Powered By Blogger

Wednesday, July 27, 2016

ಷಿಲ್ಲೊಂಗ್ ಗೆ ಹೋಗಿ ಬರುತ್ತೇನೆ ಅಂತ ಹೇಳಿ ಮಾತುತಪ್ಪಿದ ಕಲಾಮಜ್ಜನನ್ನು ನೆನೆದು....

ಅದು ರಾಮೇಶ್ವರಂ ಎಂಬ ಹದಾ ದೊಡ್ಡ ಊರು. ಭಾರತದ ಪದತಲದಲ್ಲಿ ಇರುವುದು. ದೇವಸ್ಥಾನದಿಂದಾಗಿ ಇಡೀ ಭಾರತಕ್ಕೇ ಪರಿಚಿತವಾಗಿರುವ ಸ್ಥಳ. ಆ ಗ್ರಾಮದಲ್ಲಿ ಸುಮಾರು ೮೫ ವರ್ಷಗಳ ಹಿಂದೆ ಜೈನುಲಾಬ್ದೀನ್ ಮತ್ತು ಆಶಿಯಾಮಾ ಎಂಬ ಮುಸ್ಲೀಮ್ ದಂಪತಿಗೆ ಹುಟ್ಟಿದ ಕೂಸು ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಮ್. ತಂದೆಯ ಬಳಿ ಒಂದು ಬೋಟು ಇತ್ತು. ಹಿಂದೂ ತೀರ್ಥಯಾತ್ರಿಗಳ ರಾಮೇಶ್ವರ ಮತ್ತು ಧನುಷ್ಕೋಟಿಗಳ ನಡುವಿನ ಸಂಚಾರಕ್ಕಾಗಿ, ಆತ ಅದನ್ನು ಮುಡಿಪಾಗಿಟ್ಟಿದ್ದ. ಜೈನುಲಾಬ್ದೀನ್ ಸ್ಥಳೀಯ ಮಸೀದಿಯಲ್ಲಿ ಇಮಾಮ್. ಅವರ ಊರಿನಲ್ಲಿ ಹಿಂದೂ-ಮುಸಲ್ಮಾನರೂ ಕಿಂಚಿತ್ತೂ ವೈಷಮ್ಯವಿಲ್ಲದೇ, ಅವರ ಹಬ್ಬಗಳಲ್ಲಿ ಇವರು, ಇವರ ಹಬ್ಬಗಳಲ್ಲಿ ಅವರು ಭಾಗವಹಿಸುತ್ತಾ ಸೌಹಾರ್ದತೆಯಿಂದಿದ್ದರು. ಕಲಾಂ ಕುಟುಂಬ ಕಡುಬಡತನದಲ್ಲಿದ್ದ ಒಂದು ಸಾಮಾನ್ಯ ಕುಟುಂಬ. ಇಂತಹ ತೀರಾ ಸಾಧಾರಣ ವಾತಾವರಣದಲ್ಲಿ ಬೆಳೆದ ಈ ಹುಡುಗ ತನ್ನ ಮುಂದಿಟ್ಟುಕೊಂಡಿದ್ದು ಮಾತ್ರ ಅಸಾಧರಣ ಕನಸುಗಳನ್ನ. ಪೇಪರ್ ಮಾರಿಯಾದರೂ ಶಾಲೆಗೆ ಹೋಗುವ ತುಡಿತ ಮತ್ತು ಆಶೆ ಆ ಹುಡುಗನಲ್ಲಿತ್ತು.

ಊರ ಶಾಲೆಯಲ್ಲಿ ಓದುವಾಗ, ಶಿಕ್ಷಕರೊಬ್ಬರು ಒಂದು ದಿನ ಸಮುದ್ರತೀರಕ್ಕೆ ಕರೆದುಕೊಂಡುಹೋಗಿ, ಹಾರುತ್ತಿರುವ ಪಕ್ಷಿ ಸಮೂಹವನ್ನು ತೋರಿಸಿ, ಪಕ್ಷಿಗಳು ಹೇಗೆ ಹಾರುತ್ತವೆ ಅನ್ನುವುದನ್ನ ರಸವತ್ತಾಗಿ ವಿವರಿಸಿದ್ದರಂತೆ. ಈ ಹುಡುಗನ ಮನಸ್ಸು ಬಾಹ್ಯಾಕಾಶದ ಕಡೆಗೆ ಇನ್ನಿಲ್ಲದ ಒಲವನ್ನೂ, ಕುತೂಹಲವನ್ನೂ ಬೆಳೆಸಿಕೊಂಡಿತು. ಮುಂದೆ ಈತ ಈ ದೇಶದ ಕ್ಷಿಪಣಿ ತಂತ್ರಜ್ನಾನಕ್ಕೆ ಕೊಟ್ಟ ಕೊಡುಗೆ ಈಗ ಇತಿಹಾಸ. ಶಿಕ್ಷಕರು ಮಕ್ಕಳಿಗೆ ಇಂತಹ ವಿಷಯಗಳನ್ನು ಹೇಳುವುದರ ಮಹತ್ವ ಮತ್ತು ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ರಾಷ್ಟ್ರಕ್ಕೆ ಎಂತಹ ವ್ಯಕ್ತಿಯನ್ನು ರೂಪಿಸಿಕೊಡಬಹುದು ಎಂಬುದನ್ನ ಇಂದಿನ ಶಿಕ್ಷಕರು ಮನಗಾಣಬೇಕು. ಬಡತನ ಮತ್ತು ಸರಳತೆಯಲ್ಲಿ ಬೆಳೆದ ಈ ಹುಡುಗನನ್ನು ಮುಂದೆ ರಾಕೆಟ್ ಇಂಜಿನಿಯರ್ರನ್ನಾಗಿ ಮಾಡಿದ್ದು, ನ್ಯೂಕ್ಲಿಯರ್ ತಂತ್ರಜ್ನಾನಿಯನ್ನಾಗಿ ಮಾಡಿದ್ದು, ಕೊನೆಗೆ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಆತ ತನ್ನ ಹೃದಯದೊಳಗೆ ಹುದುಗಿಟ್ಟುಕೊಂಡಿದ್ದ ಕನಸುಗಳು. ಆ ಕನಸುಗಳಿಗೆ ತಕ್ಕಂತೆ ಆತ ಚೂರೂ ಕದಲದೆ ಅವುಗಳ ಬೆನ್ನುಹತ್ತಿ ಅಗಾಧ ಶ್ರಮ ಪಟ್ಟಿದ್ದು. ಈತ ಸ್ಕಾಲರ್ ಶಿಪ್ ನಲ್ಲಿ ಓದಿ ಮಹಾನ್ ಸ್ಕಾಲರ್ ಆದ ಕಥೆ ಈ ಶತಮಾನದ ಅದ್ಭುತ ಕಥೆಗಳಲ್ಲೊಂದು!

     ಈ ದೇಶ ಕಲಾಮ್ರನ್ನು ಒಬ್ಬ DRDO ವಿಜ್ನಾನಿಯಾಗಿದ್ದಕ್ಕಾಗಿ ಇಷ್ಟಪಡಲಿಲ್ಲ. ಅವರು ಪೋಖ್ರಾನ್ ನಲ್ಲಿ ನಡೆಸಿದ ಅಣುಬಾಂಬ್ ಪರೀಕ್ಷೆಯ ಯಶಸ್ಸಿಗಾಗಿ ಅವರನ್ನು ಪ್ರೀತಿಸಲಿಲ್ಲ. ಹೆಸರೇ ಗೊತ್ತಾಗದೇ ಅವಧಿ ಮುಗಿಸಿರುವ ರಾಷ್ಟ್ರಪತಿಗಳಿರುವಾಗ, ಕಲಾಂ ನಮ್ಮ ರಾಷ್ಟ್ರಪತಿಯಾಗಿದ್ದರು ಅನ್ನುವ ಕಾರಣಕ್ಕೆ ಅವರನ್ನು ಜನ ಇಷ್ಟಪಡಲೇ ಇಲ್ಲ! ತಮಗೆ ತಾವೆ ಭಾರತ ರತ್ನ ಕೊಟ್ಟುಕೊಂಡಿರುವ ಉದಾಹರಣೆಗಳಿರುವ ಈ ದೇಶದಲ್ಲಿ ಕಲಾಂ, ಭಾರತರತ್ನ ಪ್ರಶಸ್ತಿಗೆ ಭಾಜನೆಯಾದ ವ್ಯಕ್ತಿ ಎಂಬ ಕಾರಣಕ್ಕೆ ಜನ ಅವರನ್ನು ಆರಾಧಿಸಲಿಲ್ಲ! ಈ ದೇಶ ಅವರನ್ನು ಎತ್ತಿ ಮುದ್ದಾಡಿಸಿದ್ದು ಅವರ ಮಗುವಿನಂತಹ ಮನಸ್ಸನ್ನ ನೋಡಿ. ಅಷ್ಟೊಂದು ಉನ್ನತ ಸ್ಥಾನಗಳಿಗೆ ಏರಿ, ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂದರೂ ಅವರು ನಡೆದುಕೊಳ್ಳುತ್ತಿದ್ದ ರೀತಿ, ತುಂಬುತ್ತಿದ್ದ ಸ್ಫೂರ್ತಿಯಿದೆಯಲ್ಲ, ಅದನ್ನು ನೋಡಿ! ಅವರು ಭಾರತದ ಬಗ್ಗೆ, ಭಾರತ ಯುವಶಕ್ತಿಯಬಗ್ಗೆ ಇಟ್ಟುಕೊಂಡಿದ್ದ ವಿಷನ್ ಇದೆಯಲ್ಲ? ಆ ಕಾರಣಕ್ಕೆ! ಅವರ ಪ್ರತಿಯೊಂದು ಮಾತಿನಲ್ಲೂ, ಅವರ ಪ್ರತಿಯೊಂದು ಪುಸ್ತಕದ ಪ್ರತಿಯೊಂದು ವಾಕ್ಯದಲ್ಲೂ, ಅವರು ತಮ್ಮ ಕರಿಯರ್ ನಲ್ಲಿ ಮಾಡಿದ ಪ್ರತಿಯೊಂದು ಕರ್ತವ್ಯದಲ್ಲೂ ವ್ಯಕ್ತವಾಗುತ್ತಿತ್ತಲ್ಲ ಈ ದೇಶದ ಬಗೆಗಿನ ನಿಸ್ವಾರ್ಥ ನಿಷ್ಠೆ, ಪ್ರ್ರೆತಿ, ಕಾಳಜಿ? ಆ ಕಾರಣಕ್ಕೆ! ಕಲಾಮಜ್ಜನ ಜಾತಿ ನೋಡಲಿಲ್ಲ, ಕಲಾಮಜ್ಜನ ರಾಜ್ಯ ನೋಡಲಿಲ್ಲ, ಕಲಾಮಜ್ಜನ ಭಾಷೆ ನೋಡಲಿಲ್ಲ, ಈ ದೇಶದ ಎಲ್ಲಾ ಧರ್ಮದ, ಎಲ್ಲ ರಾಜ್ಯಗಳ, ಎಲ್ಲಾ ಭಾಷೆಗಳ ಜನ ಕಲಾಂರನ್ನ ಹೃದಯದಲ್ಲಿಟ್ಟು ಪೂಜಿಸಿದ್ದು ಆತ ಈ ದೇಶದ ಮೇಲಿಟ್ಟುಕೊಂಡಿದ್ದ ಪ್ರೀತಿಯ ಅಗಾಧತೆಯ ನೋಡಿ, ಆತನ ಸ್ವಚ್ಛಂದ ಹೃದಯವನ್ನು ನೋಡಿ!

    “ಕನಸೆಂದರೆ ನೀವು ನಿದ್ದೆಯಲ್ಲಿ ಕಾಣುತ್ತೀರಲ್ಲ, ಅದಲ್ಲ ಕಣ್ರೋ, ನಿಜವಾದ ಕನಸು ನಿಮ್ಮನ್ನು ನಿದ್ರಿಸಲೇ ಬಿಡುವುದಿಲ್ಲ” ಅಂತ ನಗುನಗುತ್ತಲೇ ಹೇಳುತ್ತಿದ್ದ ಕಲಾಮಜ್ಜ, ಭಾರತೀಯ ಯುವಕರಲ್ಲಿ ಬಿತ್ತಿದ ಆಸೆ ಕನಸುಗಳಿವೆಯಲ್ಲ, ಅವು ಮುಂದೊಂದು ದಿನ ಫಲಪ್ರದವಾದಾಗ ಅವುಗಳ ಬೆಲೆ ನಮಗೆ ಗೊತ್ತಾಗುತ್ತೆ.  “Where there is righteousness in the heart, there is beauty in the character. When there is beauty in the character, there is harmony in the home. When there is harmony in the home, there is order in the nation. When there is order in the nation, there is peace in the world “ ಎಂದು ಹೇಳುತ್ತಾ ಲೋಕಸಂತೋಷವನ್ನೇ ಧ್ಯಾನಿಸಿದ ವಿಶ್ವಮಾನವ ಅವರು. ಅವರು ಹೋದಕಡೆಯೆಲ್ಲ ಒಂದು ಶಿಸ್ತು ಏರ್ಪಡುತ್ತಿತ್ತು. ಅವರು ಕಾಲಿಟ್ಟಲೆಲ್ಲ ಒಂದಷ್ಟು ಶ್ರಮಜೀವಿಗಳು ಸೃಷ್ಟಿಯಾಗುತ್ತಿದ್ದರು. ಅವರು ಮಾಡಿದ ಕೆಲಸಗಳಲೆಲ್ಲ ಒಂದು ಯೋಜನೆ ಸಿದ್ಧವಾಗಿರುತ್ತಿತ್ತು. ಅವರು ಅಲ್ಲಿದ್ದಷ್ಟು ದಿನ ಇದ್ದಷ್ಟು, ಚಟುವಟಿಕೆಯುಕ್ತವಾಗಿ ರಾಷ್ಟ್ರಪತಿಭವನ ತನ್ನ ಇತಿಹಾಸದಲ್ಲೇ ಇದ್ದಿದ್ದಿಲ್ಲ.

    ಕಲಾಮಜ್ಜ ಈ ದೇಶಕಂಡ ಅತ್ಯುತ್ತಮ ವಿಜ್ನಾನಿಗಳಲ್ಲಿ ಒಬ್ಬರಾಗಿರಬಹುದು. ಈ ದೇಶ ಕಂಡ ಅತ್ಯದ್ಭುತ ರಾಷ್ಟ್ರಪತಿಯಾಗಿರಬಹುದು. ಆದರೆ ಅವರು ಜೀವನದುದ್ದಕ್ಕೂ ಅತ್ಯಂತ ಇಷ್ಟಪಟ್ಟು ಮಾಡಿದ್ದು ಶಿಕ್ಷಕವೃತ್ತಿಯನ್ನು! ಅತ್ಯಂತ ಹೆಮ್ಮೆಯಿಂದ ಬೆರೆತಿದ್ದು ವಿದ್ಯಾರ್ಥಿಗಳೊಂದಿಗೆ! “ದಯವಿಟ್ಟು ರಾಷ್ಟ್ರಪತಿಯಾಗಿ” ಅಂತ ವಾಜಪೇಯಿಯವರು ಕರೆಮಾಡಿದಾಗ, ಮದ್ರಾಸಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಕ್ಲಾಸು ಮುಗಿಸಿಕೊಂಡುಬಂದಿದ್ದ ಕಲಾಂ ಮೇಷ್ಟ್ರಿಗೆ ಸುತಾರಂ ಇಷ್ಟವಿರಲಿಲ್ಲ.ರಾಷ್ಟ್ರಪತಿಯಾಗಿ ತಮ್ಮ ಅವಧಿ ಮುಗಿಸಿದ ನಂತರವೂ ತಕ್ಷಣಕ್ಕೆ ಹಿಂದಿರುಗಿದ್ದು ಶಿಕ್ಷಕವೃತ್ತಿಗೇ. ಕ್ಲಾಸಿನ ಎರಡು-ಮೂರು ಪಟ್ಟು ಹೆಚ್ಚು ಸ್ಟ್ರೆಂತ್ ಕಲಾಂ ಮೇಷ್ಟ್ರಿನ ಕ್ಲಾಸಿನಲ್ಲಿರುತ್ತಿತ್ತಂತೆ.. ಕೋರ್ಸಿಗೆ ಸಂಬಂಧವಿರದವರೂ ಕಲಾಂ ಮೇಷ್ಟ್ರ ಕ್ಲಾಸಿಗೆ ಬಂದು ಕೂತುಬಿಡುತ್ತಿದ್ದರಂತೆ. ವಿಖ್ಯಾತ ವಿಜ್ನಾನಿ ಪಾಠ ಮಾಡುತ್ತೇನೆಂದರೆ ಎಲ್ಲರೂ ಬಂದು ಕೂರುತ್ತಾರೆ ಅಂದುಕೊಳ್ಳಬೇಡಿ! ನನ್ನ ಕಾಲೇಜಿಗೇ ವಿಖ್ಯಾತ ವಿಜ್ನಾನಿಗಳು ಬಂದಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನವರ ಒತ್ತಾಯಕ್ಕೆ ಹ್ಯಾಪು ಮೋರೆ ಹಾಕಿಕೊಂಡು ಮೂರು ತಾಸು ಕೂತೆದ್ದು ಹೋಗುತ್ತಾರೆ, ಅಷ್ಟೆ. ಆದರೆ ಕಲಾಮಜ್ಜನ ಕ್ಲಾಸಿನಲ್ಲಿ ನಾಮುಂದು ತಾಮುಂದು ಅಂತ ವಿದ್ಯಾರ್ಥಿಗಳು ಕಿಕ್ಕಿರಿಯುತ್ತಿದ್ದುದು, ಕಲಾಂ ಒಬ್ಬ ಅದ್ಭುತ ಶಿಕ್ಷಕ ಎಂಬುದನ್ನು ನಿರಾಯಾಸವಾಗಿ ತೋರಿಸುತ್ತದೆ.

  ಸಂಕಟವಾಗುತ್ತೆ! ಕಲಾಮಜ್ಜ ಕನಸು ಕಟ್ಟಿದ ದೇಶದ ಇವತ್ತಿನ ಕೆಲ ಆಗುಹೋಗುಗಳನ್ನು ನೋಡಿದರೆ ಸಂಕಟವಾಗುತ್ತೆ! ಆದರೆ ಯಾವ ಋಣಾತ್ಮಕತೆಯ ಬಗ್ಗೆಯೂ ಚಿಂತಿಸದೇ ಈ ದೇಶಕ್ಕೊಂದು ವಿಷನ್ ನ ಭದ್ರ ಬುನಾದಿ ಹಾಕಿಕೊಟ್ಟರಲ್ಲ, ಆ ಕಲಾಮಜ್ಜನನ್ನು ಕಂಡರೆ ಗೌರವ ಉಕ್ಕಿಬರತ್ತೆ. ಎಂಬತ್ತರ ಇಳಿವಯಸ್ಸಿನಲ್ಲೂ, ಅವರು ಆವತ್ತು ಸಾಯುವ ದಿನ, IIMನಲ್ಲಿ ಭಾಷಣ ಮಾಡುತ್ತೇನೆಂದು ಹೋಗಿದ್ದರಲ್ಲ, ಅವರ ಚೈತನ್ಯ ಕಂಡು ದಿಗ್ಭ್ಹ್ರಮೆಯಾಗತ್ತೆ! ಕಲಾಮಜ್ಜನ ಬಳಿ “ನಿಮಗೆ ಅತ್ಯಂತ ಸಾರ್ಥಕ್ಯ ತಂದುಕೊಟ್ಟ ಸಂಶೋಧನೆ ಯಾವುದು?” ಎಂದು ಕೇಳಿದರೆ ಅವರು ಯಾವುದೋ ಕ್ಷಿಪಣಿಯ ಹೆಸರು ಹೇಳಿ ಕಾಲರ್ ಜಗ್ಗಿಕೊಳ್ಳುವುದಿಲ್ಲ. ಅಥವಾ ಅಣುಬಾಂಬಿನಸ್ಫೋಟವನ್ನು ನೆನಪಿಸಿಕೊಳ್ಳುವುದಿಲ್ಲ. ಕಾಲು ಕಳೆದುಕೊಂಡವರಿಗೆ ಕೃತಕ ಕಾಲುಗಳ ಮೂಲಕ ಒಮ್ಮೆ ನೆರವಾದದ್ದನ್ನು ನೆನಪಿಸಿಕೊಂಡು ಧನ್ಯರಾಗುತ್ತಾರೆ.

   ಯುರೋಪಿಯನ್ ಯೂನಿಯನ್ ನಲ್ಲಿ ಎಲ್ಲ ಎದ್ದುನಿಂತು ಚಪ್ಪಾಳೆ ಹೊಡೆಯುವಂತೆ ಭಾಷಣ ಮಾಡಬಲ್ಲ ಕಲಾಮಜ್ಜ, ಅಷ್ಟೇ ಪ್ರೀತಿಯಿಂದ ನಮ್ಮೂರ ವೇದಿಕೆಯಲ್ಲೂ ಊರ ಹೈಕ್ಳನ್ನು ಹುರಿದುಂಬಿಸಬಲ್ಲರು! ಬ್ರಿಟನ್ ನ ರಾಜಮನೆತನದ ಕುಡಿಗೆ ಆಅಟೋಗ್ರಾಫ್ ಬರೆದುಕೊಡಬಲ್ಲ ಕಲಾಮಜ್ಜ, ಒಡಿಶಾದ ಬಡಜೋಪಡಿಯಲ್ಲಿರುವ ನಾಲ್ಕನೇತಿಯ ಹುಡುಗನ ಪತ್ರಕ್ಕೂ ಮಮತೆಯಿಂದ ಉತ್ತರಿಸಬಲ್ಲರು. ಗಣ್ಯಾತಿಗಣ್ಯರನ್ನು ರಾಷ್ಟ್ರಪತಿ ಭವನಕ್ಕೆ ಬರಮಾಡಿಕೊಳ್ಳುವ ಗೌರವಾದರಗಳಲ್ಲೇ, ಮಕ್ಕಳ ದಿನಾಚರಣೆಗೆ ಅಂತ ದೇಶದ ಹಲವು ಭಾಗಗಳಿಂದ ಕರೆಸಿಕೊಂಡ ಮಕ್ಕಳನ್ನು ಬರಮಾಡಿಕೊಳ್ಳಲ್ಲರು. ಲ್ಯಾಬಿನಲ್ಲಿ ದಿನಗಟ್ಟಲೆ ಕುಳಿತು ಸಂಶೋಧನೆ ಮಾಡಬಲ್ಲ ಕಲಾಮಜ್ಜ, ಶಾಂತವಾಗಿ ಮನೆಯ ಜಗುಲಿಯಲ್ಲಿ ಕುಳಿತು ವೀಣೆಯನ್ನು ಸುಶ್ರಾವ್ಯವಾಗಿ ನುಡಿಸಬಲ್ಲರು. ಕುರಾನನ್ನು ಪವಿತ್ರವಾಗಿ ನೋಡುತ್ತಿದ್ದ ಕಲಾಮಜ್ಜ, ಬೆಳಿಗ್ಗೆ ಎದ್ದ ತಕ್ಷಣ ಭಗವದ್ಗೀತೆಯನ್ನು ಪಠಿಸುತ್ತಿದ್ದರು! ಕಾರ್ಯಕ್ರಮವೊಂದರಲ್ಲಿ ದೀಪ ಬೆಳಗಲು ಹೋದ ಕಲಾಮಜ್ಜ, ಒಂದುಕ್ಷಣ ನಿಂತು “ನೋಡಿ ನಾನು ಮುಸಲ್ಮಾನ. ಕೈಯಲ್ಲಿರುವ ಮೇಣದಬತ್ತಿ ಚರ್ಚ್ ನಲ್ಲಿ ಬಳಸುವಂತದ್ದು. ಆದರೆ ಹಿಂದೂಗಳ ಸಂಸ್ಕೃತಿಯಾದ ದೀಪವನ್ನು ಬೆಳಗುತ್ತಿದ್ದೇನೆ. ನಮ್ಮಲ್ಲಿ ಸೌಹಾರ್ದತೆಯೆಂಬುದು ಹೀಗಿರಬೇಕು” ಅಂತ ನಕ್ಕಿದ್ದರು. He was just awesome!

ಕಲಾಮಜ್ಜ ಯಾವ ಅಪವಾದಗಳಿಗೂ, ಯಾವ ಸೋಲುಗಳಿಗೂ ತಲೆ ಕೆಡಿಸಿಕೊಳ್ಳಲೂ ಇಲ್ಲ, ತಲೆ ಬಗ್ಗಿಸಲೂ ಇಲ್ಲ. ತನ್ನಷ್ಟಕ್ಕೆ ತಾನು ದೇಶದ ಒಳಿತನ್ನು ಮಾತ್ರ ಚಿಂತಿಸುತ್ತ, ಅದಕ್ಕಾಗಿ ಶ್ರಮಿಸುತ್ತಾ ಮುನ್ನೆಡೆದರು. ನಮ್ಮಲ್ಲಿ ಎಷ್ಟೋ ಜನ ಅವರನ್ನು ಒಮ್ಮೆಯೂ ಮಾಧ್ಯಮಗಳಲ್ಲಿ ಬಿಟ್ಟರೆ ನೋಡಿಯೇ ಇಲ್ಲ. ಆದರೆ ನಮ್ಮಂತವರೊಂದಿಗೂ, ಕಲಾಮಜ್ಜ ಭಾವನಾತ್ಮಕವಾಗಿ ಇಷ್ಟು ಗಟ್ಟಿ ಸಂಬಂಧ ಬೆಳೆಸಿಕೊಂಡಿದ್ದಾರೆ ಅಂದರೆ, ಅವರ ವ್ಯಕ್ತಿತ್ವದ ಅಗಾಧತೆಯನ್ನೊಮ್ಮೆ ಊಹಿಸಿಕೊಳ್ಳಿ. ಕಳೆದವರ್ಷ ಜುಲೈ ಇಪ್ಪಾತ್ತೇಳನೇ ತಾರೀಖಿನ ದಿನ ಬೆಳಿಗ್ಗೆ “ಶಿಲ್ಲೊಂಗ್ ಗೆ ಹೋಗಿ ಬರುತ್ತೇನೆ. ಸಂಜೆ ಸಿಗೋಣ’ ಅಂತ ಟ್ವೀಟ್ ಮಾಡಿ ತೆರಳಿದ ಕಲಾಮಜ್ಜ, ತಮ್ಮ ಮಾತು ಉಳಿಸಿಕೊಳ್ಳಲೇ ಇಲ್ಲ. ಮತ್ತೆ ಬರಲೇ ಇಲ್ಲ.

ಯಾರೂ ಶಾಶ್ವತವಲ್ಲ ಬಿಡಿ, ಅವರೂ ಅಲ್ಲ. ಆದರೆ ಅವರು ಹಾಕಿಕೊಟ್ಟ ಪಥವಿದೆಯಲ್ಲ, ಅದು ಶಾಶ್ವತ! ತೋರಿಸಿಕೊಟ್ಟ ಗುರಿ ಇದೆಯಲ್ಲ, ಅದು ಶಾಶ್ವತ! ಕಿವಿಹಿಂಡಿ ಹೇಳಿಕೊಟ್ಟ ಪಾಠಗಳಿವೆಯಲ್ಲ, ಅವು ಶಾಶ್ವತ! ದೇಶದ ಪ್ರತಿಷ್ಟಿತ ವಿಶ್ವವಿದ್ಯಾಲಯದ ಕಂಪೌಂಡ್ ಒಳಗಿನಿಂದ “ಭಾರತ್ ಕೀ ಬರ್ಬಾದೀ ತಕ್ ಜಂಗ್ ರಹೇಂಗೇ” ಅನ್ನುವ ಘೋಷಣೆಗಳನ್ನು ಕೇಳುವಾಗ ಹೊಟ್ಟೆ ಉರಿಯತ್ತೆ. ಆದರೆ ಯು ಟ್ಯೂಬಿನಲ್ಲಿ ಕಲಾಮಜ್ಜನ ಭಾಷಣವನ್ನು ಕೇಳಿದವರ ಸಂಖ್ಯೆ, ಹಾಗೆ ಕೂಗಿದವರ ಸಂಖ್ಯೆಗಿಂತ ಸಾವಿರಪಟ್ಟು ಹೆಚ್ಚಿದೆ ಅಂತ ನೋಡಿದಾಗ ಸಮಾಧಾನವೂ ಆಗತ್ತೆ. ಭಾರತ ರಾತ್ರಿ ಬೆಳಗಾಗುವುದರಲ್ಲಿ ಕಟ್ಟಿನಿಲ್ಲಿಸಿದ ರಾಷ್ಟ್ರವಲ್ಲ. ಕಲಾಮಜ್ಜನಂತಹ ಸಾವಿರಾರು ನಿಸ್ವಾರ್ಥ ಸಂತರು ಕಟ್ಟಿನಿಲ್ಲಿಸಿದ ಹೆಮ್ಮೆಯ ಭೂಮಿ. ಆ ಚೇತನಗಳ ದಿವ್ಯ ಮಾರ್ಗದರ್ಶನವನ್ನು ಅಳವಡಿಸಿಕೊಂಡು, ದೇಶಕ್ಕಾಗಿ ದುಡಿದರೆ ಅವುಗಳ ಆತ್ಮಕ್ಕೆ ಶಾಂತಿ ಸಿಕ್ಕೀತು. ಅಂದಹಾಗೆ ಕಲಾಮ್ ನಮ್ಮನ್ನಗಲಿ ನಿನ್ನೆಗೆ ಒಂದು ವರ್ಷ L




No comments:

Post a Comment