Powered By Blogger

Friday, July 22, 2016

ಯಾವನಿಗೆ ಬೇಕು ನಿಮ್ಮ "ಉಗ್ರ ಖಂಡನೆ" ?

We strongly condemn” ಅನ್ನುವ ಪದಗಳನ್ನು ಕೇಳಿದಾಗಲೆಲ್ಲ ನನಗೆ ನಗು ಒತ್ತರಿಸಿಕೊಂಡು ಬರತ್ತೆ. “ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಅನ್ನುತ್ತಾರಲ್ಲ? ಅದೊಂದು ಸೀರಿಯಸ್ ಜೋಕಿನಂತೆ ಭಾಸವಾಗುತ್ತೆ. ಈ ಪೇಪರ್ ನವರು ಅದಕ್ಕೆ ಕೊಡುವ ಹೆಡ್ಡಿಂಗ್ ಗಳನ್ನು ನೋಡಿ, ಈ ಮಾಧ್ಯಮದವರಿಗೂ ಏನಾಗಿಬಿಟ್ಟಿದೆ ಅನಿಸತೊಡಗತ್ತೆ. “India Hits Back” ಅಂತೆ! “ಭಾರತದ ತಕ್ಕ ತಿರುಗೇಟು” ಅಂತೆ, “ದಿಟ್ಟ ತಿರುಗೇಟು” ಅಂತೆ! ಏನ್ಸಾರ್ ಹಂಗಂದ್ರೆ?

ಕದನವಿರಾಮ ಉಲ್ಲಂಘನೆ ಆದಾಗ ಸೇನೆ ತಿರುಗೇಟು ನೀಡುತ್ತಲ್ಲ? ಅದರ ಬಗ್ಗೆ ಮಾತನಾಡುತ್ತಿಲ್ಲ... ಪಾಕಿಸ್ತಾನವೋ, ಚೀನಾವೋ ಅಥವಾ ಮತ್ತೊಂದು ಉಗ್ರ ಸಂಘಟನೆಯೋ ಅಧಿಕಪ್ರಸಂಗಗಳನ್ನು ಮಾಡಿದಾಗ ನಮ್ಮ ರಾಜಕೀಯ ವಲಯ ತನ್ನ so called ತಿರುಗೇಟು ನೀಡುತ್ತಲ್ಲ, ಅದರ ಬೆಗ್ಗೆ ಹೇಳುತ್ತಿದ್ದೇನೆ. ಜಗತ್ತಿನ ಅತ್ಯಂತ ಬಲಶಾಲಿ ಸೈನ್ಯಗಳಲ್ಲೊಂದನ್ನು ಇಟ್ಟುಕೊಂಡು, ಜಗತ್ತಿನ ಅತ್ಯಾಧುನಿಕ ಶಸ್ತ್ರಗಳನ್ನೆಲ್ಲವನ್ನೂ ಇಟ್ಟುಕೊಂಡು, ವಿಶ್ವಸಂಸ್ಥೆಯಲ್ಲೊಂದು ಗಣನೀಯ ಸ್ಥಾನವನ್ನಿಟ್ಟುಕೊಂಡು, ಭಾರತದ ರಾಜತಂತ್ರ ಲಜ್ಜೆಯಿಲ್ಲದೆ “ನಾವು ನೀವು ಮಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇವೆ” ಅಂತ ಹೇಳಿ ಸುಮ್ಮನಾಗಿ, ಪ್ರತೀಬಾರಿ ಭಾರತವನ್ನೇ ಸೋಲಿಸುತ್ತಲ್ಲ? ಅದ್ರ ಬಗ್ಗೆ ಹೇಳುತ್ತಿದ್ದೇನೆ. ಅದು ಯಾವ ಸೀಮೆಯ “ಇಂಡಿಯಾ ಸ್ಟ್ರೈಕ್ ಬ್ಯಾಕು”?
ಕಾಶ್ಮೀರದಲ್ಲಿ ಉಗ್ರ ಬರ್ಹಾನ್ ನನ್ನು ಸೇನೆ ಹೊಡೆದ ಮರುಕ್ಷಣದಿಂದ ಇಲ್ಲಿಯವರೆಗೆ ಪಾಕಿಸ್ತಾನ ಏನಿಲ್ಲವೆಂದರೂ ಹತ್ತು ಭಾರತ ವಿರೋಧಿ ಸ್ಟೇಟ್ಮೆಂಟ್ ಗಳನ್ನು ಕೊಟ್ಟಿದೆ. ಬರ್ಹಾನ್ ನ ಶವವನ್ನು ಪಾಕಿಸ್ತಾನಿ ರಾಷ್ಟ್ರೀಯ ಧ್ವಜದಲ್ಲಿ ಸುತ್ತಿ ಹೂಳಲಾಗಿದೆ. ಅವನನ್ನು ಸಮಾಧಿ ಮಾಡುವಾಗ ಇಪ್ಪತ್ತೊಂದು ಗನ್ ಸೆಲ್ಯೂಟ್ ಗಳನ್ನು ನೀಡಲಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಬರ್ಹಾನ್ ಸತ್ತನೆಂದು ಪಾಕಿಸ್ತಾನ ಅಧಿಕೃತವಾಗಿ ’ಕರಾಳ ದಿನ’ವೊಂದನ್ನು ಆಚರಿಸಿದೆ. ತನ್ನ ಸರ್ಕಾರೀ ಅಧಿಕಾರಿಗಳಿಗೆ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬ್ಯಾಂಡ್ ಒಂದನ್ನು ಧರಿಸಿ ಕೆಲಸಕ್ಕೆ ಬರಲು ಸೂಚಿಸಿದೆ! ಹೊರದೇಶದಲ್ಲಿರುವ ಪಾಕಿಸ್ತಾನಿಯರ ಬಳಿ, ಭಾರತದ ನಡೆಯನ್ನು ವಿರೋಧಿಸಿ, ತಾವು ನೆಲೆಸಿರುವ ಆ ದೇಶಗಳ ಸಂಸತ್ತಿನ ಮುಂದೆ, ವಿಶ್ವಸಂಸ್ಥೆಯ ಕಚೇರಿಯ ಮುಂದೆ ಪ್ರತಿಭಟನೆ ಗೈಯ್ಯುವಂತೆ ಸೂಚಿಸಿದೆ! ಕಾಶ್ಮೀರದಲ್ಲಿ ಭುಗಿಲೆದ್ದು ನಡೆಯುತ್ತಿರುವ ಹಿಂಸಾಚಾರಕ್ಕೆ, ಪ್ರಾಣಹಾನಿಗೆ, ರಕ್ತದೋಕುಡಿಗೆ ಹಿಂದಿನಿಂದ ಪ್ರಚೋದಿಸಿ ಬೆಂಬಲಿಸುತ್ತಿರುವುದು ಯಾವ ರಾಕ್ಷಸ ಅಂದುಕೊಂಡಿರಿ? ಇದೇ ಪಾಕಿಸ್ತಾನ!

ಇಷ್ಟೆಲ್ಲ ಆದಮೇಲೆ ಮತ್ತೆ ಇವತ್ತಿನ ಪೇಪರ್ ನಲ್ಲಿ “India Strikes Back” ಅಂತ ಬಂತು. ಇವರ ಸ್ಟ್ರೈಕ್ ಬ್ಯಾಕು ಏನು ಅಂತ ಅಂದಾಜಿದ್ದರೂ ಸುಮ್ಮನೆ ಓದಿದೆ, ಅದೇ ಲೊಳಲೊಟ್ಟೆ! ವಿದೇಶಾಂಗ ವ್ಯವಹಾರ ಸಚಿವಾಲಯ “India strongly condemns the support which terrorists receive from Pakistan” ಅಂತ ಹಳೇ ಜಂಪೆರಾಗವನ್ನೇ ಪುನರುಚ್ಚರಿಸಿತ್ತು. ನೀವು ಸ್ಟ್ರಾಂಗ್ಲೀ ಕಂಡೆಮ್ನ್ ಮಾಡುತ್ತೀರಿ ಅಂತ ನಮಗೆ ಗೊತ್ತು ಸ್ವಾಮೀ... ಮುಂದೇನು..? ಅದು ಪಾಕಿಸ್ತಾನಕ್ಕೂ ಗೊತ್ತು. ಮುಂದೆ ಮತ್ತೆ ಒಂದು ಚಿಕ್ಕ ಸಂದರ್ಭ ಸಿಕ್ಕರೂ ಪಾಪಿಸ್ತಾನ ಭಾರತದ ವಿರುದ್ಧ ಶಕ್ತಿಮೀರಿ ವಿಷಾಕಾರುತ್ತೆ. ಭಾರತದಲ್ಲಿ ರಕ್ತ ಹರಿಸಲೇ ಹುಟ್ಟಿದ್ದೇವೆ ಅಂದುಕೊಂಡಿರುವ ಉಗ್ರರಿಗೆ ಸಂಪೂರ್ಣ ಸಹಕಾರ ಕೊಟ್ಟು ಮತ್ತೆ ಭಾರತದೊಳಗೆ ಛೂ ಬಿಡತ್ತೆ! ಹಳೇ ಚಿತ್ರಗಳಲ್ಲಿ ಎಲ್ಲಾ ಮುಗಿದ ಮೇಲೆ ಪೋಲಿಸ್ ಬರುತ್ತಿದ್ದರಲ್ಲ, ಹಾಗೆ ಎಲ್ಲಾ ಮುಗಿದ ಮೇಲೆ ನಮ್ಮ ಗೌರವಾನ್ವಿತ ಮಿನಿಸ್ಟ್ರೀ ಆಫ಼್ ಎಕ್ಸ್ಟರ್ನಲ್ ಅಫ಼ೇರ್ಸ್ ಕಡೆಯ ವಕ್ತಾರರೊಬ್ಬರು “We Strongly Condemn” ಅನ್ನೋ ಅರ್ಥವಿಲ್ಲದ ಜಂಪೆರಾಗವನ್ನ ಮತ್ತೆ ಹಾಡುತ್ತಾರೆ. Is this all, we can do?

ಎಲ್ಲಕ್ಕಿಂತ ದೊಡ್ಡ ಜೋಕು ಗೊತ್ತಾ? 26/11 ನಲ್ಲಿ ಮುಂಬೈ ಮಾರಣಹೋಮದ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್ ಮತ್ತು ಇನ್ನೂ ಅನೇಕ ಉಗ್ರ ಸಂಘಟನೆಗಳ ಮುಖ್ಯಸ್ತರು ಸೇರಿ “ಕಾಶ್ಮೀರದಲ್ಲಾದ ಮಾನವ ಹಕ್ಕು ಉಲ್ಲಂಘನೆ”ಯನ್ನು ವಿರೋಧಿಸಿ ಲಾಹೋರಿನಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದವರೆಗೆ ಕರವನ್ ರ್ಯಾಲಿಯನ್ನು ನಡೆಸಿ ಪುಣ್ಯಕಟ್ಟಿಕೊಳ್ಳಲಿದ್ದಾರಂತೆ! ತನ್ನ ಮಹಾನಗರಿಯೊಂದನ್ನು ರಕ್ತಮಯವನ್ನಗಿಸಿದ ಪಾತಕಿಗೆ ಬದುಕಲು ಬಿಟ್ಟಿರುವುದೇ, ಭಾರತದ ರಾಜಕೀಯ ವಲಯದ ಹೇಡಿತನಕ್ಕೆ ಸಾಕ್ಷಿ. ಭಾರತೀಯ ಸೈನಿಕರಿಗೆ ಒಂದು ಆರ್ಡರ್ ಮೇಲಿನಿಂದ ಸಿಕ್ಕಿಬಿಟ್ಟಿದರೆ, ಈಗಲ್ಲ, ಯಾವಾಗಲೋ ಪಾಕಿಸ್ತಾನದ ಕುಟಿಲತೆಗಳಿಗೆ ನರಕ ತೋರಿಸಿಬಿಡುತ್ತಿದ್ದರು. ಭಾರತೀಯ ಸೈನ್ಯದೆದುರು ಅವರ ನೂರಾರು ಉಗ್ರ ಸಂಘಟನೆಗಳಾಗಲೀ, ಪಾಕಿಸ್ತಾನೀ ಸೈನ್ಯವಾಗಲೀ, ಒಂದು ತರಗೆಲೆ ಕೂಡ ಅಲ್ಲ. ಆದರೆ ಸೈನಿಕರು ರಕ್ತಸುರಿಸಿ ಗೆದ್ದಿದ್ದನ್ನು, ತಾವು ಎಸಿ ರೂಮಿನಲ್ಲಿ ಕುಳಿತು ಬಿಟ್ಟುಕೊಟ್ಟುಬಿಡುವ ಭಾರತೀಯ ರಾಜಕೀಯ ಮನಸ್ಥಿತಿ ಇದೆ ನೋಡಿ, ಅದು ಭಾರತಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಶತ್ರು!

ಭಾರತ ಚೀನಾಕ್ಕೆ ಎಲ್ಲೋ ಯಾವುದೋ ಒಂದು ಚಿಕ್ಕ ವಿಷಯದಲ್ಲಿ ಒಂದು ಸಣ್ಣ ಟಾಂಟ್ ಕೊಟ್ಟಿತು ಅಂದುಕೊಳ್ಳಿ, ನಮ್ಮ ಕೆಲವು ಮಾಧ್ಯಮಗಳು “ಭಾರತದಿಂದ ಚೀನಾಕ್ಕೆ ತೀಕ್ಷ್ಣ ಸಮ್ದೇಶ ರವಾನೆ, ತಿರುಗಿಬಿದ್ದ ಭಾರತ” ಅಂತೆಲ್ಲ ಹೊಯ್ದಾಡಿಕೊಂಡು ಬಿಡುತ್ತವೆ. ಅವರು ಕೂಗುವುದು ಇನ್ನೂ ಕ್ಷೀಣವಾಗುವುದರೊಳಗೇ, ಚೀನಾ ಪಾಕಿಸ್ತಾನದೊಂದಿಗೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆದ್ದಾರಿ ನಿರ್ಮಿಸುವ ಒಪ್ಪಂದಕ್ಕೋ, ಸೇತುವೆ ನಿರ್ಮಿಸುವ ಒಪ್ಪಂದಕ್ಕೋ ಸಹಿಹಾಕಿ ಮೀಸೆ ಒಳಗೆ ನಗುತ್ತದೆ. ಅಥವಾ ಪಾಕಿಸ್ತಾನೀ ಸೇನೆಯೊಂದಿಗೆ ಮಿಲಿಟರಿ ಕವಾಯಿತು ನಡೆಸಿ “ಈಗ ಹೆಂಗಾಯಿತು” ಅಂದುಬಿಡುತ್ತದೆ. ನಾವು ಅಮೇರಿಕೆಯ ಕಡೆ ಆಶಾನೋಟವನ್ನೂ ಬೀರುವಂತಿಲ್ಲ. ಅದರಂತ ಮಹಾನ್ ಗುಳ್ಳೇನರಿ ಈ ಬ್ರಹ್ಮಾಂಡದಲ್ಲೇ ಹುಟ್ಟಿರಲು ಸಾಧ್ಯವಿಲ್ಲ. ಗೋಸುಂಬೆಯಾಟವಾಡುತ್ತ ನಮಗೆ ಬೆಂಬಲಿಸಿದಂತೆ ಮಾಡಿ, ನಾವು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಮತ್ತೆ ಪಾಕಿಸ್ತಾನದ ತಲೆಯ ಮೇಲೆ ಕೈ ಸವರಲು ತೆರಳಿಬಿಡುತ್ತೆ. ವಿಶ್ವಸಂಸ್ಥೆಗೂ ಅಷ್ಟೆ. ಆಫ್ರಿಕಾದಲ್ಲೋ, ಮಧ್ಯ ಪ್ರಾಚ್ಯದಲ್ಲೋ ಯಾವುದೋ ಗೊತ್ತಿಲ್ಲದ ದೇಶದಲ್ಲಿ ಹಿಂಸೆ ಭುಗಿಲೆದ್ದಾಗ, ಆಂತರಿಕ ಸಂಘರ್ಷ ಮುಗಿಲು ಮುಟ್ಟಿದಾಗ, ಸಹಾಯಕ್ಕೆ ಹೋಗಲು ಭಾರತ್ಯದ ಸೈನ್ಯ ಬೇಕು. ನಾವು ನಮ್ಮ ಸೈನ್ಯವನ್ನು ಮರುಮಾತನಾಡದೆ ತಲೆಬಗ್ಗಿಸಿ ಕಳಿಸಿಕೊಡಬೇಕು. ಅಲ್ಲಿ ಎಷ್ಟೋ ಸೈನಿಕರನ್ನು ಕಳೆದುಕೊಂಡ ನೋವನ್ನು “ಶಾಂತಿಸ್ಥಾಪನೆ”ಗಾಗಿ ಅಂದುಕೊಂಡು ಹೊಟ್ಟೆ ಒಳಗೆ ಹಾಕಿಕೊಳ್ಳಬೇಕು. ಆದರೆ ಭಾರತದ ಹಿತಾಸಕ್ತಿಯ ವಿಷಯ ಬಂದಾಗ ಮಾತ್ರ ವಿಶ್ವಸಂಸ್ಥೆ ದಿವ್ಯ ನಿರ್ಲಕ್ಷ್ಯ ತೋರಿಸಿ, ಮೂಗು ಮುರಿದು, ದೊಡ್ದದಾಗಿ ಆಕಳಿಸಿ, ಮಗ್ಗಲು ಬದಲಿಸಿಬಿಡುತ್ತೆ. ಪಾಕಿಸ್ತಾನದ ವಿರುದ್ಧ, ಚೀನಾದ ವಿರುದ್ಧ ಏನೂ ಮಾಡಲಾಗದೇ ಕೈಕಟ್ಟಿ ಕುಳಿತುಬಿಡುತ್ತೆ. ಭಾರತದಲ್ಲಿರುವವರು ಮನುಷ್ಯರಲ್ಲವಾ? ಭಾರತೀಯರ ಜೀವಕ್ಕೆ ಬೆಲೆ ಇಲ್ಲವಾ? ನಾವು ಮತ್ತೆ “We strongly condemn” ಎಂದು ಮುಚ್ಚಿಕೊಂಡುಕೂರುವ ಪ್ರಯತ್ನ ಶುರು ಮಾಡುತ್ತೇವೆ, ಅಷ್ಟೆ!




ಈಗಿರುವ ಸರ್ಕಾರ ಹಿಂದಿನ ಸರ್ಕಾರಕಿಂತ ಪರ್ವಾಗಿಲ್ಲ ಅನ್ನುವುದ ಬಿಟ್ಟರೆ, ಪಾಕಿಸ್ತಾನ ಮತ್ತು ಉಗ್ರವಾದದ ವಿಷಯಕ್ಕೆ ಬಂದಾಗ, ಎಲ್ಲಾ ಸರ್ಕಾರಗಳೂ ಪಾಕಿಸ್ತಾನದ ಮುಂದೆ ರಾಜಕೀಯವಾಗಿ ಭಾರತವನ್ನೇ ಸೋಲಿಸುತ್ತಾ ಬಂದಿವೆ. ನೆಹರು ಆಡಳಿತದ ಕಾಲದಲ್ಲಿ ಭಾರತ “soft state” ಅಂತ ಕರೆಸಿಕೊಂಡಾಗಿನಿಂದ ಇಲ್ಲಿಯವರೆಗೂ ಮೆತ್ತನೆಯ ನಾಡಾಗಿಯೇ ಉಳಿದುಬಿಟ್ಟಿದೆ. ಅಷ್ಟಕ್ಕೂ, ಮೆತ್ತಗಿದ್ದಲ್ಲೇ ತಾನೆ ಮತ್ತೊಂದು ಕಲ್ಲು? ಜನರು ಎಚ್ಚೆತ್ತುಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾದ ಸ್ಥಿತಿಗೆ ಭಾರತವನ್ನ ಭಾರತದ ರಾಜಕೀಯವೇ ತಂದಿಟ್ಟಿದೆ. ಆದ್ದರಿಂದ ಇನ್ನು ತಡಮಾಡಿ ಪ್ರಯೋಜನವಿಲ್ಲ. ತಮ್ಮೆಲ್ಲ ಅಂಧಾಭಿಮಾನಗಳನ್ನು, ಅರ್ಥವಿಲ್ಲದ ವೈಷಮ್ಯಗಳನ್ನು ಬದಿಗೊತ್ತಿ ರಾಷ್ಟ್ರೀಯ ಹಿತಾಸಕ್ತಿಗಾಗಿ, ಅನ್ನಕೊಟ್ಟ ನೆಲದ ಸಮಗ್ರತೆ ಮತ್ತು ಗೌರವವನ್ನು ಎತ್ತಿಹಿಡಿಯುವುದಕ್ಕಾಗಿ, ಭಾರತೀಯರು ಎದ್ದು ನಿಲ್ಲಲೇಬೇಕಾಗಿದೆ. ಸರ್ಕಾರದ ಕಿವಿ ಹಿಂಡದಿದ್ದರೆ, ಇದೇ ಸ್ಥಿತಿ ಮುಂದುವರೆಯುತ್ತದೆಯೇ ಹೊರತು, ಪರಿಹಾರ ದೊರಕುವುದಿಲ್ಲ. ಭಾರತ ನಿಂತ ಮೆಟ್ಟಲ್ಲಿ ಇಸ್ರೇಲ್ ಆಗಲು ಸಾಧ್ಯವಿಲ್ಲ, ಆದರೆ ಬದಲಾಗುವತ್ತ ದಾಪುಗಾಲಿಡಲಾದರೂ ಶುರು ಮಾಡಬಹುದಲ್ಲ?

No comments:

Post a Comment