Powered By Blogger

Thursday, December 15, 2016

"ಯುವಾ" : ಅರೆ..ಇದ್ಯಾರು..?!!

ನಾವಿನ್ನೂ ಲೈಫಲ್ಲಿ ಸೆಟ್ಲಾಗ್ದೇ ಇರೋರು! ಹೌದು... ನಾವು ಇನ್ನೂ ಇಂಜಿನಿಯರಿಂಗ್ ಓದುತ್ತಿರುವವರು. ನಮಗೆ ಮುಳುಗಿ ಹೋಗಲು ಸಾಕಷ್ಟು ಸಬ್ಜೆಕ್ಟುಗಳಿವೆ, ಪುಸ್ತಕಗಳಿವೆ, ಅಸೈನ್ಮೆಂಟು-ಪ್ರಾಜೆಕ್ಟುಗಳಿವೆ, ದಿನಬೆಳಗಾದರೆ ಬಾಗಿಲುತಟ್ಟುವ ಪರೀಕ್ಷೆಗಳಿವೆ. ಆದರೆ... ಇವೆಲ್ಲದರ ಮಧ್ಯೆ ನಮಗೊಂದು ಗುರಿಯಿದೆ! ನಮ್ಮಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಬಂದವರಿದ್ದೇವೆ. ರಾಜ್ಯ ಏಕೆ, ದೇಶದ ಮೂಲೆಮೂಲೆಗಳಿಂದ ಬಂದವರಿದ್ದೇವೆ. ಮಲೆನಾಡಿನ ಹಳ್ಳಿಕೊಂಪೆಯಿಂದ, ಬಿಜಾಪುರದ ಬಿಸಿಸೆಖೆಯಿಂದ ಬಂದವರಿದ್ದೇವೆ. ಅದೆಲ್ಲ ಪಕ್ಕಕ್ಕಿರಲಿ, ಉತ್ತರದ ರಾಜಸ್ಥಾನ, ದಕ್ಷಿಣದ ತಮಿಳುನಾಡಿನಿಂದ ಬಂದವರೂ ಇದ್ದೇವೆ. ಆದರೆ... ನಮ್ಮೆಲ್ಲರಿಗೂ ಕಾಮನ್ ಆಗಿ ಒಂದು ಧ್ಯೇಯವಿದೆ! ನಾವು ಸಮಾಜದಿಂದ ಪಡೆದು ಬೆಳೆದು ನಿಂತಿದ್ದೇವೆ. ಮುಂದಿನ ತಂತ್ರಜ್ನರು ಅನ್ನಿಸಿಕೊಳ್ಳಬೇಕಾದ ನಮಗೆ ಕೆಲವು ಸಾಮಾಜಿಕ ಜವಾಬ್ದಾರಿಗಳಿವೆ, ತಿರುಗಿ ಸಮಾಜಕ್ಕೆ ಕೊಡುವುದು ಬೆಟ್ಟದಷ್ಟಿದೆ. ಇದನ್ನರಿತೇ ನಾವು ಕೆಲಸಕ್ಕೆ ಕೈ ಹಾಕಿದ್ದು! ಸಿಂಪಲ್ಲಾಗಿ ಹೇಳ್ತೀವಿ ಕೇಳಿ. ನಾವು ವಿದ್ಯುತ್ ಕಾಣದ ಹಳ್ಳಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಅಲ್ಲಿ ಹೋಗಿ ಪರಿಸ್ಥಿತಿಯ ಅವಲೋಕನ ಮಾಡಿಕೊಂಡು ಬರ್ತ್ತೇವೆ. ನಂತರ ಕೆಲವೊಂದು ಕಾರ್ಯಕ್ರಮಗಳನ್ನು ಮಾಡಿ ಜನರಿಂದ ಒಂದಷ್ಟು ದುಡ್ಡು ಸಂಪಾದಿಸುತ್ತೇವೆ. ಆ ದುಡ್ಡಿನಲ್ಲಿ ಅತ್ಯುನ್ನತ ಶ್ರೇಣಿಯ ಸೋಲಾರ್ ಕಿಟ್ ಗಳನ್ನ ಖರೀದಿಸುತ್ತೇವೆ. ಅವುಗಳನ್ನು ಜೋಪಾನವಾಗಿ ತೆಗೆದುಕೊಂಡು ಹೋಗಿ ಆ ಹಳ್ಳಿಗಳ ಮನೆಗಳಿಗೆ ಜೋಡಿಸುತ್ತೇವೆ. ಇದನ್ನು ಒಂದು LightUp  ಅನ್ನುತ್ತೇವೆ. ಇಂಥವುಗಳು ಅಂತೆ ಕಂತೆಗಳ ಕಥೆಯಲ್ಲ. ಅನೇಕ ಲೈಟ್ ಅಪ್ ಗಳನ್ನ ಅದಾಗಲೇ ಮಾಡಿ ಆಗಿದೆ. ಇವೆಲ್ಲದರ ಮಧ್ಯೆಯೇ, ಲಾಲ್ ಬಾಗಿನಲ್ಲಿ ಸ್ವಚ್ಚ ಮಾಡಲು ಮುಂದಾಗುವವರೊಂದಿಗೆ ಸೇರಿ ನಾವೂ ಸ್ವಚ್ಚ ಮಾಡುತ್ತೇವೆ, ಕಣ್ಣಿಲ್ಲದವರು ಪರೀಕ್ಷೆ ಬರೆಯುಲು ಅನುವಾಗುವಂತೆ ಸ್ಕ್ರೈಬ್ ಆಗುತ್ತೇವೆ, ಶ್ರವಣ ಮತ್ತು ಧ್ವನಿ ವಿಕಲಚೇತನರಿಗೆ ನೆರವಾಗಲು ಹೋಗಿ, ಇಂಡಿಯನ್ ಸೈನ್ ಲಾಂಗ್ವೇಜನ್ನೂ ಕಲಿಯುತ್ತೇವೆ. ಇದು ನಮ್ಮ ಕಾರ್ಯವೈಖರಿ. ಇಷ್ಟವಾಗುತ್ತೆ ತಾನೆ? ಕತ್ತಲಾದ ಮೇಲೆ ಬೆಳಕು ಕಾಣದ ಗುಡಿಸಿಲಿನಲ್ಲಿ, ಅಪ್ಪ ಅಮ್ಮನ ಜೊತೆ ವಾಸಿಸುವ, ಶಾಲೆಗೆ ಹೋಗುವ ಪುಟ್ಟ ಮಗುವೊಂದರ ಓದಿಗೆ ನಮ್ಮ ಸೋಲಾರ್ ಕಿಟ್ ನೆರವಾಗುತ್ತಲ್ಲ? ಬೆಳಕು ಕಂಡು ಮಗು ನಸುನಗುತ್ತಲ್ಲ? ಅಂತಹ ಮಂದಹಾಸಗಳೇ ನಮಗೆ ಇಲ್ಲಿಯವರೆಗೆ ಕೆಲಸ ಮಾಡಲು ಸ್ಫೂರ್ತಿ ತುಂಬಿವೆ. ನಿಮ್ಮೆಲ್ಲರ ಬೆಂಬಲ ಮತ್ತು ಪ್ರೀತಿ ಪಡೆಯಲು ನಾವೀಗ ಸಾಮಾಜಿಕ ಜಾಲತಾಣಗಳಿಗೆ ಬಂದಿದ್ದೇವೆ. ಹರಸುತ್ತೀರಿ ತಾನೆ? 

No comments:

Post a Comment