Powered By Blogger

Friday, April 10, 2015

ತಪ್ಪು ನಿಜವಾಗಿಯೂ ಲಖ್ವಿಯದ್ದಲ್ಲ!!!

      ಛೇ..ಛೇ.. ಪಾಕಿಸ್ತಾನದ ಕೋರ್ಟ್ ಗಳು ಹೇಳಿದ್ದರಲ್ಲಿ ತಪ್ಪೇನಿದೆ? ತಪ್ಪು ನಿಜವಾಗಿಯೂ  ಲಖ್ವಿದ್ದಲ್ಲ! ಹಫೀಜ್ ಸಯೀದ್ ನದ್ದೂ ಅಲ್ಲ!!
       26/11 ಅಲ್ಲಿ ಅತಿದೊಡ್ಡ ತಪ್ಪು ಮಾಡಿದ್ದು ಸಂದೀಪ್ ಉನ್ನಿಕೃಷ್ನನ್! ಎರಡನೆಯ ತಪ್ಪು ಮಾಡಿದ್ದು ಒಬ್ಬ ಸಾಮಾನ್ಯ ಪೋಲೀಸ್ ! ಒಂದೇಸಮನೆ ಎಕೆ-47ರಲ್ಲಿ ಗುಂಡು ಹೊಡೆಯುತ್ತಿದ್ದರೂ ಕದಲದೆ ಆತನನ್ನು ಬಿಗಿದಪ್ಪಿ ಹಿಡಿದು ಈ ದೇಶಕ್ಕೆ ಉಗ್ರನೊಬ್ಬನನ್ನು ಜೀವಂತ ಹಿಡಿದು ಕೊಟ್ಟನಲ್ಲ, ಹಾಗೆ ಮಾಡಿ, ತಾನು ಕೈಯಲ್ಲಿ ಕೇವಲ ಲಾಟಿ ಹಿಡಿದಿದ್ದರೂ ಕಸಬ್ ನನ್ನು ಬಿಗಿದಪ್ಪಿ, ಹಾಗೇ ಪ್ರಾಣಬಿಟ್ಟನಲ್ಲ ಆ ಸಬ್ ಇನ್ಸ್ಪೆಕ್ಟರ್ ತುಕಾರಾಮ್ ಒಂಬ್ಳೆ? ಆತ! ನಂತರದ ತಪ್ಪಿತಸ್ತರು ಆ ಕಾರ್ಯಾಚರಣೆಯಲ್ಲಿ ಕೊನೆಯುಸಿರೆಳೆದ ಉಳಿದ ಸೇನಾನಿಗಳು! ಹೌದು, ಆಶ್ಚರ್ಯವಾಗುತ್ತ? ತಾನು ಯಾವ ದೇಶಕ್ಕಾಗಿ ಪ್ರಾಣ ಬಿಟ್ಟನೋ ಅದೇ ದೇಶದ ಆಡಳಿತ ತನ್ನನ್ನು ದಾರುಣವಾಗಿ ಕೊಂದ ಪಾಕಿಸ್ತಾನಕ್ಕೆ ಮಸ್ಕಾ ಹೊಡೆಯುತ್ತೋ, ಪದೇ ಪದೇ ಕದನವಿರಾಮ ಉಲ್ಲಂಘಿಸಿ ಕೊನೆಗೆ ಸೈನಿಕರಿಬ್ಬರ ತಲೆ ಕಡಿದುಕೊಂದುಹೋದರೂ ಕೈಲಾಗದವರಂತೆ ಸುಮ್ಮನಿರುತ್ತೋ, ಆ ಪಾಕಿಸ್ತಾನದ ಪ್ರಧಾನಿಯನ್ನು ಬಾ ಬಾ ಅನ್ನುತ್ತೋ, 'ಪಾಕಿಸ್ತಾನದೊಂದಿಗಿನ ಶಾಂತಿ ಮಾತುಕತೆ' ಎಂಬ ಶುಧ್ಧ ನಾನ್ ಸೆನ್ಸ್ ಕಾನ್ಸೆಪ್ಟ್ ಅಡಿಯಲ್ಲಿ ತನ್ನೆಲ್ಲ ಹೇಡಿತನವನ್ನು ಸಮರ್ಥಿಸಿಕೊಳ್ಳುತ್ತೋ, ಆ ದೇಶಕ್ಕಾಗಿ ಸಂದೀಪ್ ಯಾಕೆ ತನ್ನ ತಂದೆತಾಯಿಯವರನ್ನು ಒಬ್ಬಂಟಿ ಮಾಡಿ ಹೋಗಬೇಕಿತ್ತು? ತುಕಾರಾಮ್ ಒಂಬ್ಳೆಯ ಹೆಸರು ನಮ್ಮ ದೇಶದ ಅನೇಕರಿಗೆ ಖಂಡಿತವಾಗಿಯೂ ಗೊತ್ತಿಲ್ಲ! ಹಾಗಂತ ಸಚಿನ್ ನ ಮಗನ ಹೆಸರು ಸಹಿತ ಗೊತ್ತಿರುತ್ತೆ! ಶಾರೂಕ್ ನ ಇಷ್ಟದ ರೆಸಪಿ, ದೀಪಿಕಾಳ ಮುಂದಿನ ಚಿತ್ರ, ಸಲ್ಮಾನ್ ನ ಅದಕ್ಕೂ ಮುಂದಿನ ಚಿತ್ರ ಇವೆಲ್ಲ ಗೊತ್ತಿರುತ್ತೆ! ಯವ್ಯಾವಾಗೋ ಒಂದುಸಲ ರೊಚ್ಚಿಗೆದ್ದು ಸೈನಿಕ ಪ್ರೀತಿ, ದೇಶಪ್ರೀತಿ ನೆನಪಾಗಿ ಮುಂದಿನ ಕ್ಷಣವೇ ಮರೆತು ಬಿಡುವ ಸ್ವಾರ್ಥಿ, ಕೃತಘ್ನ ಸಮಾಜಕ್ಕೆ ಆತ  ಯಾಕಾಗಿ ಮಾಡುತ್ತಿದ್ದ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಬಂದು ಕಸಬ್ ನನ್ನು ಬಿಗಿದಪ್ಪಿ ಹಿಡಿದನೋ? ರಾಮನಂತೆ ಗುರಿಯಿಡುತ್ತಿದ್ದ ಬಂಗಾರದಂಥ Encounter Specialist ವಿಜಯ ಸಾಲಸ್ಕರ್ ಯಾಕೆ ಸಿಡಿಯುತ್ತಿದ್ದ ಗುಂಡು-ಗ್ರೇನೇಡ್ ಗಳಿಗೆ ಎದೆ ಕೊಟ್ಟೆನೋ....?