#IStandWithRohithChakrathirtha
ಭಗವದ್ಗೀತೆಯ ಒಂದು ಶ್ಲೋಕ “ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವ ಹಾಗೆ, ಮನುಷ್ಯ ಯಾವ ಧರ್ಮವನ್ನು ಅನುಸರಿಸಿದರೂ ಕೊನೆಗೆ ಬಂದು ನನ್ನನ್ನೇ ಸೇರಿಕೊಳ್ಳುತ್ತಾನೆ” ಅಂತ ಹೇಳುತ್ತೆ. ಆದ್ದರಿಂದ ಒಂದು ಧರ್ಮದ ಬಗ್ಗೆ ವಿಷಕಾರುವ ಸನ್ನಿವೇಷವೇ ಇಲ್ಲ. ಧರ್ಮ ಎಂಬುದು ಸಂಸ್ಕೃತಿಯ ಮತ್ತೊಂದು ರೂಪ ಅಷ್ಟೆ. ಅದೊಂದು ದೈವೀ ಪ್ರಜ್ನೆ. ಮನುಷ್ಯ ಸರಿ ದಾರಿಯಲ್ಲಿ ನಡೆಯಲು ಒಂದು ಆಧಾರ, ಒಂದು ಊರುಗೋಲು. ತನಗಿಷ್ಟ ಅನ್ನಿಸಿದ ಧರ್ಮವನ್ನು ಪಾಲಿಸಿದರೂ, ಒಬ್ಬ ಮನುಷ್ಯ ಮನುಷ್ಯನಾಗಿ ಮಾನವೀಯತೆಯಿಂದ, ನಿಸ್ವಾರ್ಥವಾಗಿ ಬದುಕಿದರೆ ಆತನ ಕೊನೆಗೆ ಪರಮಾತ್ಮನಲ್ಲೇ ಲೀನವಾಗುತ್ತಾನೆ ಅನ್ನುತ್ತೆ ಅಧ್ಯಾತ್ಮ. ವಿವೇಕಾನಂದರನ್ನು ವಿಶ್ವ ಇಷ್ಟ ಪಟ್ಟಿದ್ದು, ಅವರ ಸರ್ವಧರ್ಮ ಸಮನ್ವಯ ನಿಲುವಿಗೆ. ಭಾರತ ಯಾವತ್ತೂ ತನ್ನಲ್ಲಿ ಜನ್ಮ ತಳೆದ ಧರ್ಮ ಮಾತ್ರ ಶ್ರೇಷ್ಠ, ಬೇರೆಯದ್ದು ಕೀಳು ಅಂದೇ ಇಲ್ಲ. ಆದರೆ ಒಂದು ಧರ್ಮ ಅನ್ನುವುದನ್ನು ಒಂದು ವ್ಯಾಖ್ಯಾನದೊಳಗೆ ಕೂಡಿಹಾಕಿಬಿಡಲಾಗುವುದಿಲ್ಲ. ಆ ಧರ್ಮ ಹುಟ್ಟಿದಾಗ ಹೇಗೆ ಇತ್ತೋ, ಸಾಯುವಾಗಲೂ ಹಾಗೇ ಇರಬೇಕು ಅಂತೇನೂ ಇಲ್ಲ. ಅಷ್ಟಕ್ಕೂ ಒಂದು ಧರ್ಮ ಸಾಯದಂತೆ ಇರಬೇಕಾದರೆ, ಕಾಲಕಾಲಕ್ಕೆ ತನ್ನಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗತ್ತೆ. I mean, ತನ್ನನ್ನೇ ತಾನು ಕಾಲಕಾಲಕ್ಕೆ ಶುದ್ಧಿಪಡಿಸಿಕೊಂಡು ಮುಂದುವರಿಯಬೇಕಾಗತ್ತೆ. ಹೀಗೆ ಶುದ್ಧಿ ಪಡಿಸಿಕೊಳ್ಳಬೇಕೆಂದರೆ ತನ್ನನ್ನು ತಾನು ವಿಮರ್ಶನೆಗಳಿಗೆ ಒಡ್ಡಿಕೊಳ್ಳಬೇಕಾಗತ್ತೆ.
ಹಿಂದೂಧರ್ಮವನ್ನು ವಿಮರ್ಶಿಸಿದ, ಕಿವಿಹಿಂಡಿದ, ತಿದ್ದಿತೀಡಿದ ಸಾವಿರಾರು ಸಂತರು ಆಗಿಹೋಗಿದ್ದಾರೆ. ಇಂತಹ ಸಮಾಜ ಸುಧಾರಕರು ಹಿಂದೂ ಧರ್ಮದ ಒಳಗೂ ಇದ್ದರು, ಹೊರಗೂ ಇದ್ದರು. ಶಂಕರಾಚಾರ್ಯರಿಂದ ಹಿಡಿದು ಬಸವಣ್ಣನವರವರೆಗೆ, ರಾಜಾರಾಮ ಮೋಹನರಾಯರಿಂದ ಹಿಡಿದು ವಿವೇಕಾನಂದರವರೆಗೆ ನಾವು ಸಾವಿರಾರು ಚಿಂತಕರನ್ನು ಹೆಸರಿಸಬಹುದು. ಇಂತಹ ಸುಧಾರಕರಿಗೆ, ವಿಮರ್ಶಕರಿಗೆ, ಟೀಕಾಕಾರರಿಗೆ ಹಿಂದೂ ಧರ್ಮದ ಪ್ರಜ್ನಾವಂತ ವರ್ಗ ತಡೆ ಒಡ್ಡಿದ ಉದಾಹರಣೆ ಇಡೀ ಇತಿಹಾಸದಲ್ಲೇ ಇಲ್ಲ. ಹಿಂದೂ ಧರ್ಮ ಕಾಲಕ್ಕೆ ಒಗ್ಗಿಕೊಂಡು, ತಿದ್ದಿಕೊಂಡು ಬಂದಿದೆ. ಆ ಕಾರಣಕ್ಕಾಗಿ, ಇತಿಹಾಸದಲ್ಲಿ ಒಮ್ಮೊಮ್ಮೆ ನಶಿಸಿಹೋಗುವ ಹಂತ ತಲುಪಿದರೂ, ಮತ್ತೆ ಫೀನಿಕ್ಸ್ ನಂತೆ ಎದ್ದು ಬಂದಿದೆ. ಈ ವಿಮರ್ಶೆಗಳು, ಟೀಕೆಗಳು, ಆತ್ಮಾವಲೋಕನಗಳು ಹಿಂದೂ ಧರ್ಮವನ್ನು ಇನ್ನಷ್ಟು ಗಟ್ಟಿಗೊಳಿಸಿವೆ. ಆಧುನಿಕ ಭಾರತದಲ್ಲಂತೂ ಹಿಂದೂ ಧರ್ಮದ ಬಗ್ಗೆ ವ್ಯಕ್ತಿಗೊಂದರಂತೆ, ಬಾಯಿಗೆ ಬಂದ ಹಾಗೆ ಮಾತನಾಡಲಾಗಿದೆ, ಚಿತ್ರ ತೆಗೆಯಲಾಗಿದೆ, ಪುಸ್ತಕ ಬರೆಯಲಾಗಿದೆ, ಭಾಷಣ ಮಾಡಲಾಗಿದೆ, ಇದನ್ನು ಮಾಡಿದವರಿಗೆಲ್ಲ ಭರಪೂರ ಪ್ರಶಸ್ತಿಗಳನ್ನೂ ಕೊಡಲಾಗಿದೆ. ಆವಾಗ ಯಾವತ್ತೂ ಹಿಂದೂ ಧರ್ಮ ಬೀದಿಗಿಳಿದು ಹೂಂಕರಿಸಲಿಲ್ಲ. ಶಾಂತಚಿತ್ತದಿಂದ ಅವಲೋಕಿಸಿ ಮುನ್ನಡೆಯಿತು.
ಮೊನ್ನೆ ಹೊಸದಿಗಂತದಲ್ಲಿ Rohith Chakrathirtha ಅವರು ಬ್ರಿಗೆಟ್ ಗೇಬ್ರಿಯಲ್ ಎಂಬ ಲೇಖಕಿ ಬರೆದ ಇಸ್ಲಾಮ್ ಇತಿಹಾಸದ ಬಗೆಗಿನ ಲೇಖನವೊಂದನ್ನು ಅನುವಾದಿಸಿ ಬರೆದಿದ್ದರು. “ಇಸಿಸ್ ಹಿಂಸ್ರ ಮುಖದ ಹಿಂದಿದೆ ೧೪೦೦ ವರ್ಷಗಳ ಇತಿಹಾಸ” ಎಂದು. ಅದರಲ್ಲಿ ಇಸ್ಲಾಮ್ ಇತಿಹಾಸದ ಕೆಲವು ಘಟನೆಗಳ ಬಗ್ಗೆ ವಿವರವಿದೆ. ಅದು ಅನುವಾದ ಅಷ್ಟೆ. ನಾನು ಇತ್ತೀಚಿಗೆ ಭೈರಪ್ಪ ಅವರ ’ಆವರಣ’ ಕಾದಂಬರಿಯನ್ನು ಓದುತ್ತಿದ್ದೆ. ಅವರು ಅದರಲ್ಲಿ ಮೊಘಲ್ ಸಾಮ್ರಾಜ್ಯ ಹೇಗೆ ಭಾರತದ ಮೇಲೆ ತನ್ನ ಧರ್ಮವನ್ನು ಹೇರಲು ಪ್ರಯತ್ನಿಸಿತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ, ಸಾಕ್ಷಿಸಮೇತ ವಿವರಿಸಿದ್ದಾರೆ. ಆ ಕಾದಂಬರಿಯಲ್ಲೊಬ್ಬಳು ಲೇಖಕಿಯಿರುತ್ತಾಳೆ. ಅವಳೂ ಇದೇ ವಿಷಯದ ಬಗ್ಗೆ ಪುಸ್ತಕ ಬರೆದಿರುತ್ತಾಳೆ. ಕೊನೆಗೆ ಕಾದಂಬರಿಯ ಕ್ಲೈಮ್ಯಾಕ್ಸ್ ನಲ್ಲಿ, ಅವಳ ಪುಸ್ತಕವನ್ನು, ಆ ಪುಸ್ತಕದ ಜ್ವಲಂತ matterನನ್ನು ನೋಡಿ ಎಲ್ಲಾ ಪ್ರಕಾಶಕರೂ ಅದನ್ನು ಪ್ರಕಟಿಸಲು ಸ್ಪಷ್ಟವಾಗಿ ನಿರಾಕರಿಸಿಬಿಡುತ್ತಾರೆ. ಕೊನೆಗೆ ತನ್ನದೇ ಕರ್ಚಿನಲ್ಲಿ ಪ್ರಿಂಟ್ ಹಾಕಿಸಿ, ತಾನೇ ಡಿಸ್ಟ್ರಿಬ್ಯೂಟರ್ ಆಗಿ ಪಸರಿಸಲು ಲೇಖಕಿ ಪ್ರಯತ್ನಿಸುತ್ತಾಳೆ. ಹಾಗೆ ಮಾಡಿದಾಗ, ಪುಸ್ತಕದ ಬಗ್ಗೆ ದೊಡ್ಡ ದೊಡ್ಡ ಪ್ರತಿಭಟನೆಗಳಾಗಿ, ಅದರ ಬಗ್ಗೆ ಕಟು ವಿಮರ್ಶೆಗಳು ಬಂದು, ಆ ಪುಸ್ತಕವನ್ನ ಸರ್ಕಾರ ನಿಷೇಧಿಸಿ, ಮುಟ್ಟುಗೋಲು ಹಾಕಿಕೊಂಡುಬಿಡುತ್ತದೆ.
ಇತ್ತೀಚಿಗೆ ಕಮಲ್ ಹಾಸನ್ ರ ’ವಿಶ್ವರೂಪ” ಬಿಡುಗಡೆಯಾದಾಗಲೂ ಹೀಗೇ ಆಗಿತ್ತು. ಈಗ ರೋಹಿತ್ ಲೇಖನ ಬರೆದ ನಂತರವೂ ಹೀಗೇ ಆಗುತ್ತಿದೆ. ರೋಹಿತ್ ಗೆ ಬೆದರಿಕೆಗಳು ಬರುತ್ತಿವೆ. ಪ್ರಕಟಿಸಿದ ಪತ್ರಿಕೆಯ ಕಾರ್ಯಾಲಯದ ಫೋನುಗಳು ಬೆದರಿಕೆ ಕರೆಗಳನ್ನ ಸ್ವೀಕರಿಸುತ್ತಿವೆ. ಒಂದು ಪೋಲಿಸ್ ಕಂಪ್ಲೆಂಟ್ ಕೂಡ ಆಗಿಹೋಗಿದೆ. ಇನ್ನು ಆವತ್ತಿನ ಸಂಚಿಕೆಗಳನ್ನು ಹಿಂಪಡೆದು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದೊಂದು ಬಾಕಿ. ಅದೂ ರೋಹಿತ್ ಮಾಡಿದ್ದು, ಒಂದು ಅನುವಾದವನ್ನ, ಅದು ಅವರ ಸ್ವಂತ ವಿಚಾರಲಹರಿ ಅಲ್ಲ! ಒಂದು ಅನುವಾದಕ್ಕಾಗಿ ಒಬ್ಬ ಲೇಖಕನಿಗೆ ಬೆದರಿಕೆಗಳು ಬರುತ್ತವೆ ಅಂದರೆ, ಇದು ಯಾವ ರೀತಿಯ ಬೆಳವಣಿಗೆ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ಇತಿಹಾಸದ ಕೆಲವು ಕಟುಸತ್ಯಗಳನ್ನು ಒಪ್ಪಿಕೊಳ್ಳಬೇಕಾಗತ್ತೆ. ಒಬ್ಬ ಹಿಂದೂ ಆಗಿ, ಒಬ್ಬ ಬ್ರಾಹ್ಮಣ ಆಗಿ ನನ್ನ ಜಾತಿ ಹಾಗೂ ಧರ್ಮ ಇತಿಹಾಸದಲ್ಲಿ ತಪ್ಪೇ ಮಾಡಿಲ್ಲ ಅಂತ ನಾನು ಹೇಳಿದರೂ ಅದು ತಪ್ಪೇ ಆಗುತ್ತೆ. ನಾನಂತೂ ನನ್ನ ಧರ್ಮ ರೂಢಿಸಿಕೊಂಡಿದ್ದ ಕಂದಾಚಾರಗಳನ್ನ, ಅಸ್ಪೃಶ್ಯತೆಯನ್ನ ಕಟುವಾಗೇ ವಿರೋಧಿಸುತ್ತೇನೆ. ಹಾಗೇ ತಮ್ಮ ಧರ್ಮ ಇತಿಹಾಸದಲ್ಲಿ ಕ್ರೌರ್ಯ ಪ್ರದರ್ಶಿಸಿದ್ದುದನ್ನು ಅವರು ಒಪ್ಪಿಕೊಳ್ಳಬೇಕಾಗತ್ತೆ. ಅಕಸ್ಮಾತ್ ರೋಹಿತ್ ಅವ್ರು ಸುಳ್ಳು ಬರೆದಿದ್ದಾರೆ ಅಂತ ಇಟ್ಟುಕೊಳ್ಳಿ. ಸರಿ. ಅದು ಹೇಗೆ ಸುಳ್ಳು ಮತ್ತು ಸತ್ಯ ಏನು ಎಂಬುದನ್ನು ಪುರಾವೆ ಸಮೇತ ವಿವರಿಸಿ, ಇವರುಗಳು ಒಂದು counter article ಬರೆಯಬಹುದಲ್ಲ? ಬೇಕಾದರೆ ಹೊಸದಿಗಂತದಲ್ಲೇ ಪ್ರಕಟಿಸುವಂತೆ ಪತ್ರಿಕೆಗೆ ಕೇಳಿಕೊಳ್ಳೋಣ. ಅದನ್ನ ಬಿಟ್ಟು, ಹಿಂದಿಲ್ಲ ಮುಂದಿಲ್ಲ, ರೋಹಿತ್ ರ ಫೋಟೋ ಹಾಕಿ “ಇವ ಅದು ಬರೆದ, ಇದು ಬರೆದ, ಇವನಿಗೆ ಹಾಗೆ ಮಾಡೋಣ, ಹೀಗೆ ಮಾಡೋಣ” ಅಂತ ಕೂಗಾಡಿದರೆ? That’s not fair. ಸುಮ್ಮನೆ ವಿಷಕಾರುವುದರಲ್ಲಿ ಅರ್ಥವೇ ಇಲ್ಲ, ಆದ್ರೂ ಅವರು ಅದನ್ನೇ ಮುಂದುವರಿಸಿದರೆ, ನಾವು ಕನಿಕರಕ್ಕಿಂತ ಹೆಚ್ಚಿನದೇನನ್ನೂ ಕೊಡಲಾಗುವುದಿಲ್ಲ. ನಡೆಯುತ್ತಿರುವ ಬೆಳವಣಿಗೆಗಳನ್ನು ಸರಿಯೋ ತಪ್ಪೋ ಅಂತ ಜನರೇ ನಿರ್ಧರಿಸಲಿ.
No comments:
Post a Comment