Powered By Blogger

Thursday, January 28, 2016

ಒಂದು ಸಾವು ತೋರಿಸಿದ ಜಗತ್ತಿನ ಕರಾಳ ಮುಖಗಳು!

     ಆವತ್ತು ಗೆಲೆಲಿಯೋ ಹೇಳಿದ್ದಿಷ್ಟೆ... "ನೀವು ಅಂದುಂಕೊಂಡಂಗೆ ಭೂಮಿ ಚಪ್ಪಟೆ ಇಲ್ರಪಾ.. ಅದು ಗೋಳಾಕಾರವಾಗಿದೆ" ಅಂತ. ಅವತ್ತಿನ ಕ್ಯಾಥೋಲಿಕ್ ಚರ್ಚ್ ಕೆಂಡಾಮಂಡಲವಾಯಿತು. ಏನು ಹೇಳಿದ್ದೇಯೊ ಆ ನಿನ್ನ ಥಿಯರಿಯನ್ನ ಮುಚ್ಚಿಕೊಂಡು ವಾಪಸ್ ತಗಂಬಿಡು ಅಂದಿತು. ಹಿಂದೊಬ್ಬ ಹೀಗೆಯೇ ಹೇಳಿ ಕೊನೆಗೆ ಹೆದರಿಸಿಕೊಂಡು ಸುಮ್ಮನಾಗಿದ್ದ. ಆದರೆ ಗೆಲೆಲಿಯೋ ಸುಮ್ಮನಿರುವ ಜಾಯಮಾನದವನಲ್ಲ. ತನ್ನದೇ ಸರಿ ಅಂದ. ತಾನು ಸಾಕ್ಷ್ಯ ಒದಗಿಸಬಲ್ಲೆ ಅಂದ. "ಈವಯ್ಯ ವಸಿ ಜಾಸ್ತಿ ಹಾರಾಡ್ತಿದಾನೆ" ಅಂತ ಆತನನ್ನು ಗೃಹಬಂಧನದಲ್ಲಿರಿಸಿದರು. ಶಿಕ್ಷೆ ಕೊಟ್ಟರು. ಆದರೆ ಕೊನೆಗೇನಾಯಿತು ಹೇಳಿ, ಸತ್ಯ ಸತ್ತುಹೋಯಿತಾ? ಒಂದಿಷ್ಟು ಅಜ್ಞಾನಿಗಳ ಗುಂಪು ಸುಳ್ಳನ್ನು ನಂಬಿ, ಇತರರನ್ನೂ ನಂಬಿಸಹೊರಟರು ಅಂತ ಭೋಮಿಯೇನಾದರೂ ಪುಸಕ್ಕಂತ ಚಪ್ಪಟೆಯಾಗಿಬಿಟ್ಟಿತಾ? ಇಲ್ಲ. ವಿಷಯಕ್ಕೆ ಬರುವ ಮುನ್ನ ತಮ್ಮನ್ನು ತಾವು ಎಡ ಅಥವಾ ಬಲಪಂಥದವರು ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರಿಗೆ ಈ ಘಟನೆಯನ್ನ ಮತ್ತೊಮ್ಮೆ ಓದಲು ರೆಕಮೆಂಡ್ ಮಾಡುತ್ತೇನೆ. ಅಂದಹಾಗೆ ನೀವು ನಿಮ್ಮ ಪೂರ್ವಗ್ರಹಗಳನ್ನ ಈ ದೇಶದ, ದೇಶದ ಜನರ ಮೇಲೆ ಹೇರಹೊರಟರೆ, ಅದರಲ್ಲಿ ನಿಮಗೆ ಯಶಸ್ಸು ಅಂತ ಸಿಕ್ಕರೆ, ಅದು ತಾತ್ಕಾಲಿಕ ಅಷ್ಟೆ. ಸತ್ಯವೇನು ಅಂತ ದೇಶವಾಸಿಗಳಿಗೆ ಒಂದಲ್ಲ ಒಂದು ದಿನ ಗೊತ್ತಾಗೇ ತೀರುತ್ತೆ!

     ಭಾರತದ ಬಗ್ಗೆಯೊಂದು ಓಬಿರಾಯನ ಕಾಲದ ಪೂರ್ವಗ್ರಹವಿದೆ. "ಭಾರತದಲ್ಲಿ ದಲಿತರನ್ನು ತೀರಾ ಹೀನಾಯವಾಗಿ ನಡೆಸಿಕೊಳ್ಳಲಾಗತ್ತೆ. ಸಮಾಜದ ಸ್ತರಸ್ತರದಲ್ಲೂ ತಾರತಮ್ಯದ ಕಬಂಧಬಾಹುಗಳು ಕಾಣಸಿಗುತ್ತವೆ" ಅಂತ! ನಾನು ಒಪ್ಪಿಕೊಂಡು ಬಿಡುತ್ತೇನೆ. ಭಾರತದಲ್ಲಿ ತಾರತಮ್ಯ ಇತ್ತು. ಯಾಕೆ, ಅಸ್ಪೃಶ್ಯತೆ ಎಂಬ ನಾಚಿಗೇಡಿನ ಆಚರಣೆಯೂ ಇತ್ತು. ಯೆಸ್, ಮೇಲ್ವರ್ಗದವರು ಕೆಳವರ್ಗದವರನ್ನ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ, ಅವರನ್ನು ಹಿಂಸಿಸುತ್ತಿದ್ದ ಕಾಲವೊಂದು ಇತ್ತು. ಒಬ್ಬ ಮೇಲ್ವರ್ಗದಲ್ಲಿ ಜನಿಸಿದ ಹುಡುಗನಾಗಿ ಇವತ್ತು ನಾನು ಆ ಕಾಲದಲ್ಲಿ ನಡೆದುಹೋದ ಆ ಕೊಳಕು ಆಚರಣೆಗಳ ಓದಿ ನಾಚಿಕೆಯಿಂದ ತಲೆತಗ್ಗಿಸುತ್ತೇನೆ! ಇವತ್ತಿಗೂ ತಾರತಮ್ಯ ಸಂಪೂರ್ಣವಾಗಿ ತೊಲಗಿಲ್ಲ ಬಿಡಿ. ನಗರ ಭಾರತದಲ್ಲಿ ತೊಲಗಿದೆ. ಮುಂದುವರಿದ ಗ್ರಾಮೀಣ ಭಾರತದಲ್ಲೂ ಬಹುತೇಕ ಸತ್ತಿದೆ. ಆದರೆ ಹಿಂದುಳಿದ ಪ್ರದೇಶಗಳಲ್ಲಿ ಇನ್ನೂ ಜೀವಂತವಿದೆ. ಆದರೆ ಈ ಪ್ರಗತಿಪರರು ಅನಿಸಿಕೊಂಡಿರುವವರು ಇವತ್ತು ಬೀದಿಬೀದಿಯಲ್ಲಿ ಬೊಂಬ್ಡಾ ಬಜಾಯಿಸುತ್ತಿರುವಂತೆ ಕತ್ತು ಹಿಸುಕುವ ತಾರತಮ್ಯವೇನು ಸಮಾಜದ ಮುಖ್ಯವಾಹಿನಿಯಲ್ಲಿ ಇಲ್ಲ. ಇವತ್ತು ದಲಿತರಿಗೆ ಪ್ರತಿಯೊಂದರಲ್ಲೂ ಸಾಕುಬೇಕಷ್ಟು ಮೀಸಲಾತಿ ಒದಗಿಸಿ, ಅವರು ಸಮಾಜದಲ್ಲಿ ಎಲ್ಲಾ ಸ್ಥಾನಗಳಲ್ಲೂ ಮಿಂಚುವಂತೆ ಈ ಸಮಾಜ ನೋಡಿಕೊಂಡಿದೆ.  ಇವತ್ತೇನು ನಡೆಯುತ್ತಿದೆ ಅಂತ ನಾವು ಓದಿ ತಿಳಿಯಬೇಕಿಲ್ಲ. ಕಣ್ಣಿದ್ದವರಿಗೆಲ್ಲ ಕಾಣಿಸುತ್ತೆ. ಇದೇ 'ಜಾತ್ಯತೀತ' ರಾಷ್ಟ್ರದಲ್ಲಿ ಸಣ್ಣಕಿದ್ದಾಗಿನಿಂದ ಇಲ್ಲಿಯವರೆಗೂ ನನ್ನ ಜಾತಿಯ ಕಾರಣಕ್ಕಾಗಿ ಅರ್ಹತೆಯಿದ್ದರೂ ಅನೇಕ scholarshipಗಳಿಂದ ವಂಚಿತನಾದವನು ನಾನು. ಆತ ಅನುಕೂಲಸ್ಥ ಕುಟುಂಬದವನೇ ಆದರೂ, ಓದುವ ಸಕಲ ಸುವರ್ಣಾವಕಾಶಗಳಿದ್ದರೂ ಓದದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನನಗಿಂತ ಬಹಳ ಕೆಟ್ಟ rank ತೆಗೆದವ ನನ್ನದೇ ಕಾಲೇಜಿನಲ್ಲಿ ಓದುವುದನ್ನು ಕಂಡೂ ಕಾಣದಂತೆ ಸುಮ್ಮನಿರುವವ ನಾನು. ನನ್ನಷ್ಟೇ ಅಂಕಗಳನ್ನು ಪಡೆದರೂ, ನನ್ನ ಕಾಲೇಜಿನ ಹತ್ತುಪಟ್ಟು ಒಳ್ಳೆಯ ಸ್ಥಾನವಿರುವ ಕಾಲೇಜಿನಲ್ಲಿ, ನಾನು ಕೊಡುವ ಅರ್ಧ ಫೀಯನ್ನೂ ಕೊಡದೆ ಓದುವವರ ಕಂಡು ಆದ ಬೇಸರವ ಹೊಟ್ಟೆಯಲ್ಲಿ ನುಂಗಿಕೊಂಡು ಓದುತ್ತಿರುವವನು ನಾನು. ನನ್ನ ಜಾತಿಯ ಕಾರಣಕ್ಕಾಗಿ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾದ ಕುಟುಂಬಕ್ಕೆ ಸೇರಿದವನು ನಾನು. So, for your kind information ಭಾರತದಲ್ಲಿ ದಲಿತರ ಮೇಲೆ "ಅಮಾನವೀಯ" "ಸೋ"ಸಣೆಯಾಗುತ್ತಿದೆ ಅಂತ ನನ್ನ ಮುಂದೆ ಪುಂಗಿ ಓದುವ ಅವಶ್ಯಕತೆ ಇಲ್ಲ.

     ಅದು ಹದಿನೇಳು ಜನವರಿ. ಸ್ಥಳ ಬ್ಯಾಚುಲರ್ ಒಬ್ಬನ ರೂಮು. ಸಂಬಂಧ ಪಟ್ಟ ಸಂಸ್ಥೆ UoH, the University of Hyderabad. ಆಗಿದ್ದು ಆತ್ಮಹತ್ಯೆ. ಆತ್ಮಹತ್ಯೆ ಮಾಡಿಕೊಂಡ ಹುಡುಗ 'ದಲಿತ' ಎಂಬ ಸುದ್ದಿ. ಅಷ್ಟು ಸಾಕಾಯಿತು. ಈ ದೇಶದ ಬೌಧ್ಧಿಕ ವರ್ಗವೊಂದು ಛಂಗನೆ ಎದ್ದುಕೂತಿತು. 'ಭಾರತ-ದಲಿತ-ಶೋಷಣೆ-ತುಳಿತ' ಇಂಥ ಹಳೆಯಕಾಲದಲ್ಲೇ ಸತ್ತುಹೋದ ಕಾನ್ಸೆಪ್ಟ್ ಗಳನ್ನೇ ಬಂಡವಾಳಮಾಡಿಕೊಂಡು ಹೊಟ್ಟೆಪಾಡು ನೋಡಿಕೊಳ್ಳುತ್ತಿರುವ 'ಪ್ರಗತಿಪರರು' ಸತ್ಯದ ತಲೆಯ ಮೇಲೆ ಹೊಡೆದು ತಮ್ಮದೇ ಕಪೋಲಕಲ್ಪಿತ ವಾದಗಳನ್ನೆಲ್ಲಾ ಮುಂದಿಡತೊಡಗಿದರು. ಇವರೆಲ್ಲ ಎಂಥ ಗುಳ್ಳೆನರಿಗಳು ಗೊತ್ತಾ? ೧೯೪೭ರಲ್ಲಿ ಏನು ಮಾತನಾಡುತ್ತಿದ್ದರೋ ಅದನ್ನೇ ಈಗಲೂ ರಿಪೀಟ್ ಮಾಡುತ್ತಾರೆ. ಮುಂದೆ ಇನ್ನೂ ನಾಲ್ಕು ಶತಮಾನ ಕಳೆದರೂ ಇದೇ ಜಂಪೆರಾಗವನ್ನೇ ಹಾಡುತ್ತಿರುತ್ತಾರೆ.  ಇವರಿಗೆಲ್ಲ ಸತ್ಯ ಗೊತ್ತಿಲ್ಲ ಅಂತ ಅಲ್ಲ. ಕಪೋಲಕಲ್ಪಿತ ಸುಳ್ಳುಗಳನ್ನು ಹೆಣೆಯುವಷ್ಟು ಬುಧ್ಧಿವಂತಿಕೆ ಇರುವ ಇವರಿಗೆ, ಇಂದಿನ ವಾಸ್ತವ ಗೊತ್ತಿರದೇ ಇರಲು ಸಾಧ್ಯವೇನು? ಅವರ ಬಗ್ಗೆ ಆಮೇಲೆ ಮಾತಾಡೋಣ.

     ಆ ಹುಡುಗನ ಹೆಸರು ರೋಹಿತ್ ವೆಮುಲಾ. UoHನಲ್ಲಿ ಪಿಹೆಚ್ ಡಿ ವಿದ್ಯಾರ್ಥಿ. ಆದರೆ ಥೀಸಿಸ್ ಬರೆಯುವುದಕ್ಕಿಂತ ಹೆಚ್ಚು ಅದು ಇದು ಸಂಘಟನೆಗಳನ್ನ ಮಾಡಿಕೊಂಡು ಗುಂಪುಗಾರಿಕೆ ಮಾಡುವುದೇ ಹೆಚ್ಚಾಗಿತ್ತು. ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯ ಬಗ್ಗೆ ಸಾಕ್ಷ್ಯಚಿತ್ರವೊಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಗೊಳ್ಳುವುದನ್ನ ಎಬಿವಿಪಿ ಉಗ್ರವಾಗಿ ಖಂಡಿಸಿತ್ತು. ಇದು ರೋಹಿತ್ ಗೆ ಸರಿ ಕಂಡಿರಲಿಲ್ಲ. ಯಾಕೂಬ್ ಎಂಬ 1993ರ ಮುಂಬೈ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನನ್ನು ಕಳೆದ ವರ್ಷ ಗಲ್ಲಿಗೇರಿಸಲಾಯಿತು. ಆತನಿಗೆ ಕ್ಷಮಾದಾನ ಕೊಡಬೇಕು ಅಂತ ಪಟ್ಟು ಹಿಡಿದಿದ್ದ ಅನೇಕ "ವಿಶಾಲ ಹೃದಯದ ಮಹಾನುಭಾವರಲ್ಲಿ" ರೋಹಿತ್ ಕೂಡ ಒಬ್ಬ. ಬಿಡಿ ಯಾವ ಜನರಿಂದ ತಾವು ಅಷ್ಟು ದೊಡ್ಡ ಹೀರೋ ಆದರೋ ಅದೇ ಜನರನ್ನು ಕೊಂದ ಯಾಕೂಬ್ ನನ್ನು ಗಲ್ಲಿಗೇರಿಸಬೇಡಿ ಅಂತ, ಆತ ತಮ್ಮ ಧರ್ಮದವ ಎಂಬ ಒಂದೇ ಕಾರಣಕ್ಕೆ, ಸಲ್ಮಾನ್ ಖಾನ್ ಸಾಹೇಬರು ಕೆಂಡಕಾರಿದ್ದರಲ್ಲವಾ? Wednesday ಚಿತ್ರದಲ್ಲಿ ಆ ಟೆರೇಸ್ ಮೇಲೆ ಕುಳಿತು ಉಗ್ರತ್ವದ ವಿರುದ್ಧವೇ ಉಗ್ರವಾಗಿ ಭಾಷಣ ಮಾಡಿದ್ದ ನಾಸಿರುದ್ದೀನ್ ಶಾ ಕೂಡ "ಆತನಿಗೆ ಗಲ್ಲು ಬೇಡ" ಅಂತ ಪೆಟಿಷನ್ ಒಂದರ ಮೂಲಕ ಗೋಗರಿದಿರಲಿಲ್ಲವಾ? ಈ ದೇಶವೇ ಹೀಗೆ. ಎಲ್ಲರನ್ನೂ ನಂಬಿಬಿಡುತ್ತೆ. ಎಲ್ಲವನ್ನೂ ಸಹಿಸಿಕೊಂಡುಬಿಡುತ್ತೆ. ವಿಷಯಕ್ಕೆ ಬರೋಣ. ಇವೆಲ್ಲ ಕಾರಣಗಳಿಂದಾಗಿ ರೋಹಿತ್ ಸೇರಿದ್ದ ಎಎಸ್ಎ (ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್)  ಮತ್ತು ಎಬಿವಿಪಿಗಳ ಮಧ್ಯೆ ಜಗಳವಾಯಿತು. ಆದ ಹೊಡೆದಾಟದಲ್ಲಿ ಎಬಿವಿಪಿಯ ಸುನಿಲ್ ಎಂಬಾತನಿಗೆ ಗಾಯಗಳಾದವು. ಆತನ ಕಡೆಯವರಿಂದ ಕೋರ್ಟಿನಲ್ಲಿ ಕೇಸ್ ಬಿತ್ತು. ಸಾಲದ್ದಕ್ಕೆ ಸಿಕಂದರಾಬಾದ್ ನ ಸಂಸದ ಬಂಜಾರು ದತ್ತಾತ್ರೇಯ ಕೂಡ ಇದರಲ್ಲಿ ಮೂಗು ತೂರಿಸಿದರು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದಿಂದ ರಿಮೈಂಡರ್ ಗಳು ವಿಶ್ವವಿದ್ಯಾಲಯಕ್ಕೆ ಬರತೊಡಗಿದವು. ಕುಲಪತಿ ರೋಹಿತ್ ಮತ್ತು ಸಂಗಡಿಗರನ್ನ ಹಾಸ್ಟೆಲ್ ನಿಂದ ವಜಾ ಮಾಡಿದರು. ಕಾಲೇಜು, ಗ್ರಂಥಾಲಯ ಮತ್ತು ಕೋರ್ಸಿಗೆ ಬೇಕಾಗುವ ಕೆಲವೊಂದು ಕಟ್ಟಡಗಳನ್ನು ಬಿಟ್ಟು ಕ್ಯಾಂಪಸ್ಸಿನಲ್ಲಿರುವ ಮತ್ತೆಲ್ಲ ಕಟ್ಟಡಗಳಿಗೂ ಇವರಿಗೆ ನಿಷೇಧ ಹೇರಲಾಯಿತು. ಆಗಸ್ಟ್ ನಲ್ಲೇ ಬಂದಿದ್ದ ಈ ತೀರ್ಪು ಡಿಸೆಂಬರ್ ನಲ್ಲಿ ಎತ್ತಿಹಿಡಿಯಲ್ಪಟ್ಟಿತು. ಜನವರಿ 3ಕ್ಕೆ ನಿಷೇಧ ಹೇರಿಸಿಕೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಕ್ಯಾಂಪಸ್ ನಲ್ಲೇ ಒಂದು ಟೆಂಟ್ ಕಟ್ಟಿ ಉಳಿದು ಪ್ರತಿಭಟನೆ ಮಾಡತೊಡಗಿದರು. ಜನವರಿ ಹದಿನೇಳು, ಭಾನುವಾರ ರೋಹಿತ್ ನೇಣಿಗೆ ತಲೆಕೊಟ್ಟ ಆಘಾತಕಾರಿ ಸುದ್ದಿ ಹೊರಬಂತು. ಇದು ಆದ ದುರಂತದ ಫಾಸ್ಟ್ರಾಕ್ ವಿವರಣೆ. ಈ ಪ್ರಕರಣದಲ್ಲಿ ನಾನು ಕೇಂದ್ರ ಸರ್ಕಾರವನ್ನೂ ಸಮರ್ಥಿಸಿಕೊಳ್ಳುವುದಿಲ್ಲ. ಕೇಂದ್ರವೂ ಇಲ್ಲಿ unusual interest ತೋರಿಸಿದೆ ಎಂಬುವುದು ಸತ್ಯ. ಯುನಿವರ್ಸಿಟಿಯ ಪ್ರಕಣವೊಂದರಲ್ಲಿ ಆಕ್ಷನ್ ತೆಗೆದುಕೊಳ್ಳಿ ಅಂತ ಕೇಂದ್ರದಿಂದ ಎಂಟೆಂಟು ರಿಮೈಂಡರ್ ಗಳು ಬರುವುದ ಕಂಡರೆ ಖಂಡಿತ ಅನುಮಾನ ಬರುತ್ತದೆ.

      ರೋಹಿತ್ ನ ಬಾಲ್ಯ ಸುಂದರವಾಗಿರಲಿಲ್ಲ. ಆತನ ತಾಯಿ ರಾಧಿಕಾಳನ್ನು ಅಂಜಾನಿ ದೇವಿ ಎಂಬುವವರು ದತ್ತು ತೆಗೆದುಕೊಳ್ಳುತ್ತಾರೆ. ರಾಧಿಕಾ Mala(SC) ಜಾತಿಗೆ ಸೇರಿದವರು. ಅಂಜನಾ ದೇವಿ Vaddera(OBC)ಗೆ ಸೇರಿದವರು. ತಮ್ಮ ಸ್ವಂತ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೂ ಈ ದತ್ತುಪುತ್ರಿಯನ್ನು ಸೇವಕಿಯಂತೆ ನಡೆಸಿಕೊಳ್ಳುತ್ತಾರೆ. ಹದಿನಾಲ್ಕು ವರ್ಷಕ್ಕೆಲ್ಲ ಆಕೆಯನ್ನು ಮಣಿ ಎಂಬಾತನೊಂದಿಗೆ ಮಾಡುವೆ ಮಾಡಿಬಿಡುತ್ತಾರೆ.ಮೂರು ಮಕ್ಕಳಲ್ಲಿ ರೋಹಿತ್ ಮಧ್ಯದವ. ರಾಧಿಕಾಳ ಜಾತಿಯನ್ನ ಮಣಿಯಿಂದ ಮುಚ್ಚಿಟ್ಟಿರುತ್ತಾರೆ. ಕೊನೆಗೆ ಅದು ಅವನಿಗೆ ಗೊತ್ತಾಗಿ ಅವನು ರಾಧಿಕಾಳನ್ನು ಹಿಂಸಿಸುತ್ತಾನೆ. ರಾಧಿಕಾ ಮಕ್ಕಳೊಂದಿಗೆ ಅಂಜಾನಿ ದೇವಿಯವರ ಮನೆಗೆ ಬರುತ್ತಾಳೆ. ಮನೆಗೆ ಸೇರಿಸಿಕೊಂಡ ಆಕೆ ಅವರನ್ನು ನಡೆಸಿಕೊಂಡಿದ್ದು ಮಾತ್ರ ಮತ್ತೆ ಆಳಿನಂತೆಯೇ. ಮನೆಕೆಲಸವನ್ನೆಲ್ಲಾ ರಾಧಿಕಾ ಮತ್ತು ಅವಳ ಮಕ್ಕಳು ಮಾಡಬೇಕಾಗಿರುತ್ತೆ. ಆದ್ದರಿಂದ ರೋಹಿತ್ ನ ಗೆಳೆಯ ರಿಯಾಜ್ ನ ಪ್ರಕಾರ ರೋಹಿತ್ ಬಿಎಸ್ಸಿ ಮಾಡುವಾಗ ಮನೆಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಆತ ಮತ್ತು ಆತನ ತಮ್ಮ ಕಲಿಕೆಯಲ್ಲಿ ಮುಂದಿದ್ದರೂ ಆತನ ಅಜ್ಜಿ ಮನೆಯವರು ಕಲಿಕೆಗೆ ಧನಸಹಾಯ ಮಾಡಲಿಲ್ಲ. ರೋಹಿತ್ ಕೇಟ್ರಿಂಗ್ ಮಾಡಿ ಸ್ವಲ್ಪ ದುಡ್ಡು ಸಂಪಾದಿಸುತ್ತಿದ್ದ.  ಇವೆಲ್ಲ ಕಾರಣಗಳಿಂದಾಗಿ  ಆತ  ಜರ್ಜರಿತನಾಗಿದ್ದ. ಅವನು ಈ ತಾರತಮ್ಯಗಳ ಗುಂಗನ್ನು ಎಷ್ಟು ತಲೆಗೆ ತುಂಬಿಸಿಕೊಂಡಿದ್ದ ಅಂದರೆ ಅವನ ಫೇಸ್ಬುಕ್  ಪುಟದ ತುಂಬೆಲ್ಲ ಒಂದು ದಲಿತಪರ ಅಥವಾ ಮೇಲ್ವರ್ಗಗಳ ತೆಗಳುವ ಪೋಸ್ಟ್  ಗಳೇ ತುಂಬಿಕೊಂಡಿವೆ. ಈತ ವಿವೇಕಾನಂದರನ್ನೂ ಬಿಟ್ಟವನಲ್ಲ. ವಿವೇಕಾನಂದರ ಕೆಲ ವಾಕ್ಯಗಳನ್ನು ಹಿಂದೆಮುಂದೆ ಇಲ್ಲದೆ ಬೇಕಾದದ್ದನ್ನು ಮಾತ್ರ ಕಟ್ ಮಾಡಿ ಅದರ ಅರ್ಥವೇ ತಿರುಚಿಹೋಗುವಂತೆ ಮಾಡಿ, ವಿವೇಕಾನಂದರು ದೊಡ್ಡ ಜಾತಿಪಿಪಾಸುವಾಗಿದ್ದರು ಅಂತೆಲ್ಲ ಹುಚ್ಚುಹುಚ್ಚಾಗಿ ಪೋಸ್ಟ್ ಶೇರ್ ಮಾಡಿದ್ದ! ಯಾಕೂಬ್ ನನ್ನು ಗಲ್ಲಿಗೇರಿಸಿದ ದಿನ ಕಪ್ಪು ಭಾವಚಿತ್ರಹಾಕಿ ಶೇಮ್ ಗೀಮ್ ಅಂತೆಲ್ಲ ಬರೆದಿದ್ದ! ಈತನ ಬದುಕು, ಆ ಭಾನುವಾರ ಆತ್ಮಹತ್ಯೆ ಎಂಬ ದುರಂತದಲ್ಲಿ ಕೊನೆಯಾಯಿತು. ಆತನ ಬಾಲ್ಯದಲ್ಲಿ ಜಾತಿ ತಾರತಮ್ಯ ತನ್ನ ಕೆಟ್ಟ ಮುಖವನ್ನು ತೋರಿಸಿತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ತಾರತಮ್ಯ ನಡೆಯಿತು, ಅದೇ ಆತ್ಮಹತ್ಯೆಗೆ ಕಾರಣವಾಯಿತು ಅಂತ ನಿರ್ಧರಿಸಲಾಗುವುದಿಲ್ಲ. ತಪ್ಪು ಯಾರದ್ದು ಅಂತ ಇನ್ನೂ ಗೊತ್ತಾಗಿಲ್ಲ. ಭಾರತದಲ್ಲಿ ಜಾತೀಯತೆ ಸಂಪೂರ್ಣ ನಶಿಸಿಲ್ಲ. ಆದರೆ, ಈಗಲೂ ದಲಿತರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಅವರಿಗೆ ಸ್ಥಾನವೇ  ಇಲ್ಲ. ಅವರಿಗೆ ಮುಂದೆ ಬರಲು ಅವಕಾಶವೇ ಇಲ್ಲ ಅಂತೆಲ್ಲ ಹೇಳುವುದು ತಪಾಗುತ್ತೆ. India has changed.

      ಈ ದುರಂತವನ್ನ ವ್ಯವಸ್ಥಿತವಾಗಿ ಹಾದಿತಪ್ಪಿಸಿ ತಮ್ಮ ಬೇಳೆಬೇಯಿಸಿಕೊಂಡಿದ್ದು  ಸೆಕ್ಯುಲರ್-ಗಿಕ್ಯುಲರ್ ಅಂತೆಲ್ಲ ಗುರುತಿಸಿಕೊಂಡ ರಾಜಕಾರಣಿಗಳು ಮತ್ತು ಚಿಂತ(?)ಕರು. ತಮ್ಮ ಹಳೆಯ ರಾಗಕ್ಕೊಂದು ಹೊಸ ಮುನ್ನುಡಿ ಕೊಟ್ಟರು. "ಏನಾಗುತ್ತಿದೆ ಭಾರತದಲ್ಲಿ? ಇಲ್ಲಿ ದಲಿತರಿಗೆ ಉಳಿಗಾಲವೇ ಇಲ್ಲ. ಮೇಲ್ವರ್ಗದವರು ಸೇರಿಕೊಂಡು ದಲಿತರನ್ನು ಎಲ್ಲಾ ಸ್ತರಗಳಲ್ಲೂ ತುಳಿಯುತ್ತಿದ್ದಾರೆ. ದಲಿತರನ್ನು ವಿದ್ಯಾ ಸಂಸ್ಥೆಗಳಲ್ಲಿ ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ವಿದ್ಯಾಸಂಸ್ಥೆಗಳಲ್ಲಿ ಮೇಲ್ವರ್ಗದವರು ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಆಳುತ್ತಿದ್ದಾರೆ. ಈ ದೇಶದಲ್ಲಿ ದಲಿತರು ಮೇಲೆ ಬರಲು ಯಾರೂ ಬಿಡುತ್ತಲೇ ಇಲ್ಲ.  ಅವರು ಉಸಿರಾಡಲೇ ಕಷ್ಟವಾಗುವ ಪರಿಸ್ಥಿತಿಯಿದೆ" ಅಂತೆಲ್ಲ ತೀರಾ ಹಾಸ್ಯಾಸ್ಪದವಾಗಿ ಕೂಗಾಡತೊಡಗಿದರು. ಇವರಿಗೆಲ್ಲ ಇರುವ ಮತ್ತೊಂದು  ಕೆಟ್ಟ ಕಾಯಿಲೆ ಅಂದರೆ ಎಲ್ಲದಕ್ಕೂ ಬ್ರಾಹ್ಮಣನನ್ನು ಎಳೆದು ತರುವುದು. ರೋಹಿತ್ ನ ಸಾವನ್ನು Brahmanism ಮತ್ತು  Abrahamanismನ ಕಾಳಗ ಅಂತ ಬಿಂಬಿಸಹೊರಟರು. ಬಿಜೆಪಿಯ ಮಂತ್ರಿಗಳ ಹೆಸರು ಕೇಸಿನಲ್ಲಿ ಕೇಳಿಬಂದಿದೆ ಅಂತ ಹಿಂದುತ್ವದ ಲೇಪವನ್ನೂ ಆ ಸಾವಿಗೆ ಹಚ್ಚಿಬಿಟ್ಟರು. This is all a system you know. ಇವೆಲ್ಲ ಮೇಲ್ಮಟ್ಟದಲ್ಲಿ ನಡೆಯುವ ಒಂದು ವ್ಯವಸ್ಥಿತ ಪಿತೂರಿ. ಹೀಗೆ ಸಮಾಜದಲ್ಲಿ ಸುಳ್ಳುಗಳ ಮೂಲಕ ಕಂದಕ ಸೃಷ್ಟಿಸುವುದರಿಂದ ಅವರಿಗೆಲ್ಲ ಅನೇಕ ಲಾಭಗಳಿವೆ. ಪ್ರಪ್ರಥಮವಾಗಿ ಅವರ ಹೊಟ್ಟೆಪಾಡು. ರಾಜಕಾರಣಿಗಳಿಗೋ ವೋಟಿನ ಚಿಂತೆ. ವೋಟ್ ಬ್ಯಾಂಕ್ ಅನ್ನುವುದು ಈ ದೇಶದಲ್ಲಿ ಎಂಥ ಸುಳ್ಳನ್ನಾದರೂ ನಿಜವಾಗಿಸಬಲ್ಲದು, ರಾಜಕೀಯವನ್ನು ಯಾವ ಮಟ್ಟಕ್ಕಾದರೂ ಇಳಿಸಬಲ್ಲದು.  ಇನ್ನು ಸೆಕ್ಯುಲಾರಿಸ್ಟ್, ಬುದ್ಧಿಜೀವಿ ಅನ್ನುವ ಸೋಗಿನಲ್ಲಿರುವವರ ಕಥೆಯನ್ನಂತೂ ಕೆದಕದಿರುವುದೇ ವಾಸಿ. ಅವರ ಜೀವನ ಮೀನಿನ ಜೀವನದ ಹಾಗೆ. ಅವರ ಅದೇ ಆ ತುಕ್ಕು ಹಿಡಿದ ಚಿಂತನೆಗಳ ನೀರಿನಲ್ಲಿದ್ದರೆ ಮಾತ್ರ ಉಸಿರಾಡಿಕೊಂಡಿರುತ್ತಾರೆ. ಅದರಿಂದ ಹೊರಬಂದರೆ ಎಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡು ಬಿಡುತ್ತೇವೆಯೇನೋ ಎಂಬ ಭಯ. ಅಥವಾ ರಾಜಕೀಯ ಹಿತಾಸಕ್ತಿಗಳ ಹಣದ,  ಪ್ರಶಸ್ತಿಗಳ ಆಮಿಷಕ್ಕೆ ಹೀಗಾಡುತ್ತಾರಾ ಗೊತ್ತಿಲ್ಲ. But, they will never come out of it.

    ಇವತ್ತು ಯಾವ ಶಾಲೆಯಲ್ಲೂ ದಲಿತ ಹುಡುಗನೊಬ್ಬನಿಗೆ ಮೂಲೆಯೊಂದರಲ್ಲಿ ನೆಲಕ್ಕೆ ಕೂರಿಸುವುದಿಲ್ಲ. ಆತ ಪಾಠ ಕೇಳಿದ್ದಕ್ಕೆ, ಆತನ ಕಿವಿಯ ಮೇಲೆ ಕಾದ ಸೀಸೆ ಹೊಯ್ಯುವುದಿಲ್ಲ. ಇವತ್ತು ದೇವಸ್ಥಾನಗಳಿಗೆ ಆತನ ಜಾತಿಯ ಕಾರಣಕ್ಕಾಗಿ ನಿಷೇಧ ಹೇರುವುದಿಲ್ಲ.  ಆತ ಸಾರ್ವಜನಿಕ ಬಾವಿಯಲ್ಲಿ ನೀರು ಸೇದಿದ್ದಕ್ಕೆ ಬಾರುಕೋಲಿನಲ್ಲಿ ಥಳಿಸುವುದಿಲ್ಲ. ಆತ ದಲಿತನೆಂದು ಗೊತ್ತಾದರೆ ಆತನಿರುವ ಬಸ್ಸನ್ನು ನಿಲ್ಲಿಸಿ ಆತನನ್ನು ಕೆಳಗಿಳಿಸುವುದಿಲ್ಲ. ಆತನನ್ನು ಜಾತಿಸೂಚಕ ಪದಗಳಲ್ಲಿ ಕರೆದರೆ ಅದು ಶಿಕ್ಷಾರ್ಹ ಅಪರಾಧ. ಭಾರತ ಸಂತಸ ಪಡುವಷ್ಟು ಬದಲಾಗಿದೆ. ಮೀಸಲಾತಿಯಂತೂ ಅತಿರೇಖವೆನ್ನುವಷ್ಟು ವ್ಯಾಪಿಸಿ ಮೇಲ್ವರ್ಗಗಳೇ ಶೋಷಣೆಗೆ ಒಳಗಾಗಿವೆ. ದಲಿತರಿಗೆ ಸರ್ಕಾರ ಸಾಕಷ್ಟು ಸ್ಕಾಲರ್ ಶಿಪ್ ಗಳನ್ನು, ಶುಲ್ಕ ವಿನಾಯತಿಯನ್ನು ನೀಡಿದೆ. ಸರ್ಕಾರಿ ಕೆಲಸಗಳ ನೇಮಕಾತಿಯಲ್ಲೂ ಮೇಲ್ವರ್ಗದ ಹುಡುಗನೊಬ್ಬ ಸರ್ಕಾರೀ ಕೆಲಸ ಗಿಟ್ಟಿಸುವುದೇ ಕಷ್ಟವಾಗುವಷ್ಟು  ಮೀಸಲಾತಿಯನ್ನು ಇಟ್ಟಿದೆ. ರಾಜ್ಯಸಭೆ, ಲೋಕಸಭೆ, ವಿಧಾನಸಭೆಗಳಲ್ಲೂ ಮೀಸಲಾತಿ ಇದ್ದೇ ಇದೆ. ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ದಲಿತರು ಇವತ್ತು ಖಂಡಿತ ಅಲಂಕರಿಸಿದ್ದಾರೆ. ಆದರೂ ಈ ಪೂರ್ವಗ್ರಹ ಪೀಡಿತರದ್ದು "ಭಾರತ ದಲಿತರನ್ನು ಶೋಷಿಸುವ ರಾಷ್ಟ್ರ" ಅಂತ ಬಿಂಬಿಸುವುದೇ ಫುಲ್ ಟೈಮ್ ಕೆಲಸ. ಇವರ ಸ್ವಾರ್ಥಸಾಧನೆಗಾಗಿ ಅಂತರಾಷ್ಟ್ರೀಯ  ಮಟ್ಟದಲ್ಲಿ ಭಾರತದ ಮರ್ಯಾದೆ ಹೋಗುತ್ತೆ ಕಣ್ರೀ... "Rohith: The student who died for Dalit rights" ಅಂತ ಬಿಬಿಸಿ ಹೆಡ್ಡಿಂಗ್ ಕೊಡುತ್ತೆ. "...,it(Caste system) remains an influential force in Indian society" ಅಂತ ವಾಷಿಂಗ್ ಟನ್ ಪೋಸ್ಟ್ ಬರೆಯುತ್ತೆ. 9/11ರ ನಂತರ ಅವರ  1200 ಅಮಾಯಕ ಮುಸ್ಲೀಮರನ್ನು ಚಿತ್ರಹಿಂಸೆಕೊಟ್ಟು ವರ್ಷಗಳ ನಂತರ ಬಿಟ್ಟ ಅಮೇರಿಕೆಯಿಂದ ನಾವು ಜಾತ್ಯತೀತತೆಯ ಬಗ್ಗೆ ಪಾಠ ಕಲಿಯಬೇಕೇನು?
     ಹೇಗೆ ಬಲಪಂಥೀಯರಿಗೆ ಮದರ್ ಥೆರೇಸಾ ಕೂಡ ವಿಲನ್ ಆಗಿ ಕಾಣಿಸುತ್ತಾರೋ, ಹಾಗೇ ಎಡಪಂಥೀಯರಿಗೆ ಕೆಲವನ್ನು ಕಂಡರೆ ಮೈಎಲ್ಲಾ ಉರಿ. ಅವರಿಗೆ ಆರ್ ಎಸ್ಎಸ್  ಕಂಡರಾಗುವುದಿಲ್ಲ. ಹಿಂದುತ್ವ ಅಂದರೆ ಆಗುವುದಿಲ್ಲ. ಮೇಲ್ವರ್ಗದವರ ನೆರಳು ಕಂಡರೂ ಆಗುವುದಿಲ್ಲ. ಬ್ಬಾಯ್ಬಿಟ್ಟರೆ " ಅವರು ಪುರೋಹಿತಶಾಹಿ, ದಬ್ಬಾಳಿಕೆಗಾರರು" ಅಂತೆಲ್ಲ ವಟಗುಡುತ್ತಾರೆ. ಕೇಸರಿ ಬಣ್ಣ ಕಂಡರೂ ಆಗುವುದಿಲ್ಲ! ರೋಹಿತ್ ಕೂಡ ತನ್ನ ಮನೆಯಲ್ಲಿ ಕೇಸರಿ ಸೀರೆ ಕಂಡರೂ ಹರಿದು ಬಿಸಾಡುತ್ತೇನೆ ಅಂದಿದ್ದ! ಎಬಿವಿಪಿಯ ಕೇಸರಿ ಪೋಸ್ಟರ್ ನನ್ನೂ ಹರಿದು ಹಾಕಿದ್ದ. ಅವರು ಹಿಂದುತ್ವವನ್ನು ಎಷ್ಟು ದ್ವೆಷಿಸುತ್ತಾರೆಂದರೆ, ಉಗ್ರಗಾಮಿಗಳನ್ನು ಪ್ರೀತಿಸುವಷ್ಟು! ಯಾಕೂಬ್ ನನ್ನು ಗಲ್ಲಿಗೇರಿಸಬಾರದು ಅನ್ನುತ್ತಾರೆ. ನಾಳೆ ದಾವೂದ್ ಸಿಕ್ಕರೆ ಅವನಿಗೆ ಮೊದಲು ಬಿರಿಯಾನಿ ತಿನ್ನಿಸಬೇಕು ಅನ್ನುತ್ತಾರೆ. ಅವರು ಈಗಿನ ಕಾಲದಲ್ಲಿ ಅಕ್ಷರಷಃ ನಿರುಪದ್ರವಿಯಾಗಿರುವ ಬ್ರಾಹ್ಮಣರನ್ನು ಶತಾಯುಗತಾಯು ದ್ವೇಷಿಸುತ್ತಾರೆ. ಬ್ರಾಹ್ಮಣರು ಸಸ್ಯಹಾರಿಗಳೆಂಬ ಕಾರಣಕ್ಕೆ, ಸಸ್ಯಾಹಾರವನ್ನೂ ದ್ವೇಷಿಸುತ್ತಾರೆ! ಹಿಂದುತ್ವ ಗೋವನ್ನು ಪೋಜಿಸುತ್ತದೆಂಬ ಕಾರಣಕ್ಕೆ ಗೋಮಾಂಸ ತಿನ್ನುವ ಹಬ್ಬಗಳನ್ನೆ  ಆಚರಿಸುತ್ತಾರೆ. ರೋಹಿತ್ ಮತ್ತು ಸಂಗಡಿಗರು ಕೂಡ ಅಂಥದೊಂದು ಪ್ರಯತ್ನ ಮಾಡಿದ್ದರು.
 
     ಕೆಲವರಂತೂ ಬರೆದದ್ದು ನೋಡಬೇಕು. ವಿದ್ಯಾಸಂಸ್ಥೆಗಳಲ್ಲಿ ಮೀಸಲಾತಿಯಿಂದ ಬಂದ ವಿದ್ಯಾರ್ಥಿಗಳನ್ನು ಮಾರ್ಕ್ ಮಾಡಿಕೊಂಡಿರುತ್ತಾರಂತೆ. ನಂತರ ಮೇಲ್ವರ್ಗದವರು ಅಂಥವರನ್ನು ಶೋಷಿಸುತ್ತಾರಂತೆ. ಇನ್ನೂ ಎಷ್ಟು ಹಸಿ ಸುಳ್ಳುಗಳು ಬೇಕು?  ಸ್ವಾಮೀ, ಇವತ್ತು ನಿಜಾರ್ಥದಲ್ಲಿ ತುಳಿತಕ್ಕೊಳಗಾಗುತ್ತಿರುವವರು ಮೇಲ್ವರ್ಗದವರು. ಶುಧ್ಧ ಜನರಲ್ ಮೆರಿಟ್ ಹುಡುಗರು ಇವತ್ತು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟು ಪಡೆಯಲು ಎಷ್ಟು ಮೀಸಲಾತಿಗಳನ್ನು ದಾಟಬೇಕು ಗೊತ್ತೇನು? ಇಪ್ಪತ್ತಕ್ಕೂ ಹೆಚ್ಚು ಮೀಸಲಾತಿ ವರ್ಗಗಳು ಸೀಟುಗಳನ್ನು ಹರಿದು ಹಂಚಿಕೊಂಡ ನಂತರ ಇನ್ನೂ ಏನಾದರು ಉಳಿದಿದ್ದರೆ ಅದನ್ನು ಇವರಿಗೆ ಕೊಡುತ್ತಾರೆ. ಒಂದು ಉದಾಹರಣೆ ಕೊಟ್ಟೆ ಅಷ್ಟೆ. ಶೋಷಿತವಾದ ಮತ್ತೊಂದು ವರ್ಗ ಇದೆ ಸ್ವಾಮಿ. ಆದರೆ ಆ ವರ್ಗವೇ "ದಬ್ಬಾಳಿಕೆಗಾರ, ಪುರೋಹಿತಶಾಹಿ" ಅನ್ನಿಸಿಕೊಂಡು ಬಿಟ್ಟಿದೆ. ಆದರಿಂದ ಅದಕ್ಕೂ ನ್ಯಾಯ ಕೊಡಿಸಲು ನಿಮ್ಮಂತ ಬುದ್ಧಿಜೀವಿಗಳೂ  ಬರುವುದಿಲ್ಲ, ಆ ವರ್ಗದ ವೋಟುಗಳು ಅಷ್ಟೇನು ಮುಖ್ಯವಾದವುಗಳಲ್ಲವಾದ್ದರಿಂದ ರಾಜಕಾರಣಿಗಳೂ ಬರುವುದಿಲ್ಲ.  ನಾವೂ ಸುಮ್ಮನಿದ್ದು ಸುಮ್ಮನಿದ್ದೆ ಇವತ್ತು ಸಾಧ್ಯವಾಗದೆ ಲೇಖನಿ ಹಿಡಿದಿರುವುದು.
 
    See, I want to be clear. ನಾನು ಲೇಖನದ ಮೊದಲಲ್ಲೇ ಹೇಳಿದ್ದೇನಲ್ಲ? ನಿಮ್ಮ ಮಿಥ್ಯಾವಾದಗಳೆಲ್ಲ ತೊಲಗಿ ಒಂದಲ್ಲ ಒಂದು ದಿನ ಸತ್ಯ ಹೊರಬರುತ್ತೆ. ಹೀಗೆಲ್ಲ ಹೊಡೆದಾಡುಕೊಂಡಿದ್ದರೆ ನಾವೆಲ್ಲ ಖಂಡಿತ ಉದ್ದಾರವಾಗುವುದಿಲ್ಲ ಕಣ್ರೀ. ಈ ದೇಶಕ್ಕೊಂದು ಸೀರಿಯಸ್ ನೆಸ್ ಬೇಕಿದೆ. ಅತಿರೇಖವಾಗಿಹೋಗಿರುವ ಅವೈಜ್ಞಾನಿಕ ಮೀಸಲಾತಿಗಳನ್ನು ಕಮ್ಮಿ ಮಾಡಿ, ಹಿತಮಿತವಾಗಿ ವೈಜ್ಞಾನಿಕ ಮೀಸಲಾತಿಗಳ ಪೊರೆದು, ಸಮಾಜದಲ್ಲೊಂದು ಸಂಯಮ ಮೂಡಿಸಬೇಕಿದೆ. ಆಯಾ ರಂಗಗಳಲ್ಲಿ ನಿಜವಾದ ಪ್ರತಿಭಾವಂತರನ್ನು ಹೆಕ್ಕಿ, ಸರ್ವರೂ ಎದ್ದುನಿಲ್ಲುವಂತೆ ಮಾಡಬೇಕಿದೆ. ನೀವು ನಿಮ್ಮ ಹೊಟ್ಟೆಪಾಡಿಗೆ, ನಿಮ್ಮ ಸ್ವಾರ್ಥಸಾಧನೆಗೆ ಜೀವನ ವ್ಯಯಿಸಿಬಿಟ್ಟರೆ ಇದನ್ನೆಲ್ಲಾ ಮಾಡುವುದು ಯಾರು? ಭಾರತ ವಿಶ್ವಗುರು ಆಗುವುದು ಯಾವಾಗ? ಪಾಶ್ಚಿಮಾತ್ಯ ದೇಶಗಳು ಯಾಕೆ ಮುಂದುವರಿದಿವೆ ಗೊತ್ತಾ? ಅಲ್ಲಿ ಜನ ಇಂಥ ಕೆಲಸಕ್ಕೆ ಬಾರದ ವಿಷಯಗಳ ಬಿಟ್ಟು ದೇಶದ ಬಗ್ಗೆ ಚಿಂತಿಸುತ್ತಾರೆ. ದೇಶದ ವಿಷಯ ಬಂದರೆ ಸರ್ವರೂ ಒಂದಾಗುತ್ತಾರೆ. ಬಿಡಿ, ಸಮಾಜದಲ್ಲಿ ಸರಿಮಾಡಲಾಗದಷ್ಟು ಕಂದಕಗಳನ್ನು ನೀವು ಸೃಷ್ಟಿಸಿದ್ದರೂ ಒಂದಲ್ಲ ಒಂದು ದಿನ ಅವೆಲ್ಲ ಸರಿಯಾಗುತ್ತೆ. ಯಾಕೆ ಗೊತ್ತಾ? "ಸತ್ಯಮೇವ ಜಯತೆ"!



 

   
   


   
   






No comments:

Post a Comment