Powered By Blogger

Saturday, December 31, 2016

ಕಾಲೇಜು ದಿನಗಳ ಮೆರವಣಿಗೆಯಿದು, ಉಘೇ ಕಿರಿಕ್ ಪಾರ್ಟಿ!

ಲಾಸ್ಟ್ ಬೆಂಚರ್ಸ್ ಹಾಗೂ ಫಸ್ಟ್ ಬೆಂಚರ್ಸ್! ಬಹುಶಃ ಇದು ಕಾಲೇಜುಗಳು ಶುರುವಾದ ದಿನದಿಂದಲೇ ಶುರುವಾದ  ಕ್ಲಾಸಿಫಿಕೇಶನ್ನು. ಉದಾಹರಿಸಲು ಅಪವಾದಗಳು  ಸಿಕ್ಕರೂ, ಸಾಮಾನ್ಯವಾಗಿ ಲಾಸ್ಟ್ ಬೆಂಚರ್ಗಳು ಅಂದರೆ ತರ್ಲೆ, ತುಂಟ, ಘಾಟಿ, ಬೇಜವಾಬ್ದಾರಿಯುತ, ಕ್ರೇಜಿ ವ್ಯಕ್ತಿತ್ವಗಳು ಅಂತ ವಾಡಿಕೆ. ಈ ಲಾಸ್ಟ್ ಬೆಂಚರ್ ಗಳ ಜೀವನವನ್ನು ವಸ್ತುವಾಗಿಟ್ಟುಕೊಂಡು, ಪ್ರೇಕ್ಷಕ ಚಿತ್ರದ ಬಹುಪಾಲು ಸಮಯ ಮೊಗದಲ್ಲೊಂದು ದೊಡ್ಡ ನಗೆಯನ್ನು ಇಟ್ಟುಕೊಂಡು ಕಳೆಯುವಂತೆ ಮಾಡಿರುವ ಚಿತ್ರ ಕಿರಿಕ್ ಪಾರ್ಟಿ.
   ರಕ್ಷಿತ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವುದು ಅವರ ಕ್ರಿಯಾಶೀಲತೆಗೆ. ಆ ಕಾರಣಕ್ಕೆ, ಈ ಚಿತ್ರ ಅವರಿಗೆ ಯಾವ ನಿರಾಸೆಯನ್ನೂ ಮೂಡಿಸುವುದಿಲ್ಲ. ಕಮರ್ಷಿಯಲ್ ದೃಷ್ಟಿಕೋನದಿಂದ ನುಸುಳಿರುವ ಕೆಲ ಫೈಟ್ಗಳು ಇವೆಯಾದರೂ, ಅವು ನೈಜತೆಯ ಟ್ರ್ಯಾಕ್ ಅನ್ನು ಬಿಟ್ಟು ದೂರವೇನು ಓಡಿಹೋಗದಿರುವುದು ಸಮಾಧಾನ. ಈ ಚಿತ್ರದ ಮತ್ತೊಂದು ಅದ್ಭುತ ಸಂಗತಿ ಅಂದರೆ, ಇಲ್ಲಿನ ನಟರು ಹಾಗು ಅವರು ಆಯ್ಕೆಯಾಗಿರುವ ವಿಧಾನ. ಇಲ್ಲಿ ರಕ್ಷಿತ್, ರಿಷಬ್ ಮತ್ತು ಇನ್ನೊಂದಿಬ್ಬರನ್ನು ಬಿಟ್ಟರೆ ನಿಮಗೆ ಹಳೆ ಮುಖಗಳ್ಯಾರು ಕಾಣುವುದಿಲ್ಲ, ಆದರೆ “ಇವ್ರನ್ನೆಲ್ಲ ಎಲ್ಲಿಂದ ಹಿಡ್ಕೊಂಡು ಬಂದ್ರಪಾ... ಆಕ್ಟಿಂಗೇ ಬರಲ್ಲ” ಅಂತ ಒಮ್ಮೆಯೂ ನಿಮಗೆ ಅನ್ನಿಸಲ್ಲ. ಅಷ್ಟು ಜಾಗರೂಕವಾಗಿ, ಅಷ್ಟು ಮುತುವರ್ಜಿ ವಹಿಸಿ ಕಿರಿಕ್ ಪಾರ್ಟಿ ಟೀಮ್ ದೊಡ್ಡ ಆಡಿಶನ್ ನಡೆಸಿ, ಹೀರೋ ಇನ್ ಗಳಿಂದ ಹಿಡಿದು ಎಲ್ಲರನ್ನೂ ಆಯ್ಕೆ ಮಾಡಿದೆ. ನನ್ನ ಪ್ರಕಾರ, ಇಂಥದ್ದೊಂದು ಕಥೆ ಮಾಡಿ ಜನರ ಮುಂದೆ ಇಟ್ಟಿದ್ದಕ್ಕಿಂತ, ಟೀಮಿನ ಈ ಸಾಹಸಕ್ಕೆ ಹೆಚ್ಚು ಚಪ್ಪಾಳೆಗಳು, ಶಿಳ್ಳೆಗಳು ಬೀಳಬೇಕು! ಇದೇ ಕಾರಣಕ್ಕೆ ಬಹಳ ನೈಸರ್ಗಿಕವಾಗಿ, ಕಿಂಚಿತ್ತೂ ಕೃತಕತೆ ಇಲ್ಲದೆ ಸಿನೆಮಾ ಮೂಡಿಬಂದಿದೆ. ಇದು ರಕ್ಷಿತ್, ರಿಷಬ್ ಮತ್ತು ತಂಡದ ಕ್ರಿಯೇಟಿವಿಟಿಗೆ ಬಹುದೊಡ್ಡ ಸಾಕ್ಷಿ.
   ಒಂದು ಕಾಮಿಡಿ ಹಾಗೂ ಮ್ಯೂಸಿಕಲ್ ಚಿತ್ರವನ್ನಾಗಿ ಮಾಡುತ್ತೇವೆ ಅಂತ ರಕ್ಷಿತ್ ಹೋದಲ್ಲೆಲ್ಲ ಹೇಳಿದ್ದುಂಟು. ಈ ಮಾತನ್ನು ಉಳಿಸಿಕೊಂಡಿದ್ದಾರೆ. ಹಾಡುಗಳೆಲ್ಲ ಬಹಳ ಕ್ಯೂಟ್ ಆಗಿ ಮೂಡಿಬಂದಿವೆ. ಹದಿಹರೆಯದ ಅಪ್ರಬುದ್ಧತೆ, ಸರಸ, ವಿರಸ, ಪ್ರೀತಿ, ಹುಚ್ಚು, ಮುಗ್ಧತೆಗಳನ್ನೆಲ್ಲ ಅತ್ಯಂತ ಸಮರ್ಥವಾಗಿ ಹಾಡುಗಳು ಸೆರೆಹಿಡಿದಿವೆ. ಅಜನೀಶ್ ಅವರ ಮ್ಯೂಸಿಕ್, ಇಂಥವುಗಳಿಗೆ ಹೇಳಿ ಮಾಡಿಸಿದ ಹಾಗೆ ಚೇತೋಹಾರಿಯಾಗಿ ಪ್ರತಿಧ್ವನಿಸಿದೆ. ಕ್ಯಾಮೆರಾ ವರ್ಕಿನಲ್ಲಿ ಕುಂದು ಕೊರತೆಗಳೆನೂ ಮೇಲ್ನೋಟಕ್ಕೆ ಕಂಡುಬಂದಿಲ್ಲ. ಕಥೆಯನ್ನ ಹೇಳುವುದರಲ್ಲಿ ಕರಮ್ ಚಾವ್ಲಾ ಕೂಡ ಮೆಚ್ಚಲೇಬೇಕಾದ ಕ್ರಿಯಾಶೀಲತೆ ತೋರಿದೆ ಎಂದು ಹೇಳಲಡ್ಡಿಯಿಲ್ಲ. ಇವೆಲ್ಲದರ ಮಧ್ಯೆ, ಸಮಾಜ ನಿಕೃಷ್ಟ ಅಂತ ನೋಡುವ ಒಂದು ಭಾಗದ ಬಗ್ಗೆ, ಅವರ ನಿಕೃಷ್ಟ ಜೀವನವನ್ನು ಮೇಲಕ್ಕೇರಿಸದೆ ಸಮಾಜ ಕೈಕಟ್ಟಿ ಕುಳಿತಿರುವುದರ ಬಗ್ಗೆಯೂ ಸಿನೆಮಾ ಗಮನಸೆಳೆಯುತ್ತದೆ.
    ಒಬ್ಬ ಅಭಿಮಾನಿಯಾಗಿ ನಾನು ರಕ್ಷಿತ್ ರಿಂದ ನಿರೀಕ್ಷಿಸುವುದು, ತಮ್ಮ ಉಚ್ಛಾರಣೆಯಲ್ಲಿ ಸ್ವಲ್ಪ ಹೆಚ್ಚು ಸ್ಪಷ್ಟತೆಯನ್ನ. ಹಿಂದಿನ ಕೆಲವು ಚಿತ್ರಗಳಲ್ಲಿ, ಕೆಲವು ಕಡೆ, ನನಗೆ ಅವರ ನಟನೆಯ ಮೆಲೆ ಅಪಸ್ವರವಿದ್ದರೂ, ಈ ಚಿತ್ರಕ್ಕೆ ಅವರು, ಅವರ ಮುಗ್ಧ ಮುಖ ಹಾಗೂ ನಟನೆ ಪರ್ಫೆಕ್ಟಾಗಿ ಹೊಂದುತ್ತದೆ. ಆರು ವರ್ಷದ ಹಿಂದೇ ಸ್ಕ್ರಿಪ್ಟ್ ಬರೆದಿಟ್ಟರೂ, ಪ್ರೇಮಮ್ ನೋಡಿದ ನಂತರ ಇದನ್ನು ಮಾಡಲು ಹೆಚ್ಚು ಸ್ಫೂರ್ತಿ ಬಂತು ಅಂತ ಸ್ವತಃ ರಕ್ಷಿತ್ ಹೇಳಿದ್ದಾರೆ. ನಾವೂ ಮೊದಲೇ ಪ್ರೇಮಂ ನೋಡಿದ್ದರಿಂದ, ಕೊಂಚ ಅದರ ಛಾಯೆ ಬಂದಂತಾಗುವುದು ಸುಳ್ಳಲ್ಲ. ಆದರೆ ಕಾಲೇಜು ವಿಷಯಾಧಾರಿತ ಕಾನ್ಸೆಪ್ಟಿನಲ್ಲಿ ಕೆಲವು ಸಿಮಿಲಾರಿಟಿಗಳಿರುವುದು ಸರ್ವೇ ಸಾಮಾನ್ಯ. ಅದರಲ್ಲಿ ಅಭ್ಯಂತರವೇನೂ ಇಲ್ಲ. ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ, ಈ ಕೋರ್ಸನ್ನ ಕಲಿಯುವಾಗ “ಯಾವಾಗ ಮುಗಿಯತ್ತೋ..?” ಅನ್ನಿಸತ್ತೆ. ಆದರೆ ಮುಗಿದ ಮೇಲೆ, “ಛೇ ಇಷ್ಟು ಬೇಗ ಆಗಿಹೋಯಿತಲ್ಲ..!” ಅನ್ನಿಸುತ್ತೆ. ಅದನ್ನ ಸಿನೆಮಾ ಸಮರ್ಥವಾಗಿ ಹರವಿಟ್ಟಿರುವುದು ಅದರ ಇನ್ನೊಂದು ಸಾಧನೆ.
ಕಾಲೇಜು ನೀಡುವ ಅವರ್ಣನೀಯ ಜೀವನಾನುಭೂತಿಯನ್ನೂ, ಕಾಲೇಜು ದಿನಗಳ ಉತ್ಸಾಹ, ತಿರ್ಬೋಕಿತನ, ಹತಾಶೆ, ಕನಸುಗಳನ್ನೂ ಮತ್ತೊಮ್ಮೆ ಕಣ್ಣಮುಂದೆ ಹರಿಸುವ ಉಲ್ಲಾಸಭರಿತ ಸಿನೆಮಾ. ದಯವಿಟ್ಟು ಸಿನೆಮಾ ನೋಡಿಕೊಂಡು ಬನ್ನಿ. ಕನ್ನಡದಲ್ಲಿ ನಾವು ಪ್ರೋತ್ಸಾಹಿಸಬೇಕಿರುವುದು ಇಂತಹ ಮೆದುಳುಗಳನ್ನ.

ಕೊನೇ ಮಾತು: ಬುಕ್ ಮೈ ಶೋ ನನಗೆ ಕೆಲವೇ ಶಬ್ದಗಳಲ್ಲಿ ರಿವ್ಯೂ ಒಂದನ್ನು ಬರೀರಿ ಅಂದಿತು. “Rakshith got one more reason to be believed as the Future of Kannada Industry” ಅಂತ ಬರೆದು ಬಂದೆ. ತಪ್ಪಾ?  

(ಲೇಖನಕ್ಕೆ ಅಂಟಿಸಿರುವ ಚಿತ್ರ ಬಿಡಿಸಿದ್ದು, ಸಂದೀಪ್ ಭಟ್ ಎಸ್)

Thursday, December 15, 2016

"ಯುವಾ" : ಅರೆ..ಇದ್ಯಾರು..?!!

ನಾವಿನ್ನೂ ಲೈಫಲ್ಲಿ ಸೆಟ್ಲಾಗ್ದೇ ಇರೋರು! ಹೌದು... ನಾವು ಇನ್ನೂ ಇಂಜಿನಿಯರಿಂಗ್ ಓದುತ್ತಿರುವವರು. ನಮಗೆ ಮುಳುಗಿ ಹೋಗಲು ಸಾಕಷ್ಟು ಸಬ್ಜೆಕ್ಟುಗಳಿವೆ, ಪುಸ್ತಕಗಳಿವೆ, ಅಸೈನ್ಮೆಂಟು-ಪ್ರಾಜೆಕ್ಟುಗಳಿವೆ, ದಿನಬೆಳಗಾದರೆ ಬಾಗಿಲುತಟ್ಟುವ ಪರೀಕ್ಷೆಗಳಿವೆ. ಆದರೆ... ಇವೆಲ್ಲದರ ಮಧ್ಯೆ ನಮಗೊಂದು ಗುರಿಯಿದೆ! ನಮ್ಮಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಬಂದವರಿದ್ದೇವೆ. ರಾಜ್ಯ ಏಕೆ, ದೇಶದ ಮೂಲೆಮೂಲೆಗಳಿಂದ ಬಂದವರಿದ್ದೇವೆ. ಮಲೆನಾಡಿನ ಹಳ್ಳಿಕೊಂಪೆಯಿಂದ, ಬಿಜಾಪುರದ ಬಿಸಿಸೆಖೆಯಿಂದ ಬಂದವರಿದ್ದೇವೆ. ಅದೆಲ್ಲ ಪಕ್ಕಕ್ಕಿರಲಿ, ಉತ್ತರದ ರಾಜಸ್ಥಾನ, ದಕ್ಷಿಣದ ತಮಿಳುನಾಡಿನಿಂದ ಬಂದವರೂ ಇದ್ದೇವೆ. ಆದರೆ... ನಮ್ಮೆಲ್ಲರಿಗೂ ಕಾಮನ್ ಆಗಿ ಒಂದು ಧ್ಯೇಯವಿದೆ! ನಾವು ಸಮಾಜದಿಂದ ಪಡೆದು ಬೆಳೆದು ನಿಂತಿದ್ದೇವೆ. ಮುಂದಿನ ತಂತ್ರಜ್ನರು ಅನ್ನಿಸಿಕೊಳ್ಳಬೇಕಾದ ನಮಗೆ ಕೆಲವು ಸಾಮಾಜಿಕ ಜವಾಬ್ದಾರಿಗಳಿವೆ, ತಿರುಗಿ ಸಮಾಜಕ್ಕೆ ಕೊಡುವುದು ಬೆಟ್ಟದಷ್ಟಿದೆ. ಇದನ್ನರಿತೇ ನಾವು ಕೆಲಸಕ್ಕೆ ಕೈ ಹಾಕಿದ್ದು! ಸಿಂಪಲ್ಲಾಗಿ ಹೇಳ್ತೀವಿ ಕೇಳಿ. ನಾವು ವಿದ್ಯುತ್ ಕಾಣದ ಹಳ್ಳಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಅಲ್ಲಿ ಹೋಗಿ ಪರಿಸ್ಥಿತಿಯ ಅವಲೋಕನ ಮಾಡಿಕೊಂಡು ಬರ್ತ್ತೇವೆ. ನಂತರ ಕೆಲವೊಂದು ಕಾರ್ಯಕ್ರಮಗಳನ್ನು ಮಾಡಿ ಜನರಿಂದ ಒಂದಷ್ಟು ದುಡ್ಡು ಸಂಪಾದಿಸುತ್ತೇವೆ. ಆ ದುಡ್ಡಿನಲ್ಲಿ ಅತ್ಯುನ್ನತ ಶ್ರೇಣಿಯ ಸೋಲಾರ್ ಕಿಟ್ ಗಳನ್ನ ಖರೀದಿಸುತ್ತೇವೆ. ಅವುಗಳನ್ನು ಜೋಪಾನವಾಗಿ ತೆಗೆದುಕೊಂಡು ಹೋಗಿ ಆ ಹಳ್ಳಿಗಳ ಮನೆಗಳಿಗೆ ಜೋಡಿಸುತ್ತೇವೆ. ಇದನ್ನು ಒಂದು LightUp  ಅನ್ನುತ್ತೇವೆ. ಇಂಥವುಗಳು ಅಂತೆ ಕಂತೆಗಳ ಕಥೆಯಲ್ಲ. ಅನೇಕ ಲೈಟ್ ಅಪ್ ಗಳನ್ನ ಅದಾಗಲೇ ಮಾಡಿ ಆಗಿದೆ. ಇವೆಲ್ಲದರ ಮಧ್ಯೆಯೇ, ಲಾಲ್ ಬಾಗಿನಲ್ಲಿ ಸ್ವಚ್ಚ ಮಾಡಲು ಮುಂದಾಗುವವರೊಂದಿಗೆ ಸೇರಿ ನಾವೂ ಸ್ವಚ್ಚ ಮಾಡುತ್ತೇವೆ, ಕಣ್ಣಿಲ್ಲದವರು ಪರೀಕ್ಷೆ ಬರೆಯುಲು ಅನುವಾಗುವಂತೆ ಸ್ಕ್ರೈಬ್ ಆಗುತ್ತೇವೆ, ಶ್ರವಣ ಮತ್ತು ಧ್ವನಿ ವಿಕಲಚೇತನರಿಗೆ ನೆರವಾಗಲು ಹೋಗಿ, ಇಂಡಿಯನ್ ಸೈನ್ ಲಾಂಗ್ವೇಜನ್ನೂ ಕಲಿಯುತ್ತೇವೆ. ಇದು ನಮ್ಮ ಕಾರ್ಯವೈಖರಿ. ಇಷ್ಟವಾಗುತ್ತೆ ತಾನೆ? ಕತ್ತಲಾದ ಮೇಲೆ ಬೆಳಕು ಕಾಣದ ಗುಡಿಸಿಲಿನಲ್ಲಿ, ಅಪ್ಪ ಅಮ್ಮನ ಜೊತೆ ವಾಸಿಸುವ, ಶಾಲೆಗೆ ಹೋಗುವ ಪುಟ್ಟ ಮಗುವೊಂದರ ಓದಿಗೆ ನಮ್ಮ ಸೋಲಾರ್ ಕಿಟ್ ನೆರವಾಗುತ್ತಲ್ಲ? ಬೆಳಕು ಕಂಡು ಮಗು ನಸುನಗುತ್ತಲ್ಲ? ಅಂತಹ ಮಂದಹಾಸಗಳೇ ನಮಗೆ ಇಲ್ಲಿಯವರೆಗೆ ಕೆಲಸ ಮಾಡಲು ಸ್ಫೂರ್ತಿ ತುಂಬಿವೆ. ನಿಮ್ಮೆಲ್ಲರ ಬೆಂಬಲ ಮತ್ತು ಪ್ರೀತಿ ಪಡೆಯಲು ನಾವೀಗ ಸಾಮಾಜಿಕ ಜಾಲತಾಣಗಳಿಗೆ ಬಂದಿದ್ದೇವೆ. ಹರಸುತ್ತೀರಿ ತಾನೆ?