Powered By Blogger

Saturday, June 11, 2016

'ಕೋಟಿ ಮನಸ್ಸು, ಒಂದು ಕನಸು'ಗಳಿಗೆ ಒಂದು ದಿಕ್ಕೂ ಸಿಕ್ಕು, ಅದಾಗಲೇ ಎರಡು ವರ್ಷ..!

    ಒಪ್ಪಿಕೊಳ್ಳೋಣ! ಇವತ್ತು ಚೀನಾ ಅಮೆರಿಕಾ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಬೆಳೆದುನಿಂತಿದೆ. ಹಿರಿಯಣ್ಣನಿಗೊಂದು ಪರ್ಯಾಯ ಶಕ್ತಿಯಾಗಿ ಸೆಡ್ಡು ಹೊಡೆದಿದೆ. ಆದರೂ ಅದಕ್ಕೆ ಭಾರತದ ಬಗ್ಗೆ ಒಂದು ದೊಡ್ಡ ಹೂಟ್ಟೆಕಿಚ್ಚಿದೆ! ಜಗತ್ತೂ ಅಷ್ಟೇ, ಭಾರತದ ಮೇಲೆ ಒಂದು ಹಿಡಿ ಹೆಚ್ಚು ಭರವಸೆ ಇಟ್ಟಿದೆ, ಭಾರತದ ಕನಸುಗಳ ಮೇಲೆ ತುಸು ಜಾಸ್ತಿಯೇ ನಂಬಿಕೆ ಇಟ್ಟುಕೊಂಡಿದೆ! ಯಾಕೆ ಗೊತ್ತೇನು? The Human Resource, ಮಾನವ ಸಂಪನ್ಮೂಲ. ಚೀನಾದಲ್ಲೇನು ಕಮ್ಮಿ ಜನ ಇದ್ದಾರೆಯೇ? ಅಂತ ನಗಬೇಡಿ, ಇಲ್ಲ ಅಂತ ಯಾರು ಹೇಳಿದ್ದು? ಆದರೆ ಭಾರತದಲ್ಲಿ ಯುವ ಜನಾಂಗ ಅಧಿಕವಾಗಿದೆ. That makes all the difference. ಚೀನಾ ತನ್ನ ಕುಟುಂಬ ಯೋಜನೆಯ ಕಠಿಣ ನಿರ್ಧಾರದ ಒಂದು ಅಡ್ಡ ಪರಿಣಾಮವಾಗಿ, ವೃದ್ಧರ ದೇಶವಾಗಿ ಕುಂತಿದೆ. ಇತ್ತ ಭಾರತ ಯುವಶಕ್ತಿಯ ಕಾಮನಬಿಲ್ಲಾಗಿ  ಹೊಂಗನಸು ಬೀರುತ್ತಿದೆ. ಆದರೆ ಸೃಷ್ಟಿಯ ವಿಪರ್ಯಾಸವೆಂಬಂತೆ ಯುವ ಜನಾಂಗ ಬಿಸಿರಕ್ತದ ಮದದಲ್ಲಿ ದಾರಿ ತಪ್ಪುವ ಸಂದರ್ಭ ಹೆಚ್ಚು. ದೇಶವೊಂದಕ್ಕೆ ತನ್ನ ಯುವ ಜನಾಂಗ ಪೂರಕವೂ ಆಗಬಹುದು, ಮಾರಕವೂ ಆಗಬಹುದು. "ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗಿತ್ತು ವೀರದಂಡು" ಎಂಬಂತೆ, ಮುಂದಿರುವ ಗುರಿಯಕಡೆ ಮುಖಮಾಡಿಸಬಲ್ಲಂತ ಗುರುವೊಂದು ಯುವಶಕ್ತಿಗೆ ದಕ್ಕಿಬಿಟ್ಟರೆ, ಆಗ ಶಕ್ತಿಯ ನಾಗಾಲಾಟವನ್ನು ಹಿಡಿಯಲು ಯಾವುದಕ್ಕೂ ಸಾಧ್ಯವಾಗುವುದಿಲ್ಲ. ಕರ್ನಾಟಕದ ಕೆಲವು ಪ್ರಬುದ್ಧ ಯುವಮನಸ್ಸುಗಳಿಗೆ ಹೀಗನಿಸಿದ್ದೇ ತಡ, ಒಂದು ರಾಷ್ಟ್ರೀಯ ಬದ್ಧತೆಯ, ರಾಷ್ಟ್ರವಾದೀ ಧ್ಯೇಯಗಳ ಸಂಘಟನೆ ಒಂದು ರೂಪುತಾಳಿತು, 'ದಿ ಯುವಾ ಬ್ರಿಗೇಡ್"!.  ನೋಡುನೋಡುತ್ತಿದ್ದಂತೆ ಆ ಶುಭ್ರ ಮನಸ್ಸಿನ, ಶ್ರೇಷ್ಠ ಕನಸಿನ ಆ ಹಸುಗೂಸಿಗೆ ಮೊನ್ನೆ ಎರಡು ವರ್ಷವಾಗಿಬಿಟ್ಟಿತು.
       ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಪ್ರಧಾನಿ ಮಾಡುವಲ್ಲಿ ಶ್ರಮಿಸಲು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ 'ನಮೋ ಬ್ರಿಗೇಡ್' ರಚನೆಯಾಗಿತ್ತು. ಸೂಲಿಬೆಲೆ ಅವರೇ ಹೇಳುವ ಪ್ರಕಾರ, ಅದು "ಹುಟ್ಟುವಾಗಲೇ ಎಂದು ಸಾಯಬೇಕೆಂದು ನಿರ್ಧಾರ ಮಾಡಿದ್ದ ಕೂಸು". ನಮೋ ಪ್ರಮಾಣವಚನ ಸ್ವೀಕರಿಸಿ ಅಧಿಕೃತವಾಗಿ 'ಭಾರತದ ಪ್ರಧಾನಿ' ಎಂದು ಘೋಷಣೆಯಾದ ಮೇಲೆ, ಬ್ರಿಗೇಡ್ ನ "Mission Completed". ನಮೋ ಬ್ರಿಗೇಡ್ ನ ವಿಸರ್ಜಿಸುವ ಯೋಚನೆಯಲ್ಲಿದ್ದಾಗ ಚಕ್ರವರ್ತಿ ಅವರಿಗೆ ಆಪ್ತ ರಾಜಕಾರಣಿಯೊಬ್ಬರು ಕರೆ ಮಾಡಿ " ನೀವು ಯುವಕರಲ್ಲಿ ಒಮ್ಮೆ ಸಂಘಟನೆಯ ಉತ್ಸಾಹ ಮೂಡಿಸಿ, ಹೀಗೆ ನಡು ನೀರಿನಲ್ಲಿ ಕೈ ಬಿಡುತ್ತಿರುವುದು ಸರಿಯಲ್ಲ" ಅಂದರಂತೆ. ಅದಕ್ಕೂ ಮೊದಲೂ ಈ ಯೋಚನೆ ತಂಡದಲ್ಲಿ ಹೊಳೆದಿತ್ತು. ಅಲ್ಲದೇ "ಸಮಾಜದ ಕೂಗನ್ನ, ಕನಸುಗಳನ್ನ ಸಮರ್ಥವಾಗಿ ಪ್ರಧಾನಿಗೆ ಮುಟ್ಟಿಸುವ ಶಕ್ತಿ"ಯಾಗಿ ಸಂಘಟನೆಯೊಂದರ ಅವಶ್ಯಕತೆಯೂ ಇತ್ತು.                 
     ಇವೆಲ್ಲದರ ಫಲವಾಗಿ ಜನ್ಮ ತಾಳಿದ್ದು, 'ಯುವಾ ಬ್ರಿಗೇಡ್'. ಯುವಾ ಬ್ರಿಗೇಡ್ ಆರಂಭದಲ್ಲೇ ಎಷ್ಟು ಯೋಜಿತವಾಗಿ ರೂಪುಗೊಂಡಿತ್ತು ಅಂದರೆ, ಯುವಜನಾಂಗದಲ್ಲಿ ಇರಬೇಕಾದ ದೂರದೃಷಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಒಂದೊಂದಕ್ಕೂ ಒಂದೊಂದು ಪ್ರತ್ಯೇಕ ಶಾಖೆಯನ್ನೇ ನೀಡಲಾಗಿತ್ತು. ಮಹಾರಕ್ಷಕ್, ಡಿಜಿಟಲ್ ಸನ್ಸ್ಕಾರ್, ವಿತ್ತಶಕ್ತಿ, ಮತ್ತು ಸದ್ಭಾವನಾ ಎಂದು.  ತನ್ನ ಕುಟುಂಬವನ್ನು ತ್ಯಜಿಸಿ ನಮಗಾಗಿ ಹಗಲಿರುಳು ಬಾಂಬು ಗ್ರೆನೇಡ್ ಗಳ ನೀರೀಕ್ಷೆಯಲ್ಲಿ ಗಡಿಯಲ್ಲಿ ನಿಂತಿರುವ ಸೈನಿಕನ ಕುಟುಂಬಕ್ಕೆ "ನಿಮಗಾಗಿ ನಾವಿದ್ದೇವೆ" ಅಂತ ಹೇಳುವುದು ಮಹಾರಕ್ಷಕರ ಕೆಲಸ. ಸೇವೆ ಮಾಡಿಬಂದ ಸೈನಿಕರಿಗೆ ಗೌರವ ಅರ್ಪಿಸುವುದು ಕೂಡ. ವಿತ್ತಶಕ್ತಿ ಮತ್ತು ಸದ್ಭಾವನಾ ಸಮಿತಿಗಳು ಯುವಜನತೆಯಲ್ಲಿ entrepreneurship ಅನ್ನು ಬೆಳೆಸುವ ಮುಖ್ಯ ಗುರಿ ಹೊಂದಿದ್ದವು. ಯಾರದೋ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ ತನ್ನ ಕಾಲಮೇಲೆ ತಾನು ನಿಲ್ಲುವಂತೆ ಯುವಶಕ್ತಿಯನ್ನು ರೂಪುಗೊಳಿಸುವಿಕೆಗೆ ಈ ತಂಡ ಮೀಸಲು. ಹೊಸ ಅನ್ವೇಷಣೆಗಳನ್ನ ಪ್ರೋತ್ಸಾಹಿಸಿ, ಅದಕ್ಕೆ ಬೇಕಾದ ಪೇಟೆಂಟ್, ಕಾಪಿರೈಟ್ ಗಳಿಗೆ ಸಹಕರಿಸಿ, ಕಿಂಗ್ ಮೇಕರ್ ಆಗಿ ಅದು ಕೆಲಸ ಮಾಡಬೇಕು. ಇನ್ನು ಹೆಸರೇ ಹೇಳುವಂತೆ ಡಿಜಿಟಲ್ ಸನ್ಸ್ಕಾರ್ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಸಮಾಜದ ಅಭಿಪ್ರಾಯವನ್ನು ರೂಪಿಸಲು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯತ್ನಿಸುವ ಜವಾಬ್ದಾರಿ. ಆ ಮೂಲಕ ರಾಷ್ಟ್ರೀಯತೆಯನ್ನು ಪಸರಿಸುವ ಪ್ರಯತ್ನ.
ಇವೆಲ್ಲ ಆ ನಾಲ್ಕು ಶಾಖೆಗಳ ಸ್ಥೂಲ ಪರಿಚಯ. ನಮಗೆ ಯುವಾ ಬ್ರಿಗೇಡ್ ಇಷ್ಟವಾಗೋದು ಆ ಕಾರಣಕ್ಕೆ! ಗುರಿಯನ್ನು ನಿರ್ಧರಿಸಲಾರದವ, ಅದನ್ನು ಸಾಧಿಸಲಾರ ಕೂಡ.

ಚಕ್ರವರ್ತಿ ಅಣ್ಣನವರ ನೇತೃತ್ವ ಅಂದಮೇಲೆ, ಆ ಸಂಘಟನೆ ಜನರಲ್ಲಿ consciousness ಮೂಡಿಸುವಲ್ಲಿ ಕೊಡುಗೆ ನೀಡಲೇಬೇಕು.  ಅವರು ಪತ್ರಿಕೆಗಳಿಗೆ ಬರೆಯುವ ಅಂಕಣಗಳಿಂದ ಹಿಡಿದು ಜಾಗೊ ಭಾರತ್ ನ ವರೆಗೆ ಎಲ್ಲವೂ ಜನಜಾಗೃತಿಯನ್ನೇ ಜೀವಾಳ ಮಾಡಿಕೊಂಡಿರುವ ಚಟುವಟಿಕೆಗಳು. ಜನಸಾಮಾನ್ಯರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪಿಸುವ ಸಲುವಾಗಿ ಯುವಾ ಬ್ರಿಗೇಡ್ ಹಮ್ಮಿಕೊಂಡ ಕಾರ್ಯಕ್ರಮಗಳ ಪಟ್ಟಿ ಹಾಗೂ ಆ ತಂಡ ಪಟ್ಟ ಶ್ರಮ ಎರಡೂ ಅಮೋಘವಾದವು. ಸರ್ಕಾರ ಉದ್ದೇಶಪೂರ್ವಕವಾಗಿ ಬೇಡವೆಂದು 'ಮರೆತಿದ್ದ' ಕಾರ್ಗಿಲ್ ವಿಜಯ ದಿವಸದಿಂದ ಹಿಡಿದು ಸ್ವಂತದ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ಮಣ್ಣಿಗಾಗಿ ರಕ್ತ ಕೊಟ್ಟ ಹುತಾತ್ಮರ ದಿನಾಚರಣೆ-ಜಯಂತಿಗಳವರೆಗೂ ವಿಜೃಂಭಿಸಿದ್ದು ದೇಶಭಕ್ತಿಯೇ! ಯುವದಿನ ಎಂದು ಆಚರಿಸಲ್ಪಡುವ ವಿವೇಕಾನಂದರ ಜಯಂತಿಯಂದು, ಪ್ರತೀ ಊರಿನಲ್ಲೂ ಯುವಜನರನ್ನು ಒಗ್ಗೂಡಿಸಿ, ಅವರಲ್ಲಿ ಸ್ಫೂರ್ತಿ ತುಂಬಿ, ಅವರವರ ಊರುಗಳಲ್ಲಿ ವಿವೇಕಾನಂದರ ಕುರಿತು ಉಪನ್ಯಾಸ ನೀಡುವಂತೆ ಮಾಡಿತ್ತು ಯುವಾ ಬ್ರಿಗೇಡ್. " ಈ ಜಗತ್ತಿನಲ್ಲಿ, ಕೊನೆಯ ಮಾನವ ತಾನೂ ದೇವರಲ್ಲೊಂದು ಅಂತ ತಿಳಿಯುವವರೆಗೆ, ನಾನು ಸ್ಫೂರ್ತಿಯಾಗಿ ಕೆಲಸ ಮಾಡುತ್ತಿರುತ್ತೇನೆ" ಎಂದು ಹೇಳಿದ್ದ ಯೋಗಿವರ್ಯನ ಮಾತು ಅಷ್ಟರ ಮಟ್ಟಿಗೆ ಸಾರ್ಥಕ್ಯ ಕಂಡಿತ್ತು!
    "ಎಲ್ಲರೂ ಹೇಳುತ್ತಾರೆ, ಆದರೆ ನಾವು ಮಾಡಿ ತೋರಿಸುತ್ತೇವೆ" ಎಂಬುದು ಯುವ ಬ್ರಿಗೇಡ್ ನ ಗುಣಲಕ್ಷಣಗಳಲ್ಲಿ ಒಂದು. ಕೆರೆಬತ್ತಿಸಿ ಸೈಟು ಮಾಡುವ, ನುಂಗಿ ನೀರ್ಕುಡಿದು ನಂತರ ಅಂತರ್ಜಲಕ್ಕೇ ಕನ್ನ ಹಾಕುವ ಕೊಳವೆಬಾವಿಗಳನ್ನು ತೋಡುವ ಈ ಸಮಾಜದ ಮಧ್ಯೆ ಯುವಾ ಬ್ರಿಗೇಡ್ ಕೊಂಚ ಪ್ರೌಢವಾಗಿ ವರ್ತಿಸಿತು.  ಬೇಸಿಗೆಯಲ್ಲಿ ಹೂಳು ತೆಗೆಯದೇ, ಮಳೆಗಾಲದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೇ, ನಂತರ ಬೇಸಿಗೆಯಲ್ಲಿ ನೀರಿಲ್ಲ ಅನ್ನುವ ಗ್ರಾಮ ಪಂಚಾಯಿತಿ, ಮುನ್ಸಿಪಾಲಿಟಿಗಳು ಮಾಡಲಾಗದ ಕನಸನ್ನು ಯುವಾ ಬ್ರಿಗೇಡ್ ನ ಯುವಶಕ್ತಿ ಶುರುಹಚ್ಚಿಕೊಂಡಿತು! #ಜಲಜೀವನ ಎಂಬ ಅಭಿಯಾನ ಶುರುಮಾಡಿ, ಅದೇ ಊರಿನ ಹುಡುಗರ ಒಗ್ಗೂಡಿಸಿ ಊರಿನ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ಶುರುವಿಟ್ಟುಕೊಂಡಿತು. ಹೋಬಳಿ,ತಾಲೂಕು, ಜಿಲ್ಲೆ ಎಂಬ ಭೇದವಿಲ್ಲದೆ , ಅಭಿಯಾನ ವೇಗ ಕಂಡುಕೊಂಡಿತು. ಯುವಾ ಬ್ರಿಗೇಡ್ ನ ಪ್ರೋತ್ಸಾಹ ಎಷ್ಟಿತ್ತು ಅಂದರೆ, ಯಾವ ಯುವಕರು ಕಂಪ್ಯೂಟರ್ ಮುಂದೆ ಕೂತಿರುತ್ತಿದ್ದರೋ, ಅವರು ನಾ ಮುಂದು ತಾ ಮುಂದು ಅಂತ ಬಂದು ಊರ ಕೆರೆಯಲ್ಲಿ ಮಣ್ಣು ಹೊತ್ತರು. ಸರ್ಕಾರಕ್ಕಿಂತ ಚೆನ್ನಾಗಿ ಸಾವರ್ಜನಿಕರು ಕೆಲಸ ಮಾಡಬಲ್ಲರು ಎಂದು ತೋರಿಸಿಕೊಟ್ಟಿತು ಯುವಾ ಬ್ರಿಗೇಡ್. Don't underestimate the power of the common man ಅನ್ನುವ ರೀಲ್ ಡೈಲಾಗ್ ಅನ್ನು, ರಿಯಲ್ ಆಗೂ ಅಳವಡಿಸಿಕೊಳ್ಳಬಹುದು ಎಂಬುದನ್ನು ನಿದರ್ಶನದ ಸಮೇತ ತೋರಿಸಿತು. ಯುವಾ ಬ್ರಿಗೇಡ್ ಸ್ವಚ್ಛಮಾಡುವ ಮುನ್ನ "ಇದೂ ಒಂದು ಕಲ್ಯಾಣಿನಾ?" ಅಂತ ಕೇಳಬಹುದಾಗಿದ್ದ ಕಲ್ಯಾಣಿಗಳಲೂ ಈಗ ನೀರಿನ ಪಸೆಯೊಡೆದಿದೆ. ಜನಗಳ ಕಣ್ಣಲ್ಲಿ ಖುಷಿ ಜಿನುಗಿದೆ. ಯುವಾ ಬ್ರಿಗೇಡ್ ನ ಕೆಲಸ ಸ್ವತಃ ಮೋದಿಯವರನ್ನೂ ಮೋಡಿ ಮಾಡಿದೆ.
ಇದೇ ಸಾಲಿಗೆ ಸೇರುವ ಕೆಲಸಗಳಲ್ಲಿ ಸಸಿ ನೆಡುವ ಯೋಜನೆ ಕೂಡ ಒಂದು.
       ನರೇಂದ್ರಮೋದಿಯವರ ಕನಸಿಗೆ ಹೆಗಲುಕೊಡುವುದು ಅಂದರೆ ಬರಿ ಕಾಂಗ್ರೆಸ್ ಅನ್ನು ನಿಂದಿಸುತ್ತಾ ಕೂರುವುದಲ್ಲ. ಫೇಸ್ ಬುಕ್ ನಲ್ಲಿ ತಾಸಿಗೊಂದು ಸ್ಟೇಟಸ್ ಅಪ್ಲೋಡ್ ಮಾಡುವುದೂ ಅಲ್ಲ ಎಂಬುದನ್ನು ಯುವಾ ಬ್ರಿಗೇಡ್ ಸಮರ್ಥವಾಗಿ ತೋರಿಸಿಕೊಟ್ಟಿದೆ. ನಮಗೆ ಯುವಾ ಬ್ರಿಗೇಡ್ ಆಪ್ತವಾಗೋದೇ ಅದರ ಸಮಾಜಮುಖೀ ಧೋರಣೆಗೆ, ಅದರ intense ಚಟುವಟಿಕೆಗೆ, ಅದರ ಅರ್ಪಿಸಿಕೊಳ್ಳುವಿಕೆಗೆ, ಅದರ ನಿಸ್ವಾರ್ಥ ನಿಲುವಿಗೆ. ಇವೆಲ್ಲಾ ಕಾರಣಗಳಿಗಾಗಿಯೇ,ನಮೋ ಬ್ರಿಗೇಡ್ ಕೂಡ ಸೆಳೆಯಲಾಗದ ನನ್ನನ್ನು, ಯುವಾ ಬ್ರಿಗೇಡ್ ಸೆಳೆದಿದೆ! You don't need power to make it happen, what you need is just the 'Will' ಎಂಬುದನ್ನ ರುಜುಮಾಡಿ ನಮ್ಮ ಕಣ್ಣ ಮುಂದಿಟ್ಟಿದೆ.

         ನಾನೇನನ್ನು ಕೊನೆಯಲ್ಲಿ ಹೇಳಬೆಕಿತ್ತೋ, ಅದನ್ನ ಮೊದಲೇ ಹೇಳಿಬಿಟ್ಟಿದ್ದೇನೆ. ಯುವಾ ಬ್ರಿಗೇಡ್ ಒಂದು ರಾಜಕೀಯ ಸಂಘಟನೆ ಅಲ್ಲ. ಸರ್ಕಾರೇತರ ಅಂತ ಬಾಯಲ್ಲಿ ಹೇಳಿಕೊಂಡು, ಬರೀ ರಾಜಕಾರವನ್ನೇ ಮಾಡುವಂತಹ ಕೆಲವು ಎನ್ ಜಿ ಒ ಗಳ ಜಾತಿಯೂ ಅಲ್ಲ. ಭಾರತ ವಿಶ್ವಗುರು ಆಗಬೇಕಾದರೆ, ಅದರ ಯುವಪುತ್ರರು ಎದ್ದು ನಿಲ್ಲಬೇಕು, ಅವರಿಗೆಲ್ಲ ಒಂದು ಅದಮ್ಯ ಸ್ಫೂರ್ತಿ ಬೇಕು ಎಂಬ ಕಾರಣಕ್ಕೆ ಸ್ಥಾಪಿತವಾದದ್ದು. ಪ್ರತಿಯೊಬ್ಬನೂ ದೇಶದ ಭಾರವೆಲ್ಲ ತನ್ನ ಮೇಲೆ ಬಿದ್ದಿದೆ ಎಂಬ ಭಾವನೆಯಿಂದ ಕೆಲಸ ಮಾಡಿದರೆ, ದೇಶ ವಿಶ್ವಗುರುವಾಗುತ್ತೆ ಎಂದು ನುಡಿದಿದ್ದರು ವಿವೇಕಾನಂದರು. ಪ್ರತಿಯೊಬ್ಬನಲ್ಲೂ ಅಂಥ ಭಾವನೆ ಮೂಡಿಸಬೇಕು ಅಂತ ಶ್ರಮಿಸುತ್ತಿರುವ ಸಂಸ್ಥೆ. "ಸೇವೆ ಮುಗಿಸಿದ ಯೋಧನೊಬ್ಬನನ್ನು ಅವನ ಊರಿನ ಜನರ ಮುಂದೆ ಸನ್ಮಾನಿಸಿದರೆ, ಅವನಿಗೆ ಎಷ್ಟು ಹೆಮ್ಮೆ ಆಗುತ್ತೆ ಅಲ್ವಾ?" ಅಂತ ಚಕ್ರವರ್ತಿ ಅವರು ಯುವಾ ಬ್ರಿಗೇಡ್ ನ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರು. ಅದೇ ರೀತಿ, ರಾಷ್ಟ್ರಕ್ಕಾಗಿ ನಾವು ಅರ್ಪಿತ ಎಂದು ಹಗಲಿರುಳು ದುಡಿಯುತ್ತಿರುವ ಗುಂಪೊಂದಕ್ಕೆ, "ನಿಮ್ಮ ಅರ್ಪಣೆಗೆ, ನಮ್ಮ ಹೃತ್ಪೂರ್ವಕ ಧನ್ಯವಾದ" ಅಂತ ಹೇಳಿದ್ರೆಅವರಿಗೆ ಎಷ್ಟು ಹೆಮ್ಮೆಯಾಗುತ್ತೆ ಅಲ್ವಾ? ಅದಕ್ಕೇ, ಈ ಲೇಖನ!
                                      ~ಸಂಕೇತ್ ಡಿ ಹೆಗಡೆ
                                                        Twitter:@SankethHutgar
Facebook: Facebook.com/SankethDHegde
   

Sunday, May 8, 2016

ಅದೇ ಶಬ್ದ, ಒಂದೇ ಶಬ್ದ, "ಅಮ್ಮ..ಅಮ್ಮ..ಅಮ್ಮಾ.."                   

ಅಮ್ಮನ ಹುಟ್ಟಿದಹಬ್ಬಕ್ಕಾಗಿ ಒಂದು ಕವನ ಬರೆದಿದ್ದೆ. ತಾಯ್ತನವನ್ನು ಒಬ್ಬ ಮಗನಾಗಿ ಎಷ್ಟು ಸಾಧ್ಯವೋ ಅಷ್ಟು ಅರ್ಥಪೂರ್ಣವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇನೆ. Mother's Day ಸಲುವಾಗಿ ನಿಮಗೂ ತೋರಿಸೋಣ ಅನ್ನಿಸಿತು. ಸಣ್ಣ ಕವನ. ಓದಿ, ಅಭಿಪ್ರಾಯ ತಿಳಿಸಿ.

*******       *******     ********     ********

ಹುಟ್ಟಿದ ಮಗುವು ಹಾಡು ಕೇಳಿತು
ನೀನೇ ಹಾಡಿದೆ ಅಮ್ಮಾ
ಹಸಿದ ಹಸುಳೆ ಬಿಕ್ಕಿ ಅತ್ತಿತು
ಹಾಲನು ಕೊಟ್ಟೆ ಅಮ್ಮಾ.

ತೊದಲಿದ ಮಗುವು ಬಾಯಿ ಒಡೆಯಿತು
ಮೊದಲ ಪದವೇ "ಅಮ್ಮಾ"
ನಡೆಯುತ ಮಗುವು ಎಡವಿ ಬಿದ್ದಿತು
ನೋವಲಿ ಚೀರಿತು "ಅಮ್ಮಾ.."

ಬೆಳೆದ ಮಗುವಿಗೆ ಶಾಲೆ ಕರೆಯಿತು
ಬಿಟ್ಟು ಬಂದಳು ಅಮ್ಮ
ಗುರುವು ತೋರಿದ ಗುರಿಯೆಡೆ ಸಾಗಲು
ಮಗುವು ಆಸರಿಸಿದ ಮರ ಅಮ್ಮ

ತನ್ನ ಬದುಕಿನ ಗುರಿಯನು ಸರಿಸಿ
ನನ್ನ ಬದುಕನು ಎತ್ತಿಹಿಡಿದಳು ಅಮ್ಮ
ನನ್ನ ಗೆಲುವು ಸೋಲುಗಳು ತನ್ನದೆಂದೇ ಅರಿತಳು
ನನ್ನ ಸುಖದಲಿ ತಾನೂ ಹರ್ಷಿಸಿ, ತನ್ನ ಸುಖವನೇ ಮರೆತಳು.

ವಯಸು ತಂದಿತು ಸಿಟ್ಟು-ರೋಷ ಮಗುವಿನೊಳಗೆ ಹಾಗೆ
ಅಮ್ಮ ಹೇಳಿದನು ಕೇಳಲಾರದು, ಹುಚ್ಚು ಹರೆಯವು ಹಾಗೇ!
ತಿರುಗಿ ಹೇಳಲು ಬಾಯಿ ತುಡಿವುದು, ನನ್ನ ಒಪ್ಪಿಗೆ ಇರದೇ
ಕೋಪ ಆಕೆಯದು ತೀರ ಕ್ಷಣಿಕ, ಪ್ರೀತಿಯು ಮತ್ತೆ ಉಕ್ಕಿ ಬರದೇ?

ತುಂಬು ಜಗದಲಿ ಸೋತು ನಿಂತೆ, ಕಷ್ಟ ಬಂದಿತು ಕಂತೆ ಕಂತೆ,
ದೂರ ಹೋಯಿತೆ ಬಳಗವು?
ಅಮ್ಮ ತಾನು ಚೂರೂ ಕದಲದೆ ಅಪ್ಪಿ ಹಿಡಿದಳು ನನ್ನನು
ಅವಳ ಮನಸಿನ ತುಂಬು ಅಂದಕೆ, ನಾಚಿ ನಿಂತನು ಚಂದ್ರನು!

ಗೆಲುವು ಬಂದಿತು ಬಂದೇ ಬಂದಿತು
ಜೀವನ ಎಲ್ಲವ ಕೊಡುವುದು.
ಎಂದೂ ಮರೆಯದ ತುಂಬು ಸಾರ್ಥಕ ಆಕೆ ಮುಖವನೆ ತುಂಬಿತು,
ಇದೇ ಕ್ಷಣಕೆ ರಾತ್ರಿಹಗಲು ದುಡಿದ ಮನವು ಕುಣಿದು ಜಿಗಿದಾಡಿತು!

ವಿಧಿಯು ತಾನು ಕಠಿಣದೊಂದು ಗುದ್ದು ನೀಡಲು ಬಂದಿತು
ಮನಸು ಕರೆಯಿತು, ಹೃದಯ ಬಡಿಯಿತು, ಏರು ಧ್ವನಿಯಲಿ "ಅಮ್ಮಾ.."
ತೀರ ಕಾಣಲು ದೋಣಿ ಎಡವಲು, ಜೀವ ತಂದಿತು ಸ್ಮರಣೆಗೆ
ಅದೇ ಶಬ್ದ, ಒಂದೇ ಶಬ್ದ, "ಅಮ್ಮ..ಅಮ್ಮ..ಅಮ್ಮಾss.."
                  
                                         ~ಸಂಕೇತ್ ಡಿ ಹೆಗಡೆ.

Thursday, April 21, 2016

ಕನ್ನಡ ಎನೆ ಕಿವಿ ನಿಮಿರಬೇಕಿರುವುದು ಪರರದ್ದು!


     ಕೋರಾ ಅಂತ ಒಂದು ಸಾಮಾಜಿಕ ಜಾಲತಾಣವಿದೆ. ಮೊನ್ನೆ ಹೀಗೆ ಜಾಲಾಡುತ್ತಿದ್ದಾಗ ಒಂದು ಭಲೇ ಬುದ್ಧಿವಂತಿಕೆಯ ಪ್ರಶ್ನೆ ಎದುರಾಯಿತು. ಪುಣ್ಯಾತ್ಮನೊಬ್ಬ ಬೆಂಗಳೂರಿನ ರಸ್ತೆಯೊಂದರ ಮೇಲೆ ಕಾರಿನಲ್ಲಿ ಕುಳಿತು ಪೋಸ್ಟ್ ಮಾಡಿದ್ದು. "ನಾನೀಗ ಬೆಂಗಳೂರಿನಲ್ಲಿದ್ದೇನೆ. ಕರ್ನಾಟಕ ಇಲ್ಲಿಂದ ಎಷ್ಟು ಕಿಲೋಮೀಟರ್ ಪ್ರಯಾಣಿಸಿದರೆ ಸಿಗುತ್ತೆ" ಅಂತ! ಹಾಗೆ ಕೇಳಿದವನ ಕಂಡು ಮತ್ತೊಬ್ಬ ಉತ್ತರ ಬರೆದಿದ್ದ. "೧೦೮ಕ್ಕೆ ಕರೆಮಾಡಿ ’ನಾನು ಬೆಂಗಳೂರಿನಲ್ಲಿದ್ದೇನೆ, ನನಗೆ ಕರ್ನಾಟಕಕ್ಕೆ ಕರೆದುಕೊಂಡುಹೋಗಿ’ ಅಂತ ಹೇಳಿ. ಅವರು ವಿಲ್ಸನ್ ಗಾರ್ಡನ್ ಅನ್ನುವ ಸ್ಥಳದಲ್ಲಿರುವ ನಿಮ್ಹಾನ್ಸ್ ಅನ್ನುವ ಕಟ್ಟಡದ ಬಳಿ ಇಳಿಸುತ್ತಾರೆ" ಅಂತ. ಇವರ ಪ್ರಶ್ನೋತ್ತರಗಳ ನೋಡಿ ಉಕ್ಕಿಬಂದ ನಗು, "ತಪ್ಪು ಅವನದಲ್ಲ" ಎಂದು ಅನಿಸಿದಾಗ ಮುಚ್ಚಿಕೊಂಡು ಹಿಂದೆಹೋಗಿಬಿಟ್ಟಿತು. ಎಂತಹ ಸ್ಥಿತಿಗೆ ಬೆಂಗಳೂರನ್ನು ತಂದಿಟ್ಟುಬಿಟ್ಟಿದ್ದೇವೆ ಅನ್ನುವುದು ನೆನಪಾಗಿ ಹೃದಯದ ಒಂದು ಮೂಲೆಯಲ್ಲಿರುವ ಭಾಷಾಭಿಮಾನಕ್ಕೆ ಅತೀವ ವೇದನೆಯಾಯಿತು. ಪಾಪ ಆ ಕಾರಿನವನದೇನು ತಪ್ಪು? ಬೆಂಗಳೂರಿನ ಗಾಳಿಯನ್ನು ಪ್ರಥಮ ಬಾರಿಗೆ ಕುಡಿಯುತ್ತಿರುವ ಯಾವನಿಗೆ ಕರ್ನಾಟಕದ "ರಾಜಧಾನಿ"ಯ ಗಾಳಿ ಕುಡಿದ ಅನುಭವವಾಗುತ್ತೆ? ಅವನೋ ಕನ್ನಡಿಗರ ನಾಡಾಗಿರುವ, ಕನ್ನಡವನ್ನು ಉಸಿರಾಗಿಸಿಕೊಂಡಿರುವ, ಕನ್ನಡತನದ ಬೀಡಾಗಿರುವ ಪ್ರದೇಶವೊಂದು ಸಿಕ್ಕಾಗ ಇಳಿದುಕೊಂಡುಬಿಡೋಣ ಅಂದುಕೊಂಡಿದ್ದ. ಅವನಿಗೇನು ಗೊತ್ತು, "ದಿಸ್ ಇಸ್ ಕರ್ನಾಟಕಾಸ್ ಕ್ಯಾಪಿಟಲ್, ಫಾರ್ ಯು" ಅಂತ. ಬೆಂಗಳೂರು ಕರ್ನಾಟಕದಲ್ಲಿದೆ, ಅದೇ ಅದರ ರಾಜಧಾನಿ ಅಂತ ಅವನಿಗೆ ಗೊತ್ತಿಲ್ಲದಿರುವ ಅವನ ಸಾಮಾನ್ಯ ಜ್ನಾನಕ್ಕೆ ವಿಷಾದಿಸೋಣ. ಆದರೆ ಅವನಿಗೆ ಬೆಂಗಳೂರಿನಲ್ಲಿದ್ದರೂ ಇದು ಕರ್ನಾಟಕವೆನ್ನುವುದು ಗೊತ್ತಾಗದ ಮಟ್ಟದಲ್ಲಿ ನಾವು ಬೆಂಗಳೂರನ್ನು ಕಾಪಾಡಿಕೊಂಡಿದ್ದೇವೆ ಎಂಬ ಕಟುವಾಸ್ತವಕ್ಕೆ, ಕೇವಲ ವಿಷಾದಿಸಿದರೆ ಸಾಕೇನು?

    ಜಗತ್ತಿನಲ್ಲಿ ಹೀಬ್ರೂ ಅಂತ ಕರೆಸಿಕೊಂಡ ಭಾಷೆಯೊಂದು ಕ್ರಿಸ್ತ ಪೂರ್ವದಲ್ಲೇ ಜನಿಸಿತ್ತು. ಇಪ್ಪತ್ತನೆಯ ಶತಮಾನದ ಹೊತ್ತಿಗೆ ಅದು ಕುರುಹೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಸತ್ತು ಬಿದ್ದಿತ್ತು. ಆದರೆ ಆ ಭಾಷೆಯ ಬೆನ್ನಿಗಿದ್ದ ಏಕೈಕ ಪುಣ್ಯವೆಂದರೆ, ಅದು ಮೂಲತಃ ಯಹೂದಿಗಳ ಮಾತೃಭಾಷೆಯಾಗಿತ್ತು. ಭಾರತೀಯರದ್ದಲ್ಲ. ಇಸ್ರೇಲಿನಲ್ಲಿ ಜನಿಸಿತ್ತು, ಭಾರತದಲ್ಲಿ ಅಲ್ಲ. ಇತಿಹಾಸದಲ್ಲೇ ನಡೆದ ಯಾವುದೋ ಪರಕೀಯ ಆಕ್ರಮಣದಿಂದ, ಹೀಬ್ರೂ ಕೃಶವಾಗಿ, ಅರೇಬಿಕ್ ತಳಿಗೆ ಸೇರಿದ ಮತ್ತೊಂದು ಭಾಷೆ ಅಲ್ಲಿಯ ಆಡುಭಾಷೆಯಾಗಿಬಿಟ್ಟಿತ್ತು! ಯಾವಾಗ ಇಸ್ರೇಲ್ ಅರ್ಧ ಶತಮಾನದ ಹಿಂದೆ ಸ್ವತಂತ್ರ್ಯವಾಯಿತೋ, ಅದು ತನ್ನನ್ನು ಸಂಪೂರ್ಣವಾಗಿ ಮರುನಿರ್ಮಾಣಮಾಡಿಕೊಳ್ಳುವ ಶಪಥ ತಟ್ಟಿತು. ಆ ಶಪಥದ ಅತಿಮುಖ್ಯ ಭಾಗ, ಹೀಬ್ರೂ ಮರುನಿರ್ಮಾಣ! ಸತ್ತೇಹೋದೇ ಎನ್ನುತ್ತಿದ್ದ ಭಾಷೆ ನೋಡುನೋಡುತ್ತಾ ಪ್ರಬಲವಾಗಿಬಿಟ್ಟಿತು. ಮಾತಾಡುವವರೇ ಇಲ್ಲ ಅಂತಿದ್ದ ಭಾಷೆಗೆ ಸದೃಢ ಲಿಪಿ ಚಾಲ್ತಿಗೆ ಬಂತು. ಇಸ್ರೇಲಿನ ಮನೆಗಳ ಗೋಡೆಗಳಿಗೆ ಕಿವಿತಾಕಿದರೆ ಹೀಬ್ರೂ ಕೇಳಿಸತೊಡಗಿತು. ಇಸ್ರೇಲ್ ಸಾರ್ವಭೌಮತ್ವದ ಪ್ರದೇಶದಲ್ಲಿ ಹೀಬ್ರೂ ಅಧಿಕೃತ ಭಾಷೆ ಅನಿಸಿಕೊಂಡಿತು. ಇಸ್ರೇಲ್ ನ ರಸ್ತೆಗಳ ಅಕ್ಕಪಕ್ಕದಲ್ಲಿ, ಹೆದ್ದಾರಿಗಳ ನೆತ್ತಿನಲ್ಲಿ ಬರೆದಿಡುತ್ತಿದ್ದ ಫಲಕಗಳಲ್ಲಿ ಹೀಬ್ರೂ ರಾಜನಂತೆ ಮೆರೆಯತೊಡಗಿತು. ಒಂದು ಕಾಲದಲ್ಲಿ ಐಸಿಯುನಲ್ಲಿದ್ದ ಭಾಷೆಯಲ್ಲಿ ಅಗಾಧ ಸಾಹಿತ್ಯವೆಲ್ಲ ಹೊರಬರತೊಡಗಿತು. ಹೀಬ್ರೂ ಸಾಹಿತಿಗಳಿಗೆ ನೋಬೆಲ್ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಬರತೊಡಗಿದವು. ಪ್ರಪಂಚದಲ್ಲಿ ಅದ್ಯಾವ ಭಾಷೆಯೇ ಇರಲಿ, ಅದರಲ್ಲಿ ಅತ್ಯುತ್ತಮ ಪುಸ್ತಕಗಳು ಬಂದರೆ, ಅವು ಹೀಬ್ರೂವಿಗೆ ಅನುವಾದವಾಗತೊಡಗಿದವು! ಇಸ್ರೇಲಿ ಪುಸ್ತಕ ಮಳಿಗೆಗಳಲ್ಲಿ ಆಂಗ್ಲ-ಅರೇಬಿಕ್ ಪುಸ್ತಕಗಳೆಲ್ಲ ಒಂದೊಂದೇ ರ್ಯಾಕ್ ಹಿಂದೆ ಸರಿಯುತ್ತಾ, ಕಡೆಗೆ ಕೊನೆಯ ಹಲಗೆಯಲ್ಲೂ ಜಾಗಕಾಣದೇ ನಿರ್ಗತಿಕರಾಗಿಬಿಟ್ಟವು. ಅವು ಹಿಂದೆಸರಿದಂತೆಲ್ಲಾ ಹೀಬ್ರೂ ಹೊತ್ತಿಗೆಗಳು ಮಳಿಗೆಗಳನ್ನು ಆವರಿಸತೊಡಗಿದವು. ಯಹೂದಿಗಳು "ಹೀಬ್ರೂ ನಮ್ಮ ಉಸಿರು. ನಮಗೆ ದೇಶ ಬೇರೆಯಲ್ಲ, ಭಾಷೆ ಬೇರೆಯಲ್ಲ. ಹೀಬ್ರೂ ಇಲ್ಲದಿದ್ದರೆ ಇಸ್ರೇಲಿಗೆ ಅಸ್ತಿತ್ವವೇ ಇಲ್ಲ" ಅಂತ ಹೆಮ್ಮೆಯಿಂದ ಸಾರತೊಡಗಿದರು. ವಿಜ್ನಾನಿಗಳು, ಸಾಹಿತಿಗಳು ಪ್ರತಿಷ್ಠಿತ ವೇದಿಕೆಗಳ ಮೇಲೆ ಹೀಬ್ರೂವಿನಲ್ಲಿ ಮಾತನಾಡತೊಡಗಿರು, ಪ್ರಬಂಧಗಳನ್ನ ಮಂಡಿಸತೊಡಗಿದರು. ತಾಯಿನೆಲದಲ್ಲಿ ನಡೆಯುವ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲೂ ಹೊರದೇಶೀಯರ ಬಗ್ಗೆ ಕಿಂಚಿತ್ತೂ ಕರುಣೆ ಇಟ್ಟುಕೊಳ್ಳದೇ, ಹೀಬ್ರೂವಿನಲ್ಲೇ ಮಾತನಾಡತೊಡಗಿದರು. ದುಭಾಷಿಗಳ ಮೂಲಕವೋ, ತಂತ್ರಜ್ನಾನದ ಮೂಲಕವೋ ಸಭಿಕರಿಗೆ ಅರ್ಥವಾಗುವಂತೆ ಮಾಡಲಾಗುತ್ತಿತ್ತು. ಆದರೆ ಹೀಬ್ರೂ ಸಭಾಂಗಣದಲ್ಲಿ ರಣರಣಿಸುತ್ತಿತ್ತು!
ಯುದ್ಧ ತಂತ್ರಜ್ನಾನದಲ್ಲಿ, ಕೃಷಿ ತಂತ್ರಜ್ನಾನದಲ್ಲಿ ಪ್ರತ್ಯಕ್ಷ ಕಂಡರೂ ನಂಬಲಾಗದಂತಹ ಸಾಧನೆಗೈದ ಅಂಗೈಯಗಲದ ದೇಶವೊಂದು, ತನ್ನ ಭಾಷಾಭಿಮಾನದಲ್ಲೂ ಜಗತ್ತಿನ ಮುಂದೊಂದು ಮಾದರಿಯಾಗಿ ನಿಂತಿತು! ನಮ್ಮ ಬೆಂಗಳೂರಿನ ಜನಸಂಖ್ಯೆ ಯಾವತ್ತೋ ಕೋಟಿಮೀರಿಬಿಟ್ಟಿದೆ. ಇಸ್ರೇಲಿಗಳು ಕೇವಲ ತೊಂಬತ್ತು ಲಕ್ಷ ಕಣ್ರೀ!
    ಒಂದು ಮಹಾನಗರಿಯಾಗಿ ಭಾರತದಲ್ಲೇ ಅತೀ ಹೆಚ್ಚು ಸಾಫ಼್ಟ್ವೇರ್ ಕಂಪನಿಗಳನ್ನು ಹೊಂದಿರುವ, ವಿಶ್ವದಲ್ಲೇ ಅತಿಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ಹಿರಿಮೆ ಬೆಂದಕಾಳೂರಿನದ್ದು. ಇಂಜಿನಿಯರ್ ಆಗಿ ಕೆಲಸ ಮಾಡಲು ಅಥವಾ ಅದಕ್ಕಿಂತ ಮೊದಲು ಇಂಜಿನಿಯರಿಂಗ್ ಓದಲು ಪರಭಾಷೀಯರು ತೀರಾ ಹೆಚ್ಚು ಅನ್ನುವ ಪ್ರಮಾಣದಲ್ಲಿ ಬರುತ್ತಾರೆ. ಎಷ್ಟರ ಮಟ್ಟಿಗೆ ಅಂದರೆ, ಇವತ್ತು ಬೆಂಗಳೂರಿನ ಜನಸಂಖ್ಯೆಯಲ್ಲಿ ಕನ್ನಡಿಗರ ಪಾಲು ಕೇವಲ ೪೮ ಶೇಕಡ. ಇವತ್ತು ಬೆಂಗಳೂರಿನಲ್ಲಿ ಅಲ್ಲೂಬ್ಬ ಇಲ್ಲೊಬ್ಬ ಅಂತ ಕರಕೊಂಡುಬಂದು ಒಂದು ನೂರುಜನರ ಗುಂಪು ಮಾಡಿದರೆ, ಅದರಲ್ಲಿ ೫೨ ಜನ ಪರಭಾಷೀಯರಾಗಿರುತ್ತಾರೆ! ನನ್ನದು ಅಸಹಿಷ್ಣುತೆ ಅಂತ ನೀವು ಧಾರಾಳವಾಗಿ ಅಂದುಕೊಳ್ಳಬಹುದು, ಆದರೆ ಇದು
ಖಂಡಿತ ರಾಜಧಾನಿಗೆ ಆರೋಗ್ಯಪೂರ್ಣವಲ್ಲ. ನನ್ನನ್ನು ಸಾಧ್ಯವಾದರೆ ನಂಬಿ, ನನಗೆ ನನ್ನ ಕಾಲೇಜಿನಲ್ಲಿ ಕನ್ನಡ ಕಿವಿತಾಕಿದರೆ ಸಂತಸಪಡುವಂಥ, ಕನ್ನಡ ಮಾತನಾಡುವ ಪ್ರಾಧ್ಯಾಪಕರು ಕಂಡರೆ ಖುಷಿಪಡುವಂತ, ಸಭಾಂಗಣದಲ್ಲಿ ಯಾರಾದರೂ ಕನ್ನಡದಲ್ಲಿ ಭಾಷಣ ಮಾಡಿದರೆ ರೋಮಾಂಚನ ಪಟ್ಟುಕೊಳ್ಳುವಂತ ಪರಿಸ್ಥಿತಿಯಿದೆ. ನನ್ನ ಕಾಲೇಜಿನ ರಂಗಕೂಟ ಅಭ್ಯಾಸ ಸಡೆಸುವಾಗ "ನಾಟಕ ಮಾಡಿಸುವುದಾದರೆ ಇಂಗ್ಲೀಷಿನಲ್ಲಿ ಮಾಡಿಸು, ಇಲ್ಲ ಹಿಂದಿಯಲ್ಲಿ ಮಾಡಿಸು, ಬಟ್ ನಾಟ್ ಇನ್ ಕನ್ನಡ" ಅಂದರೆ ಜೀರ್ಣಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. "ಓ, ನಿಮ್ಮ ಕಾಲೇಜು ಹಂಗಾ?" ಅಂತ ನನ್ನ ಮೇಲೆ ಕರುಣೆನಯನ್ನಾಗಲೀ, ಅಥವಾ ನನ್ನ ಕಾಲೇಜಿನ ಮೇಲೆ ವಿಶೇಷ ಸಿಟ್ಟನ್ನಾಗಲಿ ತೋರಿಸಬೇಡಿ. ಬೆಂಗಳೂರಿನಲ್ಲಿ ಇರುವ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳೂ ದಿಟ್ಟೋ ಹಿಂಗೇ! ಅಥವಾ ಇದಕ್ಕಿಂತ ಒಂದು ಪಾಲು ಹೆಚ್ಚೇ. ಬೆಂಗಳೂರು ಅಂತಲ್ಲ, ಕರ್ನಾಟಕದ ಇತರ ಸ್ಥಳಗಳಲ್ಲಿರುವ ಸಾಧಾರಣ ಪ್ರಸಿದ್ಧಿ ಹೊಂದಿರುವ ಕಾಲೇಜುಗಳ ಸ್ಥಿತಿಯೂ ಇದೇ. ಮೊದಲೇ ಮಲೆನಾಡು ಹುಡುಗನಾಗಿರುವ ನನಗೆ, ಇಂಥದ್ದೊಂದು ಜಗತ್ತು ಇರುತ್ತೆ ಎಂಬುದೇ ಗೊತ್ತಿರಲಿಲ್ಲ.
    
     ಕನ್ನಡ ಚೆನ್ನಾಗೇ ಬರುವ ಯಾವುದೋ ಒಬ್ಬ ತೆಲುಗು ಹಲಗಣ್ಣನಿಗೆ ಕೋಲಾರದವನೋ, ಪಾವಗಡದವನೋ, ಬಳ್ಳಾರಿಯವನೋ ಕನ್ನಡಿಗನೊಬ್ಬ ಸಿಕ್ಕ ಅಂದಿಟ್ಟುಕೊಳ್ಳಿ. ಅವನಿಗೆ ತೆಲುಗು ಬರುತ್ತೆ ಅಂತ ತೆಲುಗುದವನಿಗೆ ಗೊತ್ತಾಗಿಹೊಗುತ್ತೆ. ಆದರೂ ಔಪಚಾರಿಕವಾಗಿ ಇರಲಿ ಅಂತ "ತೆಲ್ಗು ವಸ್ತುಂದಾ?" ಅನ್ನುತ್ತಾನೆ. ನಮ್ಮ ಕನ್ನಡದವನೂ ಎನೋ ಸಾರ್ಥಕ್ಯವನ್ನು ಕಂಡವನಂತೆ, ಆ ಕಿವಿಯಿಂದ ಹಿಡಿದು ಈ ಕಿವಿಯವರೆಗೂ ಹಲ್ಲು ಕಿರಿದು "ವಸ್ತುಂದಿ, ವಸ್ತುಂದಿ" ಅಂತ ಎಕ್ಸೈಟ್ ಮೆಂಟ್ ಅಲ್ಲಿ ಎರೆಡೆರಡು ಸಲ ಹೇಳಿಬಿಡುತ್ತಾನೆ. ಮುಗಿಯಿತು, ಇನ್ನವರು ಕನ್ನಡದಲ್ಲಿ ಯಾವಾಗಾದರೂ ಮಾತನಾಡಿಕೊಳ್ಳುತ್ತಾರೆ ಅಂತ ಕನಸು-ಮನಸಿನಲ್ಲಿಯೂ ಆಸೆ ಇಟ್ಟುಕೊಳ್ಳಬೇಡಿ. ತೆಲುಗು, ತಮಿಳು, ಹಿಂದಿ, ಇಂಗ್ಲೀಷು ಮಾತನಾಡಬಲ್ಲ ನಮ್ಮ ಕನ್ನಡಿಗ ತನ್ನ ಆಯಾ ಭಾಷೆಯ ಮಿತ್ರರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಾನೆ ಅಂತ ಮನಸ್ಸಿನಲ್ಲಿದ್ದರೆ, ಅದನ್ನೂ ಕಿತ್ತು ಹಾಕಿಬಿಡಿ. ನಾಳೆಯಿಂದ ನಗರದ ಬಿಎಂಟಿಸಿ ಬಸ್ಸುಗಳ ಕಂಡಕ್ಟರುಗಳು, ಆಟೋದವರು, ಊಬರ್, ಒಲಾಗಳ ಕನ್ನಡಿಗ ಚಾಲಕರು ತಮ್ಮ ಅನ್ಯಭಾಷೀಯ ಗ್ರಾಹಕರಿಗೆ ಕನ್ನಡದಲ್ಲೇ ಉತ್ತರಿಸಲು ಶುರು ಮಾಡಿದರೂ ಸಾಕು, ಇನ್ನೊಂದು ತಿಂಗಳಲ್ಲಿ ಉತ್ತರಭಾರತೀಯರ ಬಾಯಲ್ಲೂ ತೊದಲು ಕನ್ನಡ ನಲಿಯತೊಡಗುತ್ತದೆ.

    ಇತ್ತೀಚಿಗೆ ಇಸ್ರೇಲ್ ಪ್ರವಾಸದಲ್ಲಿದ್ದ ಪತ್ರಕರ್ತರಾದ ವಿಶ್ವೇಶ್ವರ ಭಟ್ಟರ ಬರಹವೊಂದನ್ನು ಓದುತ್ತಿದ್ದೆ. ಅವರು ಇಸ್ರೇಲಿನವನೊಬ್ಬನ ಬಳಿ "ನೀವ್ಯಾಕೆ ಅಂಗಡಿಗಳ ಫಲಕಗಳನ್ನು ಹೀಬ್ರೂವಿನಲ್ಲಿ ಮಾತ್ರ ಹಾಕುತ್ತೀರಿ? ಕೆಳಗೆ ಸಣ್ಣಕೆ ಇಂಗ್ಲೀಷಿನಲ್ಲೂ ಬರೆಯಬಾರದೇ?" ಅಂತ ಕೇಳಿದರಂತೆ. ಅದಕ್ಕಾತ " ನಾವು ಆಂಗ್ಲರಾಷ್ಟ್ರಗಳಿಗೆ ಬಂದಾಗ ನಮಗೆ ಅನುಕೂಲವಾಗುತ್ತದೆಂದು ಕೆಳಗೆ ಹೀಬ್ರೂವಿನಲ್ಲಿ ಬರೆದಿರುತ್ತೀರೇನು?" ಅಂದನಂತೆ. ಆ ಕ್ಷಣಕ್ಕೆ ಸ್ವಲ್ಪ ಅತಿಯಾಯಿತು ಅನ್ನಿಸಿದರೂ, ಮರುಕ್ಷಣ ಅವರ ಸ್ವಾಭಿಮಾನದ ಬಗ್ಗೆ ನಮಗೊಂದು ಅಭಿಮಾನ ಮೂಡುತ್ತೆ! ಭಟ್ಟರಿಗೆ ಕೆಂಪೇಗೌಡ ವಿಮಾನ ನಿಲ್ದಾಣದ ನಾಲ್ಕು ಪುಸ್ತಕದಂಗಡಿಗಳಲ್ಲಿ ಕನ್ನಡ ಪುಸ್ತಕ ಸಿಗಲಿಲ್ಲವಂತೆ, ಟೆಲ್ ಅವೀವ್ ವಿಮಾನ ನಿಲ್ದಾಣದ ಮಳಿಗೆಯಲ್ಲಿ ಯಾವುದೋ ಒಂದು ಮೂಲೆಬಿದ್ದ ರ್ಯಾಕಿನಲ್ಲಿ ನಾಲ್ಕಾರು ಆಂಗ್ಲ ಪುಸ್ತಕಗಳು ಕಂಡವಂತೆ. ನಮ್ಮ ಭಾಷಾಭಿಮಾನದ ಬಗ್ಗೆ  ಒಮ್ಮೆ ಹಂಗೇ ಸುಮ್ನೇ ಯೋಚಿಸಿಕೊಳ್ಳಿ.

     ಕನ್ನಡ ಉಳಿಸಲು ಅದುಮಾಡಿ ಇದುಮಾಡಿ ಅನ್ನುವ ಸಲುವಾಗಿ ಈ ಬರಹವನ್ನು ಬರೆಯುತ್ತಿಲ್ಲ. ಇದನ್ನೋದಿದ ಮೇಲೆ ನಮ್ಮೊಳಗಿನ ಕನ್ನಡ ಪ್ರೀತಿ ಎದ್ದರೆ, ಕನ್ನಡವ ಪೋಷಿಸಲು ಸಹಕಾರಿಯಾದರೆ ಬರಹದ ಆಶಯದಲ್ಲಿ ಪೂರ್ಣವಾದೀತು. ಯಾರೋ ಬರೆದ ಮಾತ್ರಕ್ಕೆ, ಅಥವಾ ಭಾಷಣ ಬಿಗಿದ ಮಾತ್ರಕ್ಕೆ, ಅದು ಕಾರ್ಯರೂಪಕ್ಕೆ ಬಂದುಬಿಡುವುದಿಲ್ಲ. ಅಥವಾ ಸರ್ಕಾರ ಅದೇನೋ ಕಾನೂನು ತಂದು ಕನ್ನಡವ ಎತ್ತಿನಿಲ್ಲಿಸಲು ಸಾಧ್ಯವಾಗುವುದಿಲ್ಲ! ಸಾಮಾನ್ಯಾತಿ ಸಾಮಾನ್ಯರು ನಿಶ್ಚಯಿಸಿ ತಮ್ಮ ದೈನಂದಿನ ಜೀವನದಲ್ಲಿ ಕನ್ನಡಕ್ಕೆ ಒತ್ತುಕೊಟ್ಟರೆ ಸಾಕು. ಅನ್ಯಭಾಷೀಯರ ಜೊತೆ ಮಾತನಾಡುವಾಗ ಸಾಧ್ಯವಾದಷ್ಟು ಕನ್ನಡ ಬಳಸಿ. ಅವರಿಗೆ ಅರ್ಥಮಾಡಿಸಲೋಸುಗ ಮಧ್ಯೆ ಸ್ವಲ್ಪವೇ ಇಂಗ್ಲೀಷಿನದ್ದೋ, ಹಿಂದಿಯದ್ದೋ ಪದ ಟಂಕಿಸಿ ಅಷ್ಟೇ. ವೇದಿಕೆಗಳ ಮೇಲೆ ಕನ್ನಡದಲ್ಲಿ ಮಾತಾಡಿ. ಗ್ರಾಹಕರ ಜೊತೆ ಕನ್ನಡದಲ್ಲಿ ವ್ಯವಹರಿಸಿ. ಕನ್ನಡ ಬರದವರ ಜೊತೆಯೂ ಕನ್ನಡ ಕಲಿಸುವ ನೆಪದಲ್ಲಿ ನಯವಾಗಿ ಸಾಧ್ಯವಾದಷ್ಟು ಕನ್ನಡದಲ್ಲಿ ವ್ಯವಹರಿಸಿ. ವಾಸ್ತವದಲ್ಲಿ ಕನ್ನಡ ಕಲಿಸುತ್ತೇನೆ ಬಾ ಅಂದರೆ ಅನೇಕ ಉತ್ತರ ಭಾರತೀಯರು ಆಸಕ್ತಿ ತೋರಿಸುತ್ತಾರೆ. "ಭಾಷೆಯೋದನ್ನು ಕಲಿಯಬೇಕಾದರೆ, ಮತ್ತೊಂದು ಭಾಷೆಯ ಸಹಕಾರ ಪಡೆಯಬಾರದು, ನಾವು ಮಗುವಾಗಿದ್ದಾಗ ಮಾತೃಭಾಷೆ ಕಲಿಯಬೇಕಾದರೆ ಯಾವುದಾದರೂ ಭಾಷೆಯ ಸಹಾಯ ಪಡೆದಿದ್ದೆವಾ?" ಅಂತ ನಮ್ಮ ಸಂಸ್ಕೃತ ಮೇಷ್ಟ್ರು ಹೇಳುತ್ತಿದ್ದರು. ಸುತ್ತಲಿನ ವಾತಾವರಣವನ್ನು ಕನ್ನಡಮಯಮಾಡಿಬಿಟ್ಟರೆ, ಪರಭಾಷೀಯರು ಬಹಳ ಬೇಗ ಕಲಿತುಬಿಡುತ್ತಾರೆ. ನಮ್ಮ ರಾಜಧಾನಿಯಲ್ಲಿ ಹೆಸರಿಗಷ್ಟೇ ಕನ್ನಡ ಅಧಿಕೃತ ಭಾಷೆ. ಎಷ್ಟೋ ಕಛೇರಿಗಳಲ್ಲಿ ನಡೆಯುವುದು ಬೇರೆ ಭಾಷೆ! ನಾವು ಏನನ್ನು ನಿರ್ಧರಿಸಿದ್ದೇವೋ ಅದನ್ನು ಜಾರಿಗೆ ತರಬೇಕು. ಕಡತಗಳಲ್ಲಿನ ಆಫೀಷಿಯಲ್ ಲಾಂಗ್ವೇಜ್ ಪಟ್ಟ ಕೆಲಸಕ್ಕೆ ಬರುವುದಿಲ್ಲ. ಕಛೇರಿಗಳಲ್ಲಿ ವ್ಯವಹಾರ ಕನ್ನಡದಲ್ಲಿ ನಡೆಯಬೇಕು. ಪಾನ್ ಅಂಗಡಿಯಿಂದ ಹಿಡಿದು ಲೀಲಾ ಪ್ಯಾಲೇಸ್ ವರೆಗೆ ನಾಮಫಲಕಗಳು ಮೊದಲು ದೊಡ್ಡಕ್ಷರಗಳಲ್ಲಿ ಕನ್ನಡದಲ್ಲಿರಬೇಕು. ಬಿಎಂಟಿಸಿ ಬಸ್ಸಿನ ಫಲಕಗಳಲ್ಲಿ ಮೊದಲು ಕನ್ನಡಾಕ್ಷರಗಳು ಹಾದುಹೋಗಬೇಕು. ರಸ್ತೆ ಸೂಚಿಸುವ ಫಲಕಗಳು, ಜಾಹೀರಾತು ಫಲಕಗಳು ಕನ್ನಡದಲ್ಲಿ ಎದ್ದು ನಿಲ್ಲಬೇಕು. ಕಾರ್ಪೋರೇಟ್ ಜಗತ್ತಿನಲ್ಲಿ, ವಿದ್ಯಾ ಸಂಸ್ಥೆಗಳಲ್ಲಿ ಕನ್ನಡಕ್ಕೊಂದು ಅತ್ಯುನ್ನತ ಸ್ಥಾನವನ್ನು ಒದಗಿಸಿಕೊಡಬೇಕು. ಜರ್ಮನಿ, ಫ್ರಾನ್ಸ್ ಗಳ ಮಾದರಿಯಲ್ಲಿ ಇಲ್ಲಿ ಕಲಿಯಲು, ದುಡಿಯಲು ಬಯಸುವವರಿಗೆ ಕನ್ನಡದ ಮೂಲಭೂತ ಜ್ನಾನವಾದರೂ ಇದೆಯಾ ಅಂತ ಪರೀಕ್ಷಿಸಿ ಒಳಬಿಟ್ಟುಕೊಳ್ಳಬೇಕು. ಅತೀಮುಖ್ಯವಾಗಿ ಕನ್ನಡ ಮಾತನಾಡುವುದು ಸ್ಥಾನಕ್ಕೆ ಧಕ್ಕೆ ಅನ್ನುವ ವಿಕೃತ ಕೀಳರಿಮೆಯನ್ನು ತೊಲಗಿಸಿಹಾಕಬೇಕು. ಕನ್ನಡ ಭಾಷಾಭಿಮಾನವನ್ನು ಆತ್ಮಸಾಕ್ಷಿಯ ಮುಂದಿಟ್ಟುಕೊಂಡು ಸ್ವಲ್ಪ ಹೊತ್ತು ಕನ್ನಡವ ಪೋಷಿಸುವುದು ಹೇಗೆಂದು ಯೋಚಿಸಿ, ಅಳವಡಿಸಿ. ನಾವು ಬದಲಿಸಬಹುದು, ಪರಿಸ್ಥಿತಿಯನ್ನ, ಒಂದು ದಿನ.

  ಭಾಷೆಯ ಜನನದ ಮೂಲಭೂತ ಉದ್ದೇಶ ಸಂವಹನವಷ್ಟೇ ಇರಬಹುದು. ಭಾಷೆ ಬೆಳೆದು ಗಟ್ಟಿಯಾಗಿ ತಳವೂರಿ ನಿಂತಾಗ, ಅದು ಶಬ್ದಪುಂಜವಾಗಷ್ಟೇ ಉಳಿಯುವುದಿಲ್ಲ. ನಾಗರೀಕತೆ ಮತ್ತು ಭಾಷೆಯ ನಡುವೆ ಅವಿನಾಭಾವವಾದ ಸಂಬಂಧವೊಂದು ಬೆಳೆದುಬಿಟ್ಟಿರುತ್ತೆ. ಭಾಷೆ ನಮಗೆ ಅನ್ನ ಕೊಟ್ಟಿದೆ. ಜನಾಂಗವೊಂದರ ನಿಜವಾದ ಅಸ್ಮಿತೆ ಅಂದರೆ, ಅದು ಮಾತನಾಡುವ ಭಾಷೆ. ಇದು ಅನ್ಯಭಾಷೀಯರ ಬಗ್ಗೆ ಅಸಹಿಷ್ಣುತೆಯ ಆಂದೋಲನವಲ್ಲ. ಅವರಿಗೆ ಒಂದು ಹಿಡಿ ಹೆಚ್ಚು ಪ್ರೀತಿ ತೋರಿಸೇ ನಮ್ಮ ಹೆಮ್ಮೆಯ ಭಾಷೆಯನ್ನು ಕಲಿಸುವ ಆಶಯ. ಮೂರನೇ ಅತೀ ಪ್ರಾಚೀನವಾದ ಭಾಷೆ ಆನಿಸಿಕೊಂಡ ನಮ್ಮ ಮಾತೃಭಾಷೆಯನ್ನು ಉಳಿಸುವ ಕೈಂಕರ್ಯ! ಧನ್ಯವಾದ.