ ಬದುಕುವಂತೆ ಮಾಡುವುದು, ಭರವಸೆಯ ನಾಳೆಗಳನ್ನು ಅವರದ್ದಾಗಿಸುವುದು ನಮ್ಮ ಹಸಿಗನಸುಗಳಲ್ಲೊಂದು.

ನಮ್ಮ ಧ್ಯೇಯೋದ್ದೇಶ:

ಗ್ರಾಮೀಣ ಭಾಗದ ಸಂಪೂರ್ಣ ಅಭಿವೃದ್ಧಿ ಮತ್ತು ಗ್ರಾಮೀಣ ಜನತೆಯ ಬಲವರ್ಧನೆ.
ಯುವಜನತೆಗೆ ದೇಶದ ಏಳಿಗೆಯಲ್ಲಿ ತಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿ, ಆ ಜವಾಬ್ದಾರಿಯನ್ನು ಹೊರಲು ಅವರನ್ನು ಕಟಿಬದ್ಧಗೊಳಿಸುವುದು.


ನಮ್ಮ ಗುರಿಗಳು:

ಪ್ರಾಥಮಿಕ ಗುರಿಗಳು:
* ಗ್ರಾಮೀಣ ಭಾರತೀಯರ ಜೀವನಮಟ್ಟ ಸುಧಾರಿಸುವುದು ಹಾಗೂ ತಮ್ಮ ದಿನನಿತ್ಯದ ಜೀವನದಲ್ಲಿ ಸಾಂಪ್ರದಾಯಿಕ ಶಕ್ತಿಮೂಲಗಳ ಮೇಲಿನ ಅವರ ಅವಲಂಬನೆಯನ್ನು ಕಡಿಮೆ ಮಾಡುವುದು. ಇದು ಅವರ ಹಣಕಾಸು ಸ್ಥಿತಿ ಮಾತು ಆರೋಗ್ಯ ಸ್ಥಿತಿಗಳನ್ನೆರಡನ್ನೂ ಸುಧಾರಿಸುತ್ತದೆ.
*ಅವರ ವಿಧ್ಯಾಭ್ಯಾಸಕ್ಕೆ ಸಹಾಯ ಮತ್ತು ಅವರ ಆದಾಯಕ್ಕೆ ಸಹಾಯಕವಾಗುವಂತೆ ಪರ್ಯಾಯ ಕೆಲಸಗಳನ್ನು ಪಡೆಯಲು ಸಹಾಯ.
*ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಿಕೆ.
*ಯುವಜನಾಂಗದ ಮತ್ತು ಮಹಿಳೆಯರ ಬಲವರ್ಧನೆ.
*ಬಡವರ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಸಹಾಯ.
*ಸ್ವಯಂ ಉದ್ಯೋಗ, ಸಣ್ಣ ಮಟ್ತದ ಫೈನಾನ್ಸ್ , ಮತ್ತು SHG ಗಳಿಗೆ ಉತ್ತೇಜನ.
*ಇವೆಲ್ಲ ಕಾರ್ಯಗಳೂ ಸದಾ ಸುಲಲಿತವಾಗಿರುವಂತೆ, ನಮ್ಮ ತಂತ್ರಜ್ಞಾನಗಳನ್ನು ಸದಾ ಅಭಿವೃದ್ಧಿಪಡಿಸುತ್ತಿರುವುದು.

ಉಪ ಗುರಿಗಳು:
* ಮಳೆ ನೀರು ಕೊಯ್ಲು(Rain Water harvesting)ಗೆ ಉತ್ತೇಜನ.
*ಗಿಡಗಳನ್ನು ನೆಡುವುದು ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳಿಗೆ ಉತ್ತೇಜನ.
* ವನ್ಯಜೀವಿಗಳ ಮಾರಣಹೋಮದ ವಿರುದ್ಧ, ಬೇಟೆಯ ವಿರುದ್ಧ ಧ್ವನಿ ಎತ್ತುವುದು.
*ನೈಸರ್ಗಿಕ ವಿಕೋಪ ಮತ್ತು ಉಗ್ರ ದಾಳಿಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಜನಕ್ಕೆ ಸಹಾಯ ಒದಗಿಸುವುದು ಮಾತು ವಿಪತ್ತು ನಿರ್ವಹಣೆ ಹೇಗೆ ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸುವುದು.
* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ರಕ್ಷಿಸುವ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರುವುದು.


Wednesday, January 11, 2017

* ಪ್ರೆಸೆನ್ಸ್ ಆಫ್ ಮೈಂಡ್ ಅಂದ್ರೆ.....*

ಅಮೇರಿಕೆಯಲ್ಲಿ ಒಮ್ಮೆ ವಿವೇಕಾನಂದರು ರೈಲೊಂದರಲ್ಲಿ ಪ್ರಯಾಣಿಸುತ್ತಿರುವಾಗ ನಡೆದ ಘಟನೆಯಿದು. ವಿವೇಕಾನಂದರು ಕುಳಿತಿದ್ದ ಎದುರು ಸೀಟುಗಳಲ್ಲಿ ಮೂವರು ಹುಡುಗಿಯರು ಕುಳಿತಿದ್ದರು. ವಿವೇಕಾನಂದರ ಕಾವಿ ಬಟ್ಟೆ ಅವಕ್ಕೆ ವಿಚಿತ್ರವಾಗಿ ಕಂಡಿರಬೇಕು. ಹದಿಹರೆಯದ ತರ್ಲೆಗಳು ಬೇರೆ. ವಿವೇಕಾನಂದರನ್ನು ಇಕ್ಕಟ್ಟಿಗೆ ಸಿಲುಕಿಸೋಣ, ಗೇಲಿ ಮಾಡೋಣ ಅಂತ ಜಬರ್ದಸ್ತಾಗಿ ಐಡಿಯಾ ಹಾಕಿದರು. ವಿವೇಕಾನಂದರ ಕೈಯಲ್ಲಿದ್ದ ಪ್ರತಿಷ್ಠಿತ ವಾಚು ಇವರ ಕಣ್ಣಿಗೆ ಬಿದ್ದಿತ್ತು. ಭಾರತದ ರಾಜನೋರ್ವ ಕೊಟ್ಟ ಉಡುಗೊರೆಯದು. "ಆ ವಾಚನ್ನು ಕೊಡು. ಇಲ್ಲವಾದರೆ ನಮ್ಮ ಮೇಲೆ ದೈಹಿಕ ಹಲ್ಲೆ ನೀನು ನಡೆಸಿದೆ ಅಂತ ಪೋಲಿಸರಿಗೆ ದೂರು ನೀಡುತ್ತೇವೆ" ಅಂತ ಧಮಕಿ ಹಾಕಿದರು. ಗೊತ್ತಿಲ್ಲದ ದೇಶದಲ್ಲಿ ವಿವೇಕಾನಂದರು ಏನು ಮಾಡಬಹುದಿತ್ತು?
ಸ್ವಲ್ಪವೂ ವಿಚಲಿತರಾಗದ ಸ್ವಾಮಿಜೀ, ತಮಗೆ ಕಿವಿ ಕೇಳುವುದಿಲ್ಲ ಅನ್ನುವ ಹಾಗೆ ಅಭಿನಯಿಸಿದರು. ಸನ್ನೆಗಳ ಮೂಲ "ನೀವು ಏನು ಹೇಳುತ್ತಿದ್ದೀರೋ ಅದನ್ನ ಬರೆದು ತೋರಿಸಿ" ಅಂತ ಸೂಚಿಸಿದರು. ಪೆದ್ದು ಹುಡುಗಿಯರು ಚಂದ ಮಾಡಿ ಬರೆದು ತೋರಿಸಿ ಹುಬ್ಬು ಹಾರಿಸಿದವು . ಚೀಟಿಯನ್ನು ಪಡೆದುಕೊಂಡ ವಿವೇಕಾನಂದರು ಪ್ರಸನ್ನ ನಗೆ ಬೀರಿ, "ಪೋಲೀಸರನ್ನು ದಯವಿಟ್ಟು ಕರೆಯಿರಿ. ನಾನೂ ದೂರು ಕೊಡಬೇಕು. ಪಾಪ....ನೀವು ಬೇರೆ ಚೂರೂ ಬೇಸರಿಸಿಕೊಳ್ಳದೆ ಈಗಷ್ಟೇ ಸಾಕ್ಷಿ ಒದಗಿಸಿದಿರಿ..." ಅಂದರು. ತಬ್ಬಿಬ್ಬಾಗುವ ಸರದಿ, ಆ ಹುಡುಗಿಯರದ್ದು!
"ಗುರುತ್ವಾಕರ್ಷಣೆಯ ಪರಿಕಲ್ಪನೆ ಸೇಬುಹಣ್ಣಿನಲ್ಲಿ ಅಡಗಿ ಕುಳಿತಿತ್ತಾ? ಅಥವಾ ಮೂಲೆಯೊಂದರಲ್ಲಿ ಕುಳಿತು ನ್ಯೋಟನ್ನನ ಕಾಯುತ್ತಿತ್ತಾ?"
Vivekananda's Thought That Changes Your Attitude Towards Study !

ನಾವು "ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡುಹಿಡಿದ" ಅನ್ನುತ್ತೇವೆ. ಅಲ್ಲಾ, ಆ ಗುರುತ್ವಾಕರ್ಷಣೆ ಮೂಲೆಯಲ್ಲೊಂದು ಕಡೆ ಕುಳಿತು ಕಾಯುತ್ತಿತ್ತಾ? ನಂತರ ನ್ಯೂಟನ್ ತಲೆಯಲ್ಲಿ ಹೋಗಿ ಕುಳಿತುಕೊಂಡಿತಾ? ಆ ಜ್ಞಾನ ಮೊದಲೇ ಆತನ ಮೆದುಳಿನಲ್ಲಿ ಇತ್ತು, ಸಮಯ ಬಂತು, ಕಂಡುಕೊಂಡ, ಅಷ್ಟೇ! ಇಲ್ಲಿಯವರೆಗೆ ಜಗತ್ತು ಹೊಂದಿರುವ ಜ್ಞಾನವೆಲ್ಲವೂ "ಮನಸ್ಸು" ಎಂಬುದುರಿಂದಲೇ ಸ್ಫುರಣೆಗೊಂಡದ್ದು, ಜಗತ್ತಿನ ಸರ್ವ ಜ್ಞಾನಗಳ ಅಕ್ಷಯ ಪಾತ್ರೆ ನಿಮ್ಮ ಮನಸ್ಸಿನಲ್ಲಿಯೇ ಇದೆ! ಹೊರಗಿನ ಜಗತ್ತು ಎಂಬುವುದು ನಿಮ್ಮನ್ನು ನಿಮ್ಮದೇ ಮನಸ್ಸಿನ/ ಮೆದುಳಿನ ಅಧ್ಯಯನಕ್ಕೆ ತೊಡಗಿಸಲು ನೆರವಾಗುವ ಒಂದು ಪ್ರಚೋದನೆ ಹಾಗೂ ಅವಕಾಶ ಒದಗಿಸುವ ಪರಿಕರ, ಅಷ್ಟೇ! ಆದರೆ ಯಾವಾಗಲೂ, ಅಧ್ಯಯನದ ವಸ್ತು ನಿಮ್ಮದೇ ಮನಸ್ಸು! ನಿಮಗೆ ಅರ್ಥಮಾಡಿಸಬೇಕೆಂದರೆ, ಆವತ್ತು ನ್ಯೂಟನ್ನಿನ ತಲೆಯ ಮೇಲೆ ಬಿದ್ದ ಸೇಬು, ನ್ಯೂಟನ್ನನಿಗೆ "ಗುರುತ್ವಾಕರ್ಷಣೆಯ ಜ್ಞಾನವನ್ನು ಹೊಂದಿದ್ದ" ತನ್ನದೇ ಮನಸ್ಸಿನ ಆ ಭಾಗವನ್ನು ಅನ್ವೇಷಿಸಲು, ಹೊರಗಿನ ಜಗತ್ತು ಒದಗಿಸಿದ ಒಂದು ಅವಕಾಶ, ಅಷ್ಟೇ! ನ್ಯೂಟನ್ ತನ್ನ ಪೂರ್ವ ಆಲೋಚನೆಗಳನ್ನೆಲ್ಲ ಸಮೀಕರಿಸಿ, ಮತ್ತೊಂದು ಹೊಳಹನ್ನು ಆವತ್ತು ಕಂಡುಕೊಂಡಿದ್ದಷ್ಟೆ. ಅದನ್ನೇ ನಾವು Laws Of Gravitation ಅಂತ ಇವತ್ತು ಕರೆಯುವುದು. ಅದು ಆತನ ತಲೆ ಮೇಲೆ ಬಿದ್ದ ಸೇಬು ಹಣ್ಣಿನ ಒಳಗೂ ಇರಲಿಲ್ಲ, ಭೂಗೋಳದ ಮಧ್ಯದಲ್ಲೆಲ್ಲೋ ಅವಿತುಕೊಂಡೂ ಕೂತಿರಲಿಲ್ಲ....!"
ಜ್ಞಾನ ಮನುಷ್ಯನಲ್ಲಿ ಅಂತರ್ಗತವಾಗಿರುವ ಸಂಗತಿ. ಯಾವ ವಿಷಯದ ಬಗ್ಗೆಯೇ ಆಗಲಿ, ನಿಮಗೆ ಜ್ಞಾನ ಹೊರಗಡೆಯಿಂದೆಲ್ಲೋ ಬಂದು ನಿಮ್ಮ ತಲೆಯೊಳಗೆ ಕೂರುವುದಿಲ್ಲ! ಮನುಷ್ಯನಿಗೆ "ಗೊತ್ತಿದೆ" ಅಂತ ಶುದ್ಧ ಸೈಕಾಲಜಿಯ ಭಾಷೆಯಲ್ಲಿ ಹೇಳುವುದಾದರೆ, ಮನುಷ್ಯ ಕಂಡುಕೊಂಡಿದ್ದಾನೆ ಅನ್ನಬೇಕು! ಆತನಿಗೆ ಹೊಸದಾಗಿ ಒಂದು ವಿಷಯ ಅಥವಾ ಮಾಹಿತಿ ತಿಳಿಯಿತು ಅಂದರೆ, ಆತ ತನ್ನ ಆತ್ಮಕ್ಕೆ ಕವಿದಿರುವ ಪರದೆಯ ಸಣ್ಣ ಭಾಗವೊಂದನ್ನು ಸರಿಸಿ ಕಂಡುಕೊಂಡ ಅಂತ ಅರ್ಥ ಅಷ್ಟೆ. ಆತನ ಆತ್ಮದಲ್ಲಿ ಮೊದಲೇ ಸಕಲ ಜ್ಞಾನವೂ ಇದೆ, ಕೆಲವು ಹೊರಗಿನ ಪರಿಕರಗಳ ಮೂಲಕ ಆತ ಅದಕ್ಕೆ ಕವಿದಿರುವ ಪರದೆಯನ್ನು ಸರಿಸಿಕೊಳ್ಳಬೇಕು, ಅಷ್ಟೇ!

#ThatThoughtThatChanegesYourAttitudeTowardsStudy #ChangeYourLife


*ಭಾರತೀಯನೆಂಬ ಹೆಮ್ಮೆ ಏಕೆ ಗೊತ್ತಾ? ಅನ್ನುವುದನ್ನ ವಿವೇಕಾನಂದರು ವಿವರಿಸಿದ ರೋಮಾಂಚನದ ಕ್ಷಣ!*  #AMustRead

ಅದು ಸರ್ವಧರ್ಮ ಸಮ್ಮೇಳನ. Chicago, United States. ಸೆಪ್ಟೆಂಬರ್ ಒಂಭತ್ತು, 1893!

"ಅಮೇರಿಕಾದ ನನ್ನ ಸೋದರ ಸೋದರಿಯರೇ" ಅನ್ನುವ ಐತಿಹಾಸಿಕ ಪದಪುಂಜಕ್ಕೆ ಬಿದ್ದ ಅಭೂತಪೂರ್ವ ಚಪ್ಪಾಳೆಗಳು ಆಗಷ್ಟೇ ನಿಂತು ಸಭಾಂಗಣದಲ್ಲೊಮ್ಮೆ ಮಿಂಚು ಸಂಚಾರವಾಗಿತ್ತು. "ಇಂಥದ್ದೊಂದು ಅರ್ಥಪೂರ್ಣ ಸಮ್ಮೇಳನ ಆಯೋಜಿಸಿದ ನಿಮಗೆ ಧನ್ಯವಾದ ಸಮರ್ಪಿಸುತ್ತೇನೆ" ಅಂತ ಹೇಳುವ ಸಂದರ್ಭದಲ್ಲಿ, "ಇಂಥ ದೇಶದ ಪರವಾಗಿ ಧನ್ಯವಾದ" ಅಂತ ಬಳಸಿಕೊಂಡು,  ಪ್ರತೀ ವಾಕ್ಯದಲ್ಲೂ ಭಾರತದ ಹಿರಿಮೆಯನ್ನು ಎತ್ತಿ ಹಿಡಿದ ಬುದ್ಧಿವಂತಿಕೆ, ವಿವೇಕಾನಂದರಲ್ಲಿ ಮಾತ್ರ ಸಾಧ್ಯ!

"ವಿಶ್ವದ ಅತ್ಯಂತ ಪ್ರಾಚೀನ ಸಂನ್ಯಾಸಿ ಸಂಸ್ಕೃತಿಯ ಪರವಾಗಿ, ನಿಮಗೆ ಧನ್ಯವಾದ! ಕೋಟ್ಯಂತರ ಹಿಂದೂಗಳ ಪರವಾಗಿ ನಿಮಗೆ ಧನ್ಯವಾದ. 
ಸಹಿಷ್ಣುತೆ ಮತ್ತು ಸಕಲರನ್ನೂ ಸ್ವೀಕರಿಸುವ ಸಂಸ್ಕೃತಿಯನ್ನು ಇಡೀ ಜಗತ್ತಿಗೇ ಹೇಳಿಕೊಟ್ಟ ಧರ್ಮಕ್ಕೆ ಸೇರಿದವನು ನಾನು ಅನ್ನುವ ಹೆಮ್ಮೆ ನನ್ನದು! ಭಾರತೀಯರು ಸರ್ವರೊಂದಿಗೂ ಬೆರೆತು ಜೀವನ ನಡೆಸುವ ಜನವಷ್ಟೇ ಅಲ್ಲ, ಪ್ರತೀ ಧರ್ಮವನ್ನೂ ಸತ್ಯ ಅಂತ ಗೌರವಿಸುವ ಜನಾಂಗ ನಮ್ಮದು! ಭೂಮಿಯ ಮೇಲಿನ ಯಾವುದೇ ಧರ್ಮದ ಅಥವಾ ದೇಶದ ಜನರ ಮೇಲೆ ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಶೋಷಣೆಗಳಾದಾಗ, ಅವರಿಗೆಲ್ಲ ಕೈಬೀಸಿ ಕರೆದು ಬಿಗಿದಪ್ಪುಗೆ ನೀಡಿ, ಆಶ್ರಯಿಸಿದ ರಾಷ್ಟ್ರಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು! ರೋಮನ್ ದೊರೆಗಳಿಂದ ತಮ್ಮ ದೇವಸ್ಥಾನ ನಾಶವಾದಾಗ, ದಿಕ್ಕೆಟ್ಟು ಓಡಿಬಂದ ಇಸ್ರೇಲಿಗರನ್ನು ಶುದ್ಧ ಮಮತೆಯಿಂದ ಇವತ್ತಿಗೂ ಪೋಷಿಸುತ್ತಿರುವ ರಾಷ್ಟ್ರ ನನ್ನದು! ಜೊರೋಷ್ಟ್ರಿಯನ್ ದೇಶದ ಜನರು ಕಂಗೆಟ್ಟು ಬಂದಾಗ, ತುಂಬುಹೃದಯದಿಂದ ಸ್ವಾಗತಿಸಿ ಇವತ್ತಿಗೂ ಸಲಹುತ್ತಿರುವ ಧರ್ಮಕ್ಕೆ ಸೇರಿದವ ನಾನು ಎಂಬ ಹೆಮ್ಮೆ ನನ್ನದು.....!!"

#WordsThatThunderedAmerica
#ThisIsVivekanandaForYou