Powered By Blogger

Thursday, July 7, 2016

ಭಗವಂತನಿಂದ ಲೋಕಕ್ಕೆ ಬಂಪರ್ ಕೊಡುಗೆ, ಎಲ್ರಿಗೂ ಈ ವರ್ಷ ಒಂದು ಸೆಕೆಂಡ್ ಎಕ್ಸ್ಟ್ರಾ!


   
ಗಾಬರಿ ಆಗಬೇಡಿ. ವಿಜ್ನಾನವನ್ನ ಅದಕ್ಕೇ ’ರೋಚಕ’ ಅಂತ ಬಣ್ಣಿಸುವುದು. ಸಮಾಧಾನದಿಂದ ಓದಿ.
ವಿಜ್ನಾನ ಜಗತ್ತು ಅಧಿಕೃತ ಅಂತ ಒಪ್ಪಿಕೊಂಡು ಬಂದ ಕಾಲಗಣನೆಯ ವ್ಯವಸ್ಥೆಯೊಂದಿದೆ. UTC(Coordinated Universal Time) ಅಂತ. ಇಂತಹ ಅತೀ ಸೂಕ್ಷ್ಮ ಮತ್ತು ಕರಾರುವಕ್ಕಾದ ವ್ಯವಸ್ಥೆಯನ್ನು ಸಂಭಾಳಿಸಲು ವಿಜ್ನಾನಿಗಳು ಪರಮಾಣು ಗಡಿಯಾರ(Atomic Clock)ಗಳ ಮೊರೆಹೋಗುತ್ತಾರೆ. ಈ ಪರಮಾಣು ಗಡಿಯಾರಗಳ ನಿಖರತೆ ನಮ್ಮ ಊಹೆಗೂ ನಿಲುಕದ್ದು. ಪೂರ್ಣಚಂದ್ರ ತೇಜಸ್ವಿಯವರ ದೇಶಕಾಲದಲ್ಲೋ, ’ವಿಸ್ಮಯ ವಿಶ್ವ’ದಲ್ಲೋ ಹೈಸ್ಕೂಲಿನಲ್ಲಿರುವಾಗ ಯಾವಾಗಲೋ ಇವುಗಳ ಕುರಿತು ಓದಿ ನಿಬ್ಬೆರಗಾಗಿದ್ದೆ. ಸೀಜಿಯಮ್-೧೩೩ ಎಂಬ ಧಾತು(element)ವನ್ನು ಉಪಯೋಗಿಸಿ, ಸಾಮಾನ್ಯವಾಗಿ ಇವುಗಳನ್ನು ತಯಾರಿಸಿರುತ್ತಾರೆ. ಜಗತ್ತಿನ ಅತ್ಯಂತ ನಿಖರ ಸೀಜಿಯಮ್ ಗಡಿಯಾರಕ್ಕೆ ಒಂದು ಸೆಕೆಂಡ್ ಪೂರ್ಣವಾಗುವುದು , ತನ್ನೊಳಗಿನ ಅಣು 9,19,26,31,970 ಬಾರಿ ಎರಡು ಎನರ್ಜಿ ಲೆವೆಲ್ ಗಳ ನಡುವೆ ಜಿಗಿದಾಡಿ, ವಿಕಿರಣಚಕ್ರವನ್ನು ಪೂರ್ಣಗೊಳಿಸಿದಾಗ!!! ಹಾಗಾಗಿ ಇವುಗಳು ಎಷ್ಟು ಕರಾರುವಕ್ಕಾಗಿ ಇರುತ್ತವೆಯೆಂದರೆ, ಆಕಾಶಕಾಯಗಳು ತಮ್ಮ ಚಲನವಲನದಲ್ಲಿ one billionth of a second ಹೆಚ್ಹುಕಮ್ಮಿ ಮಾಡಿದರೂ ಇವು ವಿಜ್ನಾನಿಗಳಿಗೆ ಹೋಗಿ ಚಾಡಿ ಹೇಳಿಬಿಡುತ್ತವೆ! ತಲೆಕೆಡಿಸಿಕೊಂಡು, ಇತರರ ತಲೆಯನ್ನೂ ಕೆಡಿಸಬೇಕೆಂದು ಇಪ್ಪತ್ನಾಲ್ಕು ಗಂಟೆ ಹಪಹಪಿಸುತ್ತಿರುವ ವಿಜ್ನಾನಿಗಳು ಸುಮ್ಮನೆ ಬಿಡುತ್ತಾರಾ? ಅದೂ ಭೂಮಿಯೇ ತನ್ನ ಸುತ್ತುವಿಕೆಯಲ್ಲಿ ಸೆಕೆಂಡ್ ಗಳ ಎಡವಟ್ಟು ಮಾಡಿಕೊಂಡಿತು ಅಂದರೆ, ವಿಜ್ನಾನಿಗಳಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ, ಈ ಅತ್ಯಾಧುನಿಕ ಯುಗದಲ್ಲಿ ಇದೊಂಥರ ಆಕಾಶ ತಲೆ ಮೇಲೆ ಬಿದ್ದ ಹಾಗೆಯೇ ಅನ್ನಿ, ಯಾಕೆಂದರೆ ಭೂಮಿಯ ಸುತ್ತುವಿಕೆಯ ಏರುಪೇರು ನಮ್ಮ ಕಾಲಗಣನೆಯನ್ನೂ ಮಂಗಮಾಡಿಬಿಡುತ್ತದೆ! ನಾವು ಕಾಲಗಣನೆಯನ್ನು ಸರಿಮಾಡಿಕೊಳ್ಳದೇ ಉಪೇಕ್ಷಿಸಿಬಿಟ್ಟೆವು ಅಂದರೆ, ಸೂರ್ಯನ ಸ್ಥಾನಕ್ಕೂ ನಮ್ಮ ಕಾಲಗಣನಾ ವ್ಯವಸ್ಥೆಗೂ ಲಿಂಕೇ ತಪ್ಪಿಹೋಗುತ್ತೆ. ಸೌರಮಂಡಲದಲ್ಲಿ ಅವ್ಯಾಹತವಾಗಿ ಹರಿಯುತ್ತಿರುವ ಕಾಲ ಮತ್ತು ನಾವು ನಮ್ದೇ ಸರಿ ಅಂತ ಲೆಕ್ಕ ಮಾಡುತ್ತಿರುವ ಟೈಮೂ ಸಿಂಕೇ ಆಗುವುದಿಲ್ಲ.
    International Earth Rotation And Reference Systems Service(IERS) ದೂರಾತಿದೂರದ ಗ್ಯಾಲಾಕ್ಸಿಗಳಿಂದ ಬರುವ ಬೆಳಕು-ವಿಕಿರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಆಕಾಶಕಾಯಗಳ ಚಲನಾ ಸಮಯದ ಏರುಪೇರುಗಳನ್ನು ಲೆಕ್ಕಹಾಕುತ್ತದೆ. ಪರಮಾಣು ಗಡಿಯಾರಗಳ ಪ್ರಕಾರ ದಿನವೊಂದಕ್ಕೆ ೮೬೪೦೦ ಸೆಕೆಂಡ್ ಗಳು ಇರಬೇಕು. ಭೂಮಿ ತನ್ನ ಪಥದಲ್ಲಿ ೦.೯ ಸೆಕೆಂಡ್ ಅಥವಾ ಹೆಚ್ಹು ಏರುಪೇರು ಮಾಡಿಕೊಂಡರೆ, “ಈ ವರ್ಷ ಒಂದು ಸೆಕೆಂಡ್ ಎಕ್ಸ್ಟ್ರಾ ಸೇರಿಸಿಕೊಳ್ರಪೋ..” ಅಂತ IERS ಆಜ್ನೆ ಮಾಡುತ್ತೆ. ಇದನ್ನ ವೈಜ್ನಾನಿಕ ಪರಿಭಾಷೆಯಲ್ಲಿ leap second ಅಂತಾರೆ. ಅದನ್ನು ಅನುಭವಿಸುವ ಭಾಗ್ಯ ನಮಗೆ ಈ ವರ್ಷ ಬಂದಿದೆ. ಅಂದರೆ, ಈ ವರ್ಷ ಡಿಸೆಂಬರ್ ೩೧ರ ರಾತ್ರಿ 11:59 ಆದಮೇಲೆ 11:60 ಆಗಲಿದೆ, ನಂತರ ಹನ್ನೆರಡು ಗಂಟೆ ಆಗಲಿದೆ!! ಇತ್ತೀಚಿನ ಉದಾಹರಣೆಯಾಗಿ ೨೦೧೫ರ ಜುಲೈ ಮೂವತ್ತಕ್ಕೆ ಒಂದು ಲೀಪ್ ಸೆಕೆಂಡ್ ಸೇರಿಸಿದ್ದರು. ೧೯೭೨ರಿಂದ ಇದುವರೆಗೆ ಹೀಗೇ ೨೬ ಲೀಪ್ ಸೆಕೆಂಡ್ ಗಳನ್ನ ಸೇರಿಸಿಕೊಳ್ಳಲಾಗಿದೆ! ಯಾವುದೇ ಸೆಕೆಂಡ್ ಅನ್ನು ಕಾಲಗಣನೆಯಿಂದ “ನೀನು ಹೆಚ್ಹು, ನಮಗೆ ಬೇಡ” ಅಂತ ಇದುವರೆಗೆ ತೆಗೆದ ಘಟನೆ ಇಲ್ಲ. ಹೀಗೇ ಸೇರಿಸಿಕೊಂಡು, ನಾವು ಹೊಂದಿಸಿಕೊಂಡ ಟೈಮು ಪರಮಾಣು ಗಡಿಯಾರ ಹೇಳುವುದಕ್ಕಿಂತ ೩೬ ಸೆಕೆಂಡ್ ಹಿಂದಿದೆ! ಆದ್ದರಿಂದ “ಹೀಗೆಲ್ಲ ದಾರೀಲಿ ಹೋಗಿಬರೋ ಸೆಕೆಂಡುಗಳು ’ನಾನೂ ಬರ್ತೀನಿ’ ಅಂದರೆ ಸೇರಿಸಿಕೊಳ್ಳಬೇಡಿ, ಕಂಪ್ಯೂಟರ್ ಸಿಸ್ಟಮ್ ಗಳಿಗೆ ತೊಂದರೆಯಾಗುತ್ತೆ” ಅಂತ ಕೆಲವರ ಅಳಲು. “ನಿಮ್ಮ ಕಂಪ್ಯೂಟರ್ ಸಿಸ್ಟಮ್ ಗಳು ತಲೆಕೆಳಗಾಗದಂತೆ ಏನಾದ್ರೂ ಮಾಡಿಕೊಳ್ಳಿ ಅಂತಲೇ ಆರು ತಿಂಗಳ ಮೊದಲೇ ಲೀಪ್ ಸೆಕೆಂಡ್ ಸೇರಿಸುವುದರ ಬಗ್ಗೆ ಹೇಳುತ್ತಿದ್ದೇವೆ” ಅನ್ನುವುದು ವಿಜ್ನಾನಿಗಳ ಕಣ್ಣೊರೆಸುವಿಕೆ. ಅಷ್ಟಕ್ಕೂ, ಸೇರಿಕೊಳ್ಳದೇ ಏನು ಮಾಡಲು ಸಾಧ್ಯ? ಸೇರಿಸಿಕೊಳ್ಳದೇ ಸಾಗಿದರೆ ೨೧೦೦ನೇ ಇಸವಿಯ ಹೊತ್ತಿಗೆ ಸೂರ್ಯನ ಮತ್ತು ನಮ್ಮ ಕಾಲಕ್ಕೆ ಎರಡು ಮೂರು ನಿಮಿಷ ವ್ಯತ್ಯಾಸವಿದ್ದುಬಿಡುತ್ತೆ. ೨೭೦೦ರ ಹೊತ್ತಿಗೆ ಈ ವ್ಯತ್ಯಾಸ ಬರೋಬ್ಬರಿ ಅರ್ಧಗಂಟೆಯಾಗಿಬಿಡುತ್ತೆ! ಆದ್ದರಿಂದ ಕಳೆದ ನವೆಂಬರಿನಲ್ಲೇ ಈ ಟೈಮಿಗೆ ಒಂದು ಪಂಚಾಯಿತಿ ತೀರ್ಮಾನ ಮಾಡಿಬಿಡೋಣ ಅಂದುಕೊಂಡಿದ್ದ ವಿಜ್ನಾನಿಗಳು, ೨೦೨೩ರವರೆಗೆ ಲೀಪ್ ಸೆಕೆಂಡ್ ಗಳ ಬಗ್ಗೆ ದೂರೆತ್ತಬೇಡಿ, ಆಮೇಲೆ ಬೇಕಾದ್ರೆ ನೋಡೋಣ ಅಂದುಬಿಟ್ಟಿದ್ದಾರೆ!
    ಅದೆಲ್ಲಾ ಏನಾದ್ರೂ ಮಾಡ್ಕೊಂಡು ಹಾಳಾಗ್ ಹೋಗಿ, ನಮಗೆ ಪ್ರತೀವರ್ಷ ಒಂದು ದಿನ ಹೆಚ್ಹಿಗೆ ರಜೆ ಸಿಗುವ ಹಾಗೆ ಏನಾದ್ರೂ ಟೈಮ್ ಅಡ್ಜಸ್ಟ್ ಮಾಡೋಕೆ ಆಗತ್ತಾ ಸ್ವಲ್ಪ ನೋಡಿ ಪ್ಲೀಸ್ ಅಂತ ವಿಜ್ನಾನಿಗಳನ್ನ ಕೇಳಿಕೊಳ್ಳುತ್ತಾ....  

#ವಿಸ್ಮಯ_ವಿಜ್ನಾನ-2







No comments:

Post a Comment