Powered By Blogger

Friday, October 30, 2015

ಎಲ್ಲೆ ಮೀರಿದ ಮೇಲೆ, ಎಲ್ಲವೂ ಮುಗಿದ ಮೇಲೆ, ಕುರುಡು ಹೋಯಿತು...! 

    "ಅರೆ....ತಡಿ, ಏನು ಮಾಡುತ್ತಿದ್ದಿ...stop it..!" ಎಂದು ಆತಂಕ ವದನಳಾಗಿ ಕೇಳಿದಳಾಕೆ. ""ಸಾಯುತ್ತಿದ್ದೇನೆ...ಬದುಕಿಸಬಲ್ಲೆಯ?" ಅವಳಿಗಿಂತ ಭಯಗ್ರಸ್ತವಾದ ಧ್ವನಿಯೊಂದು ಗ್ಲಾಸಿನ ಮುಸುಕಿನಿಂದ ಕಷ್ಟಪಟ್ಟು ಹೊರಬಂತು. " ಅಪಾರ್ಚುನಿಸ್ಟ್' ರೋಬೋ ತನ್ನ ಚಟಕ್ಕಾಗಿ ಮಂಡಿಗೆ ಒದೆಯಿತು. ಅವನ ಕಾಲಿನ ಚೂಪು ತಂತಿ ಚುಚ್ಚಿ, ಇದೋ ಇಲ್ಲಿ ನೋಡು, ಸೂಜಿಮೊನೆಯಷ್ಟು ದೊಡ್ಡ ತೂತಾಗಿದೆ, ಈ ಲೋಹದ ಭಾರವಾದ ಪ್ಯಾಂಟಿಗೆ, ಸಾಯುತ್ತಿದ್ದೇನೆ ಕಾಪಾಡುವೆಯಾ?" ಎಂದು ಮತ್ತೆ ಚೀರಿದ.

    ಏನಿದು, ಅವನದೆಂಥ ಲೋಹದ ಪ್ಯಾಂಟು? ಯಾರದು 'ಅಪಾರ್ಚುನಿಸ್ಟ್'? ಆ ಕಣ್ಣಿಗೆ ಕಾಣದ ರಂಧ್ರಕ್ಕೆ, ಅದರ ಮೂಲಕವೇ ತನ್ನ ಜೀವ ಆವಿಯಾಗಿ ಹೋಗುತ್ತಿದೆಯೇನೊ ಎಂಬಂತೆ ಅವನ್ಯಾಕೆ ಹೌಹಾರಬೇಕು? ಒಂದೂ ಅರ್ಥವಾಗುತ್ತಿಲ್ಲವಾ? ಪ್ಲೀಸ್, ಮುಂದೆ ಓದಿ!

                                            *       *      *      *      *

    ಅದು ಇಸವಿ 'xxx'. ನಿಮಗಿಷ್ಟ ಬಂದ ಯಾವುದೋ ಮಾಸ ಎಂದಿಟ್ಟುಕೊಳ್ಳಿ. PASA( Pamerican Aeronautical and Space Administration) ಎಂಬ ಜಗತ್ತಿನ ಅತ್ಯಂತ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯ ಅತ್ಯಂತ ಸುಸಜ್ಜಿತ ಕಾರ್ಯಾಲಯದಲ್ಲಿ ತಲೆ ಕೆರೆದುಕೊಂಡು ಕುಳಿತಿದ್ದಾನೆ ರಂಗದಾಸ್. ಷಿನ್ ಪಿಯೊ ಮತ್ತು ಕ್ರಿಸ್ಟಿಯಾನೊ ಅದೆಂಥದೋ ಕನ್ನಡಕದಿಂದಲೇ ಪ್ರೊಜೆಕ್ಟರ್ ಹಾಕಿ ಆತನಿಗೆ ಏನನ್ನೋ ವಿವರಿಸುತ್ತಿದ್ದಾರೆ. ಕೆಂಪು ಕೆಂಪು ನೆಲದಲ್ಲಿ ನಮ್ಮ ಗ್ರೀನ್ ಹೌಸಿನಂತ ಶೆಡ್ಡುಗಳು ಮುಂದಿನ ಪರದೆಯ ಮೇಲೆ ಮೂಡುತ್ತಿವೆ. ಎಂಥದೋ ಅನಾಹುತವಾಗಿರುವ, ಎಷ್ಟೋ ಜನರ ಜೀವ ಹೋಗುತ್ತಿರುವ ಮಾಹಿತಿ ಒಡಮೂಡುತ್ತಿದೆ. ಇವರ ಜಂಗಾಬಲ ಉಡುಗಿದೆ, ಜನರ ಜೀವ ಹೋಗುತ್ತಿರುವುದಕ್ಕೆ ಕಾರಣವಾದುದಕ್ಕಲ್ಲ, ಲಕ್ಷಕೋಟಿ ಹಣ ವ್ಯರ್ಥವಾಗುತ್ತಿದೆಯೆಂಬ ಕಾರಣಕ್ಕೆ! ಇವರ ಆ 'ಪೂಗಲ್ ಐ' ಕನ್ನಡಕ ಈ ನಿರ್ಭಾವುಕ ಜೀವಿಗಳ ಭಾವನೆಗಳನ್ನು ಇವರಿಗಿಂತ ಚೆನ್ನಾಗಿ ಡೀಕೋಡ್ ಮಾಡುತ್ತಿದೆ. ಯಾರಿವರೆಲ್ಲ? ಏನಾಗಿದೆ? ಎಂಥದದು ಕೆಂಪುನೆಲ?

                                             *       *       *      *      *

     ಮೇಲೆ ಹೇಳಿದ್ದನ್ನೆಲ್ಲ ರಂಧ್ರ ಶಿಖಾಮಣಿ, ಅವನು ಅರೆಜೀವವಾಗಿದ್ದ. ಬೆಳಗು ಕಳೆದು ರಾತ್ರಿಯಾಗಿತ್ತು. -100 ಡಿಗ್ರಿ ಸೆಲ್ಷಿಯಸ್ ಇದ್ದಿದ್ದ ತಾಪಮಾನ, -172ಕ್ಕೆ ಇಳಿದಿತ್ತು. ಈತನ ಆಕ್ಸಿಜನ್ನು-ಪಾಕ್ಸಿಜನ್ನುಗಳೆಲ್ಲ ಲೀಕಾಗಿ ಸುಸ್ತಾದವು. ತಲೆಕೆಟ್ಟವನಾಗಿ ಸ್ಪೇಸ್ ಸೂಟನ್ನೇ ಕಿತ್ತು ಬಿಸಾಡಿದ. ಇದನ್ನು ತೋಳದಂತೆ ಕಾದಿತ್ತು ವಾತಾವರಣ. ರಕ್ತ ಕಲ್ಲಾಯಿತು. ಕಾಸ್ಮಿಕ್ ಕಿರಣಗಳು ನಾಟಿದವು. ವಾತಾವರಣದಲ್ಲಿದ ಅತ್ಯಲ್ಪ ಶೇಕಡ 0.13 ಆಮ್ಲಜನಕ ಮೂಗಿನಿಂದ ಶ್ವಾಸಕೋಶದೊಳಗೆ ಹೋಗುವುದಕ್ಕೂ ಸಾಲ್. ಎಂಜಲು, ಶ್ವಾಸ ದ್ರವಣವೆಲ್ಲ ಕುದಿಯತೊಡಗಿದವು! ಒತ್ತಡವೇ ಇಲ್ಲದ ಆ ವಾತಾವರಣದಲ್ಲಿ, ಅವನಿಗೇ ಗೊತ್ತಿಲ್ಲದಂತೆ ಅವನ ದೇಹ ಸಿಡಿದುಹೋಯಿತು. ಆತನ ಕೈಲಿದ್ದ ಪ್ಯಾಪಲ್ ಸ್ಮಾರ್ಟ್ ವಾಚಾಗಲೀ, ಅಥವಾ ಅವನ ಇನ್ಯಾವುದೇ ಅತ್ಯಾಧುನಿಕ ಉಪಕರಣವಾಗಲಿ ಅವನ ಸಹಾಯಕ್ಕೆ ಬರಲಿಲ್ಲ, ಅನಾಥವಾಗಿ ಸತ್ತುಹೋದ...

     ಅಂದಹಾಗೆ ಅವನು ಸತ್ತಿದ್ದು ಮಂಗಳನಲ್ಲಿ.

                                                *     *      *      *     *

     ಮೇಲೆ ಹೇಳಿದ್ದೆನ್ನಲ್ಲ 'ಅನಾಹುತ', ಅದು ಇತ್ತ ಭೂಲೋಕದಲ್ಲಿದ್ದ ಅರ್ಧಜನಸಂಖ್ಯೆಯ ನಿದ್ರೆಗೆಡಿಸಿತ್ತು! ಇನ್ನರ್ಧ ಜನಸಂಖ್ಯೆ ಮಂಗಳನಲ್ಲಿತ್ತಲ್ಲ ಅವರು ಸಾಯುತ್ತಾರೆಂದಲ್ಲ, ಈಗಾಗಲೇ ಅವರ ಸೈಟುಗಳನ್ನೆಲ್ಲ ನಾವು ನಮ್ಮದಾಗಿಸಿಕೊಂಡಿದ್ದೇವೆ, ಅವರು ವಾಪಸ್ ಬಂದುಬಿಟ್ಟರೆ? ಎಂದು. ಮಂಗಳನಲ್ಲಿ ಸಾಯುತ್ತಿದ್ದವರೇನು ಸಾಚಾಗಳಲ್ಲ ಬಿಡಿ, "ಭೂಮಿ ಹೇಗಾದರೂ ಹಾಳಾಗಿದೆ. ನಾನು ಮೊದಲು ಕಳಚ್ಕೊಂಡ್ ಬಿಡ್ಬೇಕು. ಉಳಿದವರು ಹೇಗಾದರು ಸಾಯಲಿ" ಎಂದು ಓಡಿಹೋದವರು. 'ಜಗತ್ತು ಸಂಸ್ಥೆ' ಹೇಳಿತ್ತು, ಅರ್ಧಜನಸಮೂಹ ಮಂಗಳಕ್ಕೆ ಹೋಗಬೇಕು, ಯಾರ್ಯಾರು ಬರುತ್ತೀರೋ ಬನ್ನಿ ಎಂದು.

     ಖುದ್ದು ಪಮೇರಿಕೆಯ ಅಧ್ಯಕ್ಷರ ಕಾರು ಆವೇಶದಿಂದ ರಂಗದಾಸ್ ಮೇಜಿನ ಮುಂದೆಯೇ ಬಂದು ನಿಂತಿತು. ಅಷ್ಟೇ ಆವೇಶದಿಂದ ಬುರುಕ್ಕನೆ ಇಳಿದೋಡಿ ಬಂದ ಅಧ್ಯಕ್ಷರು ಆ ಕ್ರಿಸ್ಟಿಯಾನೋಗೆರಡು ತಪರಾಕಿ ಹಾಕಿದರು. ಆತ ಪಮೇರಿಕೆಯವ. "ಇವರನ್ನೆಲ್ಲ ಯಾಕೆ ಪಾಸಾಕ್ಕೆ ಕರಕೊಂಡು ಬಂದೆ, ಮಣ್ಣು ತಿನ್ನು ಈಗ" ಎಂದು ಬೈದರು. ಹೌದು ಬಿಡಿ, ತಿಂದರೆ ಭೂಮಿಯ ಮಣ್ಣನ್ನೇ ತಿನ್ನಬೇಕು, ಮಂಗಳನದ್ದು ಮಣ್ಣಲ್ಲ, ಕಲುಷಿತ ಕಬ್ಬಿಣದ ಪುಡಿ!

      ಅಷ್ಟೊತ್ತಿಗೆ PASAದ ಚೇರ್ ಮನ್ ಬಂದರು. ಬಹಳ ಸೌಮ್ಯದ ವ್ಯಕ್ತಿ ರಂಗದಾಸ್, ಇಂದು ರೊಚ್ಚಿಗೆದ್ದಿದ್ದ! " ಬಡ್ಕೊಂಡೆ ಸರ್, ನಿಮ್ಹತ್ರ...ಎಲ್ಲದೇಶದವರು ಸೇರಿ ೬೦-೭೦ ನೌಕೆಗಳನ್ನು ಮಂಗಳಕ್ಕೆ ಕಳುಹಿಸಿರಬಹುದು ಪರೀಕ್ಷೆಗೆ. ಒಂದೊಂದೂ "Life is impossible on mars" ಎಂದು ಒದರಿ ಒದರಿ ಸತ್ತವು. ಸೌಜನ್ಯಕ್ಕೂ ಒಂದು ಉಪಗ್ರಹ "ಬನ್ನಿ. ಚೆನ್ನಾಗಿದೆ" ಅನ್ನಲಿಲ್ಲ.  ಬೇಡ ಅಂದೆ ಸರ್...ನಾನಲ್ಲ, ಬಿಸ್ರೋ, ಉರೋಪಿಯನ್ ಏಜೆನ್ಚಿಗಲೆಲ್ಲ ಅಂದವು. ಅದೆಂಥದೋ ಟೆಟ್ರಾ, ನ್ಯಾನೊ ರಿಪ್ಲಿಕೇಷನ್ ಎಂಬ ತಂತ್ರಜ್ನಾನಗಳ ಹೆಸರು ಹೇಳಿ ನಮ್ಮನ್ನೆಲ್ಲ ಸುಮ್ಮನಿರಿಸಿದಿರಿ. ನನ್ನನ್ನು ಪ್ರಾಜೆಕ್ಟ್ ಡೈರೆಕ್ಟರ್ ಮಾಡುತ್ತೀರೆಂದಿರಲ್ಲ, ನಿಮಗೆ ನಾನೇ ಸಿಗಬೇಕಿತ್ತ? ಹುದ್ದೆಯ ಆಸೆಗೆ, ಕೀರ್ತಿಯ ಹುಚ್ಚಿಗೆ ನಾನೂ ಒಪ್ಪಿಬಿಟ್ಟೆ. ಆಕ್ಷನ್ ಹೀರೋನಂತೆ ಎಂಟ್ರಿಕೊಟ್ಟಿರುವ ಅಧ್ಯಕ್ಷರಿಗೆ ನೀವೇ ಹೇಳಿ" ಎಂದ.

       ಸಿಟ್ಟನ್ನು ಹೊಟ್ಟೆಯಲ್ಲಿ ಹಾಕಿಕೊಂಡು, ಆದ ಪೇಚನ್ನು ಸಾವರಿಸಿಕೊಂಡು, ;ಪಾಸಾ'ದ ಚೇರ್ಮನ್ ಅಧ್ಯಕ್ಷರನ್ನುದ್ದೇಶಿಸಿ ಹೇಳಿದರು."ಇಲ್ಲ ಸರ್, ಇದು ಹೇಗಾಯಿತೋ ಗೊತ್ತಿಲ್ಲ!  ಓಜೋನ್ ಇಲ್ಲದ ಮಂಗಳನಲ್ಲಿ ನಾಟುವ ಅತಿನೇರಳೆ ಕಿರಣಗಳಿಂದ ರಕ್ಷಣೆಯನ್ನು, ಕಾಸ್ಮಿಕ್ ಕಿರಣಗಳಿಂದ ವ್ಯವಸ್ಥಿತ ರಕ್ಷಣೆಯನ್ನು, ಅವೆಲ್ಲ ಹೋಗಲಿ, ಅಲ್ಲಿ ಕ್ಷೀಣವಾಗಿರುವ ಗುರುತ್ವ ಬಲವನ್ನು ಸರಿಮಾಡಲು ಸತತವಾಗಿ ತಿರುಗುವ  ಸೆಂಟ್ರಿಫ್ಯೂಜ್ ಸ್ಲೀಪಿಂಗ್ ಕೊಠಡಿಗಳನ್ನು ಮಾಡಿ ಕಳಿಸಿದೆವಲ್ಲ ಸರ್. ಇಲ್ಲದಿದ್ದರೆ ಅವರ ಮೂಳೆಗಳೆಲ್ಲ ಅವರಿಗೇ ಗೊತ್ತಿಲ್ಲದಂತೆ ಸವೆದು ಮಾಯವಾಗುತ್ತಿದ್ದವು! ಸೂರ್ಯನ ಬೆಳಕಿಲ್ಲದಾಗ, ಸೌರಶಕ್ತಿಯ ಆಟನಡೆಯದಾಗ ನಾವೇ ಎಲ್ ಇ ಡಿ ಉರಿಸಿ ನಮ್ಮ ಅಲ್ಲಿನ ಕಾರ್ಯಾಗಾರಗಳಲ್ಲಿ ಬೆಳೆಬೆಳೆಯುವಂತೆ ಮಾಡಿದ್ದು ಕಮ್ಮಿ ಸಾಧನೆಯಾ? ಆ ಮಷಿನರಿಗಳಿಗೆ, ಮನುಷ್ಯರಿಗೆ ಬಿಡಿಭಾಗಗಳನ್ನೂ, ಔಷಧಗಳನ್ನೂ ಬೇಕಾದಾಗಲೆಲ್ಲ ಇಲ್ಲಿಂದ ರವಾನೆ ಮಾಡಿದೆವು. ಇವೆಲ್ಲ ಸುಮ್ಮನೆ ಸಾಧ್ಯವಾಗಿದ್ದಲ್ಲ ಸರ್, ಮಾನವ ಭೂಮಿಯಲ್ಲಿ ಹುಟ್ಟಿದಾಗಿನಿಂದ ಭೂಮಿಯಲ್ಲಿ ಎಷ್ಟು ಇನ್ವೆಸ್ಟ್ ಮಾಡಿದ್ದನೋ, ಅದನ್ನು ಕಳೆದ ನಲ್ವತ್ತು ವರ್ಷಗಳಲ್ಲಿ ನಾವು ಮಂಗಳನಲ್ಲಿ ಇನ್ವೆಸ್ಟ್ ಮಾಡಿದ್ದೇವೆ ಸರ್. ಇರುವ ಈ ಭೂಮಿಯನ್ನೇ ಸರಿ ಮಾಡಿಬಿಡಬಹುದಿತ್ತು. ಇವೆಲ್ಲ ಜಗತ್ತಿನ ಅತ್ಯುನ್ನತ ಮಿದುಳುಗಳ ಅವಿರತ ಪ್ರಯತ್ನದಿಂದ ಸಾಧ್ಯವಾದದ್ದು. ಆದರೂ ಹೀಗೆ ಎಡವಟ್ಟಾಗಿದೆ ನೋಡಿ..." ಎಂದು ಕೈಕೈ ಹಿಸುಕಿಕೊಂದರು. ಹೌದು,  ಏನದು 'ಎಡವಟ್ಟು'?

                                                 * * * * *

 ಆಗಿದ್ದಿಷ್ಟು. ಮಂಗಳನಲ್ಲಿ ಧೂಳಿನ ಚಂಡಮಾರುತವೆದ್ದಿತ್ತು. ನಾಲ್ಕಾರು ವಸಾಹತುಗಳಿಗೆ ಹೊಡೆದು ಸುಮ್ಮನಾಗಿದ್ದರೆ 'ಪಾಸಾ' ಅಳುತ್ತಾ ಕೂತಿರುತ್ತಿರಲಿಲ್ಲ. ಮಂಗಳನಲ್ಲಿನ ಚಂಡ ಮಾರುತಕ್ಕೂ ಭೂಮಿಯಲ್ಲಿನ ಚಂಡಮಾರುತಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅಲ್ಲಿ ಚಂಡಮಾರುತವೆದ್ದರೆ 'ಧೂಳಿನ ಮಧ್ಯೆ ಗ್ರಹ' ಅಂತಾಗುತ್ತದೆ. ಧೂಳೇ ಜೀವಾಳವಾಗಿರುವ ಆ ಗ್ರಹಕ್ಕೆ ಬರುವ ಸೂರ್ಯಕಿರಣಗಳಲ್ಲಿ ಶೇಕಡ 99ರಷ್ಟು ಈ ಧೂಳುಮೋಡವನ್ನು ಸೀಳಿಬರುವುದೇ ಇಲ್ಲ! ಇದು ಅಲ್ಲಿ ಅತ್ಯಂತ ಕಾಮನ್. ನಮ್ಮವರೇನು ಇಷ್ಟು ದಿನ ಬದುಕಿರಲಿಲ್ಲವಾ? ಅವರಿಗಿದೆಲ್ಲ ಗೊತ್ತಿತ್ತು. ಮಂಗಳ "ಧೂಳ್ ಮಗ ಧೂಳ್" ಅಂದರೆ ನಮ್ಮವರು ವಾಪಸ್ "ಧಮಕ ಧಮಕ ಧೂಳ್" ಅನ್ನುವಷ್ಟು ಸಮರ್ಥರಿದ್ದರು. ಆದರೆ ಇದೇ ಸಮಯಕ್ಕೆ ಒಬ್ಬ ಅಧಿಕಪ್ರಸಂಗಿ ವಿಲನ್ ಎಂಟ್ರಿ ಕೊಟ್ಟುಬಿಟ್ಟಿದ್ದ. ಮಂಗಳನಾಚೆಯ ಗ್ರಹ ಗುರುವಿನ ಅಗಾಧ ಗುರುತ್ವ ಕ್ಷುದ್ರಗ್ರಹಗಳ ಪಟ್ಟಿಯೊಂದನ್ನು ಹಿಡಿದಿಟ್ಟುಕೊಂಡಿದೆ. ಆದರೆ ಒಂದು ಕ್ಷುದ್ರಗ್ರಹ ಮಂಗಳನತ್ತ ಚಿಮ್ಮಿ ಬಂದುಬಿಟ್ಟಿತ್ತು! ಅದನ್ನು ಧ್ವಂಸ ಮಾಡಲು ನಮ್ಮವರು ಉಡಾಯಿಸಿದ ಉಪಕರಣಗಳು ಈ ಬಾರಿ ಸೋತುಹೋಗಿದ್ದವು. ಬಂತು...ಬಂತು...ಬಂತು...ಅವಿರೋಧವಾಗಿ ಬಂದು ಮಾನವ ಬಿರುಗಾಳಿಯಿಂದ ರಕ್ಷಿಸಿಕೊಳ್ಳಲು ಮಾಡಿಕೊಂಡಿದ್ದ ಬಂಕರ್ ಒಂದಕ್ಕೆ ಅಪ್ಪಳಿಸಿ ಛಿದ್ರಗೊಳಿಸಿತು. ಉಂಟಾದ ವಿಕಿರಣ ಪಲ್ಲಾಟದಿಂದಲೋ ಏನೋ, ಧ್ವಂಸವಾದ ಬಂಕರ್ ಒಳಗಿದ್ದ ನಿಯಂತ್ರಣ ಕಂಪ್ಯೂಟರ್ ಒಳಗಿದ್ದ ಕೋಡಿಂಗ್ ಒಂದರಲ್ಲಿ ಏರುಪೇರಾಯ್ತು. ಪರಿಣಾಮವಾಗಿ ಇತರ ಅಡಗುತಾಣಗಳ ಬಾಗಿಲುಗಲೂ ತಾವಾಗಿಯೇ ತೆರೆದುಕೊಳ್ಳಲಾರಂಭಿಸಿದವು. ನೋಡನೋಡುತ್ತಿದ್ದಂತೆಯೇ ಮಾನವ ಜನಾಂಗ ಧೂಳಿನಲ್ಲಿ ಕಳೆದುಹೋಯಿತು! 

    ಮಂಗಳನಲ್ಲಿ ಭೂಮಿಯಲ್ಲಿದ್ದಹಾಗೆ ಆಯಸ್ಕಾಂತೀಯ ಕ್ಷೇತ್ರವಿಲ್ಲ. ಹಾಗಾಗಿ ದೈರೆಕ್ಟ್ ಹಿಟ್ ಮಾಡುವ ಕಾಸ್ಮಿಕ್ ವಿಕಿರಣಗಳಿಗೆ ಹೇಳಿಕೇಳುವವರ್ಯಾರೂ ಇಲ್ಲ. ಭುವಿಯ ಜನ ಮಂಗಳನಲ್ಲಿದ್ದ ಅರ್ಧ ಜನಸಂಖ್ಯೆಯ ಆಸೆ ಬಿಟ್ಟಾಗಿತ್ತು.

* * * * *

    ಕೆಲವೊಂದು ಸನ್ನಿವೇಶಗಳು ಎಂಥವರನ್ನೂ ನೀರಾಗಿಸುತ್ತವೆ. "ಮಂಗಳಕ್ಕೆ ಹಾಕಿದ ದುಡ್ಡು ಭೂಮಿ ಪುನಶ್ಚೇತನಕ್ಕೆ ಹಾಕಿದ್ದರೆ, ಭೂಮಿ ಮೊದಲಿನಂತಾಗುತ್ತಿತ್ತು. ಹಾಗೆ ಮಾಡುವ ಉತ್ಕೃಷ್ಟ ಮಿದುಳುಗಳು ನಮ್ಮಲ್ಲಿವೆ. ಉಪಯೋಗಿಸಿಕೊಳ್ಳೋಣ" ಎಂಬ ಚೇರ್ಮನ್ ರ ಪರಿವರ್ತನೆಯ ಮಾತು ಅಧ್ಯಕ್ಷ್ರರನ್ನು ಚಿಂತಿಸುವಂತೆ ಮಾಡಿತು. ಇದ್ದ ಮಂಗಳನ ಕುತೂಹಲ ತಣಿದಿತ್ತು, ಕೈ ಸುಟ್ಟುಕೊಂಡೂ ಆಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು. ವಿಶ್ವವನ್ನುದ್ದೇಶಿಸಿ ಅಧ್ಯಕ್ಷರು ಬಿಬಿಬಿಸಿಯಲ್ಲಿ ಭಾವುಕರಾಗಿ ಭಾಷಣ ಮಾಡಿದರು. ಸಾಮಾಜಿಕ ಜಾಲತಾಣಗಳ ಮೂಲಕ, ಸುದ್ದಿಮಾಧ್ಯಮಗಳ ಮುಖಾಂತರ ಜನ ತಮ್ಮ ಬೆಂಬಲ ವ್ಯಕ್ತಪಡಿಸಿದರು. ತಾಂಡವವಾಡುತ್ತಿದ್ದ ಸಣ್ಣತನ, ಸ್ವಾರ್ಥ, ಅಸೂಯೆಗಳೆಲ್ಲ ಅರ್ಥ ಕಳೆದುಕೊಂಡವು. ಮಂಗಳನನ್ನು 72000 ಕಿ.ಮೀ. ದೂರದ ಕಕ್ಷೆಯಲ್ಲಿ ಸುತ್ತು ಹಾಕುತ್ತಿದ್ದ ಉಪಗ್ರಹ ಮಂಗಳನಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗಿದೆಯೆಂದೂ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನ ಬದುಕಿದ್ದಾರೆಂದೂ ಸಂದೇಶ ರವಾನಿಸಿತು. ಬಿರುಗಾಳಿ ಸ್ವಲ್ಪ ಬೇಗವೇ ತಣ್ಣಗಾಗಿದ್ದರಿಂದ ತಮ್ಮಲ್ಲಿರುವ ವಿವಿಧ ಅತ್ಯಾಧುನಿಕ ಸ್ಪೇಸ್ ಸೂಟ್ ಗಳನ್ನು ಸಮರ್ಥವಾಗಿ ಬಳಸಿಕೊಂಡ ಅನೇಕ ಜನ ಕಷ್ಟಪಟ್ಟು ಬದುಕುಳಿದಿದ್ದರು. ಸಾವಿರಾರು ಜನರು ಸತ್ತೂ ಹೋಗಿದ್ದರು.

    ಉಳಿದ ಜನರಲ್ಲಿ, ಸಮಸ್ತ ಭಾರತವನ್ನು ಗೆದ್ದ ನಂತರ ಅಶೋಕನಲ್ಲಿ ಆಗಿತ್ತಲ್ಲ  ಜ್ನಾನೋದಯ, ಅಂಥದ್ದಾಯಿತು. ವಿಶ್ವವನ್ನು ಮೀರಲು ಹೊರಟ ಜನರಲ್ಲಿ ಭುವಿಯ ಬಗ್ಗೆ ಪ್ರೀತಿ ಉಕ್ಕಿತು. ಇತ್ತ ಭುವಿಯ ಜನರಲ್ಲೂ ಅಂಥದ್ದೇ ಭಾವ ಮೂಡಿತು. ಸ್ಪಷ್ಟವಾದ ಕಾರ್ಯಾಚರಣೆಯ ರೂಪುರೇಷೆಗಳು ಸಿದ್ಧವಾದವು. ಸರ್ವ ದೇಶಗಳೂ ಆರ್ಥಿಕವಾಗಿ, ತಾಂತ್ರಿಕವಾಗಿ ಸಹಾಯ ನೀಡಲು ಮುಂದಾದವು. ಹೇಗೆ ಎಲ್ಲರನ್ನೂ ಕರೆದುಕೊಂಡು ಹೋಗಿದ್ದರೋ, ಹಾಗೇ ಅವರನ್ನೆಲ್ಲ ವಿವಿಧ ಹಂತಗಳಲ್ಲಿ ವಾಪಸ್ ಕರೆ ತರಲು ನೌಕೆಗಳು ಸಿದ್ಧವಾದವು. ಯಶಸ್ವಿಯೂ ಆದವು. ಮಾನವನ ಅತಿಮಾನವ ಶಕ್ತಿ ಪ್ರದರ್ಶನವಾಯಿತು.

    ಅಶೋಕ ಅಂತರಂಗದ ಪುನಶ್ಚೇತನಕ್ಕೆ ತೊಡಗಿದಂತೆ, ಭೂಮಿಯ ಪುನಶ್ಚೇತನಕ್ಕೆ ವಿಶ್ವವೇ ಪಣ ತೊಟ್ಟಿತು!  ಪ್ರಯತ್ನಿಸುತ್ತಿದ್ದಾರೆ....   'ಯುದ್ಧ ವಿಜ್ನಾನ ತೊಲಗಿ ಸಾವಯವ ವಿಜ್ನಾನ ಮೆರೆದರೆ', 'ನನಗಾಗಿ ಭೂಮಿ' ಹೋಗಿ 'ಭೂಮಿಗಾಗಿ ನಾನಾದರೆ' , 'ನನಗೆ ಬೇಕು' ಬದಲು , 'ಅಯ್ಯೋ ಸಾಕು'  ಎಂದರೆ ಪ್ರಯತ್ನ ಯಶಸ್ವಿಯಾದೀತು....

 

                                                                                -ಸಂಕೇತ್ ಹುತ್ಗಾರ್,

                                                                                  ಸಾಗರ.

Friday, October 16, 2015

”..........ಕೆಸರಲ್ಲೂ ಕನಸು ಮೊಗೆದಳು, ಮೊಗೆದ ಕನಸು ಕೊಳಗೇರಿಯಲ್ಲಿ ನನಸಾಗಿತ್ತು !”

        (An article based on the information in ‘Girl in the mirror’ of ‘I have A dream’ by Rashmi Bansal on       SHAHEEN MISTRI)
  
       ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದೋ Singham Returns ನಂತಹ ಒಂದು Action Thriller ಅನ್ನು ನೋಡಬೇಕು. ಅಥವಾ ಇನ್ಯಾವುದೋ ಸ್ಲಮ್ಮಿನ ಜೀವನದ ಬಗ್ಗೆ, ಅವರ ತೊಳಲಾಟದ ಬಗ್ಗೆ ಇರುವ ಕ್ಲಾಸಿಕ್ ಸಾಕ್ಷ್ಯಚಿತ್ರವೊಂದನ್ನು ವೀಕ್ಷಿಸಬೇಕು. ಏನು ಮಾಡುತ್ತೀರಿ? ನನ್ನ ಆಯ್ಕೆಯಂತೂ ಮೊದಲನೆಯದು. ವಾವ್, ಕಪ್ಪಗಿನ ಬಟ್ಟೆಯಲ್ಲಿ,  BMW ಬೈಕಿನಲ್ಲಿ  ಹಾರಿಸಿ - ಹೂಂಕರಿಸಿ ಬಂದ ಸೂಪರ್ ಹೀರೋ, ಎಲ್ಲ ಕಡೆಯಿಂದ ಸುತ್ತುವರಿಯುವ ವಿಲನ್‍ಗಳಿಗೆ ಮಣ್ಣುಮುಕ್ಕಿಸುವಾಗ ಆಗುವ ರೋಮಾಂಚನದೆದುರಿಗೆ, 50 ಜನರನ್ನು ಒಬ್ಬನೇ ಹೊಡೆದು ಬಿಸಾಕಿಬಿಡುವಾಗ ಆಗುವ ಪುಳಕದ ಮುಂದೆ, ಆ ಸ್ಲಮ್ಮುಗಿಮ್ಮನ್ನು ನಾನ್ಯಾಕೆ ನೋಡಬೇಕು? ನನಗೆ ಮಂಡೆ ಸಮಾ ಇದೆ ಮಾರಾಯರೇ...... ಆದರೆ ಕೆಲವರಿರುತ್ತಾರೆ. ಅವರಿಗೆ ಈ ‘ಮಂಡೆ ಸಮಾ’ ಇರುವುದಿಲ್ಲ. ಬಿಲ್‍ಕುಲ್! ಮತ್ತೇನು? ಅವರಿಗೆ ಸಮಾಜ, ದೇಶದ ಬಗ್ಗೆ ಚಿಂತೆ, ಅದರ ಜನರ ಚಿಂತೆ, ಅದರ ಸ್ಥಿತಿಯ ಚಿಂತೆ! ಅಂಬಾನಿಯಾಗುವ ಕನಸು ಕಾಣುವುದ ಬಿಟ್ಟು, ಸ್ವಪ್ನದಲ್ಲೂ ಸಮಾಜದ ಏಳ್ಗೆಯನ್ನೇ ಧ್ಯಾನಿಸುತ್ತಾರೆ. ಊರಿನ ಉಸಾಬರಿಯೆಲ್ಲ ತಮಗೇ ಬೇಕು ಎನ್ನುತ್ತಾರೆ.
    ಹ್ಞ, ನಾನು ಬರೆಯಹೊರಟಿರುವುದು ಶಿಕ್ಷಕಿಯಾಗಲಿಚ್ಛಿಸಿದ ಮಹಿಳೆಯೊಬ್ಬರ ಬಗ್ಗೆ. ಯಾವುದಾದರೂ ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕರಾಗುವುದು ಬಿಟ್ಟು, ಸ್ಲಮ್ಮಿನ ಮಕ್ಕಳಿಗೆ ಹೇಳಿಕೊಡಲು ಹೋದವರ ಬಗ್ಗೆ. ಅದೇ, ಮೇಲೆ ಹೇಳಿದ ಜಾತಿಗೆ ಸೇರಿದವರು ...!
    ಆಕೆಯ ತಂದೆ ಒಬ್ಬ Citibanker.  ಸ್ಥಳದಿಂದ ಸ್ಥಳಕ್ಕೆ ಶಿಪ್ಟ್ ಆಗುತ್ತಿರುವಾತ. ಶಹೀನ್ ಮಿಸ್ತ್ರಿ ಹುಟ್ಟಿದ್ದು ಮುಂಬೈನಲ್ಲಿ. ಆಕೆ ಹುಟ್ಟಿದ ಕೆಲವೇ ದಿನಗಳಲ್ಲಿ ಲೆಬನಾನ್‍ಗೆ ದೇಶಾಂತರ ಮಾಡಿತು ಆ ಕುಟುಂಬ. ಒಮ್ಮೆ ಗ್ರೀಸ್ ದೇಶಕ್ಕೆ ರಜೆಗೆಂದು ಹೋಗಿದ್ದ ಪರಿವಾರ ಲೆಬನಾನ್‍ನಲ್ಲಿ ಯುದ್ಧ ಘೋಷಣೆಯಾಗಿದ್ದನ್ನು ಕೇಳಿ ವಾಪಾಸ್ಸಾಗದೆ ಅಲ್ಲೇ ಉಳಿದುಕೊಂಡಿತು. ನಂತರ ಮತ್ತೆ ಜಕಾರ್ತಾಗೆ ತೆರಳಿದರು. ಸ್ವಲ್ಪ ವರ್ಷಗಳ ಬಳಿಕ ಮತ್ತೆ ವರ್ಗಾವಣೆ ಅಮೇರಿಕಾಕ್ಕೆ.  ಆದ್ದರಿಂದ ರಶ್ಮಿ ಬನ್ಸಾಲ್ ಬರೆಯುತ್ತಾರೆ  “Shaheen was a child of no fixed address!” ಎಂದು. ಏನೇ ಇರಲಿ, ಎರಡು ವರ್ಷಕ್ಕೊಮ್ಮೆಯಾದರೂ ಕುಟುಂಬ ಭಾರತಕ್ಕೆ ಬಂದು ಹೋಗುತ್ತಿತ್ತು. ಹೀಗೆ ಒಮ್ಮೆ ಮನೆಗೆ ಬಂದ ಸಮಯ. ಆಗ ಶಹೀನ್ ಅಮೇರಿಕೆಯ Tufts ವಿಶ್ವವಿದ್ಯಾಲಯದಲ್ಲಿ  ಓದುತ್ತಿದ್ದಳು. ಆಕೆಯ ತಾಯಿ ಕಿವಿದೋಷವಿರುವ ಮಕ್ಕಳ ಶಾಲೆ “ಇಂಖ”ನ ಸಹಸಂಸ್ಥಾಪಕಿಯಾಗಿದ್ದರು. ಆ ಮಕ್ಕಳ ಮೂಕನೋಟ ಈಕೆಯ ಮನಸ್ಸಿಗೆ ನಾಟಿತ್ತು. ಸಮಾಜಸೇವೆಯ ಪ್ರೇರಣೆಗೆ ಇಷ್ಟು ಸಾಕಿತ್ತು. ಏನನ್ನಿಸಿತೋ ಏನೋ ಆಕೆ ಮರಳಿ ಅಮೇರಿಕೆಗೆ ಹೋಗುವುದನ್ನು ಕೈಬಿಟ್ಟಿದ್ದಳು !
    ತಾನು ಭಾರತದಲ್ಲೇ ಒಂದು ಕಾಲೇಜಿಗೆ ಸೇರುವುದಾಗಿ ಹೇಳಿ, ಮುಂಬೈನ ಕ್ಸೇವಿಯರ್ ಕಾಲೇಜಿಗೆ ಸೇರಿದಳು. ಇಂಟರೆಸ್ಟಿಂಗ್ ಆಗಿರುವುದು ಇಲ್ಲಿಂದ ಮುಂದಿನ ಕಥೆ ! ಅನೇಕ ದೇಶಗಳ ಐಷಾರಾಮುಗಳಿಗೆ ಒಗ್ಗಿದ್ದ ಜೀವಕ್ಕೆ ಭಾರತ ಏನೆಂಬುದು ಅರ್ಥವಾಗಿರಲಿಲ್ಲ. ಇದ್ದದ್ದು ಅರ್ಥವಾಗಿಸಿಕೊಳ್ಳುವ ಕುತೂಹಲ ಮಾತ್ರ. ಅದಕ್ಕಾಗಿ ‘TOI’ ನ ಒಬ್ಬ ವರದಿಗಾರನನ್ನು ಪರಿಚಯಿಸಿಕೊಂಡ ಆಕೆ ಮುಂಬೈನ ಸುತ್ತ-ಮುತ್ತ ಪಟ್ಟಣಗಳನ್ನು, ಹಳ್ಳಿಗಳನ್ನು, ಕೊಳಗೇರಿಗಳನ್ನು ಅಲೆದಾಡಿದಳು. ಜಸ್ಟ್ ಆಕೆಗೆ ಏನನ್ನಾದರೂ ಮಾಡಬೇಕಿತ್ತು.
    “The secret of getting ahead is getting started” ಎಂಬ ಮಾತಿದೆ. ‘’ಅಂಬೇಡ್ಕರ್ ನಗರ’’ ಎಂಬ ಸ್ಲಮ್ಮಿನ ಗೆಳತಿಯ ಮನೆಯೊಂದರಲ್ಲಿ ಕಾಲೇಜಿನ ಅವಧಿಯ ನಂತರ ಚಿಕ್ಕಮಕ್ಕಳಿಗೆ ಪಾಠ ಮಾಡುತ್ತಿದ್ದಳು. ಅದು 1989ರ ಸಮಯ. ತಾನು ಇಲ್ಲಿ ಹೊಂದಿಕೊಳ್ಳದಿದ್ದರೆ ಅಮೇರಿಕೆಗೆ ವರ್ಷದ ನಂತರ ಮರಳುವ ಯೋಚನೆಯಿತ್ತು. ಆದರೀಗ ಆ ಯೋಚನೆಯನ್ನು ಕೈಬಿಟ್ಟಿದ್ದಳು. ಮುಂದಿದ್ದಿದ್ದು ಯೋಜನೆ ಮಾತ್ರ ! ಆಕೆ ಅದಾಗಲೇ ಅಲ್ಲಿಯ 400-500 ಮನೆಯವರಿಂದ ಅಗತ್ಯತೆಗಳ ಬಗೆಗಿನ ಅಭಿಪ್ರಾಯ ಸಂಗ್ರಹಿಸಿದ್ದಳು. ಸ್ಲಮ್ಮಿನಲ್ಲಿ ಪಾಠ ಮಾಡುವಾಗ, ಇವತ್ತು ಬಂದ ಮಗು ನಾಳೆ ಬರದಿರಬಹುದು. ನಾಳೆ ಇದ್ದಕ್ಕಿಂದಂತೆ ಇನ್ನಿಬ್ಬರು ಬಂದು ಸೇರಬಹುದು. ಕೆಲಸ ಅಷ್ಟು ಸುಲಭವಿರಲಿಲ್ಲ ! ಹಿಡಿದಿಡಲೊಂದು ತರಗತಿ ಬೇಕಿತ್ತು. ಶಿಕ್ಷಕರಾಗಿ ಒಂದಿಷ್ಟು ಮಂದಿ ಸ್ವಯಂ ಸೇವಕರು ಬೇಕಿತ್ತು. ಆದರೆ ತನ್ನ ಸಹಪಾಠಿಗಳ ಮುಂದೆ ಆಕೆ ತನ್ನ ಯೋಜನೆಯನ್ನು ಹರವಿಟ್ಟಿಕೊಂಡಾಗ ಸ್ವತಃ ಆಕೆಯೇ ತಬ್ಬಿಬ್ಬಾಗುವಂತೆ ಅಲ್ಲಿ ನೆರೆದಿದ್ದ 98% ಜನ ಸ್ವಯಂ ಸೇವಕರಾಗಲು ಮುಂದೆ ಬಂದಿದ್ದರು ! ಮಿಡಿತ ಸಾರ್ವಜನಿಕರಲ್ಲಿರುತ್ತದೆ. ಧೈರ್ಯ ತುಂಬುವ ನಾಯಕತ್ವ ಬೇಕು ! ನಿಮ್ಮ ಶಾಲಾ ವೇಳೆ ಮುಗಿದ ನಂತರ ನಮಗೊಂದು ತರಗತಿ ಕೋಡ್ರಪೋ ಎಂದು ಅನಾಮತ್ತು 20 ಶಾಲೆಗಳನ್ನು ಅಲೆದಿದ್ದಳು ಶಹೀನ್. ಅವುಗಳಲ್ಲಿ ಒಂದು ಶಾಲೆಯಂತೂ ನಿಮ್ಮ ಮಕ್ಕಳು ಧರಿಸುವ ಬಳೆ ನಮ್ಮ ಬೆಂಚುಗಳನ್ನು ತರೆಯುತ್ತದೆ ಎಂದು ಸಾಗ ಹಾಕಿತ್ತು ! ಕೈಚೆಲ್ಲಿ ಕುಳಿತಾಳ ಶಹೀನ್ ?  “Wont take no as an answer - this is the hallmark of an entrepreneur” ಎಂದವಳು ಆಕೆ, ಕೊನೆಗೆ 21ನೇ ಶಾಲೆ ಆಕೆಗೆ ಅಂದಿತು ಓಕೆ! ಖರೆ ಹೇಳಬೇಕೆಂದರೆ ಆಕೆಯ ಶಾಲೆಯ ಮುಖ್ಯ ಉದ್ದೇಶ ಕಲಿಸುವಿಕೆಯಲ್ಲ. ಅವಕಾಶಗಳಿಂದ ವಂಚಿತವಾದ ಕಂದಮ್ಮಗಳಿಗೆ ಬಾಲ್ಯವನ್ನು ಅದಿದ್ದಹಾಗೆಯೇ ಕೊಡುವುದಾಗಿತ್ತು. 1991ರ ಹೊತ್ತಿಗೆ ಶಾಲೆ ‘ಆಕಾಂಕ್ಷಾ’ ಎಂಬ ಸ್ಪಷ್ಟ ರೂಪ ತಳೆಯಿತು. ಅಷ್ಟರಲ್ಲಿ ಶಹೀನ್  Masters in Education ಮಾಡಲು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಕ್ಕೆ ಹೊರಟು ನಿಂತಳು. ಆಗ ಈ ಯೋಜನೆಯ ನಾಯಕತ್ವವನ್ನು ಆರತಿ ಎಂಬಾಕೆ ತೆಗೆದುಕೊಂಡರು.
    ಸ್ವಯಂ ಸೇವಕರು ಹೇಗೆ ಅರ್ಪಿಸಿಕೊಂಡಿದ್ದರೆಂದರೆ ಕೆಲವೊಮ್ಮೆ ಮಕ್ಕಳನ್ನು ಕರೆದುಕೊಂಡು ಬರಲು ಅವರ ಸ್ನಾನ ಮಾಡಿಸುವ, ಬಟ್ಟೆ ಹಾಕುವ ಸರ್ಕಸ್ಸನ್ನೆಲ್ಲ ಮಾಡುತ್ತಿದ್ದರು. 1993ರಲ್ಲಿ ಶಹೀನ್ ಭಾರತಕ್ಕೆ ಮರಳಿದರು. ಸಂಪೂರ್ಣ ಸ್ವಯಂಸೇವಕರ ಮೇಲೆಯೇ ಅವಲಂಬಿತವಾಗಿರುವುದು ಪ್ರಾಯೋಗಿಕ ಯೋಚನೆಯಲ್ಲ. ವೃತ್ತಿಪರ ಶಿಕ್ಷಕರು ಬೇಕು. ಅವರಿಗೆ ಸಂಬಳ ನೀಡಬೇಕು. ಅದಕ್ಕೆ ದುಡ್ಡು...ಹೇಗೆ? ಎಲ್ಲಿಂದ? ಆಗ ರೂಪುಗೊಂಡಿತು ‘Sponsor a centre’ ಎಂಬ ಯೋಜನೆ. 15 ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡುತ್ತಿದ್ದ ಇವರ ಟೀಮ್, 1998ರ ಹೊತ್ತಿಗೆ 480 ಮಕ್ಕಳಿಗೆ 8 ಕೇಂದ್ರಗಳಲ್ಲಿ ಕಲಿಸುವಷ್ಟು ಬೆಳೆಯಿತು. 2002 ರಲ್ಲಿ ಪುಣೆಯಲ್ಲೂ ಕಣ್ಬಿಟ್ಟಿತು ‘ಆಕಾಂಕ್ಷಾ!
    ಆಕಾಂಕ್ಷಾ ಒಂದು Dedicated ಚಟುವಟಿಕೆ.“”ಏನೋ, ನನ್ನ ಕೈಲಾದಷ್ಟು ಮಾಡುತ್ತೇನೆ”” ಎಂಬ ಅಸಹಾಯಕತೆಗೆ ಬಹಷ್ಕಾರವೆಸಗಿ ಕೈಮೀರಿದ್ದನ್ನು ಮಾಡಿದ್ದಕ್ಕೆ ಆಪ್ತವಾದ ಸಂಸ್ಥೆ. ಕೊಳಗೇರಿಯ ಜನರ ”ಸಾಧ್ಯವಾದರೆ ಕಳುಹಿಸುತ್ತೇವೆ” ಎಂಬ ಧೋರಣೆಯನ್ನು ಒಪ್ಪಲಾಗದು. ಏನು ಮಾಡೋಣ? ವ್ಯವಸ್ಥೆಯೊಳಗೆ ಹೊಕ್ಕು ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಯೋಚನೆ ಬಂದದ್ದು ಆಗ. ಹೀಗೆ ಒಟ್ಟು ದತ್ತು ತೆಗೆದುಕೊಂಡ ಶಾಲೆಗಳ ಸಂಖ್ಯೆ 6. ಆಕಾಂಕ್ಷಾಕ್ಕೆ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು. “ಹೊರಚೆಲ್ಲುವಷ್ಟು ಹಣಕೊಡಿ, ನಿಮ್ಮ ಮಕ್ಕಳಿಗೆ ಅದ್ಭುತ ಕಲಿಕೆಯನ್ನು ನೀಡುತ್ತೇವೆ" ಎನ್ನುವ ಹರಕತ್ತು ಆ ಸಂಸ್ಥೆಗಿರಲಿಲ್ಲ.  ಸರ್ಕಾರ ಕಲಿಕೆಗೆ ನೀಡುವ ಹಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದು ಅದರ strategy! ಸಂಸ್ಥೆಯ ಮಂದಿ ಆಗಾಗ ಸಭೆ ಸೇರಿ ಹೇಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕಲಿಸುವುದು  ಎಂಬುದನ್ನು ಕಂಡುಕೊಳ್ಳುತ್ತಿದ್ದರು.
    ಕಲಿಸುವುದು passion ಆಗಿದ್ದ ಅಲ್ಲಿಯ ಶಿಕ್ಷಕರಿಗೆ ಉಡುಗೊರೆಯಂತೆ ಅಲ್ಲಿಯ 87% ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಪಾಸಾಗಿದ್ದರು ! “ಅದರಲ್ಲಿ 58% ಜನ ಕಾಲೇಜಿಗೂ ಹೋಗುತ್ತಾರೆ. ಅವರಿಗೆ ಅವಶ್ಯಕತೆ ಇರುವುದರಿಂದ ಪಾರ್ಟ್ ಟೈಮ್ ಕೆಲಸಕ್ಕೂ ಹೋಗುತ್ತಾರೆ. 15 ರಿಂದ 20 ಸಾವಿರ ರೂಪಾಯಿ ಸಂಪಾದಿಸುತ್ತಾರೆ” ಎಂದು ಹೇಳುವಾಗ ಶಹೀನರ ಕಣ್ಣಲ್ಲಿ ಹೆಮ್ಮೆಯ ಹೊಳಪು. ದೀಪದಲ್ಲಿ ಹೊಳಪಿರುವುದರಲ್ಲೇನು ವಿಶೇಷತೆ? 60 ಆಕಾಂಕ್ಷಗಳಲ್ಲಿ ಬರೋಬ್ಬರಿ 700 ಮಂದಿ ಕಲಿಸುತ್ತಾರೆ, 350 ರೆಗ್ಯುಲರ್ ಸ್ವಯಂಸೇವಕರಿದ್ದಾರೆ. ಸರಿ, ಹೌದು, ಸಂಸ್ಥೆ ಕೆಲವು ಸಾವಿರ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುತ್ತದೆ. ಆದರೆ ಸಮಸ್ಯೆ ಪರಿಹಾರವಾದಂತಾ? ಪವಾಡ ಮಾಡಿ ಸಮಸ್ಯೆಯ ಹೆಡೆಮುರಿಕಟ್ಟಬಹುದಾ? ಮತ್ತೆ ಶಹೀನ್ ಸಹಿಸಲಾರಳು.‘ಹಾಸಿಗೆಯಿದ್ದಷ್ಟು ಕಾಲುಚಾಚೆಂದರೆ “”ಯಾಕೆ, ಹಾಸಿಗೆಯನ್ನೇ ಉದ್ದ ಮಾಡುತ್ತೇನೆ”” ಎಂಬುದು ಆಕೆಯ  smart answer! ‘’Teach for America’’  ಎಂಬ ಅಭಿಯಾನದಿಂದ ಪ್ರೇರೇಪಿತವಾಗಿ ಹುಟ್ಟಿಕೊಂಡಿದ್ದ ‘’Teach for India’’ ಎಂಬ ಯೋಜನೆಯ ಕದ ತಟ್ಟಿದರು ಶಹೀನ್.
    ಈ ಯೋಜನೆಯಲ್ಲಿ ಕೆಲಸಕ್ಕೆ ಸೇರುವ ಮೊದಲು ಸ್ವಲ್ಪ ತಿಂಗಳು ಯುವಜನತೆ ಮಕ್ಕಳಿಗೆ ಕಲಿಸುವ ಕೆಲಸ ಮಾಡುತ್ತಾರೆ. ನಂತರ ಬೇರೆ ಬೇರೆ ರಂಗಗಳಲ್ಲಿ ಕೆಲಸ ಮಾಡುವ ಅವರಿಗೆ ಇಲ್ಲಿನ ಸಮಸ್ಯೆಗಳ ಅರಿವಿರುವುದರಿಂದ ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡಾರು ಎಂಬುದು ಆಲೋಚನೆ. ಕರೆದಾಗ ಬಂದ 8000 ಅರ್ಜಿಗಳಲ್ಲಿ 237 ಜನರನ್ನು ಆಯ್ದುಕೊಳ್ಳಲಾಯಿತು. ಕಡಿಮೆ ಸಂಬಳಕ್ಕೆ ಮುಂಬೈ - ಪುಣೆಗಳಲ್ಲಿನ ಶಾಲೆಗಳಲ್ಲಿ ಅವರು ಕಲಿಸಬೇಕಿತ್ತು. ಅಷ್ಟು ಜನಕ್ಕೆ ರೂ. 20,000 ದಂತೆ ಸಂಬಳ ನೀಡಲು ಸಂಸ್ಥೆಗೆ ಮತ್ತೆ ಹಣದ ಅವಶ್ಯಕತೆ ಬಂತು. ಶಹೀನ್‍ರದ್ದು ಬಡಕುಟುಂವೇನು ಅಲ್ಲ. ಆ ಕುಟುಂಬಕ್ಕಿದ್ದ ಶ್ರೀಮಂತ contactಗಳಿಂದ ಮೊದಲು ಹಣ ಸಂಗ್ರಹವಾಯಿತು. ನಮ್ಮವರಲ್ಲೊಬ್ಬಳು ಯಾರೂ ತುಳಿಯದ ಹಾದಿ ತುಳಿಯುತ್ತಿದ್ದಾಳಲ್ಲ ಎಂಬ ಪ್ರೀತಿಯಿಂದ ! ದಾನಿಗಳಿಗೆ “”ಸಮರ್ಥನಾಯಕರ ಮುಂದಿನ ಪೀಳಿಗೆಯನ್ನು ತರಗತಿಯಲ್ಲಿ ಕಟ್ಟೋಣ ಬನ್ನಿ ” ಎಂದು ಕರೆಕೊಟ್ಟರು. ‘Sponser a fellow’  ಎಂಬ ಯೋಜನೆಯಡಿ ದೇಣಿಗೆ ಸಂಗ್ರಹಿಸಿದರು.
    ಅದಾಗಲೇ ಆಕಾಂಕ್ಷಕ್ಕೊಂದು ‘ಬ್ರ್ಯಾಂಡ್ ವಾಲ್ಯೂ’ ಬಂದಿತ್ತು. 3500 ಮಕ್ಕಳನ್ನೊಳಗೊಂಡಿದ್ದ ಸಾಧಾರಣ ದೊಡ್ಡ ಆಕಾಂಕ್ಷಾಗೆ ಅಸಾಧಾರಣ ಖ್ಯಾತಿ ತಂದುಕೊಟ್ಟಿದ್ದು ಅದರ ಗುಣಮಟ್ಟ. ಶಹೀನ್‍ರೇ ಹೇಳುವ ಪ್ರಕಾರ ಗಳಿಸಿದ ವರ್ಚಸ್ಸನ್ನು ಸಂಭಾಳಿಸುವುದು ಅದನ್ನು ಗಳಿಸುವುದಕ್ಕಿಂತ ಕಷ್ಟ. ಆದರೆ, ಸಂಸ್ಥೆಗೆ ಹೊಂದುವ ಶಿಕ್ಷಕರನ್ನು ಆಯ್ದು ಅವರ ಕೆಲಸವನ್ನು ಸ್ವತಂತ್ರವಾಗಿ ಮಾಡಲು ಬಿಟ್ಟರೆ, ಅವರ ಕೆಲಸದ ಪ್ರತಿಫಲವನ್ನು ಮನದಟ್ಟು ಮಾಡಿಬಿಟ್ಟರೆ, ಅತ್ಯಂತ ಗುಣಮಟ್ಟದ ಸೇವೆಯನ್ನು ಅವರು ಕೊಡುತ್ತಾರೆ. ಆಕಾಂಕ್ಷಾ ಬೆಳೆಯುತ್ತಿರುವ ಸಂಸ್ಥೆ, ಬೆಳೆಸಲು ಅನೇಕ ಜನರು ಬೇಕು. ಅವರಿಗೆಲ್ಲ ಒಳ್ಳೆಯ ಸಂಬಳವನ್ನೇ ನೀಡಬೇಕು. ಆದರೆ” ಎಷ್ಟೇ ಕಷ್ಟ ಇದ್ದರೂ “Let’s keep working on it” ಎಂಬುದು ಶಹೀನರ ಸಿದ್ದಾಂತ.
    ಸಮಾಜದ ಹಿತಕ್ಕಾಗಿ ಮುಡಿಪಾಗಿಟ್ಟರೂ ಶಹೀನ್‍ಗೆ ತಮ್ಮದು ಎಂದು ಒಂದು ಬದುಕಿರುತ್ತದಲ್ಲವಾ? ಒಳ್ಳೆಯ ಸಂಬಳವನ್ನೇ ಪಡೆಯುವ ಶಹೀನ್‍ಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಾನಾ ಮತ್ತು ಸಮರಾ. ಆಕೆಯ ಜೀವನದಲ್ಲಿ ಎಲ್ಲವೂ ಸರಿಯಿದೆಯೆಂದುಕೊಳ್ಳಬೇಡಿ. ಆರು ತಿಂಗಳ ಗರ್ಭಿಣಿಯಾಗಿದ್ದಾಗ ಆಕೆ ವಿವಾಹವಿಚ್ಛೇದನ ಎದುರಿಸಬೇಕಾಯಿತು.
    ಆಕೆಯ “work culture’ ಎಂಥದ್ದು ಎಂದರೆ, ಡೆಲಿವರಿಯಾಗುವ ಹಿಂದಿನ ದಿನದವರೆಗೂ ಆಕೆ ಆಕಾಂಕ್ಷಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವರ ಮಾತುಗಳಲ್ಲೇ ಕೇಳಿ: “I really literally was in a meeting when I went into labour and I went to the hospital. And I think a week after I returned home, I started working again” ಈಗೇನನ್ನುತ್ತೀರಿ..? ಬೆಳಿಗ್ಗೆ ಮಕ್ಕಳನ್ನು ಅವರೇ ರೆಡಿ ಮಾಡುತ್ತಾರಂತೆ. “”ಸಂಜೆ ಶಾಲೆಯಿಂದ ಆ ಮಕ್ಕಳಿಬ್ಬರು ಅಜ್ಜಿ ಮನೆಗೆ ಹೋಗುತ್ತಾರೆ. ಬರುವಷ್ಟರಲ್ಲಿ ರಾತ್ರಿ ಏಳುವರೆ ಆಗಿರುತ್ತದೆ.  ಅಷ್ಟರಲ್ಲಿ ನಾನೂ ಬರುತ್ತೇನೆ. ಮನೆಯಲ್ಲಿದ್ದಾಗ ರಾತ್ರಿ ಹೊರಹೋಗುವ ಕೆಲಸವೇನು ಬರುವುದಿಲ್ಲ. ಹೊರ ಊರಿಗೆ ಹೋದಾಗ ಕಸಿನ್/ಗೆಳೆಯರ್ಯಾರಾದರು ಮಕ್ಕಳನ್ನು ನೋಡಿಕೊಳ್ಳುತ್ತಾರೆ” ಎನ್ನುತ್ತಾರೆ ಶಹೀನ್, Manageable only to her!
    ಜೀನ್ಸ್, ಹಾಲ್ಟರ್ - ಟಾಪ್ ತೊಡುವ ಶಹೀನ್, ನೋಡಿದ ಕ್ಷಣಕ್ಕೆ ನಿಮಗೆ ಸಮಾಜ ಸೇವಕಿಯಂತೆ ಕಾಣಲಾರರು! ಒಮ್ಮೆ ಕಾಲೇಜಿನಲ್ಲಿದ್ದಾಗ, ಖಾದಿ ಸೀರೆ ಉಟ್ಟುಹೋದಾಗ ಗೆಳತಿಯೊಬ್ಬರು ಇವರನ್ನು ಪ್ರೊಫೆಸರ್ ಎಂದು ತಿಳಿದು ಮಾಡಾಡಿಸಿದ್ದರಂತೆ ! “You don’t look like a social worker”  ಎಂದು ರಶ್ಮಿ ಬನ್ಸಾಲ್ ಕೇಳಿದಾಗ ಹೀಗೆ
    ಸಮಾಜಸೇವೆ ಬೇಡುವುದು ಕಾಳಜಿಯನ್ನಷ್ಟೇ ಅಲ್ಲ, ದೃಢ ಮನಸ್ಸನ್ನು ಕೂಡ! ಸಾಮಾನ್ಯರಾದ ನಮ್ಮಲ್ಲಿ ಕಾಳಜಿಯಿರಬಹುದು, ಬದಲಾವಣೆ ನನ್ನಿಂದಾಗಲಿ ಎಂಬ ದೃಢ ಮನಸ್ಸಲ್ಲ! ಅಷ್ಟಕ್ಕೂ ಶಹೀನ್‍ಗೆ ಇದೆಲ್ಲ ಅವಶ್ಯಕತೆ ಇರಲಿಲ್ಲ. ಆಕೆಯ ಬಳಿ ಹೋಗಿ “ಸಹಾಯ ಮಾಡು” ಎಂದು ಭಾರತ ಸರ್ಕಾರವೇನು ಗೋಗರೆದಿರಲಿಲ್ಲ. ಅಮೇರಿಕೆಯಲ್ಲಿ ಓದು ಮುಗಿಸಿ, ಇಂಗ್ಲೆಂಡಿನಲ್ಲಿ ಕೆಲಸ ಮಾಡಿ, ನಿವೃತ್ತಿ ಜೀವನವನ್ನು ಆಸ್ಟ್ರೇಲಿಯಾದಲ್ಲಿ ಕಳೆಯಬಹುದಿತ್ತು. ಆಕೆಯನ್ನು ಯಾರೂ ಡಿಸ್ಟರ್ಬ್ ಮಾಡುತ್ತಿರಲಿಲ್ಲ. ಆಕೆಯ ಮುಂದಿದ್ದದೂ ಅದೇ ಸಮಾಜ, ನಮ್ಮ ಮುಂದಿರುವುದೂ ಅದೇ ಸಮಾಜ. ಆದರೆ ಆಕೆಯಲ್ಲಿ ಸ್ಫುರಿಸಿತ್ತು ಬದಲಿಸುವ ಇಚ್ಛಾಶಕ್ತಿ! ಕೈಚೆಲ್ಲಿ ಕೂರದೇ ಕ್ರಾಂತಿ ಮಾಡುತ್ತಾರಲ್ಲ, ಇವರಿಗೆಲ್ಲ ದೇವರೇನಾದರೂ ಎಕ್ಸ್ಟ್ರಾ ಪವರ್ ಕೊಟ್ಟಿದ್ದಾನಾ? ದಿನಕ್ಕೆ 24 ಗಂಟೆಗಿಂತ ಹೆಚ್ಚನ್ನು ಗುಟ್ಟಾಗಿ ಕೊಟ್ಟಿದ್ದಾನಾ? ದುರವಸ್ಥೆಗೆಲ್ಲ ಸರ್ಕಾರ, ರಾಜಕಾರಣಿಗಳನ್ನು ದೂರುವ ನಾವು, ನಮಗ್ಯಾಕೆ ತ್ರಿವಿಕ್ರಮ ಸಾಧಿಸಿದ ಶಹೀನ್‍ನಂಥವರು ನಮ್ಮನಿಮ್ಮಲ್ಲೊಬ್ಬರೆಂಬುದು ಅರ್ಥವಾಗುವುದಿಲ್ಲ? ಬದುಕಿನ ಪ್ರತಿಹೆಜ್ಜೆಯಲ್ಲೂ ಅಸಹಾಯಕರಾಗುವ, ವ್ಯವಸ್ಥೆ ಮೇಲೆ ಹರಿಹಾಯುವ ನಮಗೆ, ನಾವೂ ಇದೇ ವ್ಯವಸ್ಥೆಯ ತುಂಡೆಂಬುದು ತಡವಾಗಿಯೂ ಹೊಳೆಯುವುದಿಲ್ಲವಲ್ಲ? “ಶಹೀನ್ ಮಾತ್ರ ‘ಕೆಸರಲ್ಲೂ ಕನಸು ಮೊಗೆದಿದ್ದರು, ಮೊಗೆದ ಕನಸು ಕೊಳಗೇರಿಯಲ್ಲಿ ನನಸಾಗಿತ್ತು’!”

                               -ಸಂಕೇತ್ ಡಿ ಹೆಗಡೆ,
                            
ಕಾರಣವಿವರಿಸಿದ್ದರು ಶಹೀನ್.
   ಸಾಗರ.

Wednesday, July 29, 2015

ಸಮಯ ’ಪ್ರಜ್ಞೆ’ ಎಲ್ಲೆ ಮೀರಿದರೆ ಸಮಾಜ ಸಿಡಿದೇಳಬೇಕಾಗುತ್ತೆ..!

  ಮಾನವ ಸಮಾಜ ಕೆಲವು ವ್ಯಕ್ತಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ! ಯೆಸ್, ಅವರೂ ಇದೇ ಪ್ರದೇಶದಲ್ಲಿ ಹುಟ್ಟಿದವರು,ಇದೇ ಗಾಳಿ ಸೇರಿಸಿದವರು, ಇದೇ ಮಣ್ಣಿನಲ್ಲಿ ಬೆಳೆದ ಆಹಾರ ತಿಂದವರು, ನಾವು ಕುಡಿಯುವ H2Oವನ್ನೇ ಕುಡಿದವರು. ಆದರೆ ಅವರಲ್ಲೊಂದು ಅಪೂರ್ವ 'Character' ಮೂಡಿರುತ್ತೆ! ಕ್ಷಮಿಸಿ, ಅವರು ಬೆಳೆಸಿಕೊಂಡಿರುತ್ತಾರೆ. ಅದು ನಿಷ್ಕಳಂಕ ವ್ಯಕ್ತಿತ್ವ, ಕೈತೊಳೆದುಕೊಂಡು ಮುಟ್ಟಬೇಕು! ಅಂಥವರು ಜನರಿಗೆ ತೀರಾ ಆಪ್ಯಾಯಮಾನವಾಗಿರುತ್ತಾರೆ. ಅವರು ಜೀವನದಲ್ಲಿ ಯಾರೂ ಸಾಧಿಸದಿದ್ದದ್ದೊಂದನ್ನು ಸಾಧಿಸಿರಬಹುದು, ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರಬಹುದು, ಅಥವಾ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿರಬುಹುದು, ಕೊನೆಗೆ ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿರಬಹುದು! It doesn't matter, ಜನ ಅವರನ್ನು ಪ್ರೀತಿಸುವುದು ಖಂಡಿತ ಇವ್ಯಾವುದಕ್ಕೂ ಅಲ್ಲ! ಕೇವಲ ಅಂಥವರ ಹೃದಯ ಸಂಪನ್ನತೆಗೆ. ಕಲಾಮ್ ಸರ್ ಒಮ್ಮೆ ಬಾಯ್ಬಿಟ್ಟು ಹೇಳಿದ್ದರು " I am not a handsome guy, but I can give my hand-to-some-one who needs help. Beauty is in heart, not in face" ಅಂತ. ಕಲಾಮ್ ದೇಶ ಬಾಂಧವರ ಕಣ್ಮಣಿಯಾಗಿದ್ದು ತಮ್ಮ ರೂಪದಿಂದಲ್ಲ, ನಡತೆಯಿಂದ. ಕಲಾಮ್ ತೀರಾ ಪುಟ್ಟ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದ ಎಷ್ಟು ಫೋಟೋಗಳು ಬೇಕು? ಕಂದಮ್ಮಗಳು ತಾತನನ್ನು ಹಾಗೆ ಅವರನ್ನು ಸುತ್ತುವರಿಯುತ್ತಿದ್ದವಲ್ಲ, ಅವುಗಳಿಗೆ ರಾಷ್ಟ್ರಪತಿ ಅಂದರೇನು, Rocket Engineer ಅಂದರೇನು ಅಂತ ಬಿಲ್ ಕುಲ್ ಗೊತ್ತಿರುವುದಿಲ್ಲ!
     ಆದರೆ ನಮ್ಮಲ್ಲಿ ಕೆಲವರು ಅತಿಬುಧ್ಧಿವಂತರಿದ್ದಾರೆ. ಅಭ್ಯಂತರವಿಲ್ಲ ಬಿಡಿ, ಪ್ರಕೃತಿನಿಯಮ. ಅಕ್ಕಿಯಲ್ಲಿ ನೆಲ್ಲೇ ಇರಬಾರದೆಂದರೆ? ಆದರೆ ಅವರು ತಮ್ಮ ಸಮಯಸಾಧಕತನ, ಜ್ಞಾನ, ಇತಿಹಾಸ ಪ್ರಜ್ಞೆಯನ್ನು ತೋರಿಸಹೋಗಿ ಕಲಾಮ್ ರಂಥವರ ಬಗ್ಗೆ ಈ ಸಮಯದಲ್ಲಿ ಎನೇನೋ ಬರೆದರೆ? ಬರಹವೇನೋ ಬಾಲಿಶ, ಹೋಗಲಿ ಬಿಡಿ, ಆದರೆ ಅದು ಸಮಾಜದ ಸ್ವಾಸ್ಥ್ಯ ಕೆಡಿಸುವ side effect ಹೊಂದಿರಬಾರದು ಅಲ್ಲವಾ? We have better business ಅಂತ ಮೂಗುಮುರಿಯೋಣ ಅಂದರೆ, ಇದು ಅವರ ಎರಡನೆಯ ತಪ್ಪು! ಹಿಂದೊಮ್ಮೆ ವಿವೇಕಾನಂದರ ಬಗ್ಗೆ ಇದಕ್ಕಿಂತ ಅವಿವೇಕತನದಿಂದ ಬರೆದಿದ್ದರು.  ಅಬ್ದುಲ್ ಕಲಾಮ್ ಹೇಗೆ ರಾಷ್ಟ್ರಪತಿಯಾದರು ಅಂತ ’ಅದ್ಭುತವಾಗಿ’ ವಿವರಿಸಿ, ದಿನೇಶ್ ಅಮಿನ್ ಮಟ್ಟು ಸರ್ vartamaana.com ನಲ್ಲಿ ಬರೆದಿದ್ದಾರೆ. ಮೊದಲು ಈ ಲಿಂಕಿನಲ್ಲಿ ಓದಿಕೊಂಡುಬಿಡಿ.
http://www.vartamaana.com/2015/07/28/%E0%B2%95%E0%B2%B2%E0%B2%BE%E0%B2%AE%E0%B3%8D-%E0%B2%95%E0%B3%8D%E0%B2%B7%E0%B2%BF%E0%B2%AA%E0%B2%A3%E0%B2%BF-%E0%B2%B9%E0%B3%8A%E0%B2%B0%E0%B2%9F%E0%B2%BF%E0%B2%A6%E0%B3%8D%E0%B2%A6/
ಮಾನ್ಯ ದಿನೇಶ್ ಅಮಿನ್ ಮಟ್ಟು ಅವರ ಪ್ರಕಾರ ಕಲಾಮ್ ರ ಪ್ರತಿಭೆ ಅವರಿಗೆ ಪ್ರೆಸಿಡೆನ್ಸಿಯನ್ನು ಕೊಡಲಿಲ್ಲವಂತೆ. ವಾಜಪೇಯಿಯವರು ಕೊಟ್ಟರಂತೆ. ಅದೂ ಯಾಕಾಗಿ ಗೊತ್ತಾ? ನೋಡಿ, ಅವರು  ಬರೆಯುತ್ತಾರೆ- "ಮೊದಲನೆಯದಾಗಿ ಗುಜರಾತ್ ಕೋಮುಗಲಭೆಯಿಂದಾಗಿ ಎನ್ ಡಿಎಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಕೋಮುವಾದಿ ಸರ್ಕಾರ ಎನ್ನುವ ಕಳಂಕವನ್ನು ತೊಡೆದುಹಾಕುವ ಉದ್ದೇಶ ವಾಜಪೇಯಿ ಅವರಿಗಿತ್ತು. ಎರಡನೆಯದಾಗಿ ನರೇಂದ್ರ ಮೋದಿ ಅವರ ರಾಜೀನಾಮೆ ಪಡೆಯಲು ಹೊರಟಿದ್ದವರಿಗೆ ತಮ್ಮ ಸಹದ್ಯೋಗಿಗಳ ವಿರೋಧದಿಂದಾಗಿ ಸಾಧ್ಯವಾಗದೆ ಅವಮಾನವಾಗಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ತನ್ನದೇ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ತನ್ನ ಸ್ಥಾನದ ಬಲವನ್ನು ತೋರಿಸುವ ಉದ್ದೇಶವೂ ಅವರಿಗಿತ್ತು. ಮೂರನೆಯದಾಗಿ ಬಿಜೆಪಿ ಮುಸ್ಲಿಮ್ ವಿರೋಧಿ ಪಕ್ಷ ಎಂದು ಆರೋಪಿಸುವವರಿಗೆ ಉತ್ತರವನ್ನೂ ನೀಡುವ ಉದ್ದೇಶವೂ ವಾಜಪೇಯಿ ಅವರಿಗಿತ್ತು." 
      ಅಯ್ಯೋ ಸರ್ ದಿನೇಶ್ ಅಮಿನ್ಮಟ್ಟು ಅವರೇ, ನೀವು ಉಪ್ಪು ತಿಂದಷ್ಟು ನಾವು ಅನ್ನ ತಿಂದಿಲ್ಲ. ನೀವು ಪತ್ರಿಕೋದ್ಯಮದಲ್ಲಿ ಅಗಾಧ ಅನುಭವ ಹೊಂದಿದ್ದೀರಿ. ಕಲಾಮ್ ರಂಥದ್ದೊಂದು ಚೈತನ್ಯ ಇನ್ನಿಲ್ಲವಾದಾಗ ಏನು ಬರೆಯಬೇಕು ಅಂತ ನಮ್ಮಂಥ ಅಲ್ಪರು ಹೇಳಬೇಕೇನು?
ನೀವು ಓದಿ ತಿಳಿದುಕೊಂಡವರು. ಕಲಾಮ್ ಹೇಗೆ ಛಲದಿಂದ ಕಲಿತರು, ಹೇಗೆ ಒಂದಾದಮೇಲೊಂದು ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಿದರು, ಆ ಮೂಲಕ ದೇಶದ ದಿಕ್ಕನ್ನು ಹೇಗೆ ಬದಲಿಸಿದರು ಅನ್ನುವುದನ್ನ ನಮ್ಮಂತ ’ಅಜ್ಞಾನಿಗಳಿಗೆ’ ತಮ್ಮ ಲೇಖನದ ಮೂಲಕ ತಿಳಿಸಿಕೊಡಿ. ಅದು ಬಿಟ್ಟು ಅದ್ಯಾವುದೋ ಓಬೀರಾಯನ ಕಾಲದ ಅಡಗೂಲಜ್ಜಿ ಕಥೆ ಹೇಳಬೇಡಿ, ನೀವು great ಅಂತ ಅನ್ನಿಸುವುದಿಲ್ಲ. ಅದು ಹೇಗೋ ಸರ್ಕಸ್ ಮಾಡಿ ವಾಜಪೇಯಿಯವರನ್ನೂ ಸಿಕ್ಕಿಸಿ ಹಳಿದುಬಿಟ್ಟರೆ ದೊಡ್ಡ ಪ್ರಗತಿಪರ ಅನ್ನುವ impression ಬರುವುದಿಲ್ಲ. ಅಷ್ಟಕ್ಕೂ ಏನನ್ನು ಸಾಧಿಸಹೊರಟಿದ್ದೀರಿ?
    ಕೊನೆಗೆ ಅಮಿನ್ ಸಾಹೇಬರು " ಸಹಮತ ಮೂಡಿಸಲು ವಾಜಪೇಯಿ ಅವರು ಮೊದಲು ಪ್ರಮೋದ್ ಮಹಾಜನ್ ಅವರನ್ನು ಬಾಳ್ ಠಾಕ್ರೆ ಅವರಲ್ಲಿಗೆ ಕಳುಹಿಸಿಕೊಟ್ಟರು. ನಂತರ ಮಹಾಜನ್ ಅವರನ್ನೇ ಕಲಾಮ್ ಅವರ ಚುನಾವಣಾ ಏಜಂಟ್ ಮಾಡಿದರು. ಅಬ್ದುಲ್ ಕಲಾಮ್ ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ವಾಜಪೇಯಿ ಅವರು ಚಂದ್ರಬಾಬು ಅವರಿಗೆ ನೀಡಿದ್ದರು. ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ವ್ಯಕ್ತಪಡಿಸಿತ್ತು. (ಅಲೆಗ್ಸಾಂಡರ್ ಹೆಸರು ತಪ್ಪಿಹೋಗಿ ಸೋನಿಯಾಗಾಂಧಿ ಪ್ರಧಾನಿಯಾಗುವ ಅವಕಾಶ ಜೀವಂತವಾಗಿ ಉಳಿಯಿತಲ್ಲ ಎನ್ನುವ ಸಮಾಧಾನ ಕಾಂಗ್ರೆಸ್ ನಾಯಕರದ್ದು). ಆದರೆ ಎಡಪಕ್ಷಗಳು ಮಾತ್ರ ಬೆಂಬಲ ನೀಡಲಿಲ್ಲ. ಕೊನೆಗೆ ವಾಜಪೇಯಿ ಅವರ ಬತ್ತಳಿಕೆಯಿಂದ ಹೊರಟ ‘ಕಲಾಮ್ ಕ್ಷಿಪಣಿ’ ಗುರಿ ತಲುಪಿತ್ತು. " ಅಂತೆಲ್ಲ ಒಂದು ಕ್ಲಿಷ್ಟ algorithm ನಂತೆ ಬರೆದು ಕೈತೊಳೆದುಕೊಂಡುಬಿಟ್ಟರು. ಒಂದು ವಿಷಯ ಅಮಿನ್ ಸರ್, "ಕೊನೆಗೆ ವಾಜಪೇಯಿ ಅವರ ಬತ್ತಳಿಕೆಯಿಂದ ಹೊರಟ ‘ಕಲಾಮ್ ಕ್ಷಿಪಣಿ’ ಗುರಿ ತಲುಪಿತ್ತು. " ಅಂತ ನಿಮ್ಮಿಂದ ಬರೆಸಿಕೊಳ್ಳುವ ದೊಡ್ಡ ’ಸೌಭಾಗ್ಯ’ ಕಲಾಮ್ ರಿಗೆ ಬೇಡಿತ್ತು. ಕಲಾಮ್ ಯಾರೋ ಹಚ್ಚಿದ ಅಗ್ನಿಯಿಂದ  ಗುರಿ ಮುಟ್ಟುವ ಕ್ಷಿಪಣಿಯಲ್ಲ. ಬದಲಾಗಿ ಅವರು AGNI ಸೀರೀಸ್ ಕ್ಷಿಪಣಿಗಳ ರುವಾರಿ. ಪರರ ಬದುಕಲ್ಲಿ ದೀಪ ಬೆಳಗಿ ಗುರಿಮುಟ್ಟಿಸುವ ಇಂಧನ.
     ಸರಿ ಬಿಡಿ. ವಾಜಪೇಯಿಯವರೇ ಸರ್ಕಸ್ ಮಾಡಿ ಕಲಾಮ್ ರನ್ನು ರಾಷ್ಟ್ರಪತಿ ಮಾಡಿದರು ಅಂತಿಟ್ಟುಕೊಳ್ಳೋಣ. ಹಾಗಾದದ್ದು ಬಹಳ ಒಳ್ಳೆಯದೇ ಆಯಿತಲ್ಲ? ವಾಜಪೇಯಿಯವರಿಗೆ ಇವತ್ತು ದೇಶ ಎದ್ದು ನಿಂತು ದೊಡ್ಡ ಥ್ಯಾಂಕ್ಸ್ ಹೇಳಬೇಕು. "ಹಿಂದೆ ಕಂಡಿಲ್ಲ, ಮುಂದೆ ಗೊತ್ತಿಲ್ಲ" ಅನ್ನುವಂಥ ರಾಷ್ತ್ರಪತಿಯನ್ನು ಕೊಟ್ಟಿದ್ದಕ್ಕೆ. ನೀವು ಅವಕಾಶ ಸಿಕ್ಕಿತು ಅಂತ ವಾಜಪೇಯಿಯವರನ್ನು ಹಳಿದು ಬಿಟ್ಟರೆ, "ವಾಜಪೇಯಿ ಅಂದರೇನು" ಅಂತ ದೇಶದ ಜನರಿಗೆ ಗೊತ್ತು. ನೀವು mis-introduce ಮಾಡುವ ಅವಶ್ಯಕತೆಯಿಲ್ಲ, ಕ್ಷಮಿಸಿ. ನೀವು ವಿವೇಕಾನಂದರ ಬಗ್ಗೆ ’ಶತಮಾನದ ಲೇಖನ’ ಬರೆದಾಗ ನನಗೆ ಗೊತ್ತಾಗಿರಲಿಲ್ಲ. ಮೊನ್ನೆ ವಿವಾದವೆದ್ದಾಗ ಅದನ್ನೂ ಓದಿದೆ. ಇಷ್ಟು ತಡವಾಗಿಯೇಕೆ ಪ್ರತಿ-ಲೇಖನ ಬರೆಯೋದು ಅಂತ ಕೈಬಿಟ್ಟಿದ್ದೆ. ಆದರೆ ಎರಡನೇ ಬಾರಿ ನೀವು ಕಲಾಮ್ ರನ್ನು ಆರಿಸಿಕೊಂಡಿದ್ದೀರಿ, ಅದೂ ಈ ಸಮಯದಲ್ಲಿ. ಎರಡನೇ ಬಾರಿ ಮಾಡುವುದನ್ನು ’ತಪ್ಪು’ ಅನ್ನುವುದಿಲ್ಲ, ’ಆಯ್ಕೆ’ ಅನ್ನುತ್ತಾರೆ. ಎಲ್ಲದಕ್ಕೂ ಕೆಲವರು ತಮ್ಮ ಪೂರ್ವಗ್ರಹವಾದ ಎಡಪಂಥ ಅಥವಾ ಬಲಪಂಥವನ್ನೇ ತಳಕುಹಾಕುತ್ತ ಕುಳಿತುಬಿಟ್ಟರೆ, ಯಾವ ಪಂಥಕ್ಕೂ ಸೇರದ ನಮ್ಮಂಥ ಸಾಮಾನ್ಯ ಜನರಿಗೆ ಅಸಹನೆ ತಂದುಬಿಡುತ್ತೆ. ತಾಳ್ಮೆ ಕಳೆದುಹೋಗಿ ಲೇಖನಿ ಹಿಡಿಯಬೇಕಾಗುತ್ತೆ. 
     2020ರ ಒಳಗೆ ಭಾರತವನ್ನು ಅಭಿವೃಧ್ಧಿ ಹೊಂದಿದ  ರಾಷ್ಟ್ರವನ್ನಾಗಿಸಬೇಕೆಂಬು ಕಲಾಮ್ ರ ಕನಸಾಗಿತ್ತು. ಅದು ಕೋಟ್ಯಂತರ ಭಾರತೀಯರ ಕನಸೂ ಹೌದು. ನನಸಾಗಬೇಕಾದರೆ ದೇಶ ಅದರ ಕಡೆ concentrate ಮಾಡಬೇಕಾಗುತ್ತೆ. ಇಸ್ರೇಲಿಯನ್ನರು ಕಳೆದ ಶತಮಾನದ ಉತ್ತರಾರ್ಧದಲ್ಲಿ ದುಡಿದರಲ್ಲ ಹಾಗೆ ದುಡಿಯಬೇಕಾಗುತ್ತೆ. ವೈಯಕ್ತಿಕ ಅಥವಾ ಪಕ್ಷದ ಒಳಿತಿಗಿಂತ ಮಿಗಿಲಾಗಿ ಸಮಾಜದ ಅಥವಾ ದೇಶದ ಒಳಿತಿನ ಬಗ್ಗೆ ಯೋಚಿಸಿ ಕಾರ್ಯೋನ್ಮುಖವಾಗಬೇಕಾಗತ್ತೆ.  ಹೀಗೆ ಬಾಲಿಶವಾಗಿ ನೀವು ಎಡ-ಬಲ ಪಂಥದವರು ಜಗಳವಾಡುತ್ತ ಕುಳಿತುಬಿಟ್ಟರೆ?ಒಬ್ಬ ಸಾಮಾನ್ಯನಾಗಿ ನಾನು ಈ ಲೇಖನವನ್ನು ಬರೆದಿದ್ದು ಎಡ-ಬಲ ಪಂಥದವರಿಗೆ ಇದನ್ನು ಹೇಳಲು ಅಷ್ಟೆ...The crying need of India is some 'Seriousness'. ದಯವಿಟ್ಟು ಒಳ್ಳೆಯದೇನನ್ನೂ ಸೃಷ್ಟಿಸಲು ಸಾಧ್ಯವಾಗದಿದ್ದರೆ, atleat ಕೆಟ್ಟದೇನನ್ನೂ ಸೃಷ್ಟಿಸಬೇಡಿ..

Tuesday, July 7, 2015

ಸಮಸ್ತ ಭಾರತೀಯರ ಹೆಮ್ಮೆ!

     ಆತ ಭಾರತೀಯ ಸೇನೆಯ ಮಗದೊಬ್ಬ ಕ್ಯಾಪ್ಟನ್ ಅಷ್ಟೆ! ಆವತ್ತೂ ಇವತ್ತಿನದೇ ಡೇಟು! ೭ ಜುಲೈ.  ಇವತ್ತಿಗೆ ಕರೆಕ್ಟಾಗಿ ಹದಿನಾರು ವರ್ಷಗಳ ಹಿಂದಿನ' ಫ್ಲ್ಯಾಷ್  ಬ್ಯಾಕು'. ಕಾರ್ಗಿಲ್ ಯುದ್ಧದ ರಣರಂಗ. ಅದೇ ಕಾರ್ಗಿಲ್ ಯುದ್ಧದ ಒಂದು ಗುಡ್ಡಗಾಡು. ವಂಚಕ ಹೇಡಿ ಪಾಕಿಸ್ತಾನೀ ನುಸುಳುಕೋರರ ಹಾಗೂ ಭಾರತೀಯ ಸೇನೆಯ ತುಕಡಿಯೊಂದರ ನಡುವಣ ಕಾಳಗ. Right now, ಆ ಕಾಳಗದ ಕ್ಲೈಮ್ಯಾಕ್ಸ್. ಒಬ್ಬ ಕ್ಯಾಪ್ಟನ್, ಅದೇ ಮೇಲೆ ಹೇಳಿದ್ದೆನಲ್ಲ ಆತ. ತನಗಿಂತ ಮೊದಲು ಹೋಗಬೇಕಿದ್ದ ಸುಬೇದಾರನಿಗೆ "तू बाल-बच्चेदार है, हट जा पीचे" ಅಂತ ಕೂಗಿದ. "ನಿನಗೆ ಮಕ್ಕಳು ಮರಿ ಇದಾವ. ನಡೀಲೆ ಆಚೆ!" ಅಂತ ಅರ್ಥ! ಹೋಲ್ಡ್ ಡೌನ್, ಈತನೇನು ಜೀವನ ಸಾಕಾದವನಲ್ಲ, ಈತನ ಕಾಲುಭಾಗ ಜೀವನವೂ ಮುಗಿದಿರಲಿಲ್ಲ. ಅವನಿಗಾಗ 24ರ ಹರೆಯ! ತಾನು ಮುಂದುವರೆದ. ಗುಂಡೇಟು ತಿಂದ, ಎಡವಿದ, ದಾಳಿಗೆ ಎದೆಗೊಟ್ಟ, ಆದರೂ ತ್ರಿವಿಕ್ರಮನಂತೆ ನುಗ್ಗಿದ. ಕೊನೆಗೊಮ್ಮೆ, ಅಲ್ಲೇ 'जय माता दि ' ಅಂತ ಕೂಗಿ ಯುದ್ಧಾಂಕಣದಲ್ಲೇ ಕೊನೆಯುಸಿರೆಳೆದ. ಕೊನೆಯುಸಿರೆಳೆಯುವ ಮುನ್ನ ಉಸಿರಿಗೊಬ್ಬನಂತೆ ಐದು ಶತ್ರು ಸೈನಿಕರನ್ನ ಕೊಂದ. ಅವರ ತೀರ ಹತ್ತಿರಕ್ಕೆ, ಅಂದರೆ ಶತ್ರುವಿನ  ಸುಮಾರು ಒಂದು ಮಾರು ಹತ್ತಿರದಿಂದ ಅವರ ಎದೆಗೆ ಗುಂಡು ಹೊಕ್ಕಿಸಿದ. ಇವನ ಶೌರ್ಯ ಇಲ್ಲಿಗೆ ಮುಗಿಯುವುದಿಲ್ಲ, ಇಲ್ಲಿಂದ ಶುರುವಾಗುವುದೂ ಇಲ್ಲ. ಮುಂದೆ ಓದಿ. ನೆನಪಿರಲಿ, ಈತ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದವ. 'ದಿ ಪರಮವೀರ ಚಕ್ರ'ವನ್ನು ಯುದ್ಧದಲ್ಲಿ ಭಾಗವಹಿಸಿದವರಿಗೆಲ್ಲ ಕೊಡುವುದಿಲ್ಲ! It is not surely a satisfactory certificate! ಆತನ ಹೆಸರೊಂದನ್ನು ಹೇಳಿಬಿಡುತ್ತೇನೆ, ಅದು 'ವಿಕ್ರಮ್ ಬಾತ್ರಾ'!
     ಆತ ಯಾವ ಪರಿ ದಿಟ್ಟನ್ನಾಗಿದ್ದನೆಂದರೆ, ನಾವು ನೀವೆಲ್ಲ ನಿಕ್ ನೇಮ್ ಅಂತ ಗೆಳೆಯರಲ್ಲಿ ಅವರ ಹೆಸರನ್ನು ಕತ್ತರಿಸಿ ಕರೆದುಕೊಳ್ಳುತ್ತೇವಲ್ಲ? ಆದರೆ ಈತನಿಗೆ ಸೇನೆಯ ಇತರ ಗೆಳೆಯರು ನಿಕ್ ನೇಮ್ ಅಂತ ಬೇರೆಯದೇ ಹೆಸರಿಟ್ಟಿದ್ದರು, 'ಶೇರ್ ಷಾ' ಅಂತ. 'ಸಿಂಹಗಳ ರಾಜ' ಅಂತ! ಇವತ್ತಿಗೂ ಸೇನಾ ಪರಿಣಿತರು ಆವತ್ತು ವಿಕ್ರಮ್ ಬಾತ್ರಾ Point 4875 ಎಂಬ ಬೆಟ್ಟದ ತುದಿಯಲ್ಲಿ ಶತ್ರುಗಳ  ಮೇಲೆ ನುಗ್ಗಿದ ಪರಿಯನ್ನು ಅತಿಮಾನುಷ ಅಂತಲೇ ಪರಿಗಣಿಸುತ್ತಾರೆ. ಈತನ ಜಾಗದಲ್ಲಿ ಮತ್ತೊಬ್ಬ ಸೈನಿಕನಿದ್ದಿದ್ದರೆ ಹಾಗೆ ಮಾಡುತ್ತಿರಲಿಲ್ಲವೇನೋ ಅಂತ ನಂಬುತ್ತಾರೆ! ಇದಕ್ಕೂ ಮೊದಲು, ಅಂದರೆ ಅದೇ ವರ್ಷದ(೧೯೯೯) ಜೂನ್ 20 ರಂದು ಮತ್ತೊಂದು ಕಾರ್ಯಾಚರಣೆಯಲ್ಲಿ  ಇದೇ ಕ್ಯಾಪ್ಟನ್ ಬಾತ್ರಾ ಭಾಗವಹಿಸಿದ್ದರು . ಅದು Point 5140 ಎಂಬ ಬೆಟ್ಟವನ್ನು ವಶಪಡಿಸಿಕೊಳ್ಳುವ ಸಲುವಾಗಿ.  ನಂಬಿ, ಅವರು  ತನ್ನ ದೇಶವನ್ನ ಯಾವ ರೇಂಜಿಗೆ ಪ್ರೀತಿಸುತ್ತಿದ್ದರೆಂದರೆ, ಅಂದು ಅವರು in hand to hand fight ಐವರು ದುಷ್ಮನ್ ಗಳನ್ನ ಹೊಡೆದು ಹಾಕಿದ್ದರು! 'ಶೇರ್ ಷಾ' ಅಂತ ಚಂದಕ್ಕೆ ಕರೆಯುತ್ತಾರಾ? 'ಲೋಕ್ ಕಾರ್ಗಿಲ್' ಎಂಬ ಹಿಂದಿ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ವಿಕ್ರಮ್ ಬಾತ್ರಾ ರ ಪಾತ್ರ ಮಾಡಿದ್ದಾರೆ. ಒಮ್ಮೆ ನೋಡಿ. Point 5140 ಎಂಬ  ಬರೋಬ್ಬರಿ 17000 ಅಡಿಗಳ ಎತ್ತರದ ಬೆಟ್ಟ ಭಾರತದ ಪಾಲಾಯಿತು! ಅದೇ ಗೆಲುವಿನ ಹುಮ್ಮಸ್ಸಿನಲ್ಲೇ, ಅದೇ ದೇಶಪ್ರೇಮದ ತುಂಬುಮನಸ್ಸಿನಲ್ಲೇ Point 4875 ದ ಕಾರ್ಯಾಚರಣೆಗೂ ತೆರಳಿದ್ದರು. ಅದೇ ಮೊದಲನೇ ಪ್ಯಾರಾದಲ್ಲಿ ವಿವರಿಸಿದ ಕಾರ್ಯಾಚರಣೆ.  Point 4875 ಭಾರತದ ವಶಕ್ಕೆ ಬಂತು. ಆದರೆ ತೆಗೆದುಕೊಂದು ಬಂದ ಸೇನೆಯ ಕಪ್ತಾನ ವಿಧಿಯ ವಶಕ್ಕೆ ಹೋಗಿಬಿಟ್ಟಿದ್ದ! ಆವತ್ತು ಆ Point 4875 ಪಾಕಿಸ್ತಾನಿಯರ ಪಾಲಿಗೆ ಸುಲಭ ಸ್ವಪ್ನವಾಗಿತ್ತು. ಭಾರತೀಯ ಸೇನೆಯ ಪ್ರತೀ ಚಲನವಲನವೂ ಅದಕ್ಕೆ ಸ್ಫುಟವಾಗಿ ಕಾಣುತ್ತಿತ್ತು. ಭಾರತೀಯರಿಗೆ ತದ್ವಿರುದ್ಧ ಪರಿಸ್ಥಿತಿ! ಇದನ್ನೆಲ್ಲಾ ಅರಿತೆ ಪಾಪಿ ಪಾಕಿಸ್ತಾನ ನುಸುಳಿ ಬಂದಿತ್ತು. ಲೆಫ್ಟಿನೆಂಟ್ ನವೀನರ ಕಾಲಿಗೆ ಗ್ರೇನೇಡ್ ಒಂದು ಬಿದ್ದು ಘೋರ ಗಾಯವಾಯಿತು. ಅವರನ್ನು evacuate ಮಾಡಿದ ಬಾತ್ರಾ ಆ ಕ್ಷಣಕ್ಕೆ ಏಕಾಂಗಿಯಾಗಿ  ಶತ್ರುವಿನೆಡೆಗೆ ಓಡೋಡುತ್ತಾ  ಅವರ ಮೈಮೇಲೆರಗಿದರು. This is an unpredicted move! ಯಾರೂ ಅಷ್ಟೊಂದು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅದು ಬಾತ್ರಾಗೆ ಗೊತ್ತಿತ್ತು. ಶತ್ರು ಆ ಕ್ಷಣಕ್ಕೆ ಅಕ್ಷರಷಃ ಗಲಿಬಿಗೊಂಡ. ಬಾತ್ರಾ ಗೆ ಅದೇ ಬೇಕಿತ್ತು. ತೀರಾ ಹತ್ತಿರಕ್ಕೆ ನುಗ್ಗಿ ಒಬ್ಬಬ್ಬರಾಗಿ ಐದು ಪಾಕ್ ಸೈನಿಕರನ್ನು ಸುಟ್ಟು ಹಾಕಿದರು! ಆದರೆ ಶತ್ರುವಿನ ಪ್ರತಿಗುಂಡಿಗೆ ಬಾತ್ರ ತೀವ್ರವಾಗಿಯೇ ಗಾಯಗೊಂಡಿದ್ದರು. ಹಿಂಗಾದಾಗ ಸಾಮಾನ್ಯವಾಗಿ ಅವರನ್ನು evacuate ಮಾಡಲಾಗುತ್ತೆ. ಬಾತ್ರ ಒಪ್ಪಬೇಕಲ್ಲ?'ಸಿಂಹಗಳ ರಾಜ' ಸಿಂಹಾಸನ ತೊರೆಯಲಿಲ್ಲ. ಇನ್ನೂ ಧೈರ್ಯದಿಂದ ಶತ್ರುವಿನೆಡೆಗೆ ನುಗ್ಗಿದರು. ಈಗ ಶತ್ರು ಶಾಕ್ ನಿಂದ ಹೊರಬಂದಿದ್ದ. ಎಚ್ಚೆತ್ತಿದ್ದ. ಎಲ್ಲೋ ದೂರದಿಂದ ಬಂದ ಶತ್ರುವಿನ artillery gun ನ ಅಸ್ತ್ರ ಬಾತ್ರಾರ ಎದೆಯನ್ನು ಸೀಳಿ ಹೋಯಿತು. ಬಾತ್ರ  ಕುಸಿದುಬಿದ್ದರು. ಅಸುನೀಗಿದರು. ಹಾರಿ ಬರುತ್ತಿರುವ ದೊಡ್ಡ ಗುಂಡನ್ನು ತಪ್ಪಿಸಿಕೊಂಡು ಮತ್ತೆ ಎದ್ದು ಕೂಲಿಂಗ್ ಗ್ಲಾಸ್ ಸರಿಮಾಡಿಕೊಳ್ಳಲು ಬಾತ್ರಾ ಏನು ನಮ್ಮ ಸಿನೆಮಾ ಹೀರೋ ಅಲ್ಲವಲ್ಲ? 'ಸಿಂಹಗಳ ರಾಜ' ಸಿಂಹಾಸನ ತೊರೆಯಲಿಲ್ಲ, ಲೋಕವನ್ನೇ ತೊರೆದಿದ್ದ! ರೊಚ್ಚಿಗೆದ್ದಿದ್ದ ಸೈನಿಕರಲ್ಲಿ ದುಃಖವೂ ಜೊತೆಯಾಯಿತು. ಮಾದರಿಯಾಗಿ ಕಪ್ತಾನನೂ ಶೌರ್ಯ ತೋರಿಸಿದ್ದ. ನಡೆದ ಕಾಳಗದಲ್ಲಿ ಪಾಕಿಸ್ತಾನ ನೆಲಕಚ್ಚಿತು.  Point 4875 ಭಾರತದ ಕೈವಶವಾಯಿತು. 
    "ಹಾರಿ ಬರುತ್ತಿರುವ ದೊಡ್ಡ ಗುಂಡನ್ನು ತಪ್ಪಿಸಿಕೊಂಡು ಮತ್ತೆ ಎದ್ದು ಕೂಲಿಂಗ್ ಗ್ಲಾಸ್ ಸರಿಮಾಡಿಕೊಳ್ಳಲು ಬಾತ್ರಾ ಏನು ನಮ್ಮ ಸಿನೆಮಾ ಹೀರೋ ಅಲ್ಲವಲ್ಲ?" ಅಂತ ಬರೆಯುವಾಗ ನಮ್ಮೆಲ್ಲರ ಮನಸ್ಥಿತಿಯ ಬಗ್ಗೆ ಜುಗುಪ್ಸೆ ಹುಟ್ಟಿತು.  "..... ಸಚಿನ್ ನ ಮಗನ ಹೆಸರು ಸಹಿತ ಗೊತ್ತಿರುತ್ತೆ! ಶಾರೂಕ್ ನ ಇಷ್ಟದ ರೆಸಪಿ, ದೀಪಿಕಾಳ ಮುಂದಿನ ಚಿತ್ರ, ಸಲ್ಮಾನ್ ನ ಅದಕ್ಕೂ ಮುಂದಿನ ಚಿತ್ರ ಇವೆಲ್ಲ ನಮಗೆ ಚೆನ್ನಾಗಿ  ಗೊತ್ತಿರುತ್ತೆ!...."  ಅಂತ ಹಿಂದೆ ನನ್ನದೇ ಒಂದು  ಲೇಖನದಲ್ಲಿ ಬರೆದದ್ದು ನೆನಪಾಯಿತು. ಇವೆಲ್ಲ ಗೊತ್ತಿರುವ ನಮಗೆ ಕಸಬ್ ನನ್ನು ಸಜೀವ ಹಿಡಿದ ಕಾನ್ಸ್ಟೇಬಲ್ ತುಕಾರಾಂ ಒಂಬ್ಳೆಯ ಹೆಸರು ಗೊತ್ತಿರೋಲ್ಲ ಅಂತ ಬರೆಯುವಾಗ ಹಾಗೆ ಬರೆದಿದ್ದ್ದೆ.  ನಮ್ಮಲ್ಲೆಷ್ಟೋ ಜನಕ್ಕೆ ಬಾತ್ರಾ ಹಾಗೂ ಆತನಂತವರು ಇವತ್ತಿಗೂ ಗೊತ್ತಿಲ್ಲ. ನಾನೂ ಹಿಂದೆ ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ್ ನಲ್ಲಿ ಇವರ ಶೌರ್ಯದ ಬಗ್ಗೆ  ಕೇಳಿದ್ದೆ ಅಷ್ಟೆ.  ಇವತ್ಯಾವಾಗಲೋ ಪೇಪರ್ ಓದುತ್ತಿದ್ದಾಗ ಅದರ ಪುರವಣಿಯ ಒಂದು ಮೂಲೆಯಲ್ಲಿ, ಅದರಲ್ಲೂ ಪುಣ್ಯತಿಥಿ  ಎಂಬ ಸಾಮಾನ್ಯಾತಿ ಸಾಮಾನ್ಯ ಕಾಲಮ್ಮಿನಲ್ಲಿ ಬಾತ್ರಾ ಪುಣ್ಯತಿಥಿ ಇಂದು ಅಂತ ಗೊತ್ತಾಯಿತು! ನಂತರ ಪೂರಕ  ವಿಷಯ ಸಂಗ್ರಹಿಸಿ ಇವತ್ತೇ ಬರೆಯಬೇಕು ಅಂತ ಅಂದುಕೊಂಡಿದ್ದ ಲೇಖನ ಈಗ ರಾತ್ರಿ 12:45 ಮುಗಿದಿದೆ. ಇಷ್ಟೆಲ್ಲ  ನಾನು, ನನ್ನ ಸ್ನೇಹಿತರು, ಓದುಗರು ನೆನಪಿಸಿಕೊಳ್ಳಲೇ ಬೇಕು ಎಂಬ ಆಶಯದ ಹಠ ಅಷ್ಟೆ. ಯಾರೋ ಡೈರೆಕ್ಟರ್ ಹೇಳಿದಂತೆ ನಟಿಸುವ ನಟ ಸಮಾಜದ ಹೀರೋ ಆಗಿಬಿಡುತ್ತಾನೆ. ತಲೆಯಿಂದ ಕಾಲಿನವರೆಗೆ ಭ್ರಷ್ಟರನೇಕರು ಜನಮನ್ನಣೆ ಗಳಿಸಿಬಿಡುತ್ತಾರೆ. ತಮ್ಮ ಜನುಮದಿನಕ್ಕೆ ದೊಡ್ಡ ದೊಡ್ಡ ಹಾರ ಹಾಕಿಸಿಕೊಂಡು ಬಿಡುತ್ತರೆ. ಕೊನೆಗೆ ದುಡ್ಡಿನ ಹಾರವನ್ನೂ ಹಾಕಿಸಿಕೊಂಡು ಬಿಡುತ್ತಾರೆ. ನಾಚಿಕೇಡು! ಯೋಧರು ಪ್ರಾಣಕೊಟ್ಟು ಉಳಿಸಿದ ದೇಶಕ್ಕೆ ನಾವೂ ದುಡಿಯಬೇಕು ಅಂತ ಅನ್ನಿಸೊಲ್ಲ, ನಮಗೆ ವಿದ್ಯಾರ್ಥಿಗಳಿಗೆ! google, facebook ಗಳಲ್ಲಿ ಪ್ಲೇಸ್ ಆಗಬೇಕು ಅಂತ ಬಯಸುತ್ತೇವೆ. ಅತ್ಯಂತ ಕೆಟ್ಟ ಸಂಗತಿ ಏನು ಗೊತ್ತಾ? ಅದೇ ಪಾಪಿಸ್ತಾನದ ಪ್ರಧಾನಿಯ ಬೇಟಿ  ಮಾಡಲು, ಬೆಣ್ಣೆ ಹಚ್ಚಲು ಪಕ್ಷಬೇಧ ಮರೆತು  ನಮ್ಮ ಎಲ್ಲ ಪ್ರಧಾನಿಗಳೂ ಹಾತೊರೆಯುತ್ತಾರೆ. ಕಾಂಗ್ರೆಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ  ಕೋಸ್ಟ್ ಗಾರ್ಡ್ ಅನ್ನೇ ಧಿಕ್ಕರಿಸಿ ನೀವು ಉಡಾಯಿಸಿದ್ದು ಪಾಕಿಸ್ತಾನೀ ಉಗ್ರರ ಬೋಟ್ ಅಲ್ಲವೇ ಅಲ್ಲ ಅನ್ನುತ್ತೆ! ಅದಕ್ಕೆ ಬೇಡದ ಸಮಯದಲ್ಲಿ ವೋಟ್ ಬ್ಯಾಂಕ್  ನೆನಪಾಗಿಬಿಡುತ್ತೆ.  ಅಂದಹಾಗೆ ನಾಡಿದ್ದು ಮತ್ತೆ  ರಷ್ಯಾದಲ್ಲಿ ಮೋದಿ ಶರೀಫ್ ರನ್ನು ಭೇಟಿಯಾಗಲಿದ್ದಾರೆ. ಆ ನಿಸ್ಸಾರ ಗೆಳೆತನಕ್ಕೆ ಪುಷ್ಟಿ ನೀಡಲು! ಕೆಲವೇ ತಿಂಗಳುಗಳ ಹಿಂದೆ ಯೋಧನೊಬ್ಬ ಹುತಾತ್ಮನಾದಾಗ ಆತನ ಪುಟ್ಟ ಕುವರಿ ಅವಳ ತಂದೆಯ ಶವದ ಮುಂದೆ ನಿಂದು ದೇಶಭಕ್ತಿಯ ಘೋಷಣೆ ಕೂಗಿದಾಗಲಾದರೂ ನಮಗೆ ಬಲಿದಾನಗಳ ಮಹತ್ವ ಅರಿವಾಗ ಬೇಕಿತ್ತು. ಏನೇ ಹೇಳಿ ನಮ್ಮದು, ದಪ್ಪ ಚರ್ಮ, ಸ್ಸಾರಿ..!
ಕೊನೆಗೊಂದು ಸಾಲು. 'ಯೇ ದಿಲ್ ಮಾಂಗೇ ಮೋರ್'! ಇದು ವಿಕ್ರಮ್ ಬಾತ್ರಾ ರ ಇಷ್ಟದ ಘೋಷಣೆ.  ಹುತಾತ್ಮರೂ ಮೇಲೆ ತಮಗೆ ಸಿಗುವ ಗೌರವ ಸ್ಮರಣೆಯ ಬಗ್ಗೆ  ಹಿಂಗೆ ಅಂದುಕೊಂಡಿರಬಹುದಾ - 'ಯೇ ದಿಲ್ ಮಾಂಗೇ ಮೋರ್' ಅಂತ! ಇರಲಿಕ್ಕಿಲ್ಲ. ಅವರು ನಿಸ್ವಾರ್ಥಿಗಳು. ಇಲ್ಲಾದರೆ ಇಂಥದ್ದೊಂದು ಕೃತಘ್ನ ಸಮಾಜಕ್ಕಾಗಿ  ಅವರು ಪ್ರಾಣ ಕೊಡುತ್ತಿದ್ದರಾ?
                                                                                                   

  

Wednesday, June 3, 2015

‪‎ದೇಶಾಭಿಮಾನದ ಪ್ರಶ್ನೆ ಓದುವುದಿಲ್ಲವಾ‬?

‪#‎TiredOfIndians‬ !! ಹಿಂಗೊಂದು ಹ್ಯಾಷ್ ಟ್ಯಾಗು ಅಮೇರಿಕೆಯ ಟ್ವಿಟ್ಟರ್ ನಲ್ಲಿ ಸೃಷ್ಟಿಯಾಯಿತು! "ಅಮೇರಿದವನೊಬ್ಬ ಸ್ಪೆಲ್ಲಿಂಗ್ ಬೀ ಗೆಲ್ಲಬೇಕು" ಅಂತ ಅಮೇರಿಕನ್ನನೊಬ್ಬ ಭಾರತೀಯರನ್ನು ಕಂಡು ಅಸೂಯೆಪಟ್ಟ. ಬೇಡ, ಬಿ ಪಾಸಿಟಿವ್, ಅದು ಅವನ ದೇಶಪ್ರೇಮ ಅಂದುಕೊಳ್ಳೋಣ. ಆದರೆ ಮತ್ತೊಬ್ಬ "ಸ್ಪೆಲ್ಲಿಂಗ್ ಬೀಯಲ್ಲಿ ಭಾಗವಹಿಸುವ ಪ್ರತಿಯೊಂದು ಮಗುವೂ ಮೂಲ ಅಮೇರಿಕನ್ನೇ ಆಗಬೇಕು" ಅಂತ ಹಲುಬಿದ. ಮತ್ತೊಬ್ಬ ಅಮೇರಿಕನ್ನ ಸ್ವಲ್ಪ ಮುಂದೆ ಹೋಗಿ “No American sounding names who won the spelling B. ‪#‎sad‬ ‪#‎fail‬” ಎಂದು ಟ್ವೀಟಿಸಿದ! ಇನ್ನು ಯಾರ್ಯಾರು ಏನೇನು ಟ್ವೀಟಿಸಿದರೋ. ಇಷ್ಟಕ್ಕೆಲ್ಲ ಕಾರಣವಾದದ್ದು ಅಮೇರಿಕೆಯ ಅತ್ಯಂತ ಪ್ರತಿಷ್ಠಿತ 'ಸ್ಕ್ರಿಪ್ಸ್ ಸ್ಪೆಲ್ಲಿಂಗ್ ಬೀ' ಯನ್ನು ಭಾರತೀಯ ಮೂಲದ ಮಕ್ಕಳು ಗೆದ್ದಿದ್ದು. ಯಾವ ದೇಶ ಜಗತ್ತಿಗೆಲ್ಲ ಧರ್ಮ ಸಹಿಷ್ಣುತೆಯ ಪಾಠ ಹೇಳುತ್ತೋ ಅದೇ ದೇಶದ ಕೆಲವರು ಈಗ ಮಾತ್ರ ಕೈ ಕೈ ಹಿಸುಕಿಕೊಳ್ಳತೊಡಗಿದ್ದಾರೆ. ಅವರ ದೇಶಾಭಿಮಾನ ಓಕೆ, ಆದರೆ ದೇಶಪ್ರೀತಿಯ ಅರ್ಥ ' ಪರರನ್ನು ತೆಗಳು' ಅಂತಲ್ಲವಲ್ಲ! ಅದೂ ಭಾರತೀಯರನ್ನು ಅಮೇರಿಕಾ ತೆಗಳುವುದಿದೆಯಲ್ಲ, ಅದು ಉಂಡ ಮನೆಗೆ ಎರಡು ಬಗೆದಂತೆ. ಅಮೇರಿಕಾ ಇಂದು ಹಿರಿಯಣ್ಣನಾಗುವುದರಲ್ಲಿ ಇದೇ ಅನಿವಾಸಿ ಭಾರತೀಯ ಶ್ರಮ ಸಾಕಷ್ಟಿದೆ. ಈಗಲೂ ಅದರ ಐಟಿ ಇಂಡಸ್ಟ್ರಿಯಂತಹ ಅನೇಕ ತಾಂತ್ರಿಕ ಕ್ಷೇತ್ರಗಳು ಭಾರತೀಯರ ಮೇಲೆ ಡಿಪೆಂಡ್ ಆಗಿದೆ. ಅಮೇರಿಕೆಯ ಹೆಮ್ಮೆಯ 'ನಾಸಾ' ದಲ್ಲಿ ಕೂಡ ಮೂವತ್ತು ಚಿಲ್ಲರೆ ಪರ್ಸೆಂಟ್ ವಿಜ್ನಾನಿಗಳು ಅನಿವಾಸಿ ಭಾರತೀಯರು ಎಂಬುದು ಲಿಬರ್ಟಿ ಸ್ಟ್ಯಾಚುವಿನಷ್ಟೇ ಸತ್ಯ! ನಮ್ಮ ಸರ್ಕಾರ ಕೋಟಿಗಟ್ಟಲೇ ಹಣವನ್ನ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮೇಲೆ ಸುರಿದು, ಅವರನ್ನು ಐಐಟಿಯಂತಹ ಸಂಸ್ಥೆಗಳಲ್ಲಿ ಓದಿಸುತ್ತೆ. ಅಂಥವರಲ್ಲಿ ಅನೇಕರು ಎನೇನೋ ಕಾರಣ ಹೇಳಿ, ಅಮೇರಿಕೆಯ ಕಂಪನಿಗಳಿಗೆ ದುಡಿಯಲು ಹೋಗಿಬಿಡುತ್ತಾರೆ! ಆದರೆ ನಮ್ಮ ವಿದ್ಯಾರ್ಥಿಗಳ ಈ 'ಕುಗ್ಗಿದ ದೇಶಪ್ರೇಮ' ಅಮೇರಿಕೆಗೆ ಒಳ್ಳೆಯದನ್ನೇ ಮಾಡಿದೆ ತಾನೆ? ಇಷ್ಟೆಲ್ಲ ಮಾಡಿದ ಭಾರತ-ಭಾರತೀಯರ ಬಗ್ಗೆ ಕೆಲವು ಅಮೇರಿಕನ್ನರು ಹಂಗೆ ಮಾತಾಡುತ್ತಾರೆ ಅಂದರೆ ನಮಗೆ ಹೇಗಾಗಬೇಡ? ನೆನಪಿರಲಿ, ಇತ್ತೀಚೆಗೆ ಭಾರತೀಯರ ದೇಗುಲಗಳ ಮೇಲೆ ಅಲ್ಲಿ ನಡೆದ ದಾಳಿಗಳ ಕುರಿತ ವರದಿಗಳೂ, ಅಮೇರಿಕೆ ಅಸಹಿಷ್ಣುವಾಗುತ್ತಿದೆ ಎಂದು ಎಚ್ಚರಿಸುತ್ತಿವೆ! ಏನಂತೀರಿ?

ಸುಮ್ ಸುಮ್ನೆ ಗಲಾಟೆ ಮಾಡ್ತಾರೆ,ಏನು ಲಾಭವೋ...?!

ಮೊದಲೇ ಹೇಳಿಬಿಡುತ್ತೇನೆ ನಾನು ದೊಡ್ಡ ‪#‎ModiFan‬ ಅಲ್ಲ. ಅವರ ವರ್ಣರಂಜಿತ ವಸ್ತ್ರಗಳಾಗಲೀ, ವೈಭವೋಪೇತ ವಿದೇಶ ಪ್ರವಾಸವಾಗಲಿ, ಅದಮ್ಯ ಭಾಷಣಗಳಾಗಲೀ, ಕ್ಷಮಿಸಿ , ನನ್ನನ್ನು ಅಷ್ಟು ರಂಜಿಸಲಾರವು. ಆದರೆ ಯುಪಿಎ ಸಾಯಿಸಿ ಹೋದ ಆಶಾಭಾವವನ್ನು ಕಂಬ ಕೊಟ್ಟು ನಿಲ್ಲಿಸಿ ನಮ್ಮಲ್ಲೊಂದು ಜಂಬ ಸೃಷ್ಟಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಕಂಠಮಟ್ಟ ಹಗರಣಗಳನ್ನೇ ತುಂಬಿಕೊಂಡಿದ್ದ ಸರ್ಕಾರವನ್ನು ನೋಡಿ ಬೇಸತ್ತಿದ್ದ ಭಾರತೀಯರಲ್ಲಿ “ಸರ್ಕಾರ ಅಂದ್ರೆ ಹಂಗಲ್ರಪ್ಪಾ..” ಅಂತ ತಿಳುವಳಿಕೆ ಮೂಡಿಸಿದ್ದಾರೆ. ಇವರಿಂದ ಸಾಧ್ಯವಾಗಬಹುದು ಎಂಬ ಆಶಾಭಾವ ಮೂಡಿಸಿದ್ದಾರೆ. ವೆಲ್, ಆದರೆ ವರ್ಷ ಪೂರೈಸಿದ ಈ ಸನ್ನಿವೇಷದಲ್ಲಿ ಕೆಲವು ತೀರಾ ಪೂರ್ವಗ್ರಹ ಪೀಡಿತ ಮನುಷ್ಯರಿಂದ ವಿಚಿತ್ರತಮ ಟೀಕೆಗೊಳಗಾಗುತ್ತಿದ್ದಾರೆ. “ಬಿಜೆಪಿ ಆಡಳಿತಕ್ಕೆ ಬಂದಿರುವುದರಿಂದ ಏನೋ ಅನಾಹುತ ಸಂಭವಿಸಿಯಾಗಿದೆ…” ಅಂತ ಕೆಲವರು ಬರೆಯುತ್ತಿದ್ದಾರೆ. ಬರ್ಕೊಳ್ಳಲಿ ಬಿಡಿ, ಆದರೆ ಅದನ್ನು'ದಿ ಹಿಂದು' ದಂತಹ ಪತ್ರಿಕೆಗಳು ಪ್ರಕಟಿಸುತ್ತಿವೆ!! ಮೋದಿಯನ್ನು ಹೆಜ್ಜೆ ಹೆಜ್ಜೆಗೂ ಹೊಗಳುವ ಅನೇಕ ನೆಟ್ಟಿಗರ ಬಗ್ಗೆ ನಮಗೆಲ್ಲ ಖಂಡಿತ ಬೇಸರವಿದೆ. ಮೋದಿಯನ್ನು ಬರೀ ಹೊಗಳಬೇಕೆಂದಲ್ಲ. ಆದರೆ ಟೀಕಿಸುವಲ್ಲಿ ತಾರ್ಕಿಕತೆಯಿರಬೇಕು. ಅದು ಯಾರೇ ಇರಬಹುದು. ಮೋಹನ್ ಭಾಗ್ವತ್ ಮದರ್ ತೆರೇಸಾರನ್ನು ಟೀಕಿಸಿದಾಗಲೂ ನಮಗೆ ಬೇಸರವಾಗಿದೆ. ಅದ್ಯಾರೋ ಮಣಿಶಂಕರ್ ಅಯ್ಯರ್ ಎಂಬ ಮಂತ್ರಿ 'ಮಹೋದಯ' ವೀರಸಾವರ್ಕರ್ ಬಗ್ಗೆ ಹಲುಬಿದಾಗಲೂ ನಮಗೆ ಅತೀವ ಹಿಂಸೆಯಾಗಿದೆ. ಕೆಲವರಿಗೆ ತಾವು ಹೇಳಿದ್ದನ್ನೆಲ್ಲ ಜನ ಕಣ್ಣುಮುಚ್ಚಿ ನಂಬಿಬಿಡುತ್ತಾರೆಂಬ 'ಅದ್ಭುತ' ಭ್ರಮೆ! ಬಿಡಿ 'ದಿ ಹಿಂದು' ಒಂಥರ ಹಾಗೇ. ಅಫ್ಜಲ್ ಗುರುನನ್ನು ನೇಣಿಗೆ ಹಾಕಿದಾಗ Vengeance (ಹಿಂಸೆ) Is Not Justice ಎಂದು ಸಂಪಾದಕೀಯ ಬರೆದ ಪತ್ರಿಕೆ ಅಂದರೆ ಕೇಳಬೇಕೆ? ಅದ್ಯಾರೋ ಮಂಜರಿ ಕಾಟ್ಜು ಎಂಬುವವರು ಒಂದು ‘ ಅಮೋಘ’ ಲೇಖನ ಬರೆದಿದ್ದಾರೆ. ಇವರೆಲ್ಲ ಯಾಕಿಷ್ಟು ಸಂಕುಚಿತವಾಗಿ, ಒಂದೇ ಧಾಟಿಯಲ್ಲಿ ಯೋಚಿಸುತ್ತಾರೆ, ಅದರಿಂದ ಅವರಿಗೇನು ಲಾಭ ಅಂತ ನಂಗಂತೂ ಗೊತ್ತಿಲ್ಲ. ಲೇಖನಕ್ಕೆ ಲಗತ್ತಿಸಿದ ವ್ಯಂಗ್ಯಚಿತ್ರವನ್ನೊಮ್ಮೆ ನೋಡಿ. “ಕೆಲವು ಧಾರ್ಮಿಕ ಕೇಂದ್ರಗಳ ಮೇಲೆ RSS ಸಣ್ಣಮಟ್ಟದ ದಾಳಿ ಮಾಡಿಸುತ್ತಿದೆ, ಅದರ ಮೇಲೆ ಮೋದಿ ತಮ್ಮ ಆಡಳಿತ ನಡೆಸುತ್ತಿದ್ದಾರೆ” ಎಂದು ಸಾರುವ ‘ಅದ್ಭುತ’ ಚಿತ್ರ. ಸರಿ, ಈ ಸಣ್ಣಮಟ್ಟದ ದಾಳಿಗಳಂತೆ ದೊಡ್ಡಮಟ್ಟದ ಉಗ್ರ ಚಟುವಟಿಕೆಗಳು ಅಪಾಯಕಾರಿಯಲ್ಲವೇನು? ಅವುಗಳ ಬಗ್ಗೆ ಇವರೆಲ್ಲ ಗಪ್ ಚುಪ್. ” Not a sprinkle, But a spread of saffron” ಅಂತೆ! ಹಿಂದು ಧರ್ಮದ ಬಗ್ಗೆ ಭಾರತದಲ್ಲಿ ಮಾತನಾಡದೆ ಮತ್ತೇನು ಸೈಬೀರಿಯಾದಲ್ಲಿ ಮಾತನಾಡಬೇಕಂತಾ? ಹೆಡ್ಡಿಂಗ್ ನಲ್ಲೇ ಇವರ 'ಸಿಕ್'ಯುಲಾರಿಸಮ್ ಗೊತ್ತಾಗಿಬಿಡುತ್ತೆ! ಆಹಾ, ಮೋದಿ ಸರ್ಕಾರ್ ಒಂದು ನಿಧಾನವಾದ ಆದರೆ ಖಂಡಿತ ಅಪಾಯಕಾರಿಯಾದ ಷಡ್ಯಂತರ ಅಳವಡಿಸಿಕೊಂಡಾಗಿದೆಯಂತೆ, ಅನಾಹುತವೊಂದೇ ಬಾಕಿಯಂತೆ! ನೋಡಿ..ನೀವೇ ಓದಿ..Link ಅನ್ನು ಕೆಳಗೆ ಕೊಟ್ಟಿದ್ದೇನೆ. “ಹೇಗೆ ಭಾರತ ಧರ್ಮ ಅಸಹಿಷ್ಣುವಾಗುತ್ತಿದೆ, ಮೋದಿ ಹೇಗೆ ಅಸಹಾಯಕರಾಗುತ್ತಿದ್ದಾರೆ, ಎಂಥಾ ಘೋರ ಅಪಾಯ ಕಾದಿದೆ” ಅನ್ನುವುದನ್ನೆಲ್ಲ, ಪಾಪ, ಲೇಖಕರು ಕಾಳಜಿಯಿಂದ ವಿವರಿಸಿದ್ದಾರೆ. ವೇಸ್ಟ್ ಆಗಬಾರದು ಅಲ್ಲವಾ? ಮತ್ತೆ ಓದಿ, ಕಮೆಂಟ್ ಮಾಡಿ. ಕಮೆಂಟ್ ಗಳು ಸಭ್ಯವಾಗಿರಲಿ.
http://www.thehindu.com/opinion/op-ed/all-those-who-want-to-eat-beef-can-go-to-pakistan-mukhtar-abbas-naqvi/article7244981.ece

Friday, April 10, 2015

ತಪ್ಪು ನಿಜವಾಗಿಯೂ ಲಖ್ವಿಯದ್ದಲ್ಲ!!!

      ಛೇ..ಛೇ.. ಪಾಕಿಸ್ತಾನದ ಕೋರ್ಟ್ ಗಳು ಹೇಳಿದ್ದರಲ್ಲಿ ತಪ್ಪೇನಿದೆ? ತಪ್ಪು ನಿಜವಾಗಿಯೂ  ಲಖ್ವಿದ್ದಲ್ಲ! ಹಫೀಜ್ ಸಯೀದ್ ನದ್ದೂ ಅಲ್ಲ!!
       26/11 ಅಲ್ಲಿ ಅತಿದೊಡ್ಡ ತಪ್ಪು ಮಾಡಿದ್ದು ಸಂದೀಪ್ ಉನ್ನಿಕೃಷ್ನನ್! ಎರಡನೆಯ ತಪ್ಪು ಮಾಡಿದ್ದು ಒಬ್ಬ ಸಾಮಾನ್ಯ ಪೋಲೀಸ್ ! ಒಂದೇಸಮನೆ ಎಕೆ-47ರಲ್ಲಿ ಗುಂಡು ಹೊಡೆಯುತ್ತಿದ್ದರೂ ಕದಲದೆ ಆತನನ್ನು ಬಿಗಿದಪ್ಪಿ ಹಿಡಿದು ಈ ದೇಶಕ್ಕೆ ಉಗ್ರನೊಬ್ಬನನ್ನು ಜೀವಂತ ಹಿಡಿದು ಕೊಟ್ಟನಲ್ಲ, ಹಾಗೆ ಮಾಡಿ, ತಾನು ಕೈಯಲ್ಲಿ ಕೇವಲ ಲಾಟಿ ಹಿಡಿದಿದ್ದರೂ ಕಸಬ್ ನನ್ನು ಬಿಗಿದಪ್ಪಿ, ಹಾಗೇ ಪ್ರಾಣಬಿಟ್ಟನಲ್ಲ ಆ ಸಬ್ ಇನ್ಸ್ಪೆಕ್ಟರ್ ತುಕಾರಾಮ್ ಒಂಬ್ಳೆ? ಆತ! ನಂತರದ ತಪ್ಪಿತಸ್ತರು ಆ ಕಾರ್ಯಾಚರಣೆಯಲ್ಲಿ ಕೊನೆಯುಸಿರೆಳೆದ ಉಳಿದ ಸೇನಾನಿಗಳು! ಹೌದು, ಆಶ್ಚರ್ಯವಾಗುತ್ತ? ತಾನು ಯಾವ ದೇಶಕ್ಕಾಗಿ ಪ್ರಾಣ ಬಿಟ್ಟನೋ ಅದೇ ದೇಶದ ಆಡಳಿತ ತನ್ನನ್ನು ದಾರುಣವಾಗಿ ಕೊಂದ ಪಾಕಿಸ್ತಾನಕ್ಕೆ ಮಸ್ಕಾ ಹೊಡೆಯುತ್ತೋ, ಪದೇ ಪದೇ ಕದನವಿರಾಮ ಉಲ್ಲಂಘಿಸಿ ಕೊನೆಗೆ ಸೈನಿಕರಿಬ್ಬರ ತಲೆ ಕಡಿದುಕೊಂದುಹೋದರೂ ಕೈಲಾಗದವರಂತೆ ಸುಮ್ಮನಿರುತ್ತೋ, ಆ ಪಾಕಿಸ್ತಾನದ ಪ್ರಧಾನಿಯನ್ನು ಬಾ ಬಾ ಅನ್ನುತ್ತೋ, 'ಪಾಕಿಸ್ತಾನದೊಂದಿಗಿನ ಶಾಂತಿ ಮಾತುಕತೆ' ಎಂಬ ಶುಧ್ಧ ನಾನ್ ಸೆನ್ಸ್ ಕಾನ್ಸೆಪ್ಟ್ ಅಡಿಯಲ್ಲಿ ತನ್ನೆಲ್ಲ ಹೇಡಿತನವನ್ನು ಸಮರ್ಥಿಸಿಕೊಳ್ಳುತ್ತೋ, ಆ ದೇಶಕ್ಕಾಗಿ ಸಂದೀಪ್ ಯಾಕೆ ತನ್ನ ತಂದೆತಾಯಿಯವರನ್ನು ಒಬ್ಬಂಟಿ ಮಾಡಿ ಹೋಗಬೇಕಿತ್ತು? ತುಕಾರಾಮ್ ಒಂಬ್ಳೆಯ ಹೆಸರು ನಮ್ಮ ದೇಶದ ಅನೇಕರಿಗೆ ಖಂಡಿತವಾಗಿಯೂ ಗೊತ್ತಿಲ್ಲ! ಹಾಗಂತ ಸಚಿನ್ ನ ಮಗನ ಹೆಸರು ಸಹಿತ ಗೊತ್ತಿರುತ್ತೆ! ಶಾರೂಕ್ ನ ಇಷ್ಟದ ರೆಸಪಿ, ದೀಪಿಕಾಳ ಮುಂದಿನ ಚಿತ್ರ, ಸಲ್ಮಾನ್ ನ ಅದಕ್ಕೂ ಮುಂದಿನ ಚಿತ್ರ ಇವೆಲ್ಲ ಗೊತ್ತಿರುತ್ತೆ! ಯವ್ಯಾವಾಗೋ ಒಂದುಸಲ ರೊಚ್ಚಿಗೆದ್ದು ಸೈನಿಕ ಪ್ರೀತಿ, ದೇಶಪ್ರೀತಿ ನೆನಪಾಗಿ ಮುಂದಿನ ಕ್ಷಣವೇ ಮರೆತು ಬಿಡುವ ಸ್ವಾರ್ಥಿ, ಕೃತಘ್ನ ಸಮಾಜಕ್ಕೆ ಆತ  ಯಾಕಾಗಿ ಮಾಡುತ್ತಿದ್ದ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಬಂದು ಕಸಬ್ ನನ್ನು ಬಿಗಿದಪ್ಪಿ ಹಿಡಿದನೋ? ರಾಮನಂತೆ ಗುರಿಯಿಡುತ್ತಿದ್ದ ಬಂಗಾರದಂಥ Encounter Specialist ವಿಜಯ ಸಾಲಸ್ಕರ್ ಯಾಕೆ ಸಿಡಿಯುತ್ತಿದ್ದ ಗುಂಡು-ಗ್ರೇನೇಡ್ ಗಳಿಗೆ ಎದೆ ಕೊಟ್ಟೆನೋ....?